• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರದಲ್ಲಿ ಸ್ಥಳೀಯ ಬರಹಗಾರರಿಗೆ ಗೌರವಾರ್ಪಣೆ

By ಸುರೇಶ ಎಚ್.ಸಿ., ಸಿಂಗಪುರ
|
Google Oneindia Kannada News

ಹಲವಾರು ಕನ್ನಡಿಗರು ಉದ್ಯೋಗನಿಮಿತ್ತ ಅನಿವಾರ್ಯವಾಗಿ ತಮ್ಮ ತಾಯಾಡನ್ನು ಬಿಟ್ಟು ಹೊರರಾಜ್ಯ, ಹೊರದೇಶಗಳಿಗೆ ತೆರಳುವುದು ಸಾಮಾನ್ಯ. ಹಾಗೆಂದು ತಮ್ಮ ತಾಯ್ನಾಡು-ನುಡಿಯ ಬಗ್ಗೆ ಮಮತೆ ಕಡಿಮೆಯಾಗಬೇಕೇಂತೇನಿಲ್ಲ. ಬದಲಿಗೆ ಕರ್ನಾಟಕದಿಂದ ದೂರ ಹೋದ ಮೇಲೆ ತಮ್ಮ ಭಾಷೆ-ಸಂಸ್ಕೃತಿಯ ಬಗ್ಗೆ ಒಲವು, ಮಮತೆ ಹೆಚ್ಚಾಗಿ ಸಂಘ-ಸಂಸ್ಥೆಗಳನ್ನು ಕಟ್ಟಿ ಅದರ ಮೂಲಕ ಅನಿವಾಸಿ ಕನ್ನಡಿಗರು ತಮ್ಮ ಭಾಷೆಯನ್ನು ಉಳಿಸಿ-ಬೆಳೆಸುವಲ್ಲಿ ಇವರು ಸಲ್ಲಿಸುವ ಅಳಿಲು ಸೇವೆ ಗಣನೀಯ.

ವೃತ್ತಿಯ ನಿಮಿತ್ತ ಸಿಂಗಪುರಕ್ಕೆ ಕನ್ನಡಿಗರು ಕಾಲಿಟ್ಟು ಆರೇಳು ದಶಕಗಳಾದರೆ ಇಲ್ಲಿ ಕನ್ನಡ ಸಂಘವು ಅಧಿಕೃತವಾಗಿ ನೋಂದಾಯಿತವಾಗಿ 17 ವರ್ಷಗಳಾಯಿತು. ಈ ಅವಧಿಯಲ್ಲಿ ಕನ್ನಡ ಸಂಘವು ಸ್ಥಳೀಯ ಕನ್ನಡಿಗರ ಪ್ರತಿಭೆಗಳಿಗೆ ಅವಕಾಶ ಮತ್ತು ಮನರಂಜನೆ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಅಷ್ಟೇ ಅಲ್ಲದೆ ಸಂಘವು ತನ್ನ ಆರ್ಥಿಕ ತಳಹದಿಯನ್ನೂ ಬೆಳೆಸಿಕೊಂಡು, ಕರ್ನಾಟಕದಿಂದ ಕಲಾವಿದರನ್ನು ಕರೆಯಿಸಿ, ಅವರ ಖರ್ಚು-ವೆಚ್ಚ ನಿರ್ವಹಿಸುವ ಹಂತಕ್ಕೂ ಬಂದಿದೆ. ಒಟ್ಟಿನಲ್ಲಿ ಇಲ್ಲಿನ ಸಂಘ ಮತ್ತು ಅದರ ಚಟುವಟಿಕೆಗಳು ಸರ್ವತೋಮುಖವಾಗಿ ಬೆಳೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. [ಸಿಂಗಪುರದಲ್ಲಿ ಅನುರಣಿಸಿದ ಹಾಸ್ಯ, ಕಾವ್ಯ, ಗಾಯನ]

ಆದರೆ ಕಳೆದ ಹಲವಾರು ವರ್ಷಗಳಿಂದ ಕನ್ನಡ ಸಂಘ (ಸಿಂಗಪುರ)ದಿಂದ ಆಗಿರದ ಎರಡು ಕಾರ್ಯಗಳೆಂದರೆ ಕರ್ನಾಟಕದಿಂದ ಕವಿ/ಬರಹಗಾರರನ್ನು ಕರೆಸುವುದು ಮತ್ತು ಸ್ಥಳೀಯ ಕವಿ/ಬರಹಗಾರರನ್ನು ಗುರುತಿಸಿ, ಗೌರವಿಸುವುದು. ಈ ಹಿಂದೆ ಲೇಖಕಿ ಸುಧಾ ಮೂರ್ತಿ, ಪ್ರೊಫೆಸರ್ ಕೃಷ್ಣೇಗೌಡ, ಬರಗೂರು ರಾಮಚಂದ್ರಪ್ಪ ಅವರು ಸಿಂಗಪುರಕ್ಕೆ ಬಂದಿದ್ದರು. ಆದರೆ ಸುಧಾ ಮೂರ್ತಿ ಬಂದಿದ್ದು ತಮ್ಮ ವೈಯುಕ್ತಿಕ ಕಾರ್ಯಕ್ಕಾಗಿ. ಕೃಷ್ಣೇಗೌಡರನ್ನು ಕರೆಸಿದ್ದು ಹಾಸ್ಯಪ್ರಧಾನ ಕಾರ್ಯಕ್ರಮಗಳಿಗಾಗಿ. ಬರಗೂರು ರಾಮಚಂದ್ರಪ್ಪನವರನ್ನು ಕರೆಸಿದ್ದು ಕನ್ನಡ ಸಂಘವು ಇಲ್ಲಿ ಆಯೋಜಿಸಿದ ಏಳನೆಯ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷರಾಗಿ. ಇದುವರೆಗೆ ಸಿಂಗಪುರಕ್ಕೆ ಕರೆಸಿದ ಸಂಗೀತ, ನರ್ತನ, ಯಕ್ಷಗಾನ, ಸಿನೆಮಾ ಮುಂತಾದ ರಂಗದ ಕಲಾಕಾರರ ಪಟ್ಟಿ ನೋಡಿದರೆ ಕನ್ನಡದ ಕವಿಗಳನ್ನು ಕರೆಸಿದ್ದೇ ಇಲ್ಲ ಎನ್ನಬಹುದು. "ಜನಪ್ರಿಯ ಮನರಂಜನಾ ಕಾರ್ಯಕ್ರಮ"ಗಳತ್ತ ಆಗ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದವರ ಒಲವು ಮತ್ತು "ಸಾಹಿತ್ಯಾಭಿಲಾಷೆಯ ಕೊರತೆ" ಎರಡೂ ಇದಕ್ಕೆ ಬಹುಶಃ ಕಾರಣವಿರಬಹುದೇನೋ!


ಕನ್ನಡ ಸಂಘ (ಸಿಂಗಪುರ)ವು ಸಿಂಗನ್ನಡಿಗ ಬರಹಗಾರರಿಗೆ ಸಿಂಗಾರ ದ್ವೈವಾರ್ಷಿಕ ಪತ್ರಿಕೆ ಮತ್ತು ಸಿಂಚನ ಮಾಸಿಕ ಪತ್ರಿಕೆಯ ಸಂಪಾದಕ ಸಮಿತಿಯಲ್ಲಿ ಭಾಗವಹಿಸಲು ಮತ್ತು ತಮ್ಮ ಲೇಖನಗಳನ್ನು ಅಲ್ಲಿ ಪ್ರಕಟಿಸಲು ಅವಕಾಶ; ಸಾಹಿತ್ಯ ಸ್ಪರ್ಧೆಗಳ ಆಯೋಜನೆ: ಸಂಘದ ಕಾರ್ಯಕ್ರಮಗಳ ಬಗ್ಗೆ ವರದಿ-ಲೇಖನ ಬರೆಯಲು ಅವಕಾಶ ಮತ್ತು ಪ್ರೋತ್ಸಾಹ; ಆಹ್ವಾನಿತ ಅತಿಥಿಗಳೊಂದಿಗೆ ಸಂವಾದದ ಆಯೋಜನೆ; ಸ್ಥಳೀಯ ಕವಿಗಳ ಕವನವಾಚನ ಹಾಗೂ ಅವರು ಬರೆದ ಭಾವಗೀತೆಗಳನ್ನು ಹಾಡುವುದು - ಇತ್ಯಾದಿ ಹಲವಾರು ಅವಕಾಶಗಳನ್ನು ಕಲ್ಪಿಸಿದೆ.

ಆದರೆ ಸಂಘದ ಉಗಮವಾದಾಗಿನಿಂದ ಇಲ್ಲಿಯವರೆಗೆ ಈ ಸ್ಥಳೀಯ ಬರಹಗಾರರ ಸೇವೆಯನ್ನು ಗುರುತಿಸುವ ಅಗತ್ಯವನ್ನು ಇದುವರೆಗೂ ಸಂಘದ ಕಾರ್ಯಕಾರಿ ಸಮಿತಿಯು ಪ್ರಾಯಶಃ ಕಂಡಿರಲಿಲ್ಲ. ಈ ಬಗ್ಗೆ ವಿಚಾರಿಸಿ, ಸಲಹೆ ನೀಡಿದಾಗ ಬರುತ್ತಿದ್ದ ಒಂದೇ ಉತ್ತರ "ಸಂಘದ ಕೆಲಸ ಸ್ವಯಂಸೇವಕ ಕೆಲಸ ತಾನೇ? ಅದಕ್ಕೆ ಗೌರವ, ಪ್ರಶಸ್ತಿಯೆಲ್ಲ ಏಕೆ?" ಎಂದು. ಲಕ್ಷಾಂತರ ಖರ್ಚು ಮಾಡಿ ಆಮದು ಪ್ರತಿಭೆಗಳನ್ನು ಗೌರವಿಸುವ ನಾವು ಚಿಕ್ಕದಿರಲಿ, ದೊಡ್ಡದಿರಲಿ - ಸ್ಥಳೀಯ ಪ್ರತಿಭೆಗಳನ್ನೇಕೆ ಗೌರವಿಸುವುದಿಲ್ಲ ಎಂಬ ಪ್ರಶ್ನೆ ಹಲವಾರು ವರ್ಷಗಳಿಂದ ಕಾಡಿದ್ದಂತೂ ನಿಜ.

ಸಿಂಗನ್ನಡಿಗರ ಕರೆಗೆ ಓಗೊಟ್ಟಿತೋ ಎಂಬಂತೆ 2013-15ರ ಅವಧಿಗೆ ಆಯ್ಕೆಯಾದ ಹೊಸ ಕಾರ್ಯಕಾರಿ ಸಮಿತಿಯು ತನ್ನ ಮೊಟ್ಟ ಮೊದಲ ಬೃಹತ್ ಕಾರ್ಯಕ್ರಮದಲ್ಲಿ ಈ ಎರಡೂ ಕಪ್ಪು ಚುಕ್ಕೆಗಳನ್ನು ಒಮ್ಮೆಲೇ ಅಳಿಸಿಹಾಕಿದೆ. ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಸಂಭ್ರಮದ ಆಚರಣೆಯ ಸಲುವಾಗಿ ಕನ್ನಡ ಸಂಘವು ನವೆಂಬರ್ 9, 2013ರಂದು ಸಿಂಗಪುರದ ಸ್ಪ್ರಿಂಗ್ ಸಭಾಂಗಣದಲ್ಲಿ ಆಯೋಜಿಸಿದ್ದ 'ಭಾವ-ಸುಧೆ'ಯು ಸಂಗೀತ ಪ್ರಾಧಾನಿತ ಕಾರ್ಯಕ್ರಮವಾಗಿದ್ದರೂ, ಸಂಗೀತದ ಜೊತೆಜೊತೆಗೇ ಸಾಹಿತ್ಯವನ್ನೂ ಸಮ್ಮಿಳಿಸಿತ್ತು. ಅದರಲ್ಲೂ ವಿಶೇಷತೆಯೆಂದರೆ ಸ್ಥಳೀಯ ಹಾಗೂ ಕರ್ನಾಟಕದ ಕವಿಗಳನ್ನು ಸಮಾಗಮಿಸಿದ್ದು!

ಕನ್ನಡ ಸಂಘ (ಸಿಂಗಪುರ)ವು ಕಳೆದ ಹಲವಾರು ವರ್ಷಗಳಿಂದ ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ಕಾರ್ಯಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಿಂಗನ್ನಡಿಗರಿಗೆ ಸಿಂಗಾರ ಪುರಸ್ಕಾರ ಪ್ರಶಸ್ತಿಯನ್ನು ನೀಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದೆ. ಕವಿ, ಬರಹಗಾರ ಹಾಗೂ ಸಿಂಚನ ಮಾಸಪತ್ರಿಕೆಯ ಸಂಪಾದಕೀಯ ಸಮಿತಿಯ ಮಾಜೀ ಸದಸ್ಯರಲ್ಲೊಬ್ಬರಾದ ವಸಂತ ಕುಲಕರ್ಣಿ ಅವರು ಕನ್ನಡ ಸಾಹಿತ್ಯಲೋಕಕ್ಕೆ 2012ರಲ್ಲಿ "ಆಂತರ ಮತ್ತು ಇತರ ಕವನಗಳು" ಎಂಬ ತಮ್ಮ ಮೊಟ್ಟಮೊದಲ ಕವನ ಸಂಕಲನ ಅರ್ಪಿಸಿದ ಸಾಧನೆಯನ್ನು ಗುರುತಿಸಿ ಅವರಿಗೆ ಈ ಪುರಸ್ಕಾರ ನೀಡಿ ಗೌರವಿಸಿತು.

ಇದೇ ಮೊದಲ ಬಾರಿಗೆ ಸಿಂಗನ್ನಡಿಗ ಕವಿಯೊಬ್ಬರ ಸಾಧನೆಯನ್ನು ಗುರುತಿಸಿ ಗೌರವಿಸಿದ ಕನ್ನಡ ಸಂಘವು ತನ್ನ ಇತಿಹಾಸದ ಪುಟಗಳಲ್ಲಿ ಹೊಸ ಅಧ್ಯಾಯವನ್ನು ಸೇರಿಸಿಕೊಂಡಿತು. ಇದಲ್ಲದೇ ಸಿಂಗಪುರದ ಇನ್ನೊಬ್ಬ ಕವಿ, ಬರಹಗಾರ ಹಾಗೂ ಸಿಂಚನ ಮಾಸಪತ್ರಿಕೆಯ ಹಾಲೀ ಸಂಪಾದಕ ಗಿರೀಶ್ ಜಮದಗ್ನಿ ಅವರ 'ಕಣ್ಣೀರಜ್ಜ ಮತ್ತು ಇತರ ಕಥೆಗಳು' ಎಂಬ ಮೊಟ್ಟ ಮೊದಲ ಕಥಾ ಸಂಕಲನವನ್ನು ಈ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡುವ ಅವಕಾಶವನ್ನು ಒದಗಿಸಿತು.

ಕನ್ನಡ ಸಂಘವು ಇದೇ ಮೊದಲ ಬಾರಿಗೆ ಕನ್ನಡದ ಕವಿತ್ರಯರಾದ ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್ ಹಾಗೂ ಎಚ್. ಡುಂಡಿರಾಜ್ ಅವರನ್ನು 'ಭಾವ-ಸುಧೆ' ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ಬಿ.ಆರ್. ಲಕ್ಷ್ಮಣರಾವ್ ಹಾಗೂ ಎಚ್. ಡುಂಡಿರಾಜ್ ಅವರು ತಮ್ಮ ಕವನ, ಹನಿಗವನವಾಚನ ಹಾಗೂ ಹಾಸ್ಯಭರಿತ ಮಾತುಗಳಿಂದ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು. ಪದಗಳ ಬಳಕೆಯಲ್ಲಿ ಚತುರತೆ ತೋರಿದ ಡುಂಡಿರಾಜರ ಹನಿಗವನಗಳು, ಭಾವ ಹಾಗೂ ತುಂಟತನ ತುಂಬಿದ ಬಿ.ಆರ್. ಲಕ್ಷ್ಮಣರಾವ್ ಅವರ ಮಾತುಗಳು ಸಭಿಕರಿಗೆ ಮುದ ನೀಡಿದವು. ಮಹಿಳೆಯರ ಮೇಲಿನ ಹಾಸ್ಯವೇ ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರೂ, ಪರಿಶುದ್ಧ ತಿಳಿಹಾಸ್ಯವನ್ನು ಮಹಿಳೆಯರು, ಪುರುಷರೆಲ್ಲರೂ ಸರಿಸಮವಾಗಿ ಆನಂದಿಸಿದರು.

ಸಂಘವು ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ 'ಸಿಂಗಾರ ಕವಿ ರತ್ನ' ಪ್ರಶಸ್ತಿ ನೀಡಿ ಪುರಸ್ಕರಿಸುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಸಾಧನೆ ಮಾಡಿದ ಕರ್ನಾಟಕದ ಕವಿಗಳನ್ನು ಗೌರವಿಸುವುದು ತನ್ನ ಆದ್ಯ ಕರ್ತವ್ಯಗಳಲ್ಲೊದೆಂದು ನಿರೂಪಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶಮೂರ್ತಿ ಅವರು ಕವಿಯೊಬ್ಬನ ವೈಯುಕ್ತಿಕ ಭಾವನೆಯ ಜಗತ್ತನ್ನು ತಮ್ಮ ಸಂಗೀತ ಸಂಯೋಜನೆ ಮತ್ತು ಸುಮಧುರ ಕಂಠದಿಂದ ಬಾಹ್ಯ ಜಗತ್ತಿಗೆ ಪರಿಚಯಿಸುವ ಸಂಗೀತಗಾರರ ಪರಿಶ್ರಮವನ್ನು ಪ್ರಶಂಸಿಸಿದರು. ಕವಿಗಳಾದ ಲಕ್ಷ್ಮಣರಾವ್ ಹಾಗೂ ಡುಂಡಿರಾಜ್ ಅವರಿಗೂ ಕಿರುಗಾಣಿಕೆ ನೀಡಿ ಗೌರವಿಸಲಾಯಿತು.

'ಭಾವ ಸುಧೆ' ಸುಗಮ ಸಂಗೀತ ಗಾಯನ ಕಾರ್ಯಕ್ರಮದಲ್ಲಿ 'ಉಪಾಸನಾ' ಮೋಹನ್, ಪಂಚಮ್ ಹಳಿಬಂಡಿ ಹಾಗೂ ಕೆ.ಎಸ್. ಸುರೇಖಾ ಅವರು ಅತಿಥಿ ಕವಿಗಳೂ ಸೇರಿದಂತೆ ಕನ್ನಡದ ಹಲವಾರು ಹೆಸರಾಂತ ಕವಿಗಳ ಭಾವಗೀತೆಗಳನ್ನು ಹಾಡಿದರು. ಇದಲ್ಲದೇ kannada.oneindia.comನ ಎನ್.ಆರ್.ಐ. ವಿಭಾಗದಲ್ಲಿ ತಮ್ಮ ಲೇಖನ, ಕವನ, ಹನಿಗವನಗಳಿಂದ ಓದುಗರಿಗೆ ಚಿರಪರಿಚಿತರಾಗಿರುವ ಸಿಂಗಪುರದ ವೆಂಕಟ್, ವಸಂತ ಕುಲಕರ್ಣಿ ಹಾಗೂ ಗಿರೀಶ್ ಜಮದಗ್ನಿ ಅವರು ರಚಿಸಿತೆ ಭಾವಗೀತೆಗಳಿಗೆ ಸಂಗೀತ ಸಂಯೋಜಿಸಿ, ಹಾಡಿದ ಹಾಡುಗಳು ಸಭಿಕರಿಗೆ ವಿಶೇಷ ಅನುಭವವನ್ನು ನೀಡಿತ್ತು. ಇಂತಹ ಪ್ರಯತ್ನ ಇಲ್ಲಿಗೇ ನಿಲ್ಲದೇ, ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೇ ಹೀಗೆಯೇ ಮುಂದುವರೆಯಲಿ ಎಂಬುದೇ ನಮ್ಮೆಲ್ಲರ ಆಕಾಂಕ್ಷೆ. (ಛಾಯಾಚಿತ್ರ: ಟಿ.ಎಸ್. ಸದಾಶಿವ, ಸಿಂಗಪುರ)

English summary
Talented local writers felicitated by Singapore Kannada Sangha on the occasion of Bhava Sudhe programme recently. Vasant Kulkarni was honored by association. Girish Jamadagni's book released. HSV, Dundiraj, BR Lakshman Rao participated in the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X