ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವ್ಯಕರ ಸಮ್ಮೇಳನಕ್ಕೆ ಮಮತೆಯ ಕರೆಯೋಲೆ

By Shami
|
Google Oneindia Kannada News

ಉತ್ತರ ಅಮೆರಿಕದ ಉದ್ದಗಲಕ್ಕೂ ಹರಡಿರುವ ಹವ್ಯಕ ಸಮುದಾಯದ ಕುಟುಂಬಗಳನ್ನು ಬೆಸೆಯುವ HAA(Havyaka Association of America)ಗೆ ಈಗ 30 ವರ್ಷಗಳ ಸಂಭ್ರಮ. ಈ ಕುಟುಂಬಗಳೆಲ್ಲ ಪ್ರತಿ ಎರಡು ವರ್ಷಕ್ಕೊಮ್ಮೆ ಒಂದು ನಗರದಲ್ಲಿ ಬೇಸಗೆಯ ವಾರಾಂತ್ಯದಲ್ಲಿ ಒಟ್ಟಾಗಿ ಕಲೆತು, ಹವ್ಯಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯುಕ್ರಮಗಳನ್ನು ಹಮ್ಮಿಕೊಳ್ಳುವುದು ನಡೆದುಬಂದಿರುವ ಸಂಪ್ರದಾಯ. ಅಂಥದೊಂದು ಸುಸಂದರ್ಭ ಈಗ ಒದಗಿಬಂದಿದೆ.

ಇಂತಹ ಹದಿನೈದು ಸಮ್ಮೇಳನಗಳು ಈಹಿಂದೆ ಯಶಸ್ವಿಯಾಗಿ ನಡೆದಿದ್ದು ಇದೀಗ ಹದಿನಾರನೇ ಸಮ್ಮೇಳನಕ್ಕೆ ತಯಾರಿಗಳು ಭರ್ಜರಿಯಾಗಿ ನಡೆದಿವೆ. ಈ ಸಲ ಸಮ್ಮೇಳನ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ, ವರ್ಜೀನಿಯಾ ರಾಜ್ಯದ ಶಾಂಟಿಲಿ ನಗರದಲ್ಲಿ ಹೊಸದಾಗಿ ನಿರ್ಮಿತವಾಗಿರುವ ಚಿನ್ಮಯ ಸೋಮನಾಥ ಪ್ರಾಂಗಣದಲ್ಲಿ 2015ರ ಜುಲೈ 3 ಮತ್ತು 4ರಂದು ನಡೆಯಲಿದೆ. ಹವ್ಯಕ ಬಳಗದ ವಾಷಿಂಗ್ಟನ್ ಡಿಸಿ ಶಾಖೆಯ ಸದಸ್ಯರು ವಿಶ್ವದಾದ್ಯಂತ ಹರಡಿಕೊಂಡಿರುವ ಹವ್ಯಕ ಕುಟುಂಬಗಳಿಗೆ ಈ ಸಮ್ಮೇಳನದಲ್ಲಿ ಭಾಗಿಯಾಗಲು, ಸ್ನೇಹಸಮ್ಮಿಲನಕ್ಕೆ ಸಾಕ್ಷಿಯಾಗಲು ಆತ್ಮೀಯ ಆಹ್ವಾನವನ್ನು ನೀಡುತ್ತಿದ್ದಾರೆ.

Karnataka Havyaka community brahmin association USA

ಸಮ್ಮೇಳನದ ಸಿದ್ಧತೆಗಾಗಿ ಈಗಾಗಲೇ ಹಲವಾರು ಸಮಿತಿಗಳ ರಚನೆ ಆಗಿದೆ. ನೋಂದಣಿ, ಆತಿಥ್ಯ, ಆಹಾರ, ಮನರಂಜನೆ, ಕಲಾವಿಜ್ಞಾನಮೇಳ, ಕ್ರೀಡೆ, ಮಕ್ಕಳ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಪರ್ಕ ಮತ್ತು ಪ್ರಚಾರ- ಹೀಗೆ ವಿವಿಧ ವಿಭಾಗಗಳಲ್ಲಿ ಆಗಲೇ ಸ್ವಯಂಸೇವಕರು ಕಾರ್ಯೋನ್ಮುಖರಾಗಿದ್ದಾರೆ. ಹವ್ಯಕ ಬಳಗದ ಪ್ರಸಕ್ತ ಅಧ್ಯಕ್ಷ ಶಿವು ಭಟ್ ಅವರು ಬಳಗದ ಸ್ಥಾಪಕ ಸದಸ್ಯರಾದ ರಾಮಚಂದ್ರ ಕೆ. ಭಟ್ ಮತ್ತು ನಾರಾಯಣ ಕೆ. ಭಟ್ ಅವರ ಅನುಭವಿ ಮಾರ್ಗದರ್ಶನದಲ್ಲಿ ಅತ್ಯಂತ ಅರ್ಥಪೂರ್ಣವಾಗಿ, ಅಚ್ಚುಕಟ್ಟಾಗಿ, ಸ್ಮರಣೀಯವಾಗಿ ನಡೆಯಬೇಕೆಂದು ಪಣತೊಟ್ಟಿದ್ದಾರೆ.

ಮೊದಲು ನೋಂದಾಯಿಸಿಕೊಂಡವರಿಗೆ ಆದ್ಯತೆ : ಆನ್‍ಲೈನ್ ನೋಂದಣಿಯು ಆಗಲೇ ಆರಂಭವಾಗಿದ್ದು ಮಾರ್ಚ್ 31, 2015ರವರೆಗೆ ತ್ವರಿತಪಕ್ಷಿ ರಿಯಾಯಿತಿ (early bird discount)' ದರ (ತಲಾ 100ಡಾಲರ್) ಲಭ್ಯವಿರುತ್ತದೆ. ಆನಂತರ ಅದು ತಲಾ 150 ಡಾಲರ್‍ಗಳಷ್ಟಾಗಲಿದೆ. ಸಮ್ಮೇಳನದಲ್ಲಿ ಯಾವುದಾದರೂ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡರೆ ಅಂಥವರ ಇಡೀ ಕುಟುಂಬಕ್ಕೆ ಉಚಿತ ನೋಂದಣಿ ಸಿಗುತ್ತದೆ. ಹೆಚ್ಚಿನ ವಿವರಗಳು ಈ ವೆಬ್ ಸೈಟ್ ನಲ್ಲಿವೆ.

ಸಮ್ಮೇಳನದ ವೇಳೆ ಪರ ಊರುಗಳಿಂದ ಬಂದವರಿಗೆ ವಸತಿಸೌಕರ್ಯ ಸುಲಭವಾಗಬೇಕೆಂದು ಹ್ಯಾಂಪ್ಟನ್ ಇನ್ನ್ ಹೋಟೆಲ್‍ನಲ್ಲಿ ಕೊಠಡಿಗಳನ್ನು (ದಿನಂಪ್ರತಿ 69 ಡಾಲರ್ ಬಾಡಿಗೆ) ಕಾಯ್ದಿರಿಸಲಾಗಿದೆ. ಈ ಹೋಟೆಲ್ ವಾಷಿಂಗ್ಟನ್ ಡಾಲಸ್ ವಿಮಾನ ನಿಲ್ದಾಣದಿಂದ 15 ನಿಮಿಷ ಡ್ರೈವ್‍ನಷ್ಟು ದೂರದಲ್ಲಿದೆ, ಸಮ್ಮೇಳನಸ್ಥಳಕ್ಕೂ ತುಂಬ ಹತ್ತಿರದಲ್ಲೇ ಇದೆ. ಅಲ್ಲದೇ, ವಿಮಾನ ನಿಲ್ದಾಣದಿಂದ ಮತ್ತು ಸಮ್ಮೇಳನ ಸ್ಥಳದಿಂದ ಹೋಟೆಲ್‍ಗೆ ಶಟಲ್ ಸರ್ವಿಸ್ ಲಭ್ಯವಿರುತ್ತದೆ.

ತರಹೇವಾರಿ ಕಾರ್ಯಕ್ರಮಗಳು : ಮನರಂಜನಾ ಸಮಿತಿಯವರ ತಯಾರಿಗಳೂ ಭರ್ಜರಿಯಾಗಿಯೇ ನಡೆದಿವೆ. ಸಂಗೀತ, ನೃತ್ಯ, ನಾಟಕ, ಯಕ್ಷಗಾನ, ಜನಪದ ಕಲೆ, ಫ್ಯಾಷನ್ ಶೋ, ಜುಲೈ 4 ಅಮೆರಿಕದ ಸ್ವಾತಂತ್ರ್ಯದಿನ ಪ್ರಯುಕ್ತ ಸುಡುಮದ್ದು ಪ್ರದರ್ಶನ ಮುಂತಾಗಿ ಕಣ್ಮನ ಸೆಳೆಯುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಟೊರಾಂಟೊದಿಂದ ಯಕ್ಷಗಾನ ತಂಡವೊಂದು ಬಂದು ಪ್ರದರ್ಶನ ನೀಡಲಿದೆ. ಕರ್ನಾಟಕದಿಂದಲೂ ಕೆಲವು ಪ್ರಸಿದ್ಧ ಕಲಾವಿದರನ್ನು ಕರೆತರುವುದಕ್ಕೆ ಏರ್ಪಾಡುಗಳನ್ನು ಮಾಡಲಾಗುತ್ತಿದೆ. ಅಮೆರಿಕದ ವಿವಿಧ ನಗರಗಳಲ್ಲಿರುವ ಹವ್ಯಕ ಬಳಗ ಶಾಖೆಗಳವರೂ ಸಮೂಹ ಪ್ರಸ್ತುತಿಗಳನ್ನು ರೂಪಿಸಿ ಪ್ರದರ್ಶಿಸುವಂತೆ ಉತ್ತೇಜಿಸಲಾಗಿದೆ. ಇದರಿಂದ ಪ್ರತಿಭಾ ಪ್ರದರ್ಶನ ವೈವಿಧ್ಯದ ಜತೆಜತೆಗೇ ಮಧುರ ಬಾಂಧವ್ಯ ಮತ್ತು ಹೊಸ ಪರಿಚಯ ಸ್ನೇಹವರ್ಧನೆಗೂ ಅವಕಾಶ ಇರುವುದು.

Karnataka Havyaka community brahmin association USA

ಕಲಾವಿಜ್ಞಾನ ಮೇಳವು ಈ ಸಮ್ಮೇಳನದ ಒಂದು ಮಹತ್ವಾಕಾಂಕ್ಷೆಯ ಯೋಜನೆ. ಇದರಲ್ಲಿ ಹವ್ಯಕ ಬಳಗದ ಎಲ್ಲ ವಯೋಮಾನದ ಸದಸ್ಯರಿಗೂ ಭಾಗವಹಿಸುವ ಅವಕಾಶವಿದೆ. ಬರೆವಣಿಗೆ, ಅಥವಾ ಇತರ ಯಾವುದೇ ರೀತಿಯ ಸೃಜನಶೀಲ ಹವ್ಯಾಸವಿರುವವರು ತಂತಮ್ಮ ಕೃತಿಗಳನ್ನು ಇಲ್ಲಿ ಪ್ರದರ್ಶಿಸಬಹುದು. ಹೈಸ್ಕೂಲ್ ವಿದ್ಯಾರ್ಥಿಗಳು ಸೇರಿದಂತೆ ವಿಜ್ಞಾನದಲ್ಲಿ ಪ್ರಯೋಗಗಳನ್ನು ಮಾಡುವ ಆಸಕ್ತಿಯಿರುವವರು ತಂತಮ್ಮ ಸಂಶೋಧನೆಗಳನ್ನು ಇಲ್ಲಿ ಪ್ರಸ್ತುತಪಡಿಸಬಹುದು. ಸಮಾನ ಮನಸ್ಕರೊಡನೆ ಚರ್ಚೆ ಸಂವಾದ ವಿಚಾರ ವಿನಿಮಯ ನಡೆಸಬಹುದು. ಇದರಲ್ಲಿ ವೈಯಕ್ತಿಕವಾಗಿಯೂ, ತಂಡದ ರೂಪದಲ್ಲೂ ಭಾಗವಹಿಸಬಹುದು. ವಿವರಗಳು ವೆಬ್‍ಸೈಟ್‍ನಲ್ಲಿವೆ. ಮೇಳದಲ್ಲಿ ಭಾಗವಹಿಸಲು ನೋಂದಾಯಿಸಿಕೊಳ್ಳಲು ಕೊನೇ ದಿನ ಮೇ 30, 2015.

ಸ್ಮರಣ ಸಂಚಿಕೆ ಮತ್ತು ಸ್ಪರ್ಧೆಗಳು : ಸಮ್ಮೇಳನದ ಸವಿನೆನಪಿಗಾಗಿ ಒಂದು ಅತ್ಯುತ್ತಮ ಸ್ಮರಣಸಂಚಿಕೆಯನ್ನು ಪ್ರಕಟಿಸುವ ಯೋಜನೆಯೂ ಇದೆ. ಸಾಹಿತ್ಯಿಕ ಮತ್ತು ಇತರ ಪ್ರಕಟಣಯೋಗ್ಯ ರಚನೆಗಳನ್ನು ಬಳಗದ ಎಲ್ಲ ಸದಸ್ಯರಿಂದ ಆಹ್ವಾನಿಸಲಾಗಿದೆ. "ಹವ್ಯಕ ಪರಂಪರೆ, ಸಂಸ್ಕೃತಿ, ಮತ್ತು ಭಾಷೆ : ಒಂದು ಪಕ್ಷಿನೋಟ" - ಇದು ಸ್ಮರಣಸಂಚಿಕೆಯ ಥೀಮ್. ಲೇಖನಗಳು ಇದಕ್ಕೆ ಹೊಂದಿಕೊಂಡು ಇದ್ದರೆ ಒಳ್ಳೆಯದು. ಲೇಖನಗಳನ್ನು ಕಳಿಸಲು ಕೊನೆಯ ದಿನಾಂಕ ಎಪ್ರಿಲ್ 15, 2015.

ಒಂದು ಸಣ್ಣಕತೆ ಸ್ಪರ್ಧೆ ಮತ್ತು ಕವನ ರಚನೆ ಸ್ಪರ್ಧೆಯನ್ನೂ ಏರ್ಪಡಿಸಲಾಗುತ್ತಿದೆ. ಪ್ರವೇಶಗಳನ್ನು ಸಲ್ಲಿಸಲು ಕೊನೇ ದಿನಾಂಕ ಮಾರ್ಚ್ 22, 2015. ವಿಜೇತರ ಕೃತಿಗಳನ್ನು ಸ್ಮರಣಸಂಚಿಕೆಯಲ್ಲಿ ಪ್ರಕಟಿಸಲಾಗುವುದು ಮತ್ತು ಅವರ ಹೆಸರುಗಳನ್ನು ಸಮ್ಮೇಳನ ಸಂದರ್ಭದಲ್ಲಿ ಘೋಷಿಸಲಾಗುವುದು. ಸ್ಮರಣಸಂಚಿಕೆಗೆ ಒಂದು ಸುಂದರ ಹೆಸರು ಮತ್ತು ಮುಖಪುಟ ವಿನ್ಯಾಸ - ಇದಕ್ಕೂ ಸ್ಪರ್ಧೆ ನಡೆಸಿ ಅತ್ಯುತ್ತಮವಾದುದನ್ನು ಆಯ್ಕೆಮಾಡಲಾಗುತ್ತದೆ. ಹವ್ಯಕ ಬಳಗದ ಸದಸ್ಯರ ಉದ್ಯಮಗಳಿದ್ದರೆ ಅವುಗಳ ಜಾಹೀರಾತಿಗೆ ಇದೊಂದು ಒಳ್ಳೆಯ ವೇದಿಕೆ. ಹಾಗೆಯೇ ಸಂಚಿಕೆಯಲ್ಲಿ ಕೌಟುಂಬಿಕ ಶುಭಾಶಯ ಪುಟವನ್ನೂ ನಿಗದಿತ ಮೊತ್ತವನ್ನು ಸಲ್ಲಿಸಿ ಪಡೆಯಬಹುದಾಗಿದೆ.

Karnataka Havyaka community brahmin association USA

ಇನ್ನು, ಅಡುಗೆ-ಆಹಾರ ಸಮಿತಿಯು ಸಮ್ಮೇಳನಾರ್ಥಿಗಳಿಗೆಲ್ಲ ಊರಿನ ಊಟ' ಉಂಡ ಅನುಭವವಾಗಬೇಕೆಂದು ಸಾಮಾನುಪಟ್ಟಿ ತಯಾರಿಸತೊಡಗಿದ್ದಾರೆ. ಸ್ಥಳೀತ ವುಡ್‍ಲ್ಯಾಂಡ್ಸ್ ರೆಸ್ಟೋರೆಂಟ್‍ನೊಡನೆ ಈಬಗ್ಗೆ ಮಾತುಕತೆ ನಡೆಯುತ್ತಿದೆ. ಸಮ್ಮೇಳನದ ವೇಳೆ ಇನ್ನೂ ಅನೇಕ ಪ್ರಯೋಜನಕಾರಿ ಚಟುವಟಿಕೆಗಳನ್ನು- ಜಾತಕ ತಯಾರಿ, ಉಯಿಲು ಬರೆಯುವ ವಿಧಾನ, ಕಾಲೇಜು ಶಿಕ್ಷಣಕ್ಕೆ ಮಾರ್ಗದರ್ಶಿ ಸೂತ್ರಗಳು, ಮುಂತಾಗಿ- ಹಮ್ಮಿಕೊಳ್ಳಬೇಕೆಂಬ ಆಶಯವಿದೆ. ಸಮ್ಮೇಳನವು ಜುಲೈ ತಿಂಗಳಲ್ಲಿ, ಬೇಸಗೆಯ ಸಮಯದಲ್ಲಿ ನಡೆಯುವುದರಿಂದ ಸಮ್ಮೇಳನಾರ್ಥಿಗಳು ವಾಷಿಂಗ್ಟನ್ ಡಿಸಿ ನಗರದರ್ಶನ ಅವಕಾಶವನ್ನೂ ಪಡೆದುಕೊಳ್ಳಬಹುದಾಗಿದೆ.

ಜುಲೈ 5ರಂದು ಭಾನುವಾರ ವಾಷಿಂಗ್ಟನ್ ಡಿಸಿಯ ಪ್ರಮುಖ ಮ್ಯೂಸಿಯಮ್‍ಗಳನ್ನು ಮತ್ತು ಸ್ಮಾರಕಗಳನ್ನು ಸಂದರ್ಶಿಸಲು ಆಸಕ್ತಿಯುಳ್ಳವರಿಗೆ ಸೂಕ್ತ ಸಲಹೆ-ಸೂಚನೆ ನೀಡಲು ಆತಿಥ್ಯ ಸಮಿತಿಯ ಸದಸ್ಯರು ಸಿದ್ಧರಿರುತ್ತಾರೆ. ಒಟ್ಟಿನಲ್ಲಿ ಈ ಸಮ್ಮೇಳನವನ್ನು ಅರ್ಥಪೂರ್ಣವಾಗಿಸುವ ಸದುದ್ದೇಶದಿಂದ ಸಮ್ಮೇಳನ ಸಂಚಾಲಕರು ಮತ್ತು ಸ್ವಯಂಸೇವಕರು ಹಗಲಿರುಳೂ ದುಡಿಯುತ್ತಿದ್ದಾರೆ. ಅದೇ ಉತ್ಸಾಹ ಮತ್ತು ಆತ್ಮೀಯತೆಗಳಿಂದ ಹವ್ಯಕ ಬಳಗದವರೆಲ್ಲರನ್ನೂ ಆಮಂತ್ರಿಸುತ್ತಿದ್ದಾರೆ. [ಚಿತ್ರಕೃಪೆ : havyaka.org]

ಸಮ್ಮೇಳನದ ಅಂತರಜಾಲ ತಾಣ | ಫೇಸ್ ಬುಕ್ | ಟ್ವಿಟ್ಟರ್ | ಮಿಂಚಂಚೆ : [email protected]

English summary
Havyaka Association of North America (HAA) WDC Chapter hosts 16th Community Convention in Washington DC. 2 day event, 3-4 July 2015. Convention and Online registration info. Havyakas represent a sub sect of Hindu Brahmins from Karnataka, south India, practicing Sanatana Dharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X