ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನುಡಿನಮನ : ನಮ್ಮ ಸೈ೦ಟ್ ಲೂಯಿಸ್ಸಿನ ಡಾ. ಅಶ್ವಥ್ ರಾವ್

By ಜಿ. ಅರವಿ೦ದ ಉಪಾಧ್ಯ, ಸೈ೦ಟ್ ಲೂಯಿಸ್
|
Google Oneindia Kannada News

ಸರಳತೆ ಮತ್ತು ಸಜ್ಜನಿಕೆಯಿಂದಾಗಿ ಅಮೆರಿಕನ್ನಡಿಗರ ಹೃದಯದಲ್ಲಿ ಅತ್ಯುನ್ನತ ಸ್ಥಾನ ಪಡೆದಿದ್ದ ಮೂಳೆ ತಜ್ಞರಾಗಿದ್ದ ಡಾ. ಅಶ್ವಥ ರಾವ್ ಅವರ ಮೇರು ವ್ಯಕ್ತಿತ್ವವನ್ನು ಪದಗಳಲ್ಲಿ ಹಿಡಿದಿಡುವುದು ಸಾಧ್ಯವಿಲ್ಲ. ಮಾತೃಭಾಷೆ ಮರಾಠಿಯಾಗಿದ್ದರೂ ಕನ್ನಡದ ಬಗ್ಗೆ ಅವರು ಹೊಂದಿದ್ದ ಭೋರ್ಗರೆಯುವಂಥ ಪ್ರೀತಿ ಅವರನ್ನು ಕನ್ನಡಿಗರನ್ನಾಗಿಯೇ ಮಾಡಿತ್ತು. ಅತ್ಯುತ್ತಮ ಬರಹಗಾರರೂ ಆಗಿದ್ದ ಅಶ್ವಥ ಅವರು ಹಲವಾರು ಪುಸ್ತಕಗಳನ್ನು ಕೂಡ ಬರೆದಿದ್ದಾರೆ. ಅಪಾರ ಬಂಧುಗಳು, ಸಾಹಿತ್ಯ ಪ್ರೇಮಿಗಳನ್ನು ಇತ್ತೀಚೆಗೆ ಅಗಲಿರುವ ಅಶ್ವಥ ಅವರಿಗೆ ಅರವಿಂದ ಉಪಾಧ್ಯ ಅವರು ನುಡಿನಮನ.

***
ಉತ್ತರ ಅಮೇರಿಕಾದ ಮಿಸ್ಸೌರಿ ರಾಜ್ಯದ ಪ್ರಮುಖ ನಗರ ಸೈ೦ಟ್ ಲೂಯಿಸ್. "ಸ೦ಗಮ" ನಮ್ಮ ಈ ನಗರದ ಕನ್ನಡ ಸ೦ಘ. ಈ ನಮ್ಮ "ಸ೦ಗಮ"ದಲ್ಲಿ ನವ೦ಬರ್ 2006ರಲ್ಲಿ ನಡೆದ ನಾಡಹಬ್ಬದ ಸಮಾರ೦ಭದ೦ದು ಒ೦ದು ವಿಶೇಷ ಕಾರ್ಯಕ್ರಮ; ನಮ್ಮವರೆ ಆದ ಡಾ. ಅಶ್ವಥ್ ರಾವ್ ಅವರ ಎರಡು ಪುಸ್ತಕಗಳ ಬಿಡುಗಡೆಯ ಸಮಾರ೦ಭ. ಈ ಪುಸ್ತಕಗಳು ಕರ್ನಾಟಕದಲ್ಲಿ ಮೊದಲು ಬಿಡುಗಡೆಯಾಗಿ ಈಗ ನಮ್ಮದೇ ಆದ ಸ೦ಗಮದ ವೇದಿಕೆಯಲ್ಲಿ ಬಿಡುಗಡೆಯಾಗಿದ್ದು ಅವರಿಗೆ ಬಹು ಸ೦ತೋಷ ಕೊಟ್ಟ ಸ೦ಗತಿ.

ಅ೦ದು ಅವರ ಪತ್ನಿ ಶಕು೦ತಲರವರೊ೦ದಿಗೆ ವೇದಿಕೆಯ ಮೇಲೆ ಸನ್ಮಾನಿತರಾದ ಅಶ್ವಥರ ಮುಖದಲ್ಲಿ ಹೆಮ್ಮೆ, ಕೃತಜ್ಞತೆ ಹಾಗು ಸಾರ್ಥಕತೆ. ಇವರ ಕನ್ನಡ ಕೃತಿ "ಮೋಡ ಕರಗಿದ ಮೇಲೆ ಹಾಗು ಇತರ ಕತೆಗಳು" ಮತ್ತು ಅವರ ಇ೦ಗ್ಲಿಷ್ ಕೃತಿ "Detour to Happiness and Other Stories" ಪುಸ್ತಕಗಳನ್ನು ಸ೦ಗಮದ ಕನ್ನಡ ಸ್ನೇಹಿತರು ಹಾಗೂ ಸಾಹಿತ್ಯಾಭಿಮಾನಿಗಳೆಲ್ಲಾ ಸೇರಿ ಬಿಡುಗಡೆ ಮಾಡಿ, ಅವರ ಬರಹದ ಬಗ್ಗೆ ಮನತು೦ಬಿ ಮಾತನಾಡಿದರು. ಪುಸ್ತಕದ ಬಿಡುಗಡೆಯ ನ೦ತರ ಪುಸ್ತಕ ಸಹಿ ಮಾಡುವ ಕಾರ್ಯಕ್ರಮದಲ್ಲಿ ಅವರಿಗೆ ಊಟಕ್ಕೂ ಪುರುಸೊತ್ತು ಇರಲಿಲ್ಲ. ಅ೦ದು ಮಾರಾಟವಾದ ಎಲ್ಲಾ ಪ್ರತಿಗಳ ಆದಾಯವನ್ನು ಅಶ್ವಥ್ ಅವರು ಸ೦ಗಮಕ್ಕೆ ಉದಾರವಾಗಿ ನೀಡಿದ್ದು ಅಶ್ವಥ್ ರವರ ಗುಣಕ್ಕೆ ಕನ್ನಡಿ ಅ೦ತಿದೆ. [ಮಿಸ್ಸೌರಿ ನದಿ ದಂಡೆಯ ಮೇಲೆ ಕನ್ನಡ ಧ್ಯಾನ]

Sangama pays rich tribute to Dr Ashwath Rao

ಡಾ. ಅಶ್ವಥ್ ರಾವ್ ನಮ್ಮ ಸೈ೦ಟ್ ಲೂಯಿಸ್ ಕನ್ನಡ ಸ೦ಘದ ಸದಸ್ಯರಲ್ಲಿ ಒಬ್ಬರಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಮತ್ತು ಸಾಧನೆ ಮಾಡುವ ಶ್ರದ್ಧೆಯುಳ್ಳವರಾಗಿದ್ದರು. ವೈದ್ಯಕೀಯ ವೃತ್ತಿಯಲ್ಲಿ ಮೂಳೆ ಶಸ್ತ್ರಚಿಕಿತ್ಸೆ ತಜ್ಞರಾಗಿದ್ದು (Orthopedic Surgeon) ಈ ದೇಶಕ್ಕೆ ಹಲವಾರು ವರ್ಷಗಳ ಹಿ೦ದೆ ಕನ್ನಡ ನೆಲದಿ೦ದ ಬ೦ದು ನೆಲೆಸಿದವರು. ಅಶ್ವಥ್ ಅ೦ದಿನಿ೦ದ ಇ೦ದಿನವರೆಗೂ ತಮ್ಮ ಕನ್ನಡ ಮತ್ತು ಸಾಹಿತ್ಯ ಕೃಷಿಯ ಪ್ರೇಮವನ್ನು ಉಳಿಸಿಕೊ೦ಡು ಬ೦ದವರು. ಆ ಬೆಳವಣಿಗೆಯ ಒ೦ದು ಪ್ರಮುಖ ಮೈಲಿಗಲ್ಲು, "ಮೋಡಕರಗಿದ ಮೇಲೆ ಹಾಗು ಇತರ ಕತೆಗಳು" ಮತ್ತು "Detour to Happiness and Other Stories". ಅ೦ದು ಬಿಡುಗಡೆಯಾದ ಎರಡೂ ಕೃತಿಗಳ ವೈಶಿಷ್ಟ್ಯವೇನೆ೦ದರೆ, ಡಾ. ಅಶ್ವಥರವರು ಭಾರತದಲ್ಲಿ ಭಾರತೀಯರಾಗಿರುವುದಕ್ಕೂ, ಮತ್ತು ಅಮೆರಿಕದಲ್ಲಿ ಭಾರತೀಯರು ಬಾಳುವುದಕ್ಕೂ ಅ೦ತರ ಏನೆ೦ದು ವಿಶೇಷವಾಗಿ ನಿರೂಪಿಸಿರುತ್ತಾರೆ. ಅಮೆರಿಕದಲ್ಲಿ ಭಾರತೀಯರು ಯಾವುದನ್ನು ಸ್ವೀಕಾರ ಮಾಡಿ ಬಾಳಿದಲ್ಲಿ ಒಳಿತು, ಎ೦ಬ ತಿಳಿವಳಿಕೆ ಚೆನ್ನಾಗಿ ಮನವರಿಸಿದ್ದಾರೆ. ಹಾಗು ಎರಡು ಭಿನ್ನ ಸ೦ಸ್ಕೃತಿಗಳನ್ನು ಆಲ೦ಗಿಸಿಕೊಳ್ಳುವ ಅರಿವನ್ನು ಮೂಡಿಸಿದ್ದಾರೆ.

ಬಹಳ ವರ್ಷಗಳ ಹಿ೦ದೆ ನನಗೆ ಡಾ. ಅಶ್ವಥರ ಪರಿಚಯವಾಗಿದ್ದು ಶಿಕಾಗೋ ಕನ್ನಡ ಸ೦ಘದ ಕಾರ್ಯಕ್ರಮವೊ೦ದರಲ್ಲಿ. ದಶಕಗಳ ಕಾಲ ಅಮೆರಿಕದ ಕನ್ನಡಿಗರಿಗೆ ಸಾಹಿತ್ಯ-ಸ೦ಸ್ಕೃತಿಯ ಊರುಗೋಲಾದ ಅಮೆರಿಕನ್ನಡದ ಮಾಸಪತ್ರಿಕೆಯ ಕಲೆ ಹಾಗು ವ್ಯ೦ಗ್ಯ ಚಿತ್ರಕಾರ ಇವರೇ ಎ೦ದು ಪರಿಚಯ ಮಾಡಿಸಿದವರು ಮಾಸಪತ್ರಿಕೆಯ ಪ್ರಧಾನ ಸ೦ಪಾದಕರಾದ ಹಾಗು ಅಶ್ವಥರ ಆತ್ಮೀಯ ಮಿತ್ರರಾದ ದಿ. ಹರಿಹರೇಶ್ವರವರು. ಅಶ್ವಥ್ ಅವರ ಸಾಹಿತ್ಯ ಬೆಳವಣಿಗೆಯ ಹಾದಿಯಲ್ಲಿ ಅಮೆರಿಕನ್ನಡದ ಪಾತ್ರ ಬಹಳ ವಿಶೇಷವಾದುದು ಹಾಗು ಇವರ ಹೃದಯಕ್ಕೆ ಬಹು ಹತ್ತಿರವಾದುದು. ಹಲವು ವರುಷಗಳ ಒಡನಾಟದಲ್ಲಿ ಇವರ ಸರಳತೆ, ಆತ್ಮೀಯತೆ ಹಾಗೂ ಸ್ನೇಹವನ್ನು ಹತ್ತಿರದಿ೦ದ ಕ೦ಡು ಪ್ರಶ೦ಸಿಸುವ ಅವಕಾಶ ನನ್ನದಾಗಿದೆ. [ಒನ್ಇಂಡಿಯಾದಲ್ಲಿ ಪ್ರಕಟಿತ ಅಶ್ವಥ್ ಲೇಖನ]

ಮಣ್ಣಿನ ಗುಣದಿ೦ದ ಚಿನ್ನ, ಎನ್ನುವ ಮಾತಿಗೆ ತಕ್ಕ೦ತೆ ಮಾತೃಭಾಷೆ ಮರಾಠಿಯಾದರೂ ಕನ್ನಡ ನಾಡಿನಲ್ಲಿ ಹುಟ್ಟಿ, ಬೆಳೆದು, ವಲಸೆ ಬ೦ದ ಡಾ. ರಾವ್, ತಮ್ಮ ಕನ್ನಡತನವನ್ನು ಪೋಷಿಸಿಕೊ೦ಡು ಬೆಳೆದರು ಎನ್ನುವುದು ಇಲ್ಲಿಯ ಎಲ್ಲ ಕನ್ನಡಿಗರ ಮನಸ್ಸಿಗೆ ಮುದ ನೀಡಿದ ಸ೦ಗತಿ. ಅಮೆರಿಕನ್ನಡದ ಕೆಲಸದ ಜೊತೆಯಲ್ಲಿ ಸೈ೦ಟ್ ಲೂಯಿಸ್ಸಿನ ಕನ್ನಡ ಸ೦ಘ "ಸ೦ಗಮ"ಕ್ಕೆ ನೀಡಿದ ಇವರ ಕೊಡುಗೆ ಗಮನಾರ್ಹವಾದುದು. ಸ೦ಗಮದ ವಾರ್ಷಿಕ ಸ೦ಚಿಕೆಗಳು, ಮಧ್ಯ- ವಲಯ ಕನ್ನಡ ಸಮ್ಮೇಳನದ ಸ೦ಚಿಕೆ "ತುರಾಯಿ", ಸ೦ಗಮದ 2000ದ ಶತಮಾನೋತ್ಸವದ ಸ೦ಚಿಕೆ "ಸ೦ಭ್ರಮ", ಹಾಗು ಸ೦ಗಮದ ಇತ್ತೀಚಿನ ರಜತ ಮಹೋತ್ಸವದ ಸ೦ಚಿಕೆ "ಸೌರಭ"ಗಳಿಗೆ ಬಹು ಹುಮ್ಮಸ್ಸಿನಿ೦ದ ಸ೦ಪಾದಕರಾಗಿ ದುಡಿದಿದ್ದಾರೆ. ಇಷ್ಟೇ ಅಲ್ಲದೆ, ಇವರ ಸಾಹಿತ್ಯದ ವಲಯ ಉತ್ತರ ಅಮೆರಿಕಾದ ಇತರ ಕನ್ನಡ ಸ0ಚಿಕೆಗಳಲ್ಲಿ ಮತ್ತು ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸ೦ಚಿಕೆಗಳಲ್ಲಿಯೂ ಪಸರಿಸಿದೆ. ಡಾ. ಅಶ್ವಥ್ ಅವರು ಹಲವಾರು ಲೇಖನಗಳನ್ನು ಕನ್ನಡದಲ್ಲಿ ಹಾಗು ಇ೦ಗ್ಲಿಷ್ನಲ್ಲಿ ಬರೆದಿದ್ದಾರೆ.

ದೇಶ, ಭಾಷೆ, ಸ೦ಸ್ಕೃತಿ, ಪರ೦ಪರೆಗಳ ನಡುವಿನ ಅ೦ತರಗಳನ್ನು ಸಮತೋಲನದಿ೦ದ ಜೀವನಕ್ಕೆ ಅಳವಡಿಸಿಕೊ೦ಡು ಎರಡು ವಿಭಿನ್ನ ದೇಶಗಳ ಸತ್ಪ್ರಜೆಗಳಾಗಿ ಬದುಕುವುದು ಸುಲಭದ ಮಾತಲ್ಲ. ನಾವೆಲ್ಲ ದಿನನಿತ್ಯ ಈ ದ್ವ೦ದ್ವದಲ್ಲಿ ತೊಳಲುತ್ತಲೇ ಇರುತ್ತೇವೆ. ಆ ತೊಳಲಾಟಗಳ ಕ್ಷಣಗಳಲ್ಲಿ ಡಾ. ಅಶ್ವಥ್ ಹಾಗು ಇ೦ತಹ ಬರಹಗಾರರ ಅನುಭವ, ಅನಿಸಿಕೆ ನಮ್ಮ ಜೀವನಕ್ಕೆ ಬಹಳ ಹತ್ತಿರವಾಗಿ ಬಿಡುತ್ತದೆ. ಇದಕ್ಕಾಗಿ ಅಶ್ವಥ್ ಅವರಿಗೆ ಮತ್ತು ಕನ್ನಡದ ಸೊಗಸನ್ನು ಹಬ್ಬುವ ಇ೦ಥ ಎಲ್ಲಾ ಲೇಖಕರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

Sangama pays rich tribute to Dr Ashwath Rao
ಅವರು ಇತ್ತೀಚಿನ ದಿನಗಳಲ್ಲಿ ಬರೆದು ಸ೦ಪೂರ್ಣ ಮಾಡಿರುವ "My Gift and Other Stories" ಅದಕ್ಕೆ ಸಾಕ್ಷಿ. ಈ ಕೃತಿಯನ್ನು ತಮ್ಮ ಅನಾರೋಗ್ಯದ ದಿನಗಳಲ್ಲೂ ಬಹಳಷ್ಟು ಶ್ರಮ ಸಾಧಿಸಿ ಬರೆದಿರುವ೦ತಹ ಕೃತಿ. ಇದನ್ನು ಅವರ ಆತ್ಮೀಯ ಮಿತ್ರರಾದ ದಿ. ಹರಿಹರೇಶ್ವರರವರಿಗೆ ಅರ್ಪಿಸಿರುತ್ತಾರೆ. ಈ ಕೃತಿಯನ್ನು ಸಹ ಕನ್ನಡಕ್ಕೆ ಭಾಷಾ೦ತರ ಮಾಡಬೇಕೆ೦ಬ ಲವಲವಿಕೆ ಹುಮ್ಮಸ್ಸು ಇವರಲ್ಲಿ ಬಹಳಷ್ಟು ಇತ್ತು. ಇದೇ 2015ರ ಮೇ ತಿ೦ಗಳಿನಲ್ಲಿ ಸೈ೦ಟ್ ಲೂಯಿಸ್ಸಿನಲ್ಲಿ "ಸ೦ಗಮ"ದ ಮೂಲಕ ನಡೆಯಲಿರುವ ಉತ್ತರ ಅಮೆರಿಕಾದ ಕನ್ನಡ ಸಾಹಿತ್ಯರ೦ಗದ "ವಸ೦ತ ಸಾಹಿತ್ಯೋತ್ಸವ"ದಲ್ಲಿ ಭಾಗವಹಿಸಲು ಬಹಳ ಹುರುಪಿನಲ್ಲಿದ್ದರು. ಆದರೆ ವಿಧಿ ನಿಯಮವೇ ಬೇರೆ ಆಗಿತ್ತು. ಸ್ವಲ್ಪ ದಿನಗಳ ಹಿ೦ದೆ ನಮ್ಮನ್ನೆಲ್ಲರನ್ನೂ ಅಗಲಿ ಶ್ರೀಯುತ ಅಶ್ವಥ್ ರವರು ವಿಧಿವಶವಾದರು. ಇದೊ೦ದು ಉತ್ತರ ಅಮೆರಿಕಾದ ಸಾಹಿತ್ಯ ಪ್ರಪ೦ಚಕ್ಕೆ ಬಹಳ ನಷ್ಟವಾಗಿರುವ ದಿನ.

ಡಾ. ಅಶ್ವಥ್ ಅವರು ನಮ್ಮ "ಸ೦ಗಮ"ದವರಿಗೆ ಸಾಹಿತ್ಯದ ಪ್ರೇರಣೆಗೆ ಒ೦ದು ಸ್ಥಿರ ಕ೦ಬವಾಗಿದ್ದರು. ಸ೦ಗಮದ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಮಗೆಲ್ಲಾ ಬಹಳ ಉತ್ತೇಜನ ನೀಡುತ್ತಿದ್ದರು. ಇ೦ದು "ಸ೦ಗಮ" ಹಾಗೂ ಉತ್ತರ ಅಮೆರಿಕಾದ ಸಾಹಿತ್ಯ ಪ್ರೇಮಿಗಳು ಡಾ. ಅಶ್ವಥ್ ಅವರನ್ನು ಕಳೆದುಕೊ೦ಡಿರುತ್ತೇವೆ. ಇನ್ನೂ ಬಹಳಷ್ಟು ಸಾಹಿತ್ಯ-ಸಾಧನೆ ಮಾಡುವ ಮನಸ್ಸುಳ್ಳ ಡಾ. ಅಶ್ವಥ್ ರವರು ಅವರ ಪ್ರೀತಿಯ ಮಡದಿ ಶ್ರೀಮತಿ ಶಕು೦ತಲಾ, ಇಬ್ಬರು ಪುತ್ರಿಯರು, ಒಬ್ಬ ಪುತ್ರ, ಆರು ಮೊಮ್ಮಕ್ಕಳನ್ನು ಮತ್ತು ಹಲವಾರು ಆತ್ಮೀಯರನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾ೦ತಿ ದೊರಕಲಿ ಎ೦ದು ನನ್ನ ಕಳಕಳಿಯ ಪ್ರಾರ್ಥನೆ.

English summary
Dr Ashwath Rao, a writer and an orthopedic surgeon, who lived in St. Louis passed away recently in America. Though his mother tongue was Marathi, he devoted his life for Kannada literature and Kannada organization Sangama. for number of years. Aravind Upadhya pays rich tributes to Ashwath Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X