ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಮೆರೆದ ಕರ್ನಾಟಕದ ಜಾನಪದ ಮೆರವಣಿಗೆ

By ವರದಿ - ವೆಂಕಟ್, ಚಿತ್ರ - ಗಿರೀಶ್ ಜಮದಗ್ನಿ
|
Google Oneindia Kannada News

ಎಲ್ಲಾ ಕಲೆಗಳ ಬೇರು ಜನಪದ ಎಂಬ ಮಾತಿದೆ. ಹಳ್ಳಿಗಳ ಜನಜೀವನದ ಅವಿಭಾಜ್ಯ ಅಂಗವಾಗಿ ಸಾಂಸ್ಕೃತಿಕವಾಗಿ ಹರಡಿ, ಬದುಕಿನ ಹಾಸುಹೊಕ್ಕಾಗಿ, ಪ್ರತಿ ಸಂದರ್ಭದ ಆಚರಣೆಗೆ ಕಲಾತ್ಮಕವಾದಂತಹ ರೂಪವನ್ನು ಕೊಟ್ಟು, ಮನಸ್ಸಿನ ಭಾವನೆ, ಆಶಯ, ತುಡಿತಗಳಿಗೆ ವಿಧ ವಿಧವಾದ ಆಕಾರ, ವೇಷಗಳಿಂದ ಪ್ರದರ್ಶನಕ್ಕೆ ಸಜ್ಜಾಗುವುದೇ ಜಾನಪದ ಕಲೆಯ ಸೊಗಡು.

ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿ ತಲೆ-ತಲೆಮಾರುಗಳಿಂದ ಮೌಖಿಕ ಪರಂಪರೆಯಲ್ಲಿ ಉಳಿದು ಬಂದಿರುವ ಜ್ಞಾನವೇ ಜಾನಪದ. ಜನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನವಾದವು. ಪರಿಸರ ಪರಿವೀಕ್ಷಣೆಯಿಂದ, ಅನುಕರಣೆಯಿಂದ, ಅರಿತದ್ದನ್ನು ಒಂದೆಡೆ ದಾಖಲಿಸಬೇಕೆಂಬ ಮನುಷ್ಯ ಸಹಜ ಗುಣದಿಂದ ಇಂಥ ಕಲೆಗಳು ಅಸ್ತಿತ್ವಕ್ಕೆ ಬಂದಿವೆ.

ಎರೆಯೆಣ್ಣೆ ತೆರೆಯಾಗಿ ಬತ್ತಿ ನಂದನವಾಗಿ...ಎರೆಯೆಣ್ಣೆ ತೆರೆಯಾಗಿ ಬತ್ತಿ ನಂದನವಾಗಿ...

ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ. ಕರ್ನಾಟಕವು ಜಾನಪದ ಸಂಪತ್ತಿನ ಶ್ರೀಮಂತ ನಾಡು, ನಾಡಿನ ಉದ್ದಗಲಕ್ಕೂ ಅನೇಕ ವೈವಿಧ್ಯಮಯವಾದ ಕಲೆಗಳು ಆಯಾ ಪ್ರದೇಶಗಳ ಜನಜೀವನ ಮತ್ತು ಕೃಷಿ, ವಾತಾವರಣಕ್ಕೆ ತಕ್ಕಂತೆ ವಿಕಾಸಗೊಂಡಿವೆ.

ಸಿಂಗನ್ನಡಿಗರಿಗೆ ವಿಶಿಷ್ಟ ಅನುಭವ ನೀಡಿದ ವಚನಾಂಜಲಿ 2017ಸಿಂಗನ್ನಡಿಗರಿಗೆ ವಿಶಿಷ್ಟ ಅನುಭವ ನೀಡಿದ ವಚನಾಂಜಲಿ 2017

ಜನಪದ ಸಾಹಿತ್ಯ, ಸಂಗೀತ, ನೃತ್ಯ ಹಾಗೂ ಆಟಗಳು ಅನೇಕ ಶಾಸ್ತ್ರೀಯ ಕಲೆಗಳಿಗೆ ಬುನಾದಿಯಾಗಿವೆ. ಕರ್ನಾಟಕದಲ್ಲಿ ಪ್ರಖ್ಯಾತವಾದ ಕಂಸಾಳೆ, ಡೊಳ್ಳು ಕುಣಿತ, ನಂದಿಕೋಲು, ಪೂಜಾ ಕುಣಿತ, ಕರಡಿ ಕುಣಿತ, ಸುಗ್ಗಿ ಕುಣಿತ, ತಮಟೆ ವಾದ್ಯ, ನಗಾರಿ, ವೀರಗಾಸೆ, ಕೊಡಗಿನ ಉಮ್ಮತ್ತಾಟ್, ಯಕ್ಷಗಾನ, ದೊಡ್ಡಾಟ, ಸಣ್ಣಾಟಗಳು ಈಗಲೂ ಪ್ರಚಲಿತವಾಗಿವೆ. ಮುಖ್ಯ ನಗರಗಳಲ್ಲಿ ಕೆಲವೊಮ್ಮೆ ಸಮ್ಮೇಳನ, ಮೆರವಣಿಗೆಗಳಲ್ಲಿ ಕಂಡು ಕಾಣದಂತೆ ಮಾಯವಾಗುವ ಈ ಕಲೆಗಳ ಪ್ರದರ್ಶನ ಕ್ರಮೇಣ ಕ್ಷೀಣಿಸುತ್ತಿದೆ ಎಂಬುದು ಚಿಂತನಾರ್ಹ.

ಸಿಂಗಪುರದ ಬೀದಿಯಲ್ಲಿ ವಿಜೃಂಭಿಸಿದ ಜಾನಪದ

ಸಿಂಗಪುರದ ಬೀದಿಯಲ್ಲಿ ವಿಜೃಂಭಿಸಿದ ಜಾನಪದ

ಕರ್ನಾಟಕದ ಪ್ರಮುಖ ನಗರಗಳಲ್ಲಿಯೂ ನೋಡಲು ದೊರೆಯದ ಇಂತಹ ಅಮೂಲ್ಯ ಕಲೆಗಳ ಸಂಗಮ, ಸಿಂಗಪುರದ ಪ್ರಮುಖ ಬೀದಿಯಲ್ಲಿ, ಕಿಕ್ಕಿರಿದ ಜನಸಂದಣಿಯಲ್ಲಿ ನಡೆದ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿ ನಮ್ಮ ಜಾನಪದ ಕಲೆಗಳಾದ ಕಂಸಾಳೆ ನೃತ್ಯ ಹಾಗೂ ಕಸರತ್ತು, ವಿಶೇಷ ಡೊಳ್ಳು ಕುಣಿತ, ಪೂಜಾ ಕುಣಿತ, ತಮಟೆ, ನಗಾರಿ ವಾದ್ಯಗಳ ಸದ್ದು, ವೀರಗಾಸೆ ವೇಷದ ರೌದ್ರತೆ ಎಲ್ಲರ ಗಮನವನ್ನು ಸೆಳೆದು ವಿಜೃಂಭಿಸಿತು.

ಕರ್ನಾಟಕದ ಕಲಾವಿದರಿಗೆ ಅದ್ಭುತ ವೇದಿಕೆ

ಕರ್ನಾಟಕದ ಕಲಾವಿದರಿಗೆ ಅದ್ಭುತ ವೇದಿಕೆ

ಜನಪದ ಕಲಾವಿದರಿಗೆ ಇಂತಹ ವೇದಿಕೆ ಬಹುಶಃ ದೊಡ್ಡ ಕನಸು, ವಿದೇಶದಲ್ಲಿ ನಮ್ಮ ನಾಡಿನ ಹಳ್ಳಿಗಳ ಕಲೆಯನ್ನು ಪಸರಿಸುವುದು ಒಂದು ಭಾಗ್ಯವೇ ಸರಿ. ಕರುನಾಡಿನ ಜಾನಪದ ಕಲೆಗೆ ಇಂತಹ ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದು ಕನ್ನಡ ಸಂಘ (ಸಿಂಗಪುರ). ಈ ನಿಟ್ಟಿನಲ್ಲಿ ಸಂಘದ ಪ್ರಯತ್ನ ಶ್ಲಾಘನೀಯ ಹಾಗೂ ಅನುಕರಣೀಯ ಕೂಡ.

ಲಿಟ್ಲ್ ಇಂಡಿಯಾದಲ್ಲಿ ಅದ್ಭುತ ಬೀದಿ ಮೆರವಣಿಗೆ

ಲಿಟ್ಲ್ ಇಂಡಿಯಾದಲ್ಲಿ ಅದ್ಭುತ ಬೀದಿ ಮೆರವಣಿಗೆ

ದೀಪಾವಳಿ ಹಬ್ಬದ ಪ್ರಯುಕ್ತ LISHA (Little India Shop owners and Heritage Association) 2ನೇ ಸೆಪ್ಟೆಂಬರ್ 2017ರ ಸಂಜೆ ಲಿಟ್ಲ್ ಇಂಡಿಯಾದ ದೀಪಾಲಂಕೃತಗೊಂಡ ರೇಸ್ ಕೋರ್ಸ್ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಈ ಅದ್ಭುತವಾದ ಬೀದಿ ಮೆರವಣಿಗೆಯನ್ನು ಸಿಂಗಪುರದ ಉಪ ಪ್ರಧಾನಿಯಾದ ಟಿಯೋ ಚೀ ಹೀಯೆನ್ (Mr. Teo Chee Hean) ಮತ್ತು ಇನ್ನೂ ಅನೇಕ ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಸುಮಾರು 25ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿದ್ದ ವೈವಿಧ್ಯಮಯ, ವರ್ಣರಂಜಿತ ಪ್ರದರ್ಶನದಲ್ಲಿ ವಿವಿಧ ಬಗೆಯ ಕಲಾಪ್ರಕಾರಗಳು, ಮುಖ್ಯ ಅತಿಥಿ ಹಾಗೂ ಜನಸಮೂಹದ ಎದುರು ಅನಾವರಣಗೊಂಡು ಇಡೀ ಬೀದಿಯಲ್ಲಿ ಭಾರತೀಯ ಸಂಸ್ಕೃತಿಯ ಬೆಳಕನ್ನು ಹರಡಿ ದೀಪಾವಳಿಗೆ ಸ್ವಾಗತ ಕೋರಿದವು.

ಕನ್ನಡ ಸಂಘದಿಂದ ಕಲಾಪ್ರದರ್ಶನದ ಜವಾಬ್ದಾರಿ

ಕನ್ನಡ ಸಂಘದಿಂದ ಕಲಾಪ್ರದರ್ಶನದ ಜವಾಬ್ದಾರಿ

ಕನ್ನಡ ಸಂಘ (ಸಿಂಗಪುರ)ದ ಅಧ್ಯಕ್ಶರಾದ ವಿಜಯ ರಂಗ ಪ್ರಸಾದ ಹಾಗೂ ಪ್ರಸ್ತುತ ಕಾರ್ಯಕಾರಿ ಸಮಿತಿಯವರು, LISHA ಆಡಳಿತ ಮಂಡಳಿಯ ಕೋರಿಕೆಯಂತೆ ಕರ್ನಾಟಕದ ಕಲೆಯ ಪ್ರದರ್ಶನದ ಜವಾಬ್ದಾರಿಯನ್ನು ಸಂಘದ ಮೂಲಕ ವಹಿಸಿಕೊಂಡು, ವಿಶೇಷವಾಗಿ ಜಾನಪದ ಕಲೆಯನ್ನು ಸಿಂಗಪುರದ ಅಮೋಘ ವೇದಿಕೆಯಲ್ಲಿ ಪ್ರದರ್ಶಿಸಲು ಆಲೋಚಿಸಿ, ಆಯೋಜಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ.

ಕಪ್ಪಣ್ಣ ಅವರ ಶ್ರಮದ ಫಲ

ಕಪ್ಪಣ್ಣ ಅವರ ಶ್ರಮದ ಫಲ

ಇಂತಹ ಪ್ರಯತ್ನಗಳು ನಮ್ಮ ನಾಡಿನ ನೈಜ ಹಾಗೂ ಶುದ್ಧ ಕಲೆಗಳನ್ನು ಪೋಷಿಸುವಲ್ಲಿ ಅತೀ ದೊಡ್ಡ ಹೆಜ್ಜೆ ಎಂಬುದರಲ್ಲಿ ಸಂದೇಹವಿಲ್ಲ ಹಾಗೂ ವಿಶ್ವದಾದ್ಯಂತ ಇತರ ಕೂಟಗಳಿಗೆ ಉತ್ತೇಜನೀಯ ಕೂಡ. ಇದಕ್ಕೆ ಪೂರಕವೆಂಬಂತೆ ಸದಾ ಜಾನಪದ ಕಲೆಗಳ ಪೋಷಕ ಹಾಗೂ ಹರಿಕಾರ ಶ್ರೀನಿವಾಸ್ ಜಿ ಕಪ್ಪಣ್ಣಅವರ ಜಾನಪದ ಕಲೆಗಳ ಮೇಲಿನ ಪೂಜ್ಯ ಭಾವ ಹಾಗೂ ಕಲಾವಿದರ ಬಗೆಗಿನ ಕಾಳಜಿ ಹಾಗೂ ಅದನ್ನು ವಿಶ್ವದಾದ್ಯಂತ ಹರಡುವಲ್ಲಿನ ಅವರ ಶ್ರಮದ ಫಲವೇ ಈ ಕಾರ್ಯಕ್ರಮ.

ಸಿಂಗಪುರ ಜನರ ಪ್ರಶಂಸೆಗೆ ಪಾತ್ರವಾದ ಜನಪದ

ಸಿಂಗಪುರ ಜನರ ಪ್ರಶಂಸೆಗೆ ಪಾತ್ರವಾದ ಜನಪದ

ಮೂರು ಸುತ್ತುಗಳನ್ನೊಳಗೊಂಡ ಈ ಮೆರವಣಿಗೆಯನ್ನು ರಸ್ತೆಯ ಮೂರು ವಿಭಾಗಗಳಲ್ಲಿ ಪ್ರದರ್ಶನಕ್ಕಾಗಿ ವೇದಿಕೆಗಳನ್ನು ಸಜ್ಜುಗೊಳಿಸಲಾಗಿತ್ತು. ಕರ್ನಾಟಕದಿಂದ ಆಗಮಿಸಿದ್ದ 25 ಜನಪದ ಕಲಾವಿದರ ತಂಡ ಡೊಳ್ಳು ಕುಣಿತ, ಪೂಜಾ ಕುಣಿತ, ಕಂಸಾಳೆ ನೃತ್ಯ, ತಮಟೆ ಹಾಗೂ ನಗಾರಿ ವಾದ್ಯಗಳ ಪ್ರದರ್ಶನ ನೆರೆದ ಜನರ ಪ್ರಶಂಸೆಗೆ ಪಾತ್ರವಾದವು. ನಮ್ಮ ಈ ಜಾನಪದ ಕಲೆ ಸಭಿಕರನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದಲ್ಲದೇ, ಸಿಂಗಪೂರಿನ ಸುದ್ದಿ ಮಾಧ್ಯಮಗಳು ಕೂಡ ಇದರಿಂದ ಆಕರ್ಷಿತರಾಗಿ ಪ್ರದರ್ಶನವನ್ನು ಹೊಗಳಿದವು. ಕೊನೆಯಲ್ಲಿ ಎಲ್ಲಾ ಸಿಂಗನ್ನಡಿಗರು ಜಾನಪದ ವೈವಿಧ್ಯತೆಗೆ ಮಣಿದು ಅದರ ತಾಳಕ್ಕೆ ಕುಣಿದಿದ್ದು ಅವಿಸ್ಮರಣೀಯ.

ಕಲಾ ಪೋಷಣೆಗೆ ಸಂಘ ಎಂದೂ ಮುಂದು

ಕಲಾ ಪೋಷಣೆಗೆ ಸಂಘ ಎಂದೂ ಮುಂದು

ಕನ್ನಡ ಸಂಘ (ಸಿಂಗಪುರ)ದಿಂದ ಇಂತಹ ಅಮೂಲ್ಯ ಕಲೆಗಳಿಗೆ ಮನ್ನಣೆ, ಪ್ರೋತ್ಸಾಹ ಸದಾ ಸಿಗುತ್ತಿರಲಿ, ಈ ನಿಟ್ಟಿನಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳು ಸಿಂಗನ್ನಡಿಗರನ್ನು ಒಟ್ಟುಗೂಡಿಸಿ ನಾಡು, ನುಡಿ, ಸಂಸ್ಕೃತಿಯನ್ನು ಹರಡುವಲ್ಲಿ ಪ್ರಮುಖ ಪಾತ್ರವಹಿಸಲೆಂದು ಹಾರೈಸುತ್ತೇನೆ.

English summary
Karnataka folk art showcased in Singapore. Little India Shop owners and Heritage Association had organized this event as part of Deepavali celebrations. Kannada Sangha Singapore had taken up the responsibility of this folk art.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X