• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕತಾರ್ ಕರ್ನಾಟಕ ಸಂಘದ ಅರ್ಥಪೂರ್ಣ ರಾಜ್ಯೋತ್ಸವ

By ಕೆಎಚ್ ಮಧು, ಕತಾರ್
|
Google Oneindia Kannada News

ಕತಾರ್ ನಲ್ಲಿ 2015ರ ಸಾಲಿನ ಕನ್ನಡ ರಾಜ್ಯೋತ್ಸವವನ್ನು ದೆಹಲಿ ಸಾರ್ವಜನಿಕ ಶಾಲೆ, ವಕ್ರಾಹ್ ದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಮಂಗಲಿಯರು ಪೂರ್ಣಕುಂಭದ ಸಾಲಿನೊಂದಿಗೆ, ಮಾತೃಭೂಮಿಯಿಂದ ಆಗಮಿಸಿದ ಅತಿಥಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರು, ನಟರಾದ ಅವಿನಾಶ್, ಮಾಳವಿಕಾ ಅವಿನಾಶ್ ವಿಶೇಷ ಆಹ್ವಾನಿತರಾಗಿದ್ದರು.

ಸಂಘದ ಹಿರಿಯ ಉಪಕಾರ್ಯದರ್ಶಿಯಾದ ವೇಂಕಟ ರಾವ್ ರವರು, ಸಭಾಂಗಣದಲ್ಲಿ ತುರ್ತು ಪರಿಸ್ಥಿತಿ ಒದಗಿ ಬಂದಲ್ಲಿ, ಸುರಕ್ಷತೆಯ ಬಗ್ಗೆ ತಿಳಿಹೇಳಿದರು. ನಂತರ ನಿರೂಪಕರಿಂದ ಔಪಚಾರಿಕ ಆಹ್ವಾನದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನೆರೆದಿದ್ದ ಗಣ್ಯರಿಗೆ ಹೂಗುಚ್ಛಗಳನ್ನು ಕೊಟ್ಟು ಪ್ರತ್ಯೇಕವಾಗಿ ಸ್ವಾಗತಿಸಲಾಯಿತು. ಹಸಿರು ಚಳವಳಿಯ ಸಂಕೇತವಾಗಿ ಸಸಿಗಳನ್ನು ಕೊಡಲಾಯಿತು. [ಬೆಂಗಳೂರಿನ ಐಟಿ ಕಂಪನಿಯಲ್ಲಿ ಮೊಳಗಿದ ಕನ್ನಡ ಕಹಳೆ]


'ಹಚ್ಚೇವು ಕನ್ನಡದ ದೀಪ, ಕರುನಾಡ ದೀಪ ಸಿರಿನುಡಿಯ ದೀಪ' ಎಂದು ಕವಿ ಡಿ.ಎಸ್. ಕರ್ಕಿಯವರು ಹೇಳಿರುವಂತೆ, ಸಾಂಪ್ರದಾಯಿಕ ರೀತಿಯಲ್ಲಿ ಗಣ್ಯರು ದೀಪಗಳನ್ನು ಹಚ್ಚುವ ಮೂಲಕ ಸಂಜೆಯ ಮನೋರಂಜನೆಯ ಕಾರ್ಯಕ್ರಮಕ್ಕೆ ನಾಂದಿಹಾಡಿದರು. ಕಾತುರರಾಗಿ ಕಾದಿದ್ದ ಸಮಸ್ತ ಸಭಿಕರೆಲ್ಲರಿಗೂ ರಸದೌತಣ ಪ್ರಾರಂಭವಾಯಿತು.

ಕರ್ನಾಟಕ ಸಂಘದ ಸದಸ್ಯರಿಂದ ಸ್ವಾಗತಗೀತೆ ಶ್ರೋತೃಗಳ ಮನಸ್ಸನ್ನು ತನ್ಮಯಗೊಳಿಸಿತು. ಕವಿ ಚನ್ನವೀರ ಕಣವಿಯವರ 'ವಿಶ್ವ ವಿನೂತನ ವಿದ್ಯಾಚೇತನ..." ಭಾರತ ಮಾತೆಯನ್ನು ಸ್ಮರಿಸುವಂತೆ ಮಾಡಿತು. ಎಂ.ಸಿ.ಸಿ(ಮಣಿಪಾಲ್ ಕ್ರಿಕೆಟ್ ಸಮುದಾಯ)ದಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ಮೈರೋಮಾಂಚನಗೊಳಿಸಿತು. ಕುಳಿತಲ್ಲೆ ಪ್ರೇಕ್ಷಕರು ತಾಳಕ್ಕೆ ಕುಣಿಯುತ್ತಾ - ತಲೆಯಾಡಿಸುತ್ತಿದ್ದರು. [ಸಿಂಗಪುರದಲ್ಲಿ 'ಕನ್ನಡ ಡಿಂಡಿಮ' - ದೀಪೋತ್ಸವ 2015]


ಬಂಟ್ಸ್ ಸಂಘ ಕತಾರ್ ತಂಡದವರು "ಹೆಣ್ಣು ಸಂಸಾರದ ಕಣ್ಣು" ಎಂಬ ಕಿರುಪ್ರಹಸನವನ್ನು ಪ್ರದರ್ಶಿಸಿದರು. ಸಮಾಜಕ್ಕೆ ಸುಸಂದೇಶವನ್ನು ಹೊತ್ತ ನಾಟಕದಲ್ಲಿ ನೃತ್ಯರೂಪಕವನ್ನು ಅರ್ಥಪೂರ್ಣವಾಗಿ ಅಳವಡಿಸಲಾಗಿತ್ತು. ಹೆಣ್ಣು ಮಗು ನಿರಾಕರಣೆ ಹಾಗು ಭ್ರೂಣ ಹತ್ಯೆಯಂತ ಮೂಢ ಪಿಡುಗನ್ನು ಸಮಾಜದಿಂದ ಹೊರತೆಗೆಯಬೇಕೆಂದು ಎಲ್ಲರಿಗೂ ಮಾಹಿತಿ ತಲುಪಿಸಿದರು ರೂಪಕದ ಕಲಾವಿದರು.

'ಬಿಲ್ಲವಾಸ ಕತಾರ್'ನವರು "ಕನ್ನಡ - ಕನ್ನಡಿಗರು ಅಂದು-ಇಂದು" ಎಂಬ ನೃತ್ಯ ರೂಪಕವನ್ನು ನೀಡಿದರು. ಮನೋರಂಜನೆಯ ಜೊತೆ ನಮ್ಮ ನಾಡಿನ ಪ್ರಸಕ್ತ ವಾಸ್ತವವನ್ನು ಪ್ರತಿಬಿಂಬಿಸಿತು. ಕನ್ನಡ ನಮ್ಮ ಮಾತೃಭಾಷೆಯಾದರೂ ಅದರ ಬಳಕೆ ಕ್ಷೀಣಿಸುತ್ತಿರುವುದು, ಕನ್ನಡಿಗರಾದ ನಾವು ನಮ್ಮ ಇತಿಹಾಸ, ಸಂಸ್ಕೃತಿಯನ್ನು ಮರೆತು ಇತರೆ ಪಾಶ್ಚಿಮಾತ್ಯ ಸಂಸ್ಕಾರಕ್ಕೆ ಆಕರ್ಷಿತರಾಗಿ ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಿರುವುದನ್ನು ಬಹಳ ಪ್ರಭಾವಶಾಲಿಯಾಗಿ ತೋರ್ಪಡಿಸಿದರು. [ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಿ]


'ತುಳು ಕೂಟ' ಕತಾರ್ ರವರ ಕಿರು ಪ್ರಹಸನ ಸಾರ್ವಜನಿಕ ಕಾರ್ಯಕ್ರಮದ ಮುನ್ನ ನಡೆಯಿತು. ಬಹಳ ಆಸಕ್ತಿ ವಹಿಸಿ ಕಲಾವಿದರ ಉಡುಗೆ ತೊಡುಗೆ, ವೇದಿಕೆ ಮೇಲಿನ ಸಾಮಗ್ರಿಗಳು, ಎಲ್ಲವನ್ನು ಇದಕ್ಕೋಸ್ಕರ ಸಿದ್ಧಪಡಿಸಿದ್ದುದು ವಿಶೇಷ. 'ಏಕೀಕರಣದ ಅಲೆ ರಾಜ್ಯೋತ್ಸವದ ನೆಲೆ', ಕಾರ್ಯಕ್ರಮದ ಶೀರ್ಷಿಕೆ. ಕನ್ನಡ ನಾಡು, ಕರ್ನಾಟಕದ ಏಕೀಕರಣಕ್ಕೆ ಕಾರಣರಾದ ಆಲೂರು ವೆಂಕಟರಾಯರಿಂದ ಪ್ರಾರಂಭಿಸಿ ಹಲವು ಪ್ರಮುಖ ವ್ಯಕ್ತಿತ್ವಗಳನ್ನು ನೆನಪಿಸಿಕೊಳ್ಳಲಾಯಿತು. ಒಂದು ಪರ್ವದ ಕಥೆಯನ್ನು ಕೆಲವೇ ನಿಮಿಷಗಳಲ್ಲಿ ಸಂಕ್ಷಿಪ್ತವಾಗಿ ಪ್ರೇಕ್ಷಕರಿಗೆ ತೋರ್ಪಡಿಸಿದರು. ನಮ್ಮ ನಾಡಿನ ಬಗ್ಗೆ, ಅದರ ರಚನೆಯ ಮಹತ್ವವನ್ನು ಪುನರಾವರ್ತಿಸಿದಂತಾಯಿತು ಕಲಾವಿದರ ನೆರವಿನಿಂದ.

ಬಹಳ ದಿನಗಳ ಅಭ್ಯಾಸ, ಪರಿಶ್ರಮ ಹಾಗು ಹಲವರ ಅಮೂಲ್ಯ ಸಮಯ, ನಡೆದ ಕಾರ್ಯಕ್ರಮದ ಬೆನ್ನೆಲುಬಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ, ಪುಟಾಣಿಗಳಿಗೆ, ನರ್ತಕರಿಗೆ, ಹಾಡುಗಾರರಿಗೆ ಹಾಗು ಕಲಾವಿದರಿಗೆ ಕರ್ನಾಟಕ ಸಂಘದ ವತಿಯಿಂದ ನೆನಪಿನ ಕಾಣಿಕೆಯನ್ನು ಆಯಾ ಕಾರ್ಯಕ್ರಮದ ನಂತರ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷ ಮೂಲಕ ವಿತರಿಸಲಾಯಿತು.

English summary
Qatar Karnataka Sangha celebrated Kannada Rajyotsava recently. Kannada poet Dr. H.S. Venkatesh Murthy, actors Avinash and Malavika Avinash were the chief guest. Cultural programs made every moment enjoyable. Also KSQ felicitated Venkatesh Murthy at 60th Karnataka ‘Rajyotsava’ Celebration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X