ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನವಮಿ ಮತ್ತು ಸಂಗೀತ ಕಚೇರಿಗಳ ನಂಟು

By ಮಧು ಕೃಷ್ಣಮೂರ್ತಿ, ಸ್ಯಾನ್ ಹೊಸೆ, ಕ್ಯಾಲಿಫೋರ್ನಿಯಾ
|
Google Oneindia Kannada News

ಬಾಲ್ಯದ ದಿನಗಳು ಅದೆಷ್ಟು ಮಧುರ? ಕಳೆದಹೋದ ಅಂತಹ 'ಬ್ಲಾಕ್ ಅಂಡ್ ವೈಟ್' ದಿನಗಳ ಬಗ್ಗೆ ಯಾರಾದರೂ ಚರ್ಚಿಸುತ್ತಿದ್ದರೆ ನಮ್ಮ ಕಿವಿಗಳೂ ಚುರುಕಾಗುತ್ತವೆ. ನಮ್ಮ ಕಾಲವೇ ಚೆಂದಾಗಿತ್ತೇನೋ ಎಂಬ ಕನವರಿಕೆಗಳೊಂದಿಗೆ ನೆನಪುಗಳ ಜಾರಬಂಡಿಯಾಡುವ ಮಜವೇ ಬೇರೆ. ರಾಮನವಮಿಯ ಪಾನಕ, ಕೋಸಂಬರಿಗಳ ತೇಗು ಇನ್ನೂ ತಾಜಾ ಆಗಿರುವಾಗಲೇ, ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಹೋಸೆಯಲ್ಲಿ ನೆಲೆಸಿರುವ ಕನ್ನಡಿಗ ಮಧು ಕೃಷ್ಣಮೂರ್ತಿ ಅವರು ಬೆಂಗಳೂರಿನ ರಾಮನವಮಿಯ ಬಾಲ್ಯದ ನೆನಪುಗಳನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. - ಸಂಪಾದಕ.

ರಾಮನವಮಿಯ ಎಂದ ಕೂಡಲೆ ನೆನಪಿಗೆ ಬರುವುದು ಬೆಲವತ್ತೆ ಹಣ್ಣಿನ ಪಾನಕ, ಸೌತೇಕಾಯಿ -ಹೆಸರುಬೇಳೆ ಕೋಸಂಬರಿ ಮತ್ತು ನಮ್ಮ ಅಮ್ಮ ಮಾಡುವ ರಾಂಪ್ರಸಾದ ಕೂಡ. (ಇದಕ್ಕೆ ಗುಳ್ಪಾವಟೆ ಅಂತಾನೂ ಕರೀತಾರೆ). ಜೊತೆಗೆ ನಾನು ಬೆಳೆದ ಬೆಂಗಳೂರಿನಲ್ಲಿ ಅನೇಕ ಕಡೆಗಳಲ್ಲಿ ನಡೆಯುತ್ತಿದ ರಾಮೋತ್ಸವಗಳು.

ಈ ರಾಮೋತ್ಸವಗಳಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗಳು ನನ್ನ ಮೇಲೆ ಅಪಾರ ಪರಿಣಾಮ ಬೀರಿವೆ. ಈ ಸಂಗೀತೋತ್ಸವಗಳ ಮೂಲಕವೇ ನನಗೆ ಕರ್ನಾಟಕ ಸಂಗೀತದ ಪರಿಚಯವಾಗಿದ್ದು. ಹಾಗಾಗಲು ನನ್ನ ಇಬ್ಬರು ಸೋದರಮಾವಂದಿರ ಪಾತ್ರ ಮುಖ್ಯವಾದುದು. ರಾಜು ಮಾವ, ಚಂದ್ರು ಮಾವ ಎಂದು ಕರೆಸಿಕೊಳ್ಳುತ್ತಿದ್ದ ನನ್ನ ಅಮ್ಮನ ಈ ಸೋದರರು ಸಂಗೀತದ ಹುಚ್ಚನ್ನು ಮೈಗೂಡಿಸಿಕೊಂಡಿದ್ದರು.

ಬೆಂಗಳೂರಿನಿಂದ ನೂರು ಮೈಲಿ ದೂರದ ಊರಿನಲ್ಲಿದ್ದ ಇವರ ಮನೆಗೆ ಬೇಸಿಗೆ ರಜಾದಲ್ಲಿ ನಾವು ಹೋದಾಗ ಇವರ ಮನೆಗಳಲ್ಲಿ ಹೆಚ್ಚಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಅದರ ಬಗ್ಗೆ ಚರ್ಚೆ ನನ್ನ ಕಿವಿ ಮೇಲೆ ಬೀಳುತ್ತಿದ್ದವು. ರಾಮನವಮಿ ಸೀಸನ್ನಿನಲ್ಲಿ ತಮ್ಮ ಊರಿನಿಂದ ಬೆಂಗಳೂರಿಗೆ ಬಂದು ಸಂಗೀತ ಕಚೇರಿಗಳಿಗೆ ಹೋಗಿ ಸಂಗೀತ ರಸಾಸ್ವಾದ ಮಾಡುವುದೆಂದರೆ ಅವರಿಗೆ ಸಂಭ್ರಮವೋ ಸಂಭ್ರಮ. ಆ ಸಮಯದಲ್ಲಿ ಅವರನ್ನು ಕಚೇರಿಗಳಿದ್ದ ಜಾಗಗಳಿಗೆ ಸರಿಯಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ಹತ್ತು ವರುಷದ ನನ್ನ ಮೇಲೆ ಬೀಳುತ್ತಿತ್ತು. ನನಗೆ ಸಂಗೀತದಲ್ಲಿ ಆಸಕ್ತಿ ಇಲ್ಲದಿದ್ದರೂ ದೊಡ್ಡವರಿಗೆ ಮಾರ್ಗದರ್ಶನ ಮಾಡುವ ಅವಕಾಶ. ತಪ್ಪಿಸಿಕೊಳ್ಳಲಿಚ್ಚಿಸದೆ ನಾನು ಅವರೊಂದಿಗೆ ಕಚೇರಿಗಳಿಗೆ ಹೋಗುತ್ತಿದ್ದೆ. [ರಾಮ-ಸೀತೆ : ಒಂದು ಸಂಸಾರ ಸಾಗರದ ಕತೆ]

Rama Navami and musical concerts : Madhu Krishnamurthy

ಸಂಜೆ ಏಳಕ್ಕೆ ಪ್ರಾರಂಭವಾಗಬೇಕಿದ್ದ ಕಚೇರಿಗಳು ಏಂಟರ ಮೇಲೆ ಪ್ರಾರಂಭವಾಗಿ ಮಧ್ಯರಾತ್ರಿಯನ್ನೂ ಮೀರಿ ನಡೆಯುತ್ತಿದ್ದವು. ಈ ಕಚೇರಿಗಳು ಸಾಮಾನ್ಯವಾಗಿ ಯಾವುದಾದರು ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿದ್ದವು. ನೆಲದ ಮೇಲೆ ಹಾಸಲ್ಪಟ್ಟ ಜಮಖಾನದ ಮೇಲೆ ಕುಳಿತು ಸಂಗೀತ ಕೇಳಬೇಕಿತ್ತು. ಬಹಳ ಕಷ್ಟ ಪಟ್ಟು, ಹಾಗೂಹೀಗು ಹತ್ತು ಗಂಟೆಯವರೆಗು ಎದ್ದಿದ್ದು ನಂತರ ನಾನು ಜಮಖಾನದ ಮೇಲೆ ಉರುಳಿಕೊಂಡು ಮಲಗಿಬಿಡುತ್ತಿದ್ದೆ. ಕಚೇರಿ ಮುಗಿದ ಮೇಲೆ ಮಾವಂದಿರ ಜತೆಗೆ ಮನೆಗೆ ಮರಳುತ್ತಿದ್ದೆ. ಹಾಗಾಗಿ ನನಗೆ ಕರ್ನಾಟಕ ಶಾತ್ರೀಯ ಸಂಗೀತವೆಂದರೆ ಅಷ್ಟೇನು ಹಿತವಾದ ಅನುಭವಗಾಳಿಗಿರಲಿಲ್ಲ.

ಆದರೆ ಕಾಲ ಉರುಳಿದಂತೆ ಇದು ಯಾವಾಗಲೋ ಬದಲಾಗಿಹೋಯಿತು. ಯಾವಾಗ ಎಂದು ನಿಖರವಾಗಿ ಹೇಳಲಾಗುತ್ತಿಲ್ಲ. ಆದರೆ ನನ್ನ ಮನಸಿನ್ನಲ್ಲಿ ಹಚ್ಚಹಸಿರಾಗಿ ಉಳಿದಿರುವ ಈ ಒಂದು ನೆನಪು ನನ್ನನ್ನು ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಳ್ಳುವಂತೆ ಮಾಡಿತೇನೋ ಎನಿಸುತ್ತದೆ. ಒಮ್ಮೆ ನಾನು ಹೈಸ್ಕೂಲಿದ್ದಾಗ ನನ್ನ ತಂದೆ, ತಾಯಿ, ಅಜ್ಜಿ ಇವರುಗಳ ಜೋತೆ ಶೇಷಾದ್ರಿಪುರಂ ಹೈಸ್ಕೂಲ್ ಸಂಭಾಂಗಣದಲ್ಲಿ ರಾಮನವಮಿ ಪ್ರಯುಕ್ತ ನಡೆಯುತ್ತಿದ್ದ ಕದರಿ ಗೋಪಾಲನಾಥ್ ಅವರ ಕಚೇರಿಗೆ ಹೋಗಿದ್ದೆವು. ಅಲ್ಲಿಯವರೆಗೂ ಕರ್ನಾಟಕ ಸಂಗೀತದಲ್ಲಿ ಸಾಮಾನ್ಯವಾಗಿ ಬಳಸುತ್ತಿದ್ದ ವಾದ್ಯಗಳು ಕೊಳಲು, ಪಿಟೀಲು, ವೀಣೆ, ನಾದಸ್ವರ ಇವುಗಳಿಗೆ ಸೀಮಿತವಾಗಿದ್ದವು. ಅಲ್ಲೊಬ್ಬರು ಇಲ್ಲೊಬ್ಬರು ಕ್ಲಾರಿನೆಟ್ಟನ್ನು ಮತ್ತು ಜಲತರಂಗವನ್ನು ಬಳಸುತ್ತಿದ್ದರು. ಮ್ಯಾಂಡೊಲಿನ್ ಶ್ರೀನಿವಾಸ್ ಆಗಿನ್ನು ಪ್ರಸಿದ್ಧರಾಗಿರಲಿಲ್ಲ.

ಅಂತಹ ಕಾಲದಲ್ಲಿ ಕದರಿ ಗೋಪಾನನಾಥ್ ಅವರು ಭಾರಿ ಧ್ವನಿಯಲ್ಲಿ ಮೊಳಗುವ ಪಾಶ್ಚಿಮಾತ್ಯ ಸ್ಯಾಕ್ಸೋಫೋನ್ ವಾದ್ಯವನ್ನು ಬಳಸಿ ಅದ್ಭುತವಾಗಿ ನಗುಮೋಮ್ಮು, ಎಂದರೋ ಮಹಾನು ಭಾವುಲು ಇತ್ಯಾದಿ ಕಿರ್ತನೆಗಳನ್ನು ಇಂಪಾಗಿ ನುಡಿಸುತ್ತಿದ್ದುದು ಪುಳಕ ಉಂಟುಮಾಡುವಂತ್ತಿತ್ತು. ಆ ದಿನ ಅವರು ನುಡಿಸಿದ 'ಆಡು ಪಾಂಬೆ'ಯು ನಾಗ ನರ್ತನದ ಮೋಡಿಯನ್ನು ಸೃಷ್ಟಿಸಿತ್ತು. ಆ ಕಚೇರಿಯಲ್ಲಿ ಕದರಿ ಅವರು ನುಡಿಸಿದ, ಕನ್ನಡಿಗರಿಗೆ ಅತ್ಯಂತ ಪ್ರಿಯವಾದ, 'ಭಾಗ್ಯದಾ ಲಕ್ಷ್ಮಿ ಬಾರಮ್ಮ' ದೇವರನಾಮವು ಏಷ್ಟು ರೋಮಾಂಚಕಾರಿಯಾಗಿತ್ತೆಂದರೆ, ಅದು ಮುಗಿದ ಕೂಡಲೆ ನನ್ನ ಪಕ್ಕ ನೆಲದ ಮೇಲೆ ಕೂತಿದ್ದ ನನ್ನ ತಂದೆ ಪುಟಿದೆದ್ದು ಚಪ್ಪಾಳೆ ತಟ್ಟಿ ಕುಣಿದು ಸಂತೋಷ ವ್ಯಕ್ತಪಡಿಸಿದ್ದರು. ಬಹುಶಃ ಆ ಕ್ಷಣದಲ್ಲಿ ನನ್ನ ತಂದೆ ಅನುಭವಿಸಿದ ಆ ರಸಾನುಭವ ನನಗೂ ತೆರೆದುಕೊಂಡಿತೇನೊ.

ಮುಂದೆ ರಾಮೋತ್ಸವ ಹಾಗು ಗಣೇಶೋತ್ಸವಗಳ ಕೃಪೆಯಿಂದ ನಾನು ಏಸುದಾಸ್, ಬಾಲಮುರಳಿ, ಎಂಡಿ ರಾಮನಾಥನ್ (ಮಹಾಗಣಪತಿಂ ಮನಸಾ ಸ್ಮರಾಮಿಯನ್ನು ನಾಭಿಯಿಂದ ಹೊಮ್ಮುವ ಇವರ ಆಳವಾದ ಧ್ವನಿಯಲ್ಲಿ ಕೇಳಿಯೇ ಆನಂದಿಸಬೇಕು), ಮಹಾರಾಜಪುರಂ ಸಂತಾನಂ, ಎನ್ ರಮಣಿ, ಲಾಲ್ಗುಡಿ ಜಯರಾಮನ್, ಚಿಟ್ಟಿಬಾಬು ಹಾಗು ಅನೇಕ ಸಂಗೀತ ವಿದ್ವಾಂಸರ ಕಲೆಯನ್ನು ಸವಿಯುವ ಅವಕಾಶಗಳು ದೊರಕಿತು. ಎಮ್ ಎಲ್ ವಿ ಎಂದೆ ಪ್ರಖ್ಯಾತರಾದ ವಸಂತಕುಮಾರಿ ಅಂದರೆ ನನ್ನ ತಾಯಿಗಂತು ಬಲು ಪ್ರೀತಿ. ಯಾಕೆಂದರೆ ಅವರು ಎಲ್ಲರಿಗಿಂತಲೂ ಹೆಚ್ಚಾಗಿ ಕನ್ನಡ ದೇವರನಾಮಗಳನ್ನು ಹಾಡುತ್ತಿದ್ದರು. 'ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ', 'ಬಲಿಯ ಮನೆಗೆ ವಾಮನ ಬಂದಂತೆ' ಎನ್ನುವ ಉಗಾಭೋಗ ಇವುಗಳನ್ನು ಕೇಳುವಾಗ ಮೈ ಜುಮ್ ಎನಿಸದಿರದು. ಎಂಎಸ್ ಸುಬ್ಬುಲಕ್ಷ್ಮಿ ಅವರ ಕಚೇರಿಗೆ ಹೋಗದೆ ಉಳಿದುಕೊಂಡಿದ್ದು ನನ್ನ ಒಂದು ಕೊರಗು.

ಆದರೆ ಯಾರು ಏನೇ ಹೇಳಲಿ, ನನಗೆ ಮತ್ತು ನನ್ನ ತಂದೆಗೂ ಸಹ ಅತ್ಯಂತ ಖುಷಿ ಕೊಡುತ್ತಿದ್ದ ಸಂಗೀತ ಕಲಾವಿದನೆಂದರೆ ಕುನ್ನೈಕುಡಿ ವೈದ್ಯನಾಥನ್. ಎದ್ದು ಕಾಣುವಂತೆ ಅಗಲವಾಗಿ ಪಟ್ಟೆ ವಿಭೂತಿ, ಅದರ ನಡುವೆ ದೊಡ್ಡ ಕುಂಕುಮದ ಬೊಟ್ಟನ್ನಿಟ್ಟುಕೊಂಡು ಮಿಂಚಿನ ನಗುವಿನೊಂದಿಗೆ 'ವಾತಾಪಿ ಗಣಪತಿಂ',' ರಘುವಂಶ ಸುಧಾಂಭುದಿ ಚಂದ್ರಶ್ರೀ' ಇವೆ ಮುಂತಾದ ಕೃತಿಗಳನ್ನು ನುಡಿಸಿ ಸಭಿಕರನ್ನು ರೋಮಾಂಚನಗೊಳುಸುತ್ತಿದ್ದುದೆ ಅಲ್ಲದೆ ಕೆಲವು ಚೇಷ್ಟೆಗಳನ್ನು ಮಾಡಿ ನನ್ನಂತ ಅನೇಕರ ಮನಗೆದ್ದಿದ್ದರು. ಕುಮಾರಪಾರ್ಕ್ ಬಳಿ ಇರುವ ಶಿವಾನಂದ ಸ್ಟೋರ್ಸ್ ಎದುರು ನಡೆದ ಅವರ ಒಂದು ಕಚೇರಿಯಲ್ಲಿ ಬಾಲನಟ ಪುನೀತ್ ರಾಜಕುಮಾರ್ ಅವರ 'ಕಾಣದಂತೆ ಮಾಯವಾದನು' ಹಾಡು ಕೂಡ ಕೇಳಿದ್ದೇನೆ. ಪಿಟೀಲು ಮಾತನಾಡುತ್ತಿದೆಯೇನೊ ಎನಿಸುವಂತೆ ನುಡಿಸುವುದು, ಆಕಾಶವಾಣಿಯ ಬೆಳಗಿನ ಟ್ಯೂನ್ ನುಡಿಸುವುದು ಹಾಗು ಪಿಟೀಲನ್ನು ವೀಣೆ ನುಡಿಸುವಂತೆ ನುಡಿಸುವುದು - ಇವೇ ಮುಂತಾದ ಅವರ ಕೈಚಳಕಗಳು ನನಗೆ ಸಖತ್ ಮಜ ನೀಡುತ್ತಿದ್ದವು.

ಅಂದಿನ ದಿನಗಳಿಂದ ನನ್ನಲ್ಲಿ ಸಂಗೀತಾಸಕ್ತಿ ಮನೆ ಮಾಡಿದೆ. ನನ್ನಂತವರೊಂದಿಗೆ ಸಂಗೀತದ ಸವಿಯನ್ನು ಹಂಚಿಕೊಳ್ಳುತ್ತಿರುವ ಎಲ್ಲ ಕಲಾವಿದರಿಗೂ ಹಾಗು ಅವರ ಕಲೆಯನ್ನು ಸವಿಯಲು ಅವಕಾಶ ಮಾಡಿಕೊಡುತ್ತಿರುವ ವಿವಿಧ ಸಮಿತಿಗಳಿಗೆ ನನ್ನ ಹೃತ್ಪೂರ್ವಕ ನಮನಗಳು.

ವಿಶೇಷ ಪ್ರಕಟಣೆ

ಅಮೆರಿಕದ ಮಹಿಮಾ ಕ್ರಿಯೇಶನ್ಸ್ ಅವರ ಶ್ರೀಗಂಧದ ಗುಡಿ ರೇಡಿಯೋ ಕಾರ್ಯಕ್ರಮದಲ್ಲಿ ''ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗು ರಾಮನವಮಿ ಕಚೇರಿಗಳು" ಎಂಬ ವಿಷಯದ ಬಗ್ಗೆ ಮಾತುಕತೆ ಏರ್ಪಡಿಸಲಾಗಿದೆ. ಈ ಕಾರ್ಯದಲ್ಲಿ ಬೇ ಏರಿಯಾದ ಖ್ಯಾತ ಸಂಗೀತ ಕಲಾವಿದೆ ಜಯಂತಿ ಉಮೇಶ್ ಅವರನ್ನು ಮಧು ಕೃಷ್ಣಮೂರ್ತಿ ಸಂದರ್ಶಿಸುತ್ತಾರೆ. ಈ ಕಾರ್ಯಕ್ರಮವನ್ನು ಸ್ಯಾನ್ ಫ್ರಾನ್ಸಿಸ್ಕೊ ಬೇ ಏರಿಯಾದಲ್ಲಿ ರೇಡಿಯೋ ಮೂಲಕ KLOK 1170AM ನಲ್ಲಿ ಅಥವಾ http://www.desi1170am.com ಮೂಲಕ ಪ್ರಪಂಚದ ಯಾವುದೇ ಭಾಗದಿಂದ ಕೇಳಬಹುದು. (Click on Listen Live on the website)

ಸಮಯ : 6:00 PM to 7:00 PM California Time on March 29th Sunday. (Your local times may be different)

English summary
Musical concerts are integral part of any Rama Navami celebrations in Karnataka. Connoisseurs of music don't miss this opportunity to lend their ears to listen to classical music. Madhu Krishnamurthy from California, America shares his childhood experience about Rama Navami and concerts in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X