ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ವಾದಿರಾಜ ಪುರಂದರ ಆರಾಧನೆ - 2017

ಕಲಾಸಂಸ್ಥೆಯಾದ SIFAS (ಸಿಂಗಪುರ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ) ಸಹಯೋಗಿತ್ವದಲ್ಲಿ ಫೆಬ್ರವರಿ 18ರ ಸಂಜೆ 'ವಾದಿರಾಜ ಪುರಂದರ' ಎಂಬ ಶೀರ್ಷಿಕೆಯಡಿಯಲ್ಲಿ ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಆರಾಧನಾ ಮಹೋತ್ಸವವನ್ನು ಆಯೋಜಿಸಲಾಗಿತ್ತು.

By ಶ್ರೀವಿದ್ಯಾ, ಸಿಂಗಪುರ
|
Google Oneindia Kannada News

ದಾಸನಾಗು ವಿಶೇಷನಾಗು... ಎನ್ನುತ್ತಾ ಭಕ್ತಿಲೋಕಕ್ಕೆ ಸಾವಿರಾರು ಪದ್ಯ ಗದ್ಯಗಳ ಸಾಹಿತ್ಯ ಮತ್ತು ಸಂಗೀತ ರಚನೆಗಳನ್ನು ನೀಡಿದ ದಾಸವರೇಣ್ಯರನ್ನು ಸ್ಮರಿಸಿ, ದಾಸ ಸಾಹಿತ್ಯದ ಮಹತ್ವವನ್ನು ಹರಡುವ ನಿಟ್ಟಿನಲ್ಲಿ ಕನ್ನಡ ಸಂಘ (ಸಿಂಗಪುರ) ಪುರಂದರ ದಾಸರ 452ನೇ ಆರಾಧನಾ ಮಹೋತ್ಸವವನ್ನು ಹಮ್ಮಿಕೊಂಡಿತ್ತು.

ಇಲ್ಲಿನ ಪ್ರತಿಷ್ಠಿತ ಕಲಾಸಂಸ್ಥೆಯಾದ SIFAS (ಸಿಂಗಪುರ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ) ಸಹಯೋಗಿತ್ವದಲ್ಲಿ ಶನಿವಾರ ಫೆಬ್ರವರಿ 18ರ ಸಂಜೆ "ಶ್ರೀ ವಾದಿರಾಜ ಪುರಂದರ" ಎಂಬ ಶೀರ್ಷಿಕೆಯಡಿಯಲ್ಲಿ ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಆರಾಧನಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. [ಸಿಂಗಪುರ 'ಪುರಂದರ ನಮನ'ದಲ್ಲಿ ಹರಿದ ಭಕ್ತಿ ಸುಧೆ]

ಸುಮಾರು 18 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಪುರಂದರ ನಮನ, ವೈವಿಧ್ಯಮವಾಗಿ ರೂಪಾಂತರಗೊಂಡು ವಿವಿಧ ರೀತಿಯಲ್ಲಿ ಸಂಗೀತ ಹಾಗೂ ದಾಸ ಸಾಹಿತ್ಯದ ಸುಧೆಯನ್ನು ಹರಡುವಲ್ಲಿನ ದಿಟ್ಟ ಹೆಜ್ಜೆ ಎಂದು ಹೇಳಬಹುದು.

ಸಂಘದ ಸದಸ್ಯರು ಸಿಂಗಪುರದ ಅನೇಕ ಸಂಗೀತಾರಾಧಕರ ಜೊತೆಗೂಡಿ ಪುರಂದರ ದಾಸರಿಗೆ ಗೌರವಾರ್ಪಣೆ ಸಲ್ಲಿಸಲು ಆಯೋಜಿಸಿದ ಶುಭದಿನ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತವರು ಮಾಲಾ ನಾಗರಾಜ್ ಮತ್ತು ಪ್ರೀತಿ ಗಣೇಶ್. ನೆರೆದ ಸಭಿಕರಿಗೆ ದಾಸ ಸಾಹಿತ್ಯದ ಮಹತ್ವವನ್ನು ತಿಳಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಸಂಘದ ಅಧ್ಯಕ್ಷರಾದ ವಿಜಯರಂಗ ಪ್ರಸಾದ್, SIFASನ ಉಪಾಧ್ಯಕ್ಷೆ ಅನುಜ ವೆಂಕಟೇಶ್, ಡಾ. ಭಾಗ್ಯಾಮೂರ್ತಿ, ಮತ್ತು ಅಂದಿನ ಆಹ್ವಾನಿತ ಅತಿಥಿಗಳಾದ ಹೆಸರಾಂತ ವೀಣಾವಾದಕ ಬಾಲು ಮಾಸ್ತಿಯವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮದ ಶುಭಾರಂಭ ಮಾಡಿದರು. [ಅಟ್ಲಾಂಟದಲ್ಲಿ ಕರ್ನಾಟಕದ ಸರ್ವದಾಸರ ದಿನಾಚರಣೆ]

Purandara and Vadiraja Aradhane 2017 in Singapore

ವಿಜಯರಂಗ ಪ್ರಸಾದ್ ಅವರು "ಇಂದಿನ ದಿನವೇ ಶುಭದಿನವು, ಇಂದಿನ ವಾರ ಶುಭವಾರ, ಇಂದು ಶ್ರೀ ಪುರಂದರ ವಿಠಲ ರಾಯನ ನೆನದ ದಿನವೇ ಶುಭದಿನವು" ಎಂದು ನೆರೆದ ಗಣ್ಯರಿಗೆ ಸ್ವಾಗತ ಕೋರಿದರು. ಡಾ. ಭಾಗ್ಯಾಮೂರ್ತಿಯವರ ನೇತೃತ್ವದಲ್ಲಿ ಅವರ ಶಿಷ್ಯರು ಮತ್ತು ಸಿಂಗಪುರಿನ ಹೆಸರಾಂತ ಸಂಗೀತ ವಿದುಷಿಗಳಿಂದ ಪುರಂದರ ದಾಸರ ಕೃತಿಗಳ ಸಮೂಹಗಾಯನ ನಡೆಯಿತು.

ಶಾಸ್ತ್ರೀಯವಾಗಿ ಸರಳೆ ವರಸೆ, ಪಿಳ್ಳಾರಿ ಗೀತೆಗಳು ನಂತರ ದಾಸವಿರಚಿತ ನಿಂದಾಸ್ತುತಿ, ಸ್ತುತಿಪದಗಳು, ವಿಡಂಬನೆ ಮತ್ತು ಮುಂಡಿಗೆಗಳೆಂಬ ಗೂಡಾರ್ಥಗಳನ್ನೊಳಗೊಂಡ ಆಯ್ದ ಕೃತಿಗಳನ್ನು ಪ್ರಸ್ತುತಪಡಿಸಲಾಯಿತು.

ಶುದ್ಧ ಸಾರಂಗ ರಾಗದಲ್ಲಿನ ಯಾರಿದ್ದರೇನಯ್ಯ, ಆರು ಬದುಕಿದರಯ್ಯ (ರಾಗ : ರೇವತಿ), ಯಾಕೆ ನಿರ್ದಯನಾದೆಯೋ (ರಾಗಮಾಲಿಕೆ), ಮಂದಮತಿಯು ನಾನು (ಶುದ್ಧ ಸಾವೇರಿ), ನೀನ್ಯಾಕೋ ನಿನ್ನ ಹಂಗ್ಯಾಕೋ (ಬೃಂದಾವನಿ), ಹರಿನಾಮದರಗಿಣಿಯು (ಸುಚರಿತ್ರ), ಕದವನಿಕ್ಕಿದಳೇಕೋ(ಮೋಹನ) ಕೊನೆಯದಾಗಿ ಮುಳ್ಳು ಕೊನೆಯ ಮೇಲೆ (ಆನಂದ ಭೈರವಿ) ಎಂಬ ಮುಂಡಿಗೆಯೊಂದಿಗಿನ ಗಾಯನ ಗೋಷ್ಠಿ ಪುರಂದರ ದಾಸರಿಗೆ ಅರ್ಪಿತವಾಯಿತು. [ಪಿಳ್ಳಾರಿ ಗೀತೆಗಳಲ್ಲಿ ಮೊದಲನೆಯದು ಲಂಬೋದರ]

Purandara and Vadiraja Aradhane 2017 in Singapore

ಇಂದಿನ ಸಮೂಹ ಗಾಯನದಲ್ಲಿನ ಕೃತಿಗಳ ಸರಪಳಿಯಲ್ಲಿ ಪುರಂದರ ದಾಸರು ಶ್ರೀಹರಿಯನ್ನುನಿಂದನೆಯಿಂದ ಪ್ರಶ್ನಾವಳಿಯಲ್ಲಿ ಸೆರೆಹಿಡಿದ್ದಿದಾರೆ. "ಯಾರಿದ್ದರೇನು, ಶ್ರೀ ಹರಿಯ ದಯೆ ಒಂದು ಇದ್ದರೆ ಸಾಕು, ಯಾರು ಬದುಕಿದರೈಯ್ಯ ಶ್ರೀ ಹರಿಯನ್ನು ಮರೆತು? ದುರಿತದಲ್ಲಿರುವವರ ದಂಡಿಸುವ ಹರಿ ಇರುವವರೆಗೆ. ಗರುಡ, ಕರಿರಾಜ, ಪ್ರಹ್ಲಾದ, ಅಜಾಮಿಳ, ವಿಭೀಷಣನಂತ ಭಕ್ತರು ಶ್ರೀಹರಿಗೆ ಏನು ಲಂಚವನ್ನು ಕೊಟ್ಟರು? ಹರಿಯು ದಾಸರ ಮೇಲೆ ಏಕೆ ನಿರ್ಧಯನಾಗಿರುವನು, ಅವರು ಅವನಿಗೆ ಅನ್ಯರಾದರೆ? ಎಂದು ಶೋಕ ವ್ಯಕ್ತಪಡಿಸುತ್ತಾರೆ.

ತಾವು ಮಂದಬುದ್ಧಿ ಉಳ್ಳವರು, ಪಾಪಕರ್ತರು, ಆರಿಷಡ್ವರ್ಗಗಳಲಿ ಸುಳಿವವರು, ಅಲ್ಪ ಅದೃಷ್ಟವಂತರು ಎಂದು ಸ್ವಯಂ ನಿಂದನೆಯಲ್ಲಿ ಒಳಗಾದ ದಾಸರು, ಹರಿಯು ಮದನ ಜನಕನು, ಪಾಪನಾಶಕನು, ಇಂದಿರಾಪತಿ, ಎಲ್ಲರನು ಸಲಹುವ ಪುರಂದರ ವಿಠಲನು ಎಂದು ತೀರ್ಮಾನಿಸುತ್ತಾರೆ. ನೀನ್ಯಾಕೋ, ನಿನ್ನ ಹಂಗ್ಯಾಕೋ, ಹರಿನಾಮದ ಬಲ ಒಂದಿದ್ದರೆ ಸಾಕೋ ಎಂದು ಸ್ಪಷ್ಟ ಪಡಿಸುತ್ತಾರೆ. ಹರಿನಾಮದ ಸಾರವನ್ನು, ಮುದ್ದು ಅರಗಿಣಿಯಂತೆ ವ್ಯಕ್ತೀಕರಣಗೊಳಿಸಿ ಅದರ ಪಾಪಾಮೋಚಕ ಶಕ್ತಿಯನ್ನು ವರ್ಣಿಸುತ್ತಾರೆ.

Purandara and Vadiraja Aradhane 2017 in Singapore

ಈ ಗೋಷ್ಠಿ ಗಾಯನದ ವಿಶೇಷತೆ, ಕೊನೆಯಲ್ಲಿ ಹಾಡಿದ "ಮುಂಡಿಗೆ". 'ಮುಂಡಿಗೆ' ಎಂದರೆ ನೇರವಾಗಿ ಯಾವುದೇ ವಿಚಾರವನ್ನು ಹೇಳದೆ, ವೇದಗಳ ಶೈಲಿಯಲ್ಲಿ, ಪರೋಕ್ಷವಾಗಿ ವಸ್ತುವನ್ನು ವಿವರಿಸುವ ಹರಿದಾಸ ಸಾಹಿತ್ಯ ಪ್ರಕಾರದಲ್ಲಿ ಒಗಟು ಅಥವಾ ಸವಾಲು. ಅದರ ಅರ್ಥ ಬಿಡಿಸಲು ಕಠಿಣ, ಆದರೆ ಬಿಡಿಸಿದಾಗ ಅರ್ಥದ ರಾಶಿಯೇ ಹೊರಹೊಮ್ಮುತ್ತದೆ. ಮಂಡೆ ಬಿಸಿ ಮಾಡುವ ಮುಂಡಿಗೆಗಳು, ಅರ್ಥ ಬಿಡಿಸಿದ ಮೇಲೆ, ಮಂಡಿಗೆಯಂತೆ ಸವಿಯಲು ರುಚಿಯಾಗಿರುತ್ತವೆ.

ಪುರಂದರ ದಾಸರು ರಚಿಸಿರುವ "ಮುಳ್ಳು ಕೊನೆಯ ಮೇಲೆ" ಮುಂಡಿಗೆ, ಅತ್ಯಂತ ಸೂಕ್ಷ್ಮ ವಿಷಯಗಳನ್ನೊಳಗೊಂಡಂತಹ ಒಂದು ಅಪೂರ್ವ ಅದ್ಭುತ ರಚನೆ. ಪ್ರತಿ ಸೊಲ್ಲಿನಲ್ಲಿ, ಕಂಡುಬರುವ ಅಂಶ- ಮೂರು ದಾರಿಗಳು ಅಥವಾ ಮೂರು ಅವಕಾಶಗಳು. ಇದರಲ್ಲಿ ಎರಡು ದಾರಿಗಳು ಸಾಧನೆಗೆ ಸಾಧ್ಯವಿಲ್ಲದಂತವು. ಮೂರನೆಯ ಅವಕಾಶ ಸಾಧನೆಗೆ ಯೋಗ್ಯ ಮಾರ್ಗ ಒದಗಿಸುತ್ತದೆ. ಆದರೆ ನಮ್ಮ ಅಜ್ಞಾನ ಮತ್ತು ಲೌಕಿಕಾಸಕ್ತಿಯಿಂದ ನಾವೇ ಅದನ್ನು ಆಯ್ದುಕೊಳ್ಳುವುದಿಲ್ಲ ಎಂಬ ತತ್ವವನ್ನು ಬಹಳ ಚೆನ್ನಾಗಿ ಇಲ್ಲಿ ಜಾಣ್ಮೆಯಿಂದ ಹೆಣೆಯಲಾಗಿದೆ.

ಹರಿ ನಾಮ ಸಂಕೀರ್ತನೆಯಲ್ಲಿ ಸಮ್ಮೋಹನಗೊಳಿಸಿದ, ಸುಸ್ವರವಾದ ಸಂಗೀತ ಗೋಷ್ಠಿ ನಡೆಸಿಕೊಟ್ಟ ಪ್ರಮುಖ ಸಂಗೀತಾಭಿಜ್ಞರಿಗೆ ಮತ್ತು ಪಕ್ಕವಾದ್ಯ ಕಲಾವಿದರಿಗೆ ಸಂಘದ ವತಿಯಿಂದ ಕಿರುಕಾಣಿಕೆ ನೀಡಿ ಗೌರವಿಸಲಾಯಿತು.

Purandara and Vadiraja Aradhane 2017 in Singapore

ಬಹುಮಾನ ವಿತರಣೆ : ಫೆಬ್ರವರಿ 5ರಂದು SIFAS ಆವರಣದಲ್ಲಿ ನಡೆದ ವಾದಿರಾಜ ಪುರಂದರ ವಿರಚಿತ ಸಂಗೀತಗಾಯನ, ವಾದ್ಯ ಸ್ಪರ್ಧೆಗಳಲ್ಲಿ ವಿಜೇತರಿರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ವಯೋಮಿತಿಗನುಗುಣವಾಗಿ ವಿವಿಧ ಭಾಗಗಳಲ್ಲಿ ನಡೆದ ಸ್ಪರ್ಧೆಗಳು ಮಕ್ಕಳಿಗೆ, ಹಿರಿಯರಿಗೆ ಹಾಗೂ ಪೋಷಕರಿಗೆ ದಾಸಸಾಹಿತ್ಯವನ್ನು ಪರಾಮರ್ಶಿಸುವ ಸುಯೋಗವನ್ನು ಒದಗಿಸಿಕೊಡಲಾಗಿತ್ತು.

ವಿಭಿನ್ನವಾಗಿ ನಡೆಸುತ್ತಿರುವ ಸ್ಪರ್ಧೆಗಳಲ್ಲಿ ಕಳೆದ ವರ್ಷ "ಶ್ರೀ ಕನಕ-ಪುರಂದರ" ಕೀರ್ತನೆಗಳನ್ನು ಆಯ್ದುಕೊಂಡಿದ್ದರೆ, ಈ ವರ್ಷ "ಶ್ರೀ ವಾದಿರಾಜ -ಪುರಂದರ" ಕೀರ್ತನೆಗಳಾಧಾರಿತ ಸ್ಪರ್ಧೆಗಳನ್ನು ಏರ್ಪಡಿಸುವ ಮುಖೇನ, ದಾಸ ವರೇಣ್ಯರನ್ನು ಮತ್ತು ದಾಸ ಸಾಹಿತ್ಯದಲ್ಲಿನ ಮುಖ್ಯ ಸಂದೇಶಗಳನ್ನು ಹರಡುವುದು ಸಂಘದ ಮುಖ್ಯ ಉದ್ದೇಶ. ಸುಮಾರು 130ಕ್ಕೂ ಹೆಚ್ಚು ಸಂಗೀತಾಸಕ್ತ ಸ್ಪರ್ಧಾಳುಗಳು ಭಾಗವಹಿಸಿದ ಸ್ಪರ್ಧೆಗಳಲ್ಲಿ 60 ಸ್ಪರ್ಧಾಳುಗಳು ವಿಜೇತರಾದರು.

ಸಿಂಗಾರ-ಪುರಂದರ ಪುರಸ್ಕಾರ : ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ, ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಗೌರವಿಸಲು ಕನ್ನಡ ಸಂಘ ಇದೇ ವರ್ಷದಿಂದ ಆರಂಭಿಸಿರುವ "ಸಿಂಗಾರ-ಪುರಂದರ ಪುರಸ್ಕಾರ"ಕ್ಕೆ ಭಾಜನರಾದ ಶ್ಯಾಮಲಾ ರಾವ್ ಮತ್ತು ವಿಜಯಲಕ್ಷ್ಮಿ ಬಾಲಕೃಷ್ಣ ಶರ್ಮರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಬಾಲು ಮಾಸ್ತಿಯವರಿಂದ ವೀಣಾವಾದನ : ಬೆಂಗಳೂರಿನ ಖ್ಯಾತ ವೀಣಾವಾದಕ ಬಾಲು ಮಾಸ್ತಿಯವರಿಂದ ವೀಣಾವಾದನದ ಭಕ್ತಿರಸ ಧಾರೆ. ತಮ್ಮ ಕೈಚಳಕದಿಂದ ನೆರೆದಿದ್ದ ಸಂಗೀತ ರಸಿಕರ ಮನಸೆಳೆದ ಬಾಲುರವರು ತಮ್ಮ ಕಛೇರಿಯನ್ನು ಶಾಸ್ತ್ರೀಯವಾಗಿ ವರ್ಣದೊಂದಿಗೆ ಪ್ರಾರಂಭಿಸಿ, ಆರಂಭಿಕ ಕೃತಿ - 'ಗಜವದನ ಬೇಡುವೆ' ಎಂಬ ಗಣೇಶ ಸ್ತುತಿಯಲ್ಲಿ ಸ್ವರಪ್ರಸ್ತಾರ ಮಾಡುವ ಮೂಲಕ ಮುಂಬರುವ ಸುಂದರ ಪ್ರಸ್ತುತಿಗಳ ಬಗ್ಗೆ ಶ್ರೋತೃಗಳು ಕಾತರಿಸುವಂತೆ ಮಾಡಿದರು.

ಮೋಹನಕಲ್ಯಾಣಿ ರಾಗದಲ್ಲಿ ಶ್ರೀ ವಾದಿರಾಜರ " ಬಾರೋಮುರಾರಿ ರಂಗ " ಮಲಯಾಮಾರುತ ರಾಗದಲ್ಲಿ "ಸ್ಮರಣೆ ಒಂದೇ ಸಾಲದೇ", ಭೈರವಿ ರಾಗದಲ್ಲಿನ ಜನಪ್ರಿಯ ಕೃತಿ " ಓಡಿ ಬಾರಯ್ಯ ವೈಕುಂಠ ಪತಿ ನಿನ್ನ " ಜನರ ಪ್ರಶಂಸೆಗೆ ಪಾತ್ರವಾದದ್ದಲ್ಲದೆ ವೀಣಾ ವಾದನದ ಮೂಲಕ ತಮ್ಮ ಕಲಾ ಪಾಂಡಿತ್ಯ ಮತ್ತು ಪ್ರೌಢಿಮೆಯನ್ನು ಮೆರೆದರು.

ರಾಗಮಾಲಿಕೆಯಲ್ಲಿ "ಚಂದ್ರಚೂಡ ಶಿವಶಂಕರ", ಸುಪ್ರಸಿದ್ದ "ದಾಸನ ಮಾಡಿಕೋ ಎನ್ನ", ಸ್ವರ ವಿಸ್ತಾರ ಆಲಾಪದೊಂದಿಗೆ ಶಂಕರಾಭರಣದಲ್ಲಿ " ಪೊಗಾದಿರೆಲೋ ರಂಗ " ಅಮೋಘವಾಗಿ ಮೂಡಿ ಬಂದಿತು. ಜೊತೆಗೆ ಪಕ್ಕವಾದ್ಯದವರ ತನಿ ಆವರ್ತನ ಸಂಗೀತಪ್ರೇಮಿಗಳ ಮನಸೂರೆಗೊಂಡಿತು. ಜನಪ್ರಿಯ ಧನಶ್ರೀ ರಾಗದ ತಿಲ್ಲಾನ ಮತ್ತು ಭಾಗ್ಯದ ಲಕ್ಷ್ಮಿ ಬಾರಮ್ಮ ಕೃತಿಯೊಂದಿಗೆ ವೀಣಾವಾದನ ಕಾರ್ಯಕ್ರಮಕ್ಕೆ ಮಂಗಳವನ್ನು ಹಾಡಿದರು.

ಕಲಾರಸಿಕರನ್ನು ಸಂಗೀತಲೋಕಕ್ಕೆ ಕರೆದೊಯ್ಯಲು ಇವರಿಗೆ ಪಕ್ಕವಾದ್ಯದಲ್ಲಿ ಜೊತೆಯಾಗಿದ್ದವರು ವಿದ್ವಾನ್ ತ್ರಿಪುನಿತುರ ಶ್ರೀಕಾಂತ್ (ಮೃದಂಗ) ಮತ್ತು ಡೆಲ್ಲಿ ಎಸ್. ರಾಜಸುಬ್ರಮಣ್ಯಮ್ (ಘಟಂ). ಇಂತಹ ಒಂದು ಅದ್ಭುತ ಕಾರ್ಯಕ್ರಮದ ಪರಿಪೂರ್ಣ ಕಲ್ಪನೆ ಮತ್ತು ನಿರ್ವಹಣೆಯನ್ನು ಸ್ನೇಹಲತಾ ಹಾಗೂ ಸುಮನಾ ಹೆಬ್ಬಾರ್ ರವರು ಯಶಸ್ವಿಯಾಗಿ ನಿಭಾಯಿಸಿದರು.

SIFAS ನ ಉಪಾಧ್ಯಕ್ಷೆ ಅನುಜ ವೆಂಕಟೇಶ್ ಅವರು ತಮ್ಮ ಸಮಾರೋಪ ಬಾಷಣದಲ್ಲಿ ಎಲ್ಲಾ ಕಲಾವಿದರ ಆಸಕ್ತಿ ಹಾಗೂ ಕಾರ್ಯಕ್ರಮದೆಡೆಗಿನ ಸಂಪೂರ್ಣ ಸಮರ್ಪಣ ಭಾವವನ್ನು ಪ್ರಶಂಸಿಸುತ್ತಾ ಕನ್ನಡ ಸಂಘದ ಜೊತೆಯಲ್ಲಿ ನಡೆಯುತ್ತಿರುವ "ಪುರಂದರ ನಮನ" ಬಹಳ ಅರ್ಥಪೂರ್ಣವಾದದ್ದು ಎಂದರು. ಪ್ರತೀ ವರ್ಷವೂ ಮಾಡುವ ಆಶಯವನ್ನು ವ್ಯಕ್ತ ಪಡಿಸಿದರು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಸ್ವಯಂ-ಸೇವಕರು, ಹಿತೈಷಿಗಳ ಪರಿಶ್ರಮವನ್ನು ಶ್ಲಾಘಿಸಿ ವಂದಿಸಿದರು.

Purandara and Vadiraja Aradhane 2017 in Singapore

ಬಾಲು ಮಾಸ್ತಿ ಅವರ ಒಂದು ಕಿರು ಪರಿಚಯ

ಕ್ಯಾಲಿಫೋರ್ನಿಯಾದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಭಾರತಕ್ಕೆ ತೆರಳಿ, ಸೆಮಿಕಂಡಕ್ಟರ್ ಉದ್ಯಮದಲ್ಲಿ ವೃತ್ತಿ ತೊಡಗಿಸಿಕೊಂಡು, ಸೆಮಿಕಂಡಕ್ಟರ್ ಸಂಸ್ಥೆಯೊಂದರ ಸಹ-ಸಂಸ್ಥಾಪಕರಾಗಿರುವ ಬಾಲು ಮಾಸ್ತಿಯವರು ತಮ್ಮ ಚಿಕ್ಕ ವಯಸ್ಸಿನಿಂದ ಶಾಸ್ತ್ರೀಯ ವೀಣಾ ವಾದನವನ್ನು ಸಕ್ರಿಯವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಬಾಲು ಅವರು All India Radioದಲ್ಲಿ ಯುವ ಕಲಾವಿದರಾಗಿದ್ದರು. ಭಾರತದಲ್ಲಿ ಹಲವಾರು ಸಭೆಗಳಲ್ಲಿ, ದೇವಾಲಯಗಳಲ್ಲಿ ಹಾಗು ಸಂಸ್ಥೆಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಕೆಲವನ್ನು ಹೆಸರಿಸಲು Sri Krishna Gana Sabha-Chennai, Sree Ramaseva Mandali, ISKCON - Bangalore, Sringeri Sharada Mutt - Pune, Chennai Veena Festival, Laya Vidya Prathisthana- Mysore, Sree Ramabhyuda Sabha - Mysore, Sree Kanchi Mutt - Bangalore, ಮುಂತಾದ ಕಡೆಗಳಲ್ಲಿ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ.

ದಿವಂಗತ ವಿದ್ವಾನ್ ಏ.ವಿ.ಪ್ರಕಾಶ್, ಬಾಲು ಅವರ ಗುರುಗಳು. ಗುರುಗಳಿಂದ ಶಾಸ್ತ್ರೀಯ ಸಂಗೀತದ ಕಿರುಹುರುಳುಗಳನ್ನು ಚಿಕ್ಕವಯಸ್ಸಿನಿಂದ ಅರಿತವರು. ಗುರುಗಳಾದ ವಿದ್ವಾನ್ ಡಾ. ಜಯಂತಿ ಕುಮರೇಶ್ ರವರ ಸಂಗೀತ ಇವರ ಪ್ರೇರೇಪಣೆ. ಚೆನ್ನೈಯಲ್ಲಿ ಇರುವ ಶ್ರೀ ಕೃಷ್ಣ ಗಾನ ಸಭೆಯು ಇವರಿಗೆ "Sri Mysore Doraiswamy Iyengar Endowment Prize" ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಬಹುಮುಖ ಪ್ರತಿಭಾವಂತ ಕಲಾವಿದರಾದ ಬಾಲು ಅವರು, ಉತ್ತಮ ಛಾಯಾಚಿತ್ರಗ್ರಾಹಕರು ಹಾಗು ಪ್ರಮಾಣೀಕೃತ ಯೋಗ ಗುರುಗಳೂ ಸಹ ಆಗಿದ್ದಾರೆ.

English summary
Sri Vadiraja Purandara aradhane was organized by Kannada Sangha Singapore on February 18, 2017 in association with Singapore Indian Fine Arts Society (SIFAS). Keerthana of Purandara and Vadiraja were sung by many singers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X