• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಬಾಮನ ಅಂಗಳದಲ್ಲಿ 'ಮುಖ್ಯಮಂತ್ರಿ'ಯ ದರ್ಬಾರು!

By ಶ್ರೀವತ್ಸ ಜೋಶಿ
|

ಇವರು ಕರ್ನಾಟಕದ ಪರ್ಮನೆಂಟ್ ಮುಖ್ಯಮಂತ್ರಿ. ಯಾವ ಪಕ್ಷದ ಯಾವ ನೇತಾರನೇ ಅಧಿಕಾರದ ಗದ್ದುಗೆಯೇರಲಿ ಅಥವಾ ಅಲ್ಲಿಂದ ಬೀಳಲಿ, ಇವರಂತೂ ಸದಾ ಮುಖ್ಯಮಂತ್ರಿಯಾಗಿಯೇ ಇರುತ್ತಾರೆ. ಹಿಂದೆ 'ಅಕ್ಕ' ಸಮ್ಮೇಳನಗಳ ವೇದಿಕೆಗಳಲ್ಲೆಲ್ಲ ಕರ್ನಾಟಕದ ಅರೆಕಾಲಿಕ (ನಿಜ) ಮುಖ್ಯಮಂತ್ರಿಗಳೂ ಮತ್ತೆ ಈ ಶಾಶ್ವತ ಮುಖ್ಯಮಂತ್ರಿಯೂ ಅಕ್ಕಪಕ್ಕ ಕುಳಿತಾಗ ನಾವು ಸಂಭ್ರಮಿಸಿದ್ದಿದೆ, ಹಾಸ್ಯ ಮಾಡಿದ್ದಿದೆ. ಅದನ್ನು ತಮಾಷೆಯೆಂದೇ ಸ್ವೀಕರಿಸಿ ಅವರು ಮನಸಾರೆ ಗಹಗಹಿಸಿ ನಕ್ಕಿದ್ದೂ ಇದೆ. ಅವರೇ ನಮ್ಮನಿಮ್ಮೆಲ್ಲರ ನೆಚ್ಚಿನ "ಮುಖ್ಯಮಂತ್ರಿ ಚಂದ್ರು"!

ಮೊನ್ನೆ ಶನಿವಾರ (ಜೂನ್ 6) ನಮ್ಮ ವಾಷಿಂಗ್ಟನ್ ಡಿಸಿ ಪ್ರದೇಶದ ಲೂಥರ್ ಜಾಕ್ಸನ್ ಮಿಡಲ್‌ಸ್ಕೂಲ್ ಸಭಾಂಗಣದಲ್ಲಿ "ಮುಖ್ಯಮಂತ್ರಿ" ಕನ್ನಡ ನಾಟಕ ಪ್ರದರ್ಶನ ಇತ್ತು. ಚಂದ್ರು ಮತ್ತವರ ಹನ್ನೊಂದು ಮಂದಿಯ ತಂಡ ಪ್ರಸಕ್ತ ಅಮೆರಿಕ ಪ್ರವಾಸದಲ್ಲಿದ್ದು ಈಗಾಗಲೇ ಕ್ಯಾಲಿಫೋರ್ನಿಯಾದಲ್ಲಿ ಎರಡು ಭರ್ಜರಿ ಪ್ರದರ್ಶನಗಳ ನಂತರ ಮೂರನೆಯದಾಗಿ ಇಲ್ಲಿ ವಾಷಿಂಗ್ಟನ್‌ನಲ್ಲಿ ಮುಖ್ಯಮಂತ್ರಿ ನಾಟಕ.

ಚಂದ್ರು ಅವರ ತಂಡದ ಅಮೆರಿಕ ಪ್ರವಾಸದ ರೂಪುರೇಷೆಯೆಲ್ಲ ಲಾಸ್ ಏಂಜಲೀಸ್‌ನ ವಲ್ಲೀಶ ಶಾಸ್ತ್ರಿ. ಅವರೂ ನಿನ್ನೆ ವಾಷಿಂಗ್ಟನ್‌ಗೆ ಬಂದಿದ್ದರು; ನಾಟಕದಲ್ಲಿ ಪ್ರಧಾನಪಾತ್ರವೊಂದನ್ನೂ ನಿರ್ವಹಿಸಿದ್ದರು. ಮತ್ತೆ ಇಲ್ಲಿನವರೇ ಕೆಲ ಅಮೆರಿಕನ್ನಡಿಗರೂ ಬಣ್ಣ ಹಚ್ಕೊಂಡು ಮುಖ್ಯಮಂತ್ರಿಯ ಜೊತೆ ಪಾತ್ರಗಳನ್ನು ನಿರ್ವಹಿಸಿದ್ದರು. ರಿಚ್‌‍ಮಂಡ್‌ನಿಂದ ಬಂದಿದ್ದ ಸ್ನೇಹಿತ ಶ್ರೀನಾಥ್ ಭಲ್ಲೆ ಮುಖ್ಯಮಂತ್ರಿಯ ಮಗ ಎಂಎಲ್‌ಎ!

ಚಂದ್ರು ಮತ್ತು ನಿರ್ದೇಶಕ ಬಿ.ವಿ.ರಾಜಾರಾಂ ಅವರದೂ ನನಗೆ ವೈಯಕ್ತಿಕ ಪರಿಚಯವಿದೆ. ಆದರೆ ಈ ನಾಟಕವನ್ನು- ಅದರ ನಾಲ್ಕು ದಶಕಗಳ ದಾಖಲೆ ಪ್ರದರ್ಶನ ಸರಣಿಯಲ್ಲಿ- ನಾನು ಇದುವರೆಗೂ ನೋಡಿರಲಿಲ್ಲ. ನಿನ್ನೆ ಆ ಸಂದರ್ಭ ಒದಗಿತು. ನಾಟಕ ನನಗೆ ತುಂಬಾ ಇಷ್ಟವಾಯ್ತು. ಎಲ್ಲೂ ಬೋರ್ ಹೊಡೆಸದೆ, ಒನ್‌ಲೈನರ್‌ಗಳು, ಸಂಭಾಷಣೆಗಳು ನಿಜಕ್ಕೂ ಪಂಚ್ ಕೊಡುವಂತಿದ್ದವು. ಕೆಲವು ಸನ್ನಿವೇಶಗಳಲ್ಲಂತೂ ಸಂಭಾಷಣೆಯ ಆವಶ್ಯಕತೆಯೂ ಇಲ್ಲದೇ ಬರೀ ಅಭಿನಯದಿಂದಲೇ ನಗೆಯುಕ್ಕಿಸುವ, ಕಚಗುಳಿಯಿಡುವ ಕಲಾಪರಿಣತರು ಈ ನಾಟಕಕಾರರು.

ನಮ್ಮ ಇಲ್ಲಿನ 'ಕಾವೇರಿ' ಕನ್ನಡ ಸಂಘವು ಈ ನಾಟಕ ಪ್ರದರ್ಶನಕ್ಕಾಗಿ ಗೊತ್ತುಪಡಿಸಿದ್ದ ಸ್ಕೂಲ್ ಆಡಿಟೋರಿಯಂ, ಅಲ್ಲಿನ ಧ್ವನಿ-ಬೆಳಕು ವ್ಯವಸ್ಥೆ, ನಾಟಕ ಮುಗಿದ ಮೇಲೆ 6 ಡಾಲರ್‌ಗೆ ಬಾಕ್ಸ್ ಡಿನ್ನರ್- ಹೀಗೆ ಎಲ್ಲ ವ್ಯವಸ್ಥೆಗಳೂ ತುಂಬಾನೇ ಚೆನ್ನಾಗಿದ್ದುವು. ಇಲ್ಲಿಯೂ ಈಗ ಮದುವೆ ಸೀಸನ್‌ನಿಂದಾಗಿ ಕೆಲವರು ಊರಲ್ಲಿರಲಿಲ್ಲ, ಹಾಗಾಗಿ ನಾಟಕ ಮಿಸ್ ಮಾಡ್ಕೊಂಡ್ರು. ಆದರೆ ಬಂದವರೆಲ್ಲ ಸಕ್ಕತ್ ಎಂಜಾಯ್ ಮಾಡಿದ್ರು.

ಮುಖ್ಯಮಂತ್ರಿಯ ಕಾರ್ಯಕಛೇರಿ, ಅದರ ಹಿಂದೆಯೇ ಮನೆಯ ಸೆಟ್‌ಅಪ್, ಮಧ್ಯದಲ್ಲಿ ಶಾಸಕಾಂಗ ಸಭೆಯ ಬೈಠಕ್‌ಗೆ ವ್ಯವಸ್ಥೆ, ಈಚೆಕಡೆ ವಿತ್ತಸಚಿವರ ಕಛೇರಿ- ಹೀಗೆ ಒಂದೇ ಮುಖ್ಯವೇದಿಕೆಯೊಳಗೆ ಸ್ಥಾನಕಲ್ಪಿತ ಉಪವೇದಿಕೆಗಳು. ಹಳೇಯ ಟೆಲಿಫೋನ್ ಸೆಟ್‌ಗಳು, ಬಹುತೇಕ ಅದರಲ್ಲೇ ಸಂಭಾಷಣೆಗಳು, ನಾಟಕದ ಮೂಲ ಬಂಗಾಳಿ/ಹಿಂದಿಯಾದ್ದರಿಂದ ಉತ್ತರಭಾರತದ ಹೆಸರುಗಳು- ಕೌಶಲ್, ದುಬೇ, ದೇಸಾಯಿ, ತ್ರಿಪಾಠಿ, ಸಹಾಯ್, ಚಟರ್ಜಿ ವಗೈರಾ. ಮುಖ್ಯಮಂತ್ರಿಯ ಹೆಸರು ಕೃಷ್ಣ ದ್ವೈಪಾಯನ ಅಂತಿರೋದನ್ನು "ಕೇ.ಡಿ" ಅಂತ ಎಕ್ರೊನಿಮ್ ಮಾಡಿದ್ದೂ ಅನ್ವರ್ಥಕ ಉದ್ದೇಶವೇ.

ಪಕ್ಷದಲ್ಲಿ ಬಹುಮತ ಕಳೆದುಕೊಂಡ ಮುಖ್ಯಮಂತ್ರಿಯೊಬ್ಬ ಕೇವಲ 48 ಗಂಟೆಗಳಲ್ಲಿ ತನ್ನ ಗದ್ದುಗೆಗೆ ವಾಪಸ್ಸಾಗುವ ಯಶಸ್ಸಿನ ಕಥೆ. ಆ 48 ಗಂಟೆಗಳಲ್ಲಿ "ರಾಜಕೀಯ"ದ ಸರ್ವತೋಮುಖ ಪರಿಚಯ- ಮುಖ್ಯಮಂತ್ರಿಯಿಂದ ಡಿಕ್ಟೇಟ್ ಮಾಡಿಸಿಕೊಂಡೇ ಸಂಪಾದಕನು ತನ್ನ ಪತ್ರಿಕೆಯಲ್ಲಿ ಸುದ್ದಿ ಛಾಪಿಸುತ್ತಾನೆ- ಎಂಬುದೂ ಸೇರಿದಂತೆ ರಾಜಕೀಯದ ಕಮಟುವಾಸನೆ ಅಂತಾದ್ರೂ ಅನ್ನಿ, ರಂಗೇರುವ ರಂಗು ಅಂತಾದ್ರೂ ಅನ್ನಿ, ಎಲ್ಲವೂ ನಾಟಕದಲ್ಲಿ ತೆರೆದುಕೊಳ್ಳುತ್ತದೆ.

ಕೊನೆಯ ದೃಶ್ಯ- ಬಂಡುಕೋರ ಮುಖಂಡನಿಗೆ ಮುಖ್ಯಮಂತ್ರಿ 'ಶರ್ಬತು' ಕುಡಿಸೋದು, ಆತ ಅದನ್ನು ಗುಟುಕರಿಸುವಾಗ ಗೌರವಕ್ಕೆಂದು ಗಾಂಧಿಟೊಪ್ಪಿಯನ್ನು ತೆಗೆಯುವುದು, ಆಮೇಲೆ ಮುಖ್ಯಮಂತ್ರಿಯೇ ಅವನಿಗೆ 'ಟೋಪಿ ಹಾಕೋದು', ಶರ್ಬತ್ತಿನ ಪ್ರಭಾವವೋ ಎಂಬಂತೆ ಓಲಾಡಿಕೊಂಡೇ ಆತ ನಿರ್ಗಮಿಸೋದು.... ಚಂದ್ರು ಮತ್ತು ವಲ್ಲೀಶಶಾಸ್ತ್ರಿ ಇಬ್ಬರಿಗೂ ಅಭಿನಯವೆಂದರೆ ಶರ್ಬತ್ತು ಕುಡಿದಂತೆಯೇ!

ಬೆಂಗಳೂರಿನಿಂದ ಬಂದವರೂ, ಇಲ್ಲಿನವರೂ ಎಲ್ಲ ಪಾತ್ರಧಾರಿಗಳೂ ಅತ್ಯುತ್ತಮವಾಗಿ ತೊಡಗಿಸಿಕೊಂಡಿದ್ದರಿಂದ ನಾಟಕ ಬಹಳ ಅಚ್ಚುಕಟ್ಟಾಗಿ ಮೂಡಿಬಂತು. ಸರಿಸುಮಾರು ಐನೂರು ಪ್ರದರ್ಶನಗಳು ಈ ನಾಟಕದ್ದು ಆಗಿವೆಯಾದರೂ ತಾಜಾತನ ಹಾಗೆಯೇ ಉಳಿದುಕೊಂಡಿದೆಯೆನ್ನುವುದು ಕಲಾಗಂಗೋತ್ರಿ ತಂಡದ ಹಿರಿಮೆಯೇ ಸೈ. ವಾಷಿಂಗ್ಟನ್‌ನ ನಂತರ ಭಾನುವಾರ ನ್ಯೂಜೆರ್ಸಿಯಲ್ಲಿ, ಆಮೇಲೆ ಮುಂದಿನ ವಾರಾಂತ್ಯಗಳಲ್ಲಿ ನ್ಯೂಯಾರ್ಕ್, ನಾರ್ತ್ ಕೆರೊಲಿನಾ, ಫ್ಲೋರಿಡಾ, ಟೆಕ್ಸಾಸ್ ಮುಂತಾದ ರಾಜ್ಯಗಳಲ್ಲೂ "ಮುಖ್ಯಮಂತ್ರಿ" ರಾಜ್ಯಭಾರ ಮಾಡುತ್ತಾರೆ. ಅಮೆರಿಕನ್ನಡಿಗ ಪ್ರಜೆಗಳಿಗೆ ದರ್ಶನಭಾಗ್ಯ ನೀಡುತ್ತಾರೆ. ಆಮೇಲೆ ಕರ್ನಾಟಕಕ್ಕೆ ಹಿಂದಿರುಗುತ್ತಾರೆ. ಚಂದ್ರು ಅವರಿಗೆ, ಅವರ ತಂಡದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಮ್ಮೆಲ್ಲರ ಹಾರೈಕೆ. [ಚಿತ್ರಕೃಪೆ: ಹರಿದಾಸ ಲಹರಿ] [ಲೇಖನ : ಶ್ರೀವತ್ಸ ಜೋಶಿ ಫೇಸ್ ಬುಕ್ ಪುಟ]

English summary
Actor and politician Mukhyamantri Chandru's 'Mukhyamantri' Kannada play is being enacted in various cities in America. On Saturday the drama, directed by B.V. Rajaram, was played in Washington DC, USA. It will be played in New York, New Jersey, North Carolina, Florida, Texas etc. A report by Srivathsa Joshi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X