• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಸ್ಟನ್ ನಲ್ಲಿ ಕದ್ರಿ, ಹವಾಲ್ದಾರ್ ಸಂಗೀತ ಲಹರಿ

By ರಾಜೇಶ್ ಪೈ ಕಲ್ಸಂಕ
|

ಮಂದಾರದ ಗಣೇಶೋತ್ಸವಕ್ಕೆ ಈ ಬಾರಿ ಸಂಗೀತ ದಿಗ್ಗಜರಾದ ಪದ್ಮಶ್ರೀ ಕದ್ರಿ ಗೋಪಾಲನಾಥ್ ಮತ್ತು ಪಂಡಿತ್ ನಾಗರಾಜ ಹವಾಲ್ದಾರ್ ಬರುತ್ತಾರೆಂದು ಕೇಳಿದಾಗ ಬಾಸ್ಟನ್ ಕನ್ನಡಿಗರೆಲ್ಲರೂ ಸಡಗರದಿಂದ ಸೆಪ್ಟೆಂಬರ್ 21ಕ್ಕೆ ಕಾಯುತ್ತಿದ್ದರು. ಇದು ಕನ್ನಡೇತರರಿಗೂ ಮುಕ್ತವಾಗಿತ್ತು. ಬಾಸ್ಟನ್ ಅಲ್ಲದೆ ಅಕ್ಕಪಕ್ಕದ ಕನೆಕ್ಟಿಕಟ್, ನ್ಯೂಯಾರ್ಕ್, ನ್ಯೂಹ್ಯಾಂಪ್ ಶೈರ್ ನಿಂದಲೂ ಜನರು ಬಂದಿದ್ದರು.

ಆ ದಿನ ಶನಿವಾರದ ಮಧ್ಯಾಹ್ನ 2 ಗಂಟೆಗೆ ವಿನಾಯಕನ ಪೂಜೆ, ಪ್ರಾರ್ಥನೆ ನಡೆದು ಮಕ್ಕಳು ಹಾಗು ದೊಡ್ಡವರ ತಂಡಗಳಿಂದ ಹಾಡಿನ ಮೂಲಕ ಗಣೇಶನಿಗೆ ವಂದನೆ ಸಂದಿತು. ತದನಂತರ ಕದ್ರಿಯವರ ಸ್ಯಾಕ್ಸೋಫೋನ್ ವಾದನ ಆರಂಭಗೊಂಡಿತು. ಶುದ್ಧ, ಶಾಸ್ತ್ರೀಯ ಶೈಲಿಯಲ್ಲಿ ಸಾಮಜವರಗಮನ ಇಂಪಾಗಿ ಮೂಡಿ ಬಂದು ಮುಕ್ತಾಯದಲ್ಲಿ ತಬಲಾ, ಮೃದಂಗದ ಜುಗಲ್ಬಂದಿಯು ಪ್ರಚಂಡವಾಗಿ ನಡೆಯಿತು.

ಹರಿಕುಮಾರರ ಅಸಾಮಾನ್ಯ ಮೃದಂಗ ವಾದನದ ವೈಖರಿಗೆ ಜೊತೆಜೊತೆಯಾಗಿ ರಾಜೇಂದ್ರ ನಾಕೋಡರು ಅತ್ಯಮೋಘವಾಗಿ ತಬಲಾ ನುಡಿಸಿದರು. ಪಿಟೀಲಿನಲ್ಲಿ ಕುಮಾರಿ ಕನ್ಯಾಕುಮಾರಿಯವರ ಸಹವಾದನವು ಅತ್ಯಂತ ಸುಂದರವಾಗಿ, ನಿರರ್ಗಳವಾಗಿ ಹೊಮ್ಮಿತು. ಕದ್ರಿಯವರು ಪಾಶ್ಚಾತ್ಯ ಸಂಗೀತೋಪಕರಣವಾದ ಸ್ಯಾಕ್ಸೋಫೋನಿನಲ್ಲಿ ಲೀಲಾಜಾಲವಾಗಿ, ಸುಶ್ರಾವ್ಯವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ, ಜಾನಪದ ಶೈಲಿಯನ್ನೂ, ಲಘುಸಂಗೀತದ ಹಲವು ಪ್ರಕಾರಗಳನ್ನೂ ನುಡಿಸಿ ಜನರಂಜಿಸಿದರು.

ಡ್ಯುಯೆಟ್ ಚಿತ್ರದ ಹಾಡನ್ನೂ ನುಡಿಸಿದ ಕದ್ರಿ

ಡ್ಯುಯೆಟ್ ಚಿತ್ರದ ಹಾಡನ್ನೂ ನುಡಿಸಿದ ಕದ್ರಿ

ಅವುಗಳಲ್ಲಿ ಕೆಲವು ಆಡುಪಾಂಬೆ (ರಾಗ:ಪುನ್ನಗವರಾಲಿ), ಪುರಂದರದಾಸರ ಪಿಳ್ಳಂಗೋವಿಯ (ಮೋಹನ ಕಲ್ಯಾಣಿ) ಮತ್ತು ತಂಬೂರಿ ಮೀಟಿದವ (ಸಿಂಧುಭೈರವಿ), ಮೀರಾಭಜನ್ - ಪಾಯೋಜಿ ಮೈನೆ, ಅಭಂಗ - ತೀರ್ಥವಿಟ್ಠಲ ಕ್ಷೇತ್ರ ವಿಟ್ಠಲ (ಆಹಿರ್ ಭೈರವ್) ಇತ್ಯಾದಿ. ಪ್ರತಿಯೊಂದರಲ್ಲಿ ಭಕ್ತಿರಸವೂ, ಭಾವಪರವಶತೆಯೂ ಉಕ್ಕಿಹರಿದು ಕೇಳುಗರನ್ನು ತನ್ಮಯರಾಗಿ ಮಾಡಿದ್ದರಲ್ಲಿ ಎರಡು ಮಾತಿಲ್ಲ. ಪ್ರೇಕ್ಷಕರ ಕೋರಿಕೆಯ ಮೇರೆಗೆ ಅವರ ಸ್ಯಾಕ್ಸೋಫೋನ್ ಅಳವಡಿಸಿ ಮನೆಮಾತಾದ ಎ.ಆರ್.ರೆಹಮಾನ್ ನಿರ್ದೇಶಿಸಿದ "ಡ್ಯುಯೆಟ್" ಚಿತ್ರದ ಎರಡು ಹಾಡುಗಳನ್ನೂ ನುಡಿಸಿ ಚಪ್ಪಾಳೆ ಗಿಟ್ಟಿಸಿದರು.

ಪ್ರೇಕ್ಷಕರಿಂದ ನಿಲ್ಲದ ಕರತಾಡನ

ಪ್ರೇಕ್ಷಕರಿಂದ ನಿಲ್ಲದ ಕರತಾಡನ

ಕನ್ನಡದ ನಿತ್ಯನೂತನ ಕೃತಿಗಳಾದ "ಕೃಷ್ಣಾ ನೀ ಬೇಗನೆ ಬಾರೊ" ಮತ್ತು "ಭಾಗ್ಯದ ಲಕ್ಷ್ಮೀ ಬಾರಮ್ಮ"ವನ್ನು ಅದ್ಭುತವಾಗಿ ನುಡಿಸಿ ಸಂಗೀತ ರಸದೌತಣವನ್ನುಂಡ ಪ್ರೇಕ್ಷಕರಿಂದ ನಿಲ್ಲದ ಕರತಾಡನವನ್ನು ಪಡೆದು ತಮ್ಮ ಕಚೇರಿಯನ್ನು ಮುಕ್ತಾಯಗೊಳಿಸಿದರು.

ಮುಂದಿನ ಸಲ ಮತ್ತೆ ಬರುತ್ತೇನೆ

ಮುಂದಿನ ಸಲ ಮತ್ತೆ ಬರುತ್ತೇನೆ

ಮುಗಿಸಿದ ಕೂಡಲೇ ಅವರು ಮುಂದಿನ ಪಯಣಕ್ಕೆ ವಿಮಾನ ನಿಲ್ದಾಣಕ್ಕೆ ಧಾವಿಸಬೇಕಾಗಿತ್ತು. ಜನಸಂದಣಿಯ ಮಧ್ಯೆ ಫೋಟೋಗಳನ್ನು ತೆಗೆಯುತ್ತಾ, ಮಾತನಾಡುತ್ತಾ, ಕಾರಿನಲ್ಲಿ ಸಹಕಲಾವಿದರ ಜೊತೆ ಬೀಳ್ಕೊಳ್ಳುವಷ್ಟರಲ್ಲಿ, ಮುಂದಿನ ಸಲ ಮತ್ತೆ ಬರುತ್ತೇನೆ ಎಂದು ಆತ್ಮೀಯವಾಗಿ ಹೇಳಿ ಹೊರಟುಬಿಟ್ಟರು.

ಪಂಡಿತ ನಾಗರಾಜ ಹವಾಲ್ದಾರರ ಗಾಯನ

ಪಂಡಿತ ನಾಗರಾಜ ಹವಾಲ್ದಾರರ ಗಾಯನ

ಸಂಜೆಯಾಗಿ, ಸಣ್ಣ ಚಹಾ ಬಿಡುವಿನ ನಂತರ ಪಂಡಿತ ನಾಗರಾಜ ಹವಾಲ್ದಾರರ ಮಧುರ ಕಂಠದ ಹಿಂದುಸ್ತಾನಿ ಸಂಗೀತ ಕಚೇರಿಯು ಶುರುವಾಯಿತು. ಸಮಯಕ್ಕೆ ತಕ್ಕಂತೆ ಪೂರಿಯಾ ಕಲ್ಯಾಣ್ ರಾಗದಲ್ಲಿ ಖಯಾಲ್ ಗಾಯನವನ್ನು ಪ್ರಸ್ತುತಪಡಿಸಿ ಶ್ರೋತೃಗಳನ್ನು ಭಾವಲೋಕಕ್ಕೆ ನೇರವಾಗಿ ಕರೆದೊಯ್ದರು!

ಹಿಂದೂಸ್ತಾನಿ ಸಂಗೀತದ ಗಂಧರ್ವಲೋಕ

ಹಿಂದೂಸ್ತಾನಿ ಸಂಗೀತದ ಗಂಧರ್ವಲೋಕ

ತಬಲಾ ವಾದನದಲ್ಲಿ ನ್ಯೂಯಾರ್ಕ್ ನಗರದ ದಿಬ್ಯಾರ್ಕ ಚಟರ್ಜಿ ಹಾಗೂ ಹಾರ್ಮೋನಿಯಂನಲ್ಲಿ ಬಾಸ್ಟನ್ ಕನ್ನಡಿಗರಿಗೆ ಚಿರಪರಿಚಿತರಾದ ಸ್ಥಳೀಯ ಪ್ರತಿಭೆ ರವಿ ತೊರವಿಯವರು ಬಹು ಉತ್ತಮವಾಗಿ ಸಹಕರಿಸಿದರು. ಹವಾಲ್ದಾರರು ಜನಪ್ರಿಯವಾದ ಹಾಗೂ ಅಪರೂಪವಾದ ಕನ್ನಡ ವಚನ, ಹಿಂದಿ ಭಜನ್, ಮರಾಠಿ ಅಭಂಗಗಳನ್ನು ನವಿರಾಗಿ, ಸೊಗಸಾಗಿ ಹಾಡಿ ಹಿಂದೂಸ್ತಾನಿ ಸಂಗೀತದ ಗಂಧರ್ವಲೋಕವನ್ನೇ ಸಭಾಂಗಣದಲ್ಲಿ ಸೃಷ್ಟಿಸಿದರು.

ಮಂತ್ರಮುಗ್ಧಗೊಳಿಸಿದ ಗಾಯನ

ಮಂತ್ರಮುಗ್ಧಗೊಳಿಸಿದ ಗಾಯನ

ಭಾರತ ರತ್ನ ಭೀಮಸೇನ ಜೋಷಿಯವರ ಸದಾ ಎನ್ನ ಹೃದಯದಲ್ಲಿ(ದರ್ಬಾರಿ), ತೀರ್ಥ ವಿಟ್ಠಲ (ಆಹಿರ್ ಭೈರವ್), ಅಕ್ಕಮಹಾದೇವಿಯವರ ವಚನ ಹಸಿವಾದೊಡೆ ಭಿಕ್ಷಾನ್ನಗಳುಂಟು (ಭಟಿಯಾರ್), ಅಲ್ಲಮಪ್ರಭುವಿನ ಮಣಿಯನೆಣಿಸಿ ದಿನವ ಕಳೆಯಬೇಡ, ಶ್ರೀಪಾದರಾಜರ ಆಡಪೋಗೋಣ ಬಾರೋ ರಂಗ(ದುರ್ಗಾ), ಪುರಂದರದಾಸರ ಮುದ್ದು ತಾರೋ ಹಾಗೂ ಹೊನ್ನು ತಾ ಗುಬ್ಬಿ ಇತ್ಯಾದಿ ಹಾಡುಗಳು ಅಮೋಘವಾಗಿ ಅವರ ಶಾರೀರದಿಂದ ಹರಿದುಬಂದು ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತು.

ದುಡ್ಡನ್ನೇ ಬಯಸಿ ದಿನವ ಕಳೆಯಬೇಡ

ದುಡ್ಡನ್ನೇ ಬಯಸಿ ದಿನವ ಕಳೆಯಬೇಡ

ಸಂಗೀತಜ್ಞರೂ ಆಗಿರುವ ಹವಾಲ್ದಾರರು ನಡುನಡುವೆ ಹಿಂದಿನ ಕಾಲದಲ್ಲಿ ಗಾಯಕರು ಧನಾರ್ಜನೆಯ ಉದ್ದೇಶವಿಲ್ಲದೆ ಬರೀ ಸಂಗೀತಸೇವೆಗೆ ಹಾಡುತ್ತಿದ್ದನ್ನು ತಿಳಿಸಿದರು. ಪಂಡಿತ ಭೀಮಸೇನ ಜೋಷಿಯವರ ಮೇಲಣ ಜನರ ಪ್ರೀತಿಯನ್ನು ಬಣ್ಣಿಸಿದರು. ಅರ್ಥಗರ್ಭಿತ ವಚನವನ್ನು ಅಮೇರಿಕಾದಲ್ಲಿ ಹುಟ್ಟಿಬೆಳೆದವರು "ಮಣಿ" ಬದಲು "ಮನಿ" ಎಂದರೂ - ದುಡ್ಡನ್ನೇ ಬಯಸಿ ದಿನವ ಕಳೆಯಬೇಡ ಎಂಬ ಈ ಕಾಲಕ್ಕೆ ತಕ್ಕಂತಹ ಅರ್ಥವನ್ನೇ ನೀಡುತ್ತದೆ ಎಂದು ತಿಳಿಹಾಸ್ಯವ ಬೆರೆಸಿ ತಿಳಿಹೇಳಿದರು.

ಭಕ್ತಿರಸಕ್ಕೆ ಸಮಂಜಸವಾದ ಗಾಯನ

ಭಕ್ತಿರಸಕ್ಕೆ ಸಮಂಜಸವಾದ ಗಾಯನ

ಭೈರವಿ ರಾಗದ "ಜೊ ಭಜೇ ಹರಿ ಕೋ ಸದಾ ಸೊ ಹಿ ಪರಮ ಪದ ಪಾವೆಗಾ" ಎಂಬ ಭಕ್ತಿರಸಕ್ಕೆ ಸಮಂಜಸವಾದ ಗಾಯನವನ್ನು ಹವಾಲ್ದಾರ್ ಅವರು ಹಾಡಿ ಕಾರ್ಯಕ್ರಮ ಮುಗಿಸಿದಾಗ ರಾತ್ರಿ ಒಂಭತ್ತು ದಾಟಿದರೂ ಜನರು ಪರಿವಿಲ್ಲದೆ ಗಾಢಮಗ್ನರಾಗಿ ಕೇಳುತ್ತಿದ್ದರು. ಇದಕ್ಕೆ ಮ್ಯಾಸೆಚುಸೆಟ್ಸ್ ರಾಜ್ಯದ ಫ್ರೇಮಿಂಘಾಂ ಊರಿನ ಕೀಫ್ ಟೆಕ್ ಸಭಾಂಗಣವೇ ಸಾಕ್ಷಿ; ಈ ಭವ್ಯ ಸಂಜೆಯನ್ನು ಸಮರ್ಪಕವಾಗಿ ನಿರ್ವಹಿಸಿದವರು ನ್ಯೂ ಇಂಗ್ಲಂಡ್ ಮಂದಾರ ಕನ್ನಡ ಕೂಟದ ಪದಾಧಿಕಾರಿಗಳು.

ಸ್ಯಾಕ್ಸೋಫೋನ್ ಕದ್ರಿಗೆ ಚುಟುಕ ನಮನ!

ಸ್ಯಾಕ್ಸೋಫೋನ್ ಕದ್ರಿಗೆ ಚುಟುಕ ನಮನ!

ಮಟ ಮಟ ಮಧ್ಯಾಹ್ನದ ಸಂಗೀತಸುಧೆಯ ರಸದೌತಣ

ಪಿಟೀಲಿನೊಡನೆ ಕದ್ರಿ ಸ್ಯಾಕ್ಸೋಫೋನ್ ಮೋಡಿ ಹೊಗಳೋಣ

ತಬಲಾ ಮೃದಂಗ ಜುಗಲಬಂದಿಯ ಗಮ್ಮತ್ತಿನ ಸಂಮಿಶ್ರಣ

ಎವೆಯಿಕ್ಕದೆ ಚಪ್ಪಾಳೆ ತಟ್ಟಿ ಮನಸೂರೆಗೊಂಡ ಜನಗಣ

ಹವಾಲ್ದಾರರಿಗೆ ಚುಟುಕ ನಮನ!

ಹವಾಲ್ದಾರರಿಗೆ ಚುಟುಕ ನಮನ!

ಮುಸ್ಸಂಜೆಯ ಮಂದಾನಿಲ ಹಿತವೆನಿಸಿದ ಹೊನ್ನಕಿರಣ...

ಹವಾಲ್ದಾರರ ಸುಶಾರೀರ ಮಾಧುರ್ಯ ಪೂರಿಯಾ ಕಲ್ಯಾಣ

ಶಾಸ್ತ್ರೀಯ, ವಚನ, ಭಜನ, ಅಭಂಗ ಮಹದಾಕರ್ಷಣ

ಮಂದಾರ ಸುಂದರ ಸಂಜೆಯ ಹೇಗೆ ತಾನೇ ಮರೆಯೋಣ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Great musical feast was organized in Boston for our Ganeshotsava event by New England Kannada Koota on 21st September, 2013. Saxophone player Kadri Gopalnath and Hindustani singer Nagaraj Havaldar graced the occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more