ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ವಿಶ್ವಶಾಂತಿಗಾಗಿ ಮಹಾರುದ್ರ ಯಾಗ

By ವಿದ್ಯಾ ಶ್ರೀಧರ್ ಚೆನ್ನಗಿರಿ
|
Google Oneindia Kannada News

ಉಡುಪಿ ಶ್ರೀ ಪುತ್ತಿಗೆ ಮಠದ ಅಂಗಸಂಸ್ಥೆಯಾದ ಶ್ರೀ ವೆಂಕಟ ಕೃಷ್ಣ ಕ್ಷೇತ್ರ, ಟೆಂಪಿ, ಅರಿಜೋನಾದಲ್ಲಿ ಮನ್ಮಥ ನಾಮ ಸಂವತ್ಸರದ ಕಾರ್ತೀಕ ಮಾಸದ ಶುಭ ಸಂದರ್ಭದಲ್ಲಿ ಮೂರು ದಿನಗಳ ಮಹಾರುದ್ರಯಾಗವನ್ನು ಆಯೋಜಿಸಲಾಗಿತ್ತು. ನವೆಂಬರ್ 13, 14, ಹಾಗೂ 15ರಂದು, ಉತ್ತರ ಅಮೆರಿಕಾ ಖಂಡದಲ್ಲೇ ಮೊದಲ ಬಾರಿಗೆ ಮಹಾರುದ್ರ ಯಾಗ ಬಹಳ ವಿಜೃ೦ಭಣೆಯಿಂದ ಜರುಗಿತು.

ರುದ್ರಾಭಿಷೇಕದ ಪೂರ್ವಭಾವಿಯಾಗಿ ಶ್ರೀ ಸೂಕ್ತ ಹೋಮ, ಪುರುಷ ಸೂಕ್ತ ಹೋಮ, ಸಂಜೀವಿನಿ ಮೃತ್ಯು೦ಜಯ ಹೋಮ, ವಾಯುಸ್ತುತಿ ಪುರಸ್ಚರಣ ಹೋಮ, ನವಗ್ರಹ ಶಾಂತಿ ಹೋಮ ಹೀಗೆ ಹಲವಾರು ಹೋಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ನವೆ೦ಬರ 13, ಶುಕ್ರವಾರದ ದಿನದ೦ದು, ವಿಘ್ನರಾಜನ ಅ೦ತರ್ಯಾಮಿಯಾದ ವಿಶ್ವ೦ಭರ ಮೂರ್ತಿ ಪರಮಾತ್ಮನನ್ನು ವಿಘ್ನಗಳನ್ನು ಪರಿಹರಿಸುವ೦ತೆ ಪ್ರಾರ್ಥಿಸುತ್ತಾ ಗಣಹೊಮದೊಂದಿಗೆ ಪ್ರಾರಂಭಗೊಂಡು ದುರ್ಗಾ ಮಾತೆಗೆ ಸ೦ತೃಪ್ತಿಯಾಗುವಂತೆ ಚಂಡಿಕಾ ಹೋಮವು ನೆರವೇರಿತು. ಬೆಳಗಿನ ಕಾರ್ಯಕ್ರಮಗಳು ಮನ ತುಂಬುವ ಮನ್ಯುಸೂಕ್ತ ಹೋಮದ ಪೂರ್ಣಾಹುತಿಯೊಂದಿಗೆ ಮುಕ್ತಾಯವಾಯಿತು.

Maharudra Yaaga at Sri Venkata Krishna Kshetra, Arizona

ಸಂಜೆ ಕ್ಷೇತ್ರ ಮೂರ್ತಿಯಾದ ವೆ೦ಕಟೇಶನಿಗೆ ಪುತ್ತಿಗೆ ಮಠಾಧೀಶರಾದ 1008 ಶ್ರೀ ಸುಗುಣೇ೦ದ್ರ ತೀರ್ಥರು ಪೂಜೆ ಸಲ್ಲಿಸುವಾಗ, ಸುಮಾರು 150ಕ್ಕೂ ಅಧಿಕ ಸಂಖ್ಯೆಯಲ್ಲಿ ಸುಮ೦ಗಲಿಯರು ಲಲಿತಾ ಸಹಸ್ರನಾಮ ಅರ್ಚನೆಯನ್ನು ಮಹಾದೇವಿಗೆ ಸಲ್ಲಿಸಿದರು. ವಿಶ್ವ ಹಿ೦ದೂ ಪರಿಶತ್ ಮುಖ್ಯಸ್ಥರಾದ ಡಾ.ಎ೦. ಡಿ. ಪುರಾಣಿಕ್ ಅವರೂ, ಶೃ೦ಗೇರಿ ಮಠಾಧಿಪತಿಗಳಿ೦ದ 'ಧರ್ಮಾತ್ಮ' ಎ೦ದು ಸನ್ಮಾನಿತರಾದ ಡಾ. ಯಜ್ಞಸುಬ್ರಮಣ್ಯಂ ಅವರೂ ಉಪಸ್ಥಿತರಿದ್ದರು.

ಡಾ. ಪುರಾಣಿಕ್ ಅವರು, ಪುತ್ತಿಗೆ ಶ್ರೀಗಳ ಕಾರುಣ್ಯವನ್ನು ಹೊಗಳಿದರು. ದೂರದ ದೇಶದಲ್ಲಿ ಹಿಂದೂ ಧರ್ಮ ಹಾಗೂ ಸಂಸ್ಕೃತಿಯನ್ನು ಹಬ್ಬುತ್ತಿರುವ ಶ್ರೀಗಳವರನ್ನು ಪ್ರಶಂಶಿಸಿದರು. ಡಾ. ಯಜ್ಞಸುಬ್ರಮಣ್ಯಂ ಅವರು ಸೌಂದರ್ಯ ಲಹರಿಯ ಹಾಗೂ ದೇವಿಯ ಮಹತ್ವ ತಿಳಿಸಿದರು. ಪುತ್ತಿಗೆ ಮಠಾಧೀಶರು, ಮುಖ್ಯ ಅತಿಥಿಗಳಿಗೆ ಸನಾತನ ಧರ್ಮ ಪ್ರಚಾರ ಮಾಡುತ್ತಿರುವುದಕ್ಕಾಗಿ ಸನ್ಮಾನಿಸಿದರು. ಉಡುಪಿಯ ಚೌಕಿ ಪಂಕ್ತಿ ನೆನಪಿಗೆ ತರುವ ತೀರ್ಥ ಪ್ರಸಾದ ಭಕ್ತಾದಿಗಳನ್ನು ಸಂತೃಪ್ತಿಗೊಳಿಸಿತು.

ನವೆಂಬರ್ 14, ಶನಿವಾರದಂದು ಮಹಾರುದ್ರಾಭಿಷೇಕದ ಮಹಾ ದಿನ. ಪ್ರತೀ ಶನಿವಾರದಂತೆ ಶ್ರೀನಿವಾಸನಿಗೆ ವಿಶೇಷ ಕಲಶ ಅಭಿಷೇಕ ಪೂಜೆಗಳು ನೆರವೇರಿತು. ಗಣಪತಿ ಹೋಮ ರುದ್ರಾಭಿಷೇಕದ ಮುನ್ನ ಪ್ರಾರಂಭವಾಯಿತು. ನಂತರ ಮಹಾರುದ್ರ ಯಾಗವನ್ನು, ವಿದ್ವಾನ್. ವೇಣುಗೋಪಾಲ ದೇವದಾರ್, ವಿದ್ವಾನ್ ನಂದೀಕೂರು ಜನಾರ್ದನ ಭಟ್, ಅಲೆವೂರು ರಾಘವೇಂದ್ರ ಕೊಡಂಚ ಮತ್ತು ಪುತ್ತಿಗೆ ಮಠದ ಅರ್ಚಕರು ನೆರವೇರಿಸಿಕೊಟ್ಟರು.

Maharudra Yaaga at Sri Venkata Krishna Kshetra, Arizona

ಮೊಟ್ಟ ಮೊದಲು, ರಿತ್ವಿಕರಿಗೆ ಪವಿತ್ರ ವಸ್ತ್ರ ದಾನ ಕಾರ್ಯಕ್ರಮವಾದ ರಿತ್ವಿಕ ವರ್ಣಂ ನಡೆಯಿತು. ಮಂಗಳಕರ ವಸ್ತ್ರವನ್ನುಟ್ಟು 121ಕ್ಕೂ ಹೆಚ್ಚು ರಿತ್ವಿಕರು ಮಹಾ ರುದ್ರ ಸಂಕಲ್ಪವನ್ನು ಮಾಡಿದರು. 121 ಕಲಶ ಸ್ಥಾಪನೆ, ಮಹಾನ್ಯಾಸದ ನಂತರ ರುದ್ರ ಜಪ ಆರಂಭವಾಯಿತು. ಉತ್ತರ ಅಮೆರಿಕ, ಕೆನಡಾ, ಭಾರತ ದೇಶಗಳಿಂದ ಹಾಗೂ ಅಮೆರಿಕಾದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ರಿತ್ವಿಕರು ಒಕ್ಕೊರಲಿನಿಂದ ರುದ್ರವನ್ನು ಜಪಿಸಿದ್ದನ್ನು ಕೇಳುವುದೇ ಮೈ ನವಿರೇಳಿಸುವ ಅನುಭವ.

ಸಣ್ಣ ವಿರಾಮದ ನಂತರ ರಿತ್ವಿಕರು ಯಾಗದ ಎರಡನೆಯ ಭಾಗವನ್ನು ಮುಂದುವರೆಸಿದರು. ಏಕಾದಶ ರುದ್ರದ ಘೋಷ ಎಲ್ಲೆಡೆ ಮಧುರವಾದ ಸಂಗೀತದಂತೆ ತುಂಬಿತ್ತು. ಮಹಾರುದ್ರವೆಂದರೆ : ನಮಕವನ್ನು ಹನ್ನೊಂದು ಬಾರಿ ಹೇಳಿ, ಒಂದು ಬಾರಿ ಚಮಕದಲ್ಲಿ ಮುಗಿಸಿದರೆ ಏಕಾದಶ ರುದ್ರ. 121 ರಿತ್ವಿಕರು ಒಟ್ಟಾಗಿ ಏಕಾದಶ ರುದ್ರ ಜಪಿಸಿದಲ್ಲಿ, 1331 (121 x 11 = 1331) ಬಾರಿ ಹೇಳಿದ ಲೆಕ್ಕ. 1331 ಬಾರಿ ಜಪಿಸಿದ ಏಕಾದಶ ರುದ್ರವೇ ಮಹಾರುದ್ರ ಯಾಗ. ಮನೋನಿಯಾಮಕ ರುದ್ರದೇವರ ತ್ರಿಶತಿ ಅರ್ಚನೆ ನೆರವೇರಿ ನಂತರ ರುದ್ರಾಭಿಷೇಕ ಜರುಗಿತು. ಇದೆಲ್ಲವೂ ನೋಡಿದ ಭಕ್ತಾದಿಗಳ ಮೈ ಮನಸ್ಸು ತುಂಬಿ ಬಂದಂತೆ ಇತ್ತು.

ಮೂರನೇ ಹಾಗು ಕಡೆಯ ದಿನವಾದ ನವೆಂಬರ್ 15, ಭಾನುವಾರ ಮಹಾರುದ್ರ ಯಾಗದ ಮುಕ್ತಾಯದ ದಿನ. ಶ್ರೀ ವೆಂಕಟ ಕೃಷ್ಣ ಕ್ಷೇತ್ರದ ಆವರಣದಲ್ಲಿ ಯಜ್ಞ ಕುಂಡವನ್ನು ನಿರ್ಮಿಸಲಾಗಿತ್ತು. ಪುತ್ತಿಗೆ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನ ಆಚಾರ್ಯರು ಯಜ್ಞದ ಮುಖ್ಯಸ್ಥರಾಗಿ ಉಪಸ್ಥಿತರಿದ್ದರು. ಹೋಮಕುಂಡದ ಸುತ್ತಲೂ ಕುಳಿತು ಮಹಾ ಪಂಡಿತರು ಹೋಮವನ್ನು ನೆರವೇರಿಸಿದರು. ನೆರೆದಿದ್ದ ಭಕ್ತಾದಿಗಳು ಜೋಡು ಹಸ್ತದಿಂದ ಭಕ್ತಿ ಪೂರ್ವಕವಾಗಿ ಭಾಗವಹಿಸಿದರು. ಹೋಮದ ಮುಕ್ತಾಯದ ಹಂತ ತಲುಪಿ, ಪೂರ್ಣಾಹುತಿ ಅರ್ಪಿಸುವಾಗ ರುದ್ರದೇವರಿಗೆ ಸಂತೃಪ್ತಿಯಾಯಿತೋ ಎನ್ನುವ ಹಾಗೆ ವರಪ್ರದವಾಗಿ ಧಾರಾಕಾರವಾಗಿ ಮಳೆ ಸುರಿದುದು ಆಶ್ಚರ್ಯವೇ ಸರಿ!

ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇ೦ದ್ರ ತೀರ್ಥರು ಭಕ್ತಾದಿಗಳನ್ನು ಉದ್ದೇಶಿಸಿ ಅಶೀರ್ವಚನವನ್ನಿತ್ತರು. ಆರಿಜೋನಾ ರಾಜ್ಯವು ಅಮೆರಿಕಾದಲ್ಲಿ ಮೌಂಟೇನ್ ಸಮಯದ ಪರಿದಿಯಲ್ಲಿ ಇದೆ. ಶ್ರೀಹರಿ ಹಾಗು ಹರ ಇರುವ ಈ ಸ್ಥಳ ಮೌಂಟನ್ ಸ್ಥಳವೆ ಸರಿ ಎಂದು ನುಡಿದರು. ಶ್ರೀ ಕ್ಷೇತ್ರದ ಪ್ರಧಾನ ವ್ಯವಸ್ಥಾಪಕರು ಹಾಗೂ ಅರ್ಚಕರಾದ ಕಿರಣ್ ಕುಮಾರ್ ಹಾಗೂ ವಿಶ್ವದ ಬೇರೆ ಬೇರೆ ದೇಶಗಳಿಂದ ಆಗಮಿಸಿ ಈ ಮೂರುದಿನಗಳ ಯಾಗದಲ್ಲಿ ಪಾಲ್ಗೊಂಡ ಎಲ್ಲಾ ರಿತ್ವಿಕರ ನಿಷ್ಠೆಯನ್ನು ಪ್ರಶಂಶಿಸಿದರು. ಟೆಂಪಿ ನಗರದ ಮೇಯರ್ - MARK MITCHELL ರವರು ನವೆಂಬರ್ 13, 14, 15ರಂದು "ಮಹಾರುದ್ರ ಯಾಗ ದಿನ" ಎಂದು ಘೋಷಿಸಿದರು.

ಮುಕ್ತಾಯದ ಅಂಗವಾಗಿ 121 ಪುಣ್ಯ ಕಳಶದ ನೀರಿನಿಂದ ರುದ್ರ ದೇವರಿಗೆ ಅಭಿಷೇಕ ನಡೆಯಿತು. ರಿತ್ವಿಕರಿಗೆಲ್ಲಾ ಸ್ವಾಮೀಜಿಯವರು ಸನ್ಮಾನ ಮಾಡಿದರು ನಂತರದಲ್ಲಿ ಮಹಾಮಂಗಳಾರತಿ, ತೀರ್ಥ ಪ್ರಸಾದ, ವೆಂಕಟ ಕೃಷ್ಣ ಕ್ಷೇತ್ರದ ಪಾಕಶಾಲೆಯ ವಿಶಿಷ್ಟ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ದೂರದ ದೇಶದಲ್ಲಿ ಇದ್ದರೂ ಚಾಚು ತಪ್ಪದೇ ಎಲ್ಲಾ ಹೋಮ, ಯಾಗಾದಿಗಳು ಮುಕುಟಕೆ ಮಣಿ ಇಟ್ಟಂತೆ ಮಹಾರುದ್ರ ಯಾಗ ಶ್ರೀ ಸುಗುಣೇಂದ್ರ ತೀರ್ಥರ ಆಶೀರ್ವಚನ ದೊರಕಿದ್ದು ಫಿನಿಕ್ಸ್ ಜನತೆಯ ಭಾಗ್ಯವೇ ಸರಿ. ಕಾರ್ಯಕ್ರಮವು ಸುಗಮವಾಗಿ ನಡೆಯಲು ಹತ್ತು ಹಲವಾರು ಮಂದಿ ಸ್ವಯಂ ಸೇವಕರು ಮುಂದೆ ಬಂದಿದ್ದಕಾಗಿ ಅವರೆಲ್ಲರಿಗೂ ಮಠವು ಧನ್ಯವಾದವನ್ನು ಅರ್ಪಿಸಿದೆ. ಜನರ ನಿಯೋಜನೆಗಾಗಿ ಟೆಂಪಿ ನಗರದ ಕಾರ್ಯಾಲಯವು ಸಹಕರಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ.

English summary
Maharudra Yaaga was conducted at Sri Venkata Krishna Kshetra in Arizona in America on 13, 14 and 15 November, 2015. This is for the first time such yaga was performed in North USA. Puttige mutt seer Sri Sugunendra Teertha Swamiji participated in this mega event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X