ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿಯ ಪಾನಿನಿ, ಎಲ್ಲಿಯ ಪಾಣಿನಿ, ಏನಿದು ಸ್ನೇಹ ಸಂಬಂಧ?

By ದಿವ್ಯಾ ದತ್ತಾತ್ರಯ ಸುಬ್ಬಡಿ
|
Google Oneindia Kannada News

ನಾನು, ನನ್ನ ಗಂಡನ ಜೊತೆ ಭಾರತದಿಂದ ಜರ್ಮನಿಗೆ ಬಂದು ಇಳಿದಾಗ ಸಾಯಂಕಾಲವಾಗಿತ್ತು. ಜಿಟಿ-ಜಿಟಿ ಮಳೆ ಸುರಿಯುತ್ತಿತ್ತು. ಗಾಳಿಪಟ ಚಿತ್ರದಲ್ಲಿ ಬರುವ ಡೈಲಾಗ್‌ನಂತೆ-ಬಚ್ಚಲ ಮನೆಯಲ್ಲಿ ನೀರು ಸುರಿಯುವ ಹಾಗೆ ಮಳೆ ಬರುತ್ತಿತ್ತು.

12-14 ತಾಸು ಪ್ರಯಾಣದ ನಂತರ ಸ್ವಲ್ಪ ದಣಿದಿದ್ದೆವು. MTR ರೆಡಿ ಟು ಈಟ್ ಮಿಕ್ಸ್ ಅನ್ನು ತೆಗೆದು ಅಡುಗೆ ಮಾಡುವಷ್ಟು ಅಡುಗೆ ಸಲಕರಣೆಗಳು ಇನ್ನೂ ಸಿದ್ಧವಾಗಿರಲಿಲ್ಲ. ಆದರೆ ಮಳೆ ನೋಡಿದ ಕೂಡಲೆ, ಎಷ್ಟೇ ಪ್ರಾಕ್ಟಿಕಲ್ ಮನುಷ್ಯನಾದರೂ ಒಂದು ಸಲ nostalgic ಆಗುತ್ತಾನೆ. ನಾವು ಇದಕ್ಕೆ ಹೊರತಿರಲಿಲ್ಲ. ಹಲಸಿನ ಕಾಯಿ ಹಪ್ಪಳ, ಮಿರ್ಚಿ, ಖಾರಾ ಮಂಡಕ್ಕಿ, ಕಾಂದಾ ಬಜ್ಜಿ, ಹೀಗೆ ದೊಡ್ಡ ಪಟ್ಟಿ ನೆನಪಾಗುತ್ತಾ ಹೋಯಿತು. ಆ ಸಂದರ್ಭದಲ್ಲಿ ನಾವು ತಿಂಡಿಗೃಹವನ್ನು ಹುಡುಕುತ್ತಾ ಹೋಗಿ ತಿಂದಿದ್ದೇ ಪಾನಿನಿ.

ಎಂಡ್ರಕಾಯಿಸಾರು ಮುದ್ದೆಯೊಂದಿಗೆ ಉಣ್ಣಲು ಪಸಂದುಎಂಡ್ರಕಾಯಿಸಾರು ಮುದ್ದೆಯೊಂದಿಗೆ ಉಣ್ಣಲು ಪಸಂದು

ಎಲ್ಲರಿಗೂ ತಿಳಿದಿರುವ ಹಾಗೆ ಸಸ್ಯಾಹಾರಿಗಳಿಗೆ ಹೊರ ದೇಶದಲ್ಲಿ ಆಯ್ಕೆಗಳು ಸ್ವಲ್ಪ ಕಡಿಮೆ. ನಾವು ಒಂದು ತಿಂಡಿಗೃಹ(ಇಟಾಲಿಯನ್ ರಿಸ್ಟೋರೆಂಟ್)ಕ್ಕೆ ಹೋದಾಗ ಮೆನುಕಾರ್ಡ್ ನೋಡಿದಾಗ, ಪಾನಿನಿ ಅಂತ ಬರೆದಿತ್ತು. ನಾನು ನನ್ನ ಗಂಡನನ್ನು ಏನಿದು ಅಂತ ಕೇಳಿದೆ. ಅದು ಸ್ಯಾಂಡ್ವಿಚ್ ಅಂತ ಹೇಳಿದರು. ನಂತರ ವೆಜ್ ಪಾನಿನಿ(ಸ್ಯಾಂಡ್ವಿಚ್) ಅನ್ನು ಆರ್ಡರ್ ಮಾಡಿ ಆಯ್ತು, ಅದು ಟೇಬಲ್ ಮೇಲೆ ಬಂದೂ ಆಯ್ತು.

Panini sandwich and ancient Sanskrit linguist Panini

ಪಾನಿನಿಯನ್ನು ನೋಡಿದೆ. 2 ಇಟಾಲಿಯನ್ ವೈಟ್ ಬ್ರೆಡ್ ನಡುವೆ ತರಕಾರಿ, ಗಿಣ್ಣು ಮತ್ತು ಪೆಸ್ತೊ ಸಾಸ್(ಬೆಸಿಲ್ ಎಲೆಗಳು, ಪೈನ್ ನಟ್ಸ್, ಬೆಳ್ಳುಳ್ಳಿ, ಓಲಿವ್ ಎಣ್ಣೆ, ಚೀಜ಼್ ಮಿಶ್ರಣ) ಹಾಕಿ ಗ್ರಿಲ್ ಮಾಡಿ ಕೊಡಲಾಗಿತ್ತು. ನೋಡಲು ಪಾನಿನಿ ಎಷ್ಟು ಚೆನ್ನಾಗಿ ಕಾಣಿಸುತ್ತಿತ್ತೊ, ತಿನ್ನಲು ಅಷ್ಟೇ ರುಚಿಕರವಾಗಿತ್ತು.

ಇದಕ್ಕೂ ಮುನ್ನ ಮೆನುಕಾರ್ಡ್‌ನಲ್ಲಿ ಪಾನಿನಿ ಅಂತ ನೋಡಿದಾಗ, ಮೆದುಳು ಬೆಳಕಿಗಿಂತ ವೇಗವಾಗಿ ಚಲಿಸಿ, ನನ್ನ ಹೈಸ್ಕೂಲ್ ದಿನಗಳಲ್ಲಿ ಓದಿದ ಸಂಸ್ಕೃತ ವ್ಯಾಕರಣ ಪಿತಾಮಹ ಪಾಣಿನಿಯ ನೆನಪು ಮಾಡಿತು.

ಪಾಣಿನಿಯ ಬಗ್ಗೆ ಗೊತ್ತಿಲ್ಲದಿದ್ದವರಿಗೆ ಹೇಳಬೇಕಂದರೆ, ಅವರು ಸಂಸ್ಕೃತ ವ್ಯಾಕರಣಕ್ಕೆ ಅಷ್ಟಧ್ಯಾಯಿ ಎಂಬ ಸೂತ್ರಗಳನ್ನು ಬರೆದವರು. ವ್ಯಾಕರಣಕ್ಕೆ ಒಂದು ರೂಪರೇಷೆಯನ್ನು ಕೊಟ್ಟವರು.

ಕನ್ನಡ ನಾಡಿನಲ್ಲಿ ಬದಲಾಗುತ್ತಿರುವ ಟೇಸ್ಟ್ ಬಡ್ಸ್!ಕನ್ನಡ ನಾಡಿನಲ್ಲಿ ಬದಲಾಗುತ್ತಿರುವ ಟೇಸ್ಟ್ ಬಡ್ಸ್!

ಯಾರಾದರೂ ಶಾಲಾ/ಕಾಲೇಜು ದಿನಗಳಲ್ಲಿ ಸಂಸ್ಕೃತ ಕಲಿತಿದ್ದರೆ, ಸಾಮಾನ್ಯವಾಗಿ ಪಾಣಿನಿಯ ಸಂಕ್ಷಿಪ್ತ ಪರಿಚಯ ಇರುತ್ತದೆ. ಸಂಸ್ಕೃತದ ವ್ಯಾಕರಣದ ನಿಯಮಗಳನ್ನು ಕಲಿಯುವ ಮುನ್ನ, ಪಾಣಿನಿಯ ಸ್ವಾರಸ್ಯಕರವಾದ ಸಂಗತಿಯನ್ನು ಗುರುಗಳು ಹೇಳಿರುತ್ತಾರೆ. ಪಾಣಿನಿಯ ಜೀವಿತಕಾಲದ ಬಗ್ಗೆ ಖಚಿತ ಮಾಹಿತಿ ದಾಖಲಾಗದೆ ಇರುವುದರಿಂದ, ಜಾನಪದ ಕಥೆ ಹರಡಿದ ರೀತಿಯಲ್ಲಿ ಪಾಣಿನಿಯ ಬಗ್ಗೆ ಇಂದು ಕೇಳಲು ಸಿಗುತ್ತದೆ. ಈ ಕಥೆಯಲ್ಲಿ 2 ವಿಧಗಳಿವೆ.

Panini sandwich and ancient Sanskrit linguist Panini

1. ಪಾಣಿನಿಯು ಗುರುಕುಲದಲ್ಲಿ ಓದುವ ದಿನಗಳಲ್ಲಿ ತುಂಬಾ ದಡ್ಡನಾಗಿರುತ್ತಾನೆ. ಒಂದು ದಿನ ಗುರುಗಳು ಅವನಿಗೆ ಹೊಡೆಯಲು, ಅವನ ಹಸ್ತಗಳನ್ನು ಮುಂದೆ ತರುವಂತೆ ಹೇಳಿದಾಗ, ಅವನ ಕೈಯನ್ನು ನೋಡಿ ಒಂದು ಕ್ಷಣ ಮಾತು ಹೊರಡದೆ ನಂತರ ಅವನಿಗೆ ಹೇಳುತ್ತಾರೆ. ನಿನ್ನ ಕೈನಲ್ಲಿ ವಿದ್ಯಾ ರೇಖೆಯೇ ಇಲ್ಲ. ಏನೇ ಮಾಡಿದರೂ ವಿದ್ಯೆ ಹತ್ತುವುದಿಲ್ಲ. ನಿನಗೆ ಹೊಡೆದು ಏನು ಪ್ರಯೋಜನ ಅಂತ ಹೇಳುತ್ತಾರೆ.

ಇದರಿಂದ ಪಾಣಿನಿ ಬೇಸರಗೊಂಡು, ತನ್ನ ಕೈಯಲ್ಲಿ ವಿದ್ಯಾ ರೇಖೆ ಇರಬೇಕಾದ ಜಾಗದಲ್ಲಿ, ಕಲ್ಲಿನಿಂದ ಕೊರೆದು ಕೊಳ್ಳುತ್ತಾನೆ (ಇದರರ್ಥ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುವುದು). ನಂತರ ಸ್ವಪ್ರಯತ್ನದಿಂದ ವ್ಯಾಕರಣ ರಚಿಸಿರುವುದು ಈಗ ಎಲ್ಲರಿಗೂ ತಿಳಿದಿರುವ ಇತಿಹಾಸ.

2. ಪಾಣಿನಿಯ ತಂದೆ ದೊಡ್ಡ ವಿದ್ವಾಂಸರಾಗಿರುತ್ತಾರೆ. ಅವರನ್ನು ನೋಡಲು ಅವರ ಮಿತ್ರರು ಒಂದು ದಿನ ಮನೆಗೆ ಬರುತ್ತಾರೆ. ಚೂಟಿಯಾಗಿ ಓಡಾಡುತ್ತಿದ್ದ ಪಾಣಿನಿಯನ್ನು ನೋಡಿ ಖುಷಿಯಾಗಿ ಅವನ ಕೈ ತೋರಿಸಲು ಹೇಳುತ್ತಾರೆ. ಅವನ ಕೈ ನೋಡಿ, ವಿದ್ಯಾ ರೇಖೆ ಇಲ್ಲ ಎಂದು ಹೇಳಿದಾಗ, ಪಾಣಿನಿಯ ತಂದೆ ದುಃಖತಪ್ತರಾಗಿ ದೇವರು ಇಚ್ಛೆ ಪಟ್ಟ ಹಾಗೆ ಆಗುತ್ತದೆ ಎಂದು ಹೇಳುತ್ತಾರೆ. ನಂತರ ಪಾಣಿನಿ ತನ್ನ ತಂದೆಯ ಮಿತ್ರರ ಹತ್ತಿರ ಎಲ್ಲಿ ವಿದ್ಯಾ ರೇಖೆ ಇರಬೇಕೆಂದು ಕೇಳಿ ಕಲ್ಲಿನಿಂದ ಕೈಯನ್ನು ಕೊರೆದು ಕೊಳ್ಳುತ್ತಾನೆ. ನಂತರ ಅಧ್ಯಯನ, ತಪಸ್ಸು ಇದೆಲ್ಲದರ ಮೂಲಕ ಪಾಂಡಿತ್ಯ ಗಳಿಸುತ್ತಾನೆ.

ಇಷ್ಟೆಲ್ಲ ವಿಚಾರಗಳು ಕ್ಷಣಮಾತ್ರದಲ್ಲಿ ನನ್ನ ತಲೆಯಲ್ಲಿ ಬಂದು ಹೋಯಿತು. ಆಗ ನನ್ನ ತಲೆಯಲ್ಲಿ 'ದೇವರ ಗುಡಿ' ಚಿತ್ರದ 'ಮಾಮರವೆಲ್ಲೊ,ಕೋಗಿಲೆಯೆಲ್ಲೊ' ಎಂಬ ಹಾಡಿನ ತುಣುಕು ನೆನಪಾಯಿತು, ಈ ಸಂದರ್ಭಕ್ಕೆ ತಕ್ಕ ಹಾಗೆ ಆ ಹಾಡು-

ಪಶ್ಚಿಮದ ರಸಪಾಕವು ಎಲ್ಲೋ,
ಪೂರ್ವದ ವ್ಯಾಕರಣವು ಎಲ್ಲೋ,
ಏನೀ ಸ್ನೇಹ ಸಂಬಂಧ....
ಇದೆಲ್ಲ ನನ್ನ ತಲೆಯಲ್ಲಿ ಕ್ಷಣಮಾತ್ರದಲ್ಲಿ ಮೂಡಿದ ಪ್ರಬಂಧ.....

English summary
What is the connection between Panini the sandwich and Panini the ancient Sanskrit linguist? Divya Datta, Kannadati residing in Germany explains interesting connection betweent the two.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X