ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ನಡಿಗರನ್ನು ರಂಜಿಸಿದ 'ದೇಸಿ ಬೀಟ್ಸ್'

By ಮವಾಸು
|
Google Oneindia Kannada News

'ನಾವಿಕ' ವಿಶ್ವಕನ್ನಡಿಗರ ಸಮ್ಮೇಳನ ಮೂರು ದಿವಸವಾದರೂ ಅಲ್ಲಿಗೆ ಕರ್ನಾಟಕದಿಂದ ಬಂದ ಕಲಾವಿದರು ಸಾಮಾನ್ಯವಾಗಿ ಅಮೆರಿಕೆಯ ಹಲವಾರು ಕನ್ನಡ ಸಂಘಗಳಿಗೆ ಭೇಟಿ ನೀಡಿ ಕಾರ್ಯಕ್ರಮಗಳನ್ನು ನೀಡುವುದು ರೂಢಿ. ಆದರೆ ಈ ಬಾರಿ 'ದೇಸಿ ಬೀಟ್ಸ್' ಗುಂಪಿನ ಸಾಹಸವೇ ಒಂದು ವಿಶೇಷ.

3 ಗಾಯಕರ ಹಾಗೂ 10 ಜನ ವಾದ್ಯತಂಡದ ನಾಯಕತ್ವ ವಹಿಸಿದ್ದವರು ಕರ್ನಾಟಕದ ಖ್ಯಾತ ಡ್ರಮ್ ಕಲಾವಿದ ಅರುಣ್ ಕುಮಾರ್. ಇವರ ಜೊತೆಗೆ ಸಾತ್ ನೀಡಿದವರು ಅವರ ಧರ್ಮ ಪತ್ನಿ ಖ್ಯಾತ ಗಾಯಕಿ ಎಂ ಡಿ ಪಲ್ಲವಿ. ಇನ್ನೊಂದು ವಿಶೇಷ ಇದ್ದಿದ್ದು ಕರ್ನಾಟಕದಲ್ಲಿ ಸಾವಿರಾರು ಶಿಷ್ಯವೃಂದವನ್ನೇ ಹೊಂದಿರುವ ಡ್ರಮ್ ಕಲಾವಿದ ಸುಕುಮಾರ್ ಬಾಬು. ಇವರು ಅರುಣ್ ಕುಮಾರ್ ಅವರ ತಂದೆ.

MD Pallavi's Desi Beats band entertains US Kannadigas

ಅಮೆರಿಕೆಗೆ ಒಂದು 3-5 ಕಲಾವಿದರ ತಂಡವನ್ನು ಅಮೆರಿಕೆಯ ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿಯವರೆಗೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಕಾರ್ಯಕ್ರಮ ನಡೆಸಬೇಕೆಂದರೆ ಒಂದು ಸಾಹಸ. ಇಂತಹದರಲ್ಲಿ 13 ಜನರ ತಂಡವೊಂದನ್ನು ಅಮೆರಿಕೆಯ ಉದ್ದಗಲಕ್ಕೂ ಕರೆದುಕೊಂಡು ಹೋಗಿ 8 ಯಶಸ್ವಿ ಪ್ರದರ್ಶನಗಳನ್ನು ನಡೆಸಿಕೊಟ್ಟ ದೇಸಿ ಬೀಟ್ಸ್ ತಂಡದ ಈ ದುಸ್ಸಾಹಸಕ್ಕೆ ಹ್ಯಾಟ್ಸ್ ಆಫ್.

ಅಮೆರಿಕೆಯಲ್ಲಿ ಕನ್ನಡ ಸಂಘಗಳು ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಹೀಗೆ ನಡೆಯುತ್ತದೆ. ಸಾಮಾನ್ಯವಾಗಿ ಕನ್ನಡ ಸಂಘಗಳ ತನ್ನ ವ್ಯವಸ್ಥಿತ ಕಾರ್ಯಕ್ರಮಗಳೇನಾದರೂ ಇದ್ದರೆ ಅಂತಹ ಕಾರ್ಯಕ್ರಮಗಳಿಗೆ ಕರ್ನಾಟಕದಿಂದ ಬಂದ ತಂಡಗಳಿಗೆ ಅವಕಾಶ ಸಿಗುತ್ತವೆ. ಬಂದ ತಂಡಗಳಿಗಾಗಿಯೇ ವಿಶೇಷವಾಗಿ ಒಂದು ಕಾರ್ಯಕ್ರಮ ವ್ಯವಸ್ಥೆ ಮಾಡುವ ಸಂಘಗಳು ಕಡಿಮೆ. ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ರಂಗಧ್ವನಿ ಹಾಗೂ ಕಸ್ತೂರಿ ಮೀಡಿಯಾ ಸಂಸ್ಥೆಗಳು ಕನ್ನಡ ಸಂಘಗಳಿಗೆ ಭಾರವಾಗುವಂತಹ ಕಾರ್ಯಕ್ರಮಗಳನ್ನು ಕೈಗೆತ್ತಿಗೊಂಡು ನಡೆಸಿಕೊಡುತ್ತಿವೆ. ಕಾರ್ಯಕ್ರಮಗಳಿಗೆ ಬರುವ ಇಂತಹ ತಂಡಗಳ ಗಾತ್ರ 6ಕ್ಕಿಂತ ಹೆಚ್ಚಾಗದಿರಲಿ ಎಂದೇ, ಎಲ್ಲ ಸಂಘಗಳ ಪದಾಧಿಕಾರಿಗಳು ಅಪೇಕ್ಷಿಸುತ್ತಿರುತ್ತಾರೆ.

ಅದಕ್ಕೆ ಕಾರಣವೂ ಇದೆ. ಸಾಮನ್ಯವಾಗಿ ಬಹುತೇಕ ಮನೆಯಲ್ಲಿ ಒಂದು 7 ಸೀಟರ್ ವ್ಯಾನ್ ಇರುತ್ತೆ. ಚಾಲಕರನ್ನು ಬಿಟ್ಟು 6 ಜನರನ್ನು ಸಾಗಿಸಲು ಒಬ್ಬರಿಗೆ ಸುಲಭಸಾಧ್ಯ. ಇಂತಹದರಲ್ಲಿ 15 ಜನರ ತಂಡ 30 ಸೂಟ್ ಕೇಸ್ ಗಳು 15 ಹ್ಯಾಂಡ್ ಬ್ಯಾಗ್ ಗಳು ಇಷ್ಟನ್ನು ಸಾಗಿಸಲು ಏನಿಲ್ಲವೆಂದರೂ 4 ವ್ಯಾನ್ ಗಳು ಬೇಕಾಗುವುದು. ತಂಡವನ್ನು ಮನೆಗಳಲ್ಲಿ ಇಟ್ಟುಕೊಂಡು ಅತಿಥಿ ಸತ್ಕಾರ ಮಾಡಬೇಕೆಂದರೂ ಸುಮಾರು 7ರಿಂದ 8 ಮನೆಗಳು ಬೇಕು. ಆದ್ದರಿಂದ ಈ ದುಸ್ಸಾಹಸಕ್ಕೆ ಕೈ ಹಾಕಿದ ಅರುಣ್ ಅವರೂ, ನಾವಿಕ ಬಿಟ್ಟು ಇನ್ನು 7 ಊರುಗಳಲ್ಲಿ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿದ್ದ ಸಂಘಸಂಸ್ಥೆಗಳು ನಿಜವಾಗಲೂ ಸ್ತುತ್ಯಾರ್ಹ.

ಖ್ಯಾತ ಗಾಯಕಿ ಎಂ ಡಿ ಪಲ್ಲವಿ ಅವರು ಮಧುರ ಕಂಠದಿಂದ ಎಲ್ಲರ ಮನಗೆದ್ದು, ಅವರ ಕಂಠದಲ್ಲಿ ಮೂಡಿಬಂದಿರುವ ಕೆಲವು ಹಾಡುಗಳನ್ನು ಹಾಡಿ ಅಮೆರಿಕನ್ನಡಿಗರನ್ನು ರಂಜಿಸಲು ಮರೆಯಲಿಲ್ಲ. "ದೀಪವು ನಿನ್ನದೇ...", "ಅಮ್ಮ ನಿನ್ನ ಎದೆಯಾಳದಲ್ಲಿ.." ಹಾಡುಗಳನ್ನು ಹಾಡಿ ರಂಜಿಸಿದರು. ಅವರ ಜೊತೆ ಬಂದಿದ್ದ ಇನ್ನೊಬ್ಬ ಗಾಯಕ ಎಲ್ಲರ ಮನಗೆದ್ದಿದ್ದ. ಅವರೇ ಮೋಹನ್. ಇವರ ಕಂಠ ಬಹುಪಾಲು ಹಿಂದಿ ಗಾಯಕ ಕಿಶೋರ್ ಅವರನ್ನು ಹೋಲಿಸುವಂತಿತ್ತು. ಕನ್ನಡವಲ್ಲದೇ ಹಿಂದಿ ಹಾಡುಗಳನ್ನು ಹಾಡಿ ಎಲ್ಲರ ಮನ ಗೆದ್ದಿದ್ದರು.

ಇನ್ನೊಬ್ಬ ಗಾಯಕಿ ಸೀಮಾ ರಾಯ್ಕರ್, ಅಮೆರಿಕೆಗೆ ಹೊಸಬರಲ್ಲದಿದ್ದರೂ, ಈ ಬಾರಿ ಪೂರ್ಣ ವಾದ್ಯವೃಂದದೊಂದಿಗೆ ಅಮೆರಿಕೆಯಲ್ಲಿ ಕನ್ನಡ ಹಾಗೂ ಹಿಂದಿ ಹಾಡುಗಳನ್ನು ಹಾಡಿ ಜನರ ಮನದಲ್ಲಿ ಉಳಿದರು. ತಂಡದ ಪ್ರತಿಯೊಬ್ಬ ಸದಸ್ಯರೂ ಒಬ್ಬೊಬ್ಬ ಸ್ಟಾರ್. ಬೇಸ್ ಗಿಟಾರ್ ನಲ್ಲಿ ಕ್ಯಾಲಬ್, ಎಲೆಕ್ಟ್ರಿಕ್ ಗಿಟಾರ್ ನಲ್ಲಿ ಗಿಟಾರ್ ಶ್ರೀನಿವಾಸಾಚಾರ್, ಕೀಬೋರ್ಡ್ ವಾದಕರುಗಳಾದ ಉಮೇಶ್ ಹಾಗೂ ಶಬ್ಬೀರ್, ಪಕ್ಕವಾದ್ಯ ಪಟುಗಳಾದ ಮಧು, ಜೆರಾಲ್ಡ್ ಹಾಗೂ ಶೇಖರ್, ಇವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಮೆರೆದರು. ತಂಡದ ಇನ್ನೊಬ್ಬ ಕಿರು ಸದಸ್ಯ child prodigy 'ವಂಶಿ' ಅವರ ಡ್ರಮ್ ನುಡಿಸಿದ್ದು ಪ್ರಶಂಸೆಗೆ ಪಾತ್ರವಾಯಿತು.

ಈ ತಂಡ ನಾವಿಕ ವಿಶ್ವ ಕನ್ನಡ ಸಮ್ಮೇಳನ, ಉತ್ತರ ಕ್ಯಾರೋಲಿನಾ, ಫಿನಿಕ್ಸ್, ನ್ಯೂಜೆರ್ಸಿ, ವಾಷಿಂಗ್ಟನ್ ಡಿಸಿ, ಮಿನಿಯಾಪೋಲೀಸ್, ಲಾಸ್ ಏಂಜಲಿಸ್ ಹಾಗೂ ಬೇ ಏರಿಯಾಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿತ್ತು. ಆಗಸ್ಟ್ 28ರಂದು ಬಂದ ಈ ತಂಡ, ಅಕ್ಟೋಬರ್ 8ರಂದು ವಾಪಸ್ ಬೆಂಗಳೂರಿಗೆ ಹೊರಡುವ ಮೂಲಕ ತಮ್ಮ 40ಕ್ಕೂ ಹೆಚ್ಚು ದಿನಗಳ ಯಶಸ್ವಿ ಪ್ರವಾಸವನ್ನು ಮುಗಿಸಿತ್ತು. ಎಲ್ಲಕ್ಕಿಂತಲೂ ಹೆಚ್ಚು ಪ್ರಶಂಸಾರ್ಹದ ವಿಷಯವೆಂದರೆ 66ರ ಹರೆಯದ ಕರ್ನಾಟಕದ ಪ್ರಸಿದ್ದ ಡ್ರಮ್ ಕಲಾವಿದ ಸುಕುಮಾರ್ ಬಾಬು ಅವರ ಉತ್ಸಾಹ ಮತ್ತು ಕುತೂಹಲ ಎಲ್ಲರನ್ನು ಚಕಿತರನ್ನಾಗಿಸಿತ್ತು.

ನಾನು ಅವರನ್ನು ಲಾಸ್ ಏಂಜಲಿಸ್ ನಲ್ಲಿರುವ 'REMO' ಡ್ರಮ್ ತಯಾರು ಮಾಡುವ ಕಂಪನಿಗೆ ಕರೆದುಕೊಂಡು ಹೋಗಿದ್ದಾಗ ಅವರು ಈ ವಯಸ್ಸಿನಲ್ಲೂ ಎಷ್ಟು ಉತ್ಸುಕರಾಗಿ ಕಾರ್ಖಾನೆಯನ್ನು ನೋಡಿ, ಕೇಳಿದ ಪ್ರಶ್ನೆಗಳು ನಿಜವಾಗಲೂ ಅವರಷ್ಟು ವಯಸ್ಸಿಗೆ ನನಗೂ ಅವರಷ್ಟೇ ಉತ್ಸಾಹವನ್ನು ದೇವರು ನನ್ನಲ್ಲಿ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ಹಾಗೆಯೇ ಬಾಬು ಅವರಿಗೆ ಇನ್ನೂ ಹೆಚ್ಚಿನ ಆಯಸ್ಸನ್ನು ಕೊಟ್ಟು, ಆರೋಗ್ಯವನ್ನು ಕೊಟ್ಟು ಇನ್ನೂ ತಮ್ಮ ಶಿಷ್ಯವೃಂದವನ್ನು ಸಂಗೀತ ವಲಯಕ್ಕೆ ಕೊಡಲಿ ಎಂದು ಕೇಳಿಕೊಳ್ಳೋಣ.

English summary
Playback Singer MD Pallavi and her husband Arun's 'Desi Beats' band, with 3 singers and 10 musicians entertained music lovers in US. The unique band toured many places in US and performed Indian film songs and semi classical music. Report by Vallisha Shatri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X