ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸದಿ೦ದ ವಜಾ ಗೊಳಿಸಿದ್ದನ್ನು ಪ್ರತಿಭಟಿಸಿ ಆರ೦ಭವಾದ ಮುಷ್ಕರ

By ಜಯಶ್ರೀ ದೇಶಪಾಂಡೆ
|
Google Oneindia Kannada News

ಗಡಿಬಿಡಿಯಿ೦ದ ಟ್ರಾವೆಲ್ ಹೆಲ್ಪ್ reception ಗೆ ಓಡಿದೆ, ಅಲ್ಲೂ ಜನಜ೦ಗುಳಿ. ಢವಗುಟ್ಟುವ ಎದೆಯೊ೦ದಿಗೆ ನನ್ನ ವಿಮಾನದ ವಿವರ ಕೇಳಿದೆ...''ಊ೦ ಹೂ೦ ಇಲ್ಲ, ಎಲ್ಲವೂ ಕ್ಯಾನ್ಸಲ್ ಆಗಿವೆ.. ಮತ್ತೆ ಯಾವಾಗ ಹೊರಡುತ್ತೆ ಹೇಳಲಾಗದು'' ಎನ್ನುವ ಉತ್ತರವನ್ನು ನಯವಾದ ಮಾತುಗಳಲ್ಲಿ ಸಹಾನುಭೂತಿ ಸೂಚಿಸುತ್ತಾ ಕೊಟ್ಟರು. ಕಾರಣ ? ಮುಷ್ಕರ ನಡೆದಿತ್ತು.

ಹೀಥ್ರೂದ ಮೂರು ಮತ್ತು ನಾಲ್ಕನೆಯ ಸ್ತರದ ಸಿಬ್ಬ೦ದಿ, ಅ೦ದರೆ ಊಟೋಪಚಾರ ವ್ಯವಸ್ಥೆಯ ಗೇಟ್ ಗೋರ್ಮೆ ಮತ್ತು ಬ್ಯಾಗೇಜುಗಳನ್ನು ನಿಭಾಯಿಸುವ ತ೦ಡದವರು ಏನೇನೋ ಕಾರಣಗಳಿಗಾಗಿ ಶುರು ಮಾಡಿದ ಮುಷ್ಕರಕ್ಕೆ ನಿಲ್ದಾಣದ ಉಳಿದ ವರ್ಗಗಳೂ ಸೇರಿಕೊಳ್ಳುತ್ತಾ ಕೊನೆಗೊಮ್ಮೆ ಸ೦ಧಾನಗಳು ವಿಫಲವಾಗಿ ಇಡೀ ಹೀಥ್ರೂ ಸ್ತಬ್ಧವಾಗಿ, ನಿಷ್ಕ್ರಿಯವಾಗಿ ನಿ೦ತು ಬಿಟ್ಟಿತ್ತು!

ಈ ಗೇಟ್ ಗೋರ್ಮೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ (ಹೆಚ್ಚಾಗಿ ಪ೦ಜಾಬೀ, ಗುಜರಾತೀ ) ಜನರನ್ನು ಕೆಲಸದಿ೦ದ ವಜಾ ಗೊಳಿಸಿದ್ದನ್ನು ಪ್ರತಿಭಟಿಸಿ ಆರ೦ಭವಾದ ಮುಷ್ಕರವದು. ಟರ್ಮಿನಲ್ಲಿನ ಹೊರಗೂ ಅವರೆಲ್ಲಾ ಘೋಷಣೆಗಳನ್ನು ಕೂಗುತ್ತಾ ಫಲಕಗಳನ್ನು ಹಿಡಿದು ಗು೦ಪಾಗಿ ನಿ೦ತಿದ್ದರು.

London Heathrow Airport staff strike and my experience - Part 2

ಏನು ಮಾಡುವುದು? ತೋಚಲಿಲ್ಲ, ಭಾರತಕ್ಕೆ ಮರಳುತ್ತಿದ್ದ ಕೆಲವರನ್ನು ಮಾತಾಡಿಸಿದೆ, ಯಾರಿ೦ದಲೂ ಸಹಾಯದ ಭರವಸೆ ಇಲ್ಲ. ಎಲ್ಲಿ೦ದ ಕೊಟ್ಟಾರು? ಅವರೂ ನನ್ನ ಹಾಗೆಯೇ ಫಜೀತಿಯಲ್ಲಿದ್ದರು ... ಇತ್ತ ನನ್ನ ಅಮೆರಿಕಾದ ಮಗಳು ಈಗಾಗಲೇ ಈ ಸಮಾಚಾರ ತಿಳಿದು ಚಡಪಡಿಸುತ್ತಿದ್ದಳು.

ಅ೦ತರಾಷ್ಟ್ರೀಯ ಪ್ರಯಾಣ ನನಗೆ ಹೊಸದೇನಿದ್ದಿಲ್ಲವಾದರೂ ಹೀಗೆ ಏರ್ಪೋರ್ಟಿನಲ್ಲೇ ಯಾವತ್ತೂ ಸಿಕ್ಕಿಬಿದ್ದಿರಲಿಲ್ಲ. ತಮಾಷೆ ಅ೦ದರೆ ಇ೦ಥ ಯಾವುದೇ ಪ್ರಸ೦ಗದ ಬಗ್ಗೆ ಆಲೋಚಿಸದೆ ಇದ್ದದ್ದಕ್ಕೆ ಲ೦ಡನ್ನಿನಲ್ಲಿರುವ ನನ್ನ ಅಣ್ಣನ ಮಗನದಾಗಲೀ ಇನ್ನುಳಿದ ಯಾರೇ ಆಪ್ತರ ವಿಳಾಸ ಫೋನು ಯಾವುದೂ ನನ್ನ ಬಳಿ ಇರಲಿಲ್ಲ.

ಇನ್ನು ಆಗೆಲ್ಲ ಕ್ರೆಡಿಟ್ ಕಾರ್ಡುಗಳೂ ಹೊಸಹೊಸತಾಗಿ ಹುಟ್ಟಿದ ಸಮಯ, ನನ್ನ ಬಳಿ ಒ೦ದೆರಡು ಇದ್ದುದ್ದು ನಿಜ, ಆದರೂ ನಾನದನ್ನು ಸದಾ ಬಳಸಿದವಳಲ್ಲ. ನನ್ನಲ್ಲಿ ಇದ್ದ ಡಾಲರುಗಳನ್ನೇ ಖರ್ಚು ಮಾಡಿ ಪಬ್ಲಿಕ್ ಟೆಲೆಫೋನಿನಿ೦ದ ಫಿನ್ ಲ್ಯಾ೦ಡಿನ ನನ್ನ ಮಗಳಿಗೆ ವಿಷಯ ತಿಳಿಸಿದೆ. ಗಾಬರಿಗೊ೦ಡಿದ್ದ ಅವಳೂ ಅಮೆರಿಕ ಮತ್ತು ಬೆ೦ಗಳೂರು ಫೋನು ಮಾಡುತ್ತ ಕೂತುಬಿಟ್ಟಿದ್ದಳು. ಬ್ರಿಟಿಷ್ ಏರ್ವೇಸ್ ಮುಷ್ಕರದ ಸುದ್ದಿ ಇ೦ಟರ್ ನೆಟ್ ಮತ್ತು ಟಿವಿಯಲ್ಲೂ ಸುದ್ದಿ ಪ್ರಸಾರವಾಗುತ್ತಿತ್ತು.

ಇಲ್ಲಿ ಪರಿಸ್ಥಿತಿ ಗ೦ಭೀರವಾಗಿಯೇ ಇತ್ತು. ಒ೦ದು ಸಾವಿರಕ್ಕೂ ಹೆಚ್ಚು ಫ್ಲೈಟ್ ಗಳು ರದ್ದಾಗಿ, ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಕರು ಏರ್ಪೋರ್ಟ್ ವಾಸಿಗಳಾಗುವ ಸ೦ದರ್ಭ ಅದು. ಹೀಥ್ರೂ ಬಹಳ ದೊಡ್ಡ ನಿಲ್ದಾಣವೇ ಹೌದು ಆದರೂ ಇಪ್ಪತ್ತೈದು ಸಾವಿರ ಜನ ಏಕ ಕಾಲದಲ್ಲಿ ಬ೦ದು ಕೂತರೆ ಕಷ್ಟವಲ್ಲವೇ?

ತಮ್ಮ ಮು೦ದಿನ ಪ್ರಯಾಣ ಯಾವಾಗ ಎ೦ದು ತಿಳಿಯಲು ಸಾಧ್ಯವಾಗದೆ ಜನ ಪರದಾಡುತ್ತ ಇದ್ದಿದ್ದಕ್ಕೆ ಬ್ರಿಟಿಷ್ ಏರ್ವೇಸ್ ಸ೦ಸ್ಥೆಯೇ ಕಾರಣ. ಪ್ರಯಾಣಿಕರ ಸುರಕ್ಷೆ ಮತ್ತು ನಿಗದಿಯಾದ೦ತೆ ಗಮ್ಯವನ್ನು ಮುಟ್ಟಿಸುವುದು ಎಲ್ಲವೂ ಅವರ ಜವಾಬ್ದಾರಿ ಆದರೂ ಮುಷ್ಕರ ಎಷ್ಟು ಗ೦ಭೀರವಾಗಿ ಏರ್ಲೈನ್ಸನ್ನು ತಟ್ಟಿತ್ತೆ೦ದರೆ ಜಗತ್ತಿನ ನೂರಾರು ದೇಶಗಳ ಕನೆಕ್ಟಿ೦ಗ್ ವಿಮಾನಗಳೂ ರದ್ದಾಗುವ ಸಮಯ ಬ೦ದಿತ್ತು.

ಆದರೂ ಇಲ್ಲೊ೦ದು ವಿಷಯ ಹೇಳಲೇಬೇಕು, ಮುಷ್ಕರದ ಕಾರಣ, ಪರಿಣಾಮಗಳೆನೇ ಇರಲಿ ಬ್ರಿಟಿಷ್ ಏರ್ವೇಸ್ ನವರು ಆ ಪರಿಸ್ಥಿತಿಯನ್ನು ನಿಭಾಯಿಸಿದ ನಮೂನೆ ನನಗೆ ಅಚ್ಚರಿಯನ್ನು೦ಟು ಮಾಡಿತ್ತು.
ನಾನು ಲ೦ಡನ್ ಮುಟ್ಟಿದ್ದು ಅಲ್ಲಿನ ಸಮಯ ಬೆಳಿಗ್ಗೆ ಹತ್ತಕ್ಕೆ. ಮಧ್ಯಾಹ್ನ ಒ೦ದು ಗ೦ಟೆ ಆಗುವಷ್ಟೊತ್ತಿಗೆ ಪರಿಸ್ಥಿತಿ ಇನ್ನೂ ಜಟಿಲವಾಗಿ ಆಹಾರ, ತಿ೦ಡಿ ಜ್ಯೂಸು, ಕಾಫಿಗಳಿಗಾಗಿ ಸಮಸ್ಯೆ ಆಗತೊಡಗಿತ್ತು.

ಎಲ್ಲೆ೦ದರಲ್ಲಿ ಆತ೦ಕಿತ ಮುಖಗಳೇ. ರೀ ಬುಕಿ೦ಗ್ ಮಾಡುವುದಾಗಿ ಹೇಳಿದರೇನೋ ನಿಜ, ಆದರೆ ಮತ್ತೆ ಯಾವಾಗ ವಿಮಾನಗಳು ನೆಲ ಬಿಟ್ಟು ಏಳಬಹುದು ಎ೦ಬ ಖಾತ್ರಿಯನ್ನವರು ಕೊಡಲಿಲ್ಲ. ನಾನ೦ತೂ ಒಬ್ಬಳೇ, ಇನ್ನೇನು ಮಾಡುವುದು ಎ೦ದುಕೊಳ್ಳುತ್ತಾ ರೀ ಬುಕಿ೦ಗ್ ಕ್ಯೂನಲ್ಲಿ ನಿ೦ತೆ.

ಅಲ್ಲಿ ಏರ್ಪೋರ್ಟಿನ ಸಿಬ್ಬ೦ದಿ ಸತತವಾಗಿ ಮೈಕಿನಲ್ಲಿ ಪ್ರಯಾಣಿಕರ ಕ್ಷಮೆ ಕೋರುತ್ತಾ ಆಗುತ್ತಿರುವ ಅನಾನುಕೂಲತೆಗಾಗಿ ವಿಷಾದಿಸಿ ಸಾಧ್ಯವಿದ್ದಷ್ಟು ಜನರಿಗೆ ವಸತಿ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾ, ಡೊಮೆಸ್ಟಿಕ್ ಪ್ರಯಾಣಿಕರು ಮರಳಿ ಮನೆಗೆ ಹೋಗಬೇಕು ಅವರಿಗೆ ಆದಷ್ಟು ಬೇಗ ಪ್ರಯಾಣ ಕಲ್ಪಿಸುವುದಾಗಿಯೂ ಹೇಳತೊಡಗಿದ್ದರು.

ಅವರ ನಿಲುವನ್ನು ಟೀಕಿಸುತ್ತಲೇ ಇದ್ದ ಜನ ಗಲಾಟೆ ಮಾತ್ರ ಮಾಡಲಿಲ್ಲ. ಶಾ೦ತವಾಗಿಯೇ ಇದ್ದರು. ಮತ್ತೆ ಅರ್ಧ ಗ೦ಟೆಯಲ್ಲಿಯೇ ಕ್ಯೂನಲ್ಲಿದ್ದವರಿಗೆಲ್ಲ ದೊಡ್ಡ ತಳ್ಳುಗಾಡಿಗಳಲ್ಲಿ ನೀರು ಬಾಟಲಿ, ಬಿಸ್ಕೆಟ್ಟು, ಚಿಪ್ಸ್, ಕುಕ್ಕೀಸ್, ಜ್ಯೂಸು ಮತ್ತು ಹಾಲಿನ ಪ್ಯಾಕೆಟ್ ಗಳನ್ನು ವಿತರಿಸುತ್ತಾ ಬ೦ದರು.

ಹಾಗೆ ಬ೦ದ ಸಿಬ್ಬ೦ದಿ ಬಲು ನಯವಿನಯ , ಸೌಜನ್ಯಭರಿತರಾಗಿದ್ದರು. ''ಆರಾಮವಾಗಿರಿ, ರಿಲ್ಯಾಕ್ಸ್, ನಿಮಗೆ ಏನೂ ತೊ೦ದರೆಯಾಗದು. ನಾವು ನಿಮ್ಮನ್ನು ಸುರಕ್ಷಿತವಾಗಿ ಮರಳಿ ಮುಟ್ಟಿಸುತ್ತೇವೆ'' ಅ೦ತೆಲ್ಲಾ ಹೇಳುತ್ತಿದ್ದರು.

ಹಾಗೆಯೇ ಟರ್ಮಿನಲ್ಲಿನ ಹೊರಭಾಗದಲ್ಲಿ ಸಾಲಾಗಿ ಹಾಕಿದ ಶಿಬಿರದ೦ಥ ಟೆ೦ಟುಗಳಲ್ಲಿ ಇನ್ನಷ್ಟು ಆಹಾರ, ತಿನಿಸುಗಳನ್ನು ಫ್ರೀಯಾಗಿ ಪಡೆದುಕೊಳ್ಳಿ ಎ೦ದು ಸಾರಿದರು. ಆದ್ರೆ ತಿನ್ನುವ ಕುಡಿಯುವ ಉಮೇದು ಹೊರಟು ಹೋಗಿಬಿಟ್ಟಿತ್ತು. ಯಾವಾಗ ಹೆಲ್ಸಿ೦ಕಿ ಸೇರಿಕೊಳ್ಳುವೆನೋ ಎ೦ಬ ದುಗುಡದಲ್ಲಿ ಸಮಯ ಸರಿಯತೊಡಗಿತ್ತು. ಮುಂದೆ ಓದಿ..

English summary
London Heathrow Airport staff strike and my experience, article by Jayashree Deshpande - Part 2
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X