ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗರು ಬಿಜಿನೋ ಬಿಜಿ!

By ಮಧು ಕೃಷ್ಣಮೂರ್ತಿ
|
Google Oneindia Kannada News

Madhu Krishnamurthy
ಅಮೆರಿಕದಲ್ಲಿ, ಅದರಲ್ಲೂ ಕ್ಯಾಲೆಫ಼ೋರ್ನಿಯಾ ಬೇ ಏರಿಯಾದಲ್ಲಿ ಇರುವ ಕನ್ನಡಿಗರಿಗೆ ಈಗ ಪರ್ವ ಕಾಲ. ತಾಯಿ ಭುವನೇಶ್ವರಿ, ನಿನ್ನ ಮಕ್ಕಳು ಇಷ್ಟೊಂದು ಕನ್ನಡ ಚಟುವಟಿಕೆಗಳನ್ನು ಹಚ್ಚಿಕೊಂಡು ಕುಣಿದಾಡುತ್ತಿರುವದನ್ನು ನೋಡಲು ಎಂತಹ ಆನಂದ! ಭಾರತದಿಂದ ಬಂದಿರುವ ತಾಯಿಯೊಬ್ಬರು ತನ್ನ ಮಗ ಸೊಸೆಯ ಬಗ್ಗೆ ಹೇಳಿದ ಈ ಮಾತು ಇಲ್ಲಿಯ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಸೆರೆಹಿಡಿಯುತ್ತದೆ.

ಅವರು ಹೇಳಿದ್ದು "ಅಯ್ಯೋ! ಇವರಿಬ್ಬರೂ ಕೈಗೇ ಸಿಕ್ಕೊಲ್ಲ ಕಣ್ರೀ. ಯಾವಾಗ ನೋಡಿದ್ರೂ ಮಕ್ಕಳನ್ನ ಡ್ರಾಪ್ ಮಾಡೋದು, ಪಿಕ್ಕಪ್ ಮಾಡೋದು, ಇದರಲ್ಲೆ ಇರ್ತಾರೆ. ವೀಕೆಂಡಾಗ್ಲಿ ಅಥವ ವೀಕ್‍ಡೆನೇ ಇರ್ಲಿ, ಒಂದೊ ಕನ್ನಡ ಕೂಟದ ಹಾಡಿನ ಪ್ರಾಕ್ಟೀಸಿರುತ್ತೆ, ಇಲ್ಲ ಕನ್ನಡ ಕಲಿ ತರಗತಿ ಇರುತ್ತೆ ಅಥವಾ ಯಾವುದೋ ಕನ್ನಡ ನಾಟಕದ ಪ್ರಾಕ್ಟೀಸ್ ಇರುತ್ತೆ. ಆಸಾಮಿಗಳನ್ನು ಹಿಡಿಯೋದೇ ಕಷ್ಟ ಆಗಿದೆ ಕಣ್ರೀ! ಆದ್ರೆ ಕನ್ನಡದ ಕೆಲಸದಲ್ಲಿ ಮುಳುಗಿ ಹೋಗಿರೋದು ನೋಡಿದ್ರೆ ನಿಜವಾಗಲೂ ಸಂತೋಷವಾಗುತ್ತೆ."

ಅವರು ಆ ರೀತಿ ಹೇಳಲು ಕಾರಣಗಳಿಲ್ಲದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಬೇ ಏರಿಯಾದ ಕನ್ನಡಿಗರು ಬಿಜಿನೋ ಬಿಜಿ! ಆಗಸ್ಟ್ - ಸೆಪ್ಟೆಂಬರ್ ತಿಂಗಳುಗಳಲ್ಲಿ ಕೆಕೆ‍ಎನ್‍ಸಿ (ಉತ್ತರ ಕ್ಯಾಲಿಫೊರ್ನಿಯ ಕನ್ನಡ ಕೂಟ) ಆಯೋಜಿಸಿದ ಹಂಸಲೇಖ ಕಾರ್ಯಕ್ರಮ, ಎರಡು ದಿನಗಳ Camping, ನಂತರ ಕನ್ನಡೋತ್ಸವ - ಇವುಗಳೆಲ್ಲ ಮುಗಿಯುತ್ತಿದ್ದಂತೆ ಆರಂಭವಾಯಿತು ದಸರಾ/ನವರಾತ್ರಿ ಹಬ್ಬದ ಸಾಲು. ಇಲ್ಲಿನ ಕನ್ನಡಿಗರಿಗೆ ತಮ್ಮ ತಮ್ಮ ಮನೆಗಳಲ್ಲಿ ಅದ್ದೂರಿ ವಿನ್ಯಾಸದ ಬೊಂಬೆ ಪ್ರದರ್ಶನ ಏರ್ಪಡಿಸಿ ತಮ್ಮ ಮಿತ್ರರರನ್ನು (ಹೆಚ್ಚಾಗಿ ಕನ್ನಡಿಗರು ಅಂತಾನೇ ಇಟ್ಕೊಳ್ಳಿ) ಬೊಂಬೆ ಆರತಿಗೆ ಆಹ್ವಾನಿಸುವುದು ಪದ್ದತಿಯಾಗಿಬಿಟ್ಟಿದೆ. ಜೊತೆಗೆ ಸವಿಯೂಟ. (By the way ಬೊಂಬೆ ಆರತಿಗೆ ಪುರುಷರಿಗೂ ಆಹ್ವಾನ ಉಂಟು).

ಅಂತಹ ಆಹ್ವಾನಗಳು ಈಚಿನ ವರ್ಷಗಳಲ್ಲಿ ಎಷ್ಟು ಹೆಚ್ಚಾಗಿವೆ ಎಂದರೆ, ಕೆಲವು ಬಾರಿ, ಒಂದೇ ವಾರಾಂತ್ಯದ ಸಂಜೆಯಲ್ಲಿ ಎಂಟು ಹತ್ತು ಮನೆಗಳಿಗೆ ಬೊಂಬೆ ಆರತಿಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಎಂದರೆ ಅತಿಶಯೋಕ್ತಿ ಅಲ್ಲ. ಹತ್ತಾರು ಮನೆಗಳಿಗೆ ಆಹ್ವಾನ ಪಡೆದ ಕೆಲವರು, ಗಿನ್ನಿಸ್ ಪುಸ್ತಕಕ್ಕೆ ಲಗ್ಗೆ ಹಾಕುವ ಕನಸು ಕಾಣುತ್ತಿದ್ದಾರಂತೆ. ಹಾಗೆನೆ, ಬೇರೆ ಬೇರೆ ಊರುಗಳಲ್ಲಿರುವ ಇಷ್ಟೆಲ್ಲ ಮನೆಗಳನ್ನು ಒಂದೇ ಸಂಜೆಯಲ್ಲಿ ಹೇಗೆ ಕವರ್ ಮಾಡುವುದು ಎಂಬುದೂ ಸಮಸ್ಯೆಯಾಗತೊಡಗಿದೆ.

ಹೆಂಡತಿಯ ಆದೇಶದಂತೆ "ಸನ್ನಿವೇಲ್-ಫ್ರೀಮಾಂಟ್-ಸ್ಯಾನ್‍ಹೊಸೆ-ಪಾಲೊ ಆಲ್ಟೋ" ಮಾರ್ಗ ಅನುಸರಿಸುವುದೆ? ಅಥವಾ ಹತ್ತಿರದಲ್ಲೆ ಇರುವ ಪಾಲೋ ಆಲ್ಟೋ ಮೊದಲು ಮುಗಿಸುವುದೇ? ಎಂಬಂತಹ ಪ್ರಶ್ನೆಗಳಿಂದ ಅನೇಕರ ವೈವಾಹಿಕ ಜೀವನದಲ್ಲಿ ಸಣ್ಣ ಬಿರುಗಾಳಿ ಉಂಟಾಗಬಹುದು ಎಂದು ಸ್ಥಳಿಯ ಹವಾಮಾನ ತಜ್ಞರು ಮುನ್ಸೂಚನೆ ನೀಡತೊಡಗಿದ್ದಾರೆ. (ಸದರಿ ಬಿರುಗಾಳಿಗೆ ಕನ್ನಡತಿಯ ಹೆಸರಿಡಬೇಕೆಂದು ಸ್ಥಳಿಯ ಕನ್ನಡ ಸಂಸ್ಥೆಗಳು ಆಗ್ರಹಪಡಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.)

ಹಾಗೆಯೆ ಮೇಲಿನ ಸಮಸ್ಯೆಗೆ ಪರಿಹಾರ ಒದಗಿಸಲು, ಇಲ್ಲಿನ ಕೆಲವು ಹೈಸ್ಕೂಲ್ ಹೈಕ್ಲುಗಳು, Computer Scienceನಲ್ಲಿ ಬರುವ ಬಹು ಪ್ರಸಿದ್ಧ ಸಮಸ್ಯೆ - 'ಪ್ರವಾಸಿ ಮಾರಾಟಗಾರನ ಸಮಸ್ಯೆ'ಯ ಪರಿಹಾರಕ್ಕೆ ಬಳಸುವ (Travelling Salesman Problem of finding the best and efficient route to cover all his points of interest) ತತ್ವಗಳನ್ನು ಬಳಸಿ, ಒಂದು Iphone App ತಯಾರಿಸಿ, ಅತೀ ಕಿರಿ ವಯಸ್ಸಿನ ಮಿಲಿಯನೇರುಗಳಾಗಿ ಗಿನ್ನೆಸ್ ದಾಖಲೆ ಸ್ಥಾಪಿಸುವ ಕನಸು ಕಾಣುತ್ತಿದ್ದಾರೆಂದು ಮತ್ತೊಂದು ಬಲ್ಲ ಮೂಲಗಳು ತಿಳಿಸಿವೆ. ಛೇ! ನಾನು ಎಲ್ಲೊ ಹೋಗಿಬಿಟ್ಟೆ! ಇಷ್ಟೆಲ್ಲ ಯಾಕೆ ಹೇಳೋಕ್ ಹೊರಟೇ ಅಂದ್ರೆ, ಇಲ್ಲಿ ಕನ್ನಡ ಚಟುವಟಿಕೆಗಳು ಹೇಗೆ ನಿರಂತರವಾಗಿ ನಾಡೀತಾ ಇದೆ ಅನ್ನೊದನ್ನ ಸಾಬೀತು ಪಡಿಸೋಕೆ.

ಹಾಗೆ ಮುಂದುವರೆಯುತ್ತ, ದಸರಾ ಸೀಸನ್ ಇನ್ನೂ ಮುಗಿದೇ ಇಲ್ಲ, ಬಂತು ನೋಡಿ, ಎಂಡಿ ಪಲ್ಲವಿ ಮತ್ತು ಅರುಣ್ ಅವರ ಅತ್ಯದ್ಭುತ ಕಾರ್ಯಕ್ರಮ. ಇದಾಗುತ್ತಿದಂತೆ ಬಂದಿತು ಕನ್ನಡದ ಖ್ಯಾತ ಕವಿ ಪುತಿನ ರಚಿತ, ಅಲಮೇಲು ಅಯ್ಯಂಗಾರ್ ನೇತೃತ್ವದ ಜಯಜಯ ವಿಜಯೀ ರಘುರಾಮ ಮತ್ತು ಸ್ಯಾನ್ ಹೊಸೆಯಲ್ಲಿ ನಡೆಯಲಿರುವ ಎಂಟನೇ ಅಕ್ಕ ಸಮ್ಮೆಳನದ 'Signing of MOU' ಕಾರ್ಯಕ್ರಮ.

ಇಷ್ಟೆಲ್ಲ ಕನ್ನಡ ಕಾರ್ಯಕ್ರಮಗಳು ಅಲೆಅಲೆಯಾಗಿ ಹರಿದು ಬರುತ್ತಿದ್ದರೂ, ಅಮೆರಿಕ್ಕನ್ನರು ಹೇಳುವಂತೆ "You ain't seen nothing yet" ಅನ್ನುವ ಮಾತು ಈಗ ಅನ್ವಯಿಸುತ್ತದೆ. ಲೇಖನದ ಪ್ರಾರಂಭದಲ್ಲಿ ಹೇಳಿದಂತೆ "ಪರ್ವಕಾಲ ಈಗಲೇ" ಅನ್ನುವ ಬದಲು, "ಪರ್ವ ಕಾಲ ಇದೇ ಈಗ ಪ್ರಾರಂಭವಾಗಿದೆ" ಎಂದು ಹೇಳಿದರೆ ಹೆಚ್ಚು ಸೂಕ್ತವೇನೋ. ಕಾರಣ ಇಷ್ಟೇ, ಮುಂಬರುವ ದಿನಗಳಲ್ಲಿ ಇದಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಇಲ್ಲಿನ ಕನ್ನಡಿಗರು ತಯಾರಿ ನಡೆಸುತ್ತಿದ್ದಾರೆ.

ಈಗಾಗಲೆ ಪ್ರಕಟಗೊಂಡಿರುವ ಕಾರ್ಯಕ್ರಮಗಳ ಈ ಪಟ್ಟಿ ಗಮನಿಸಿದರೆ ಓದುಗ ಮಹಾಶಯರಿಗೆ ಪರಿಸ್ಥಿತಿ ಅರ್ಥವಾಗುತ್ತದೆ. ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಪ್ರಸಾರಗೊಳ್ಳಲಿರುವ ರೇಡಿಯೋ ನಾಟಕ 'ಪರರ ಸೊತ್ತು'(ಎಮ್ ಎಸ್ ನರಸಿಂಹಮೂರ್ತಿ ವಿರಚಿತ), ನವೆಂಬರ್ 16ರಂದು ಕೆಕೆಎನ್‍ಸಿಯ ದೀಪೋತ್ಸವ ಕಾರ್ಯಕ್ರಮ, ಜನವರಿ 4 ಮತ್ತು 5ರಂದು ಕೆ.ವಿ. ರಾಮಪ್ರಸಾದ ಅವರ ನಿರ್ದೇಶನದಲ್ಲಿ ಕನ್ನಡ ಪತ್ತೇದಾರಿ ನಾಟಕ 'ಪುಟ್ಟ ಮಲ್ಲಿಗೆ ಎಸ್ಟೇಟ್', ಮಾರ್ಚಿನಲ್ಲಿ ಶರ್ಮಿಳ ವಿದ್ಯಾಧರ ಅವರ ನೇತೃತ್ವದಲ್ಲಿ ಎರಡ್ ವರುಷಕ್ಕೊಮ್ಮೆ ನಡೆಯುವ ನಾಟಕ ಚೈತ್ರ ಕಾರ್ಯಕ್ರಮ.

ಕನ್ನಡ ನೆಲದಿಂದ ಸಾವಿರಾರು ಮೈಲಿ ದೂರ ಬಂದಿದ್ದರೂ ಅಥವ ಅದೇ ವಿಶೇಷ ಕಾರಣಕ್ಕಾಗಿಯೇ ಏನೊ ನಾವು ಉತ್ತರ ಕ್ಯಾಲಿಫೋರ್ನಿಯಾ ಕನ್ನಡಿಗರು ಸಿರಿಗನ್ನಡದ ಕಂಪಿನಲ್ಲಿ ಮಿಂದು ಆನಂದಿಸುತ್ತಿದ್ದೇವೆ ಎಂದು ಧನ್ಯತೆ ಮತು ಹೆಮ್ಮೆಯ ಭಾವದಿಂದ ತಿಳಿಸಬಯಸುತ್ತೇನೆ.

English summary
November or no November, Kannadigas are always busy in California, USA. Weekend Kannada activities, Kannada tutorials to children keep the parents busy all the time. Next year KKNC will be co-hosting World Kannada Conference with AKKA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X