ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಸ್ಸೌರಿ ನದಿ ದಂಡೆಯ ಮೇಲೆ ಕನ್ನಡ ಧ್ಯಾನ

By Shami
|
Google Oneindia Kannada News

ಉತ್ತರ ಅಮೆರಿಕಾದಲ್ಲಿ "ಕನ್ನಡ ಸಾಹಿತ್ಯ ರಂಗ" ಎಂಬ ಒಂದು ಸಂಸ್ಥೆಯಿದೆ. ಕನ್ನಡ ಸಾಹಿತ್ಯದ ಓದು, ಬರವಣಿಗೆ ಮತ್ತು ಚರ್ಚೆಯಲ್ಲಿ ತೊಡಗಿಕೊಳ್ಳುವ ಈ ಸಂಸ್ಥೆಯ ವಿಚಾರಗಳನ್ನು ಲಾಗಾಯ್ತಿನಿಂದ ನಮ್ಮ ವೆಬ್ ಸೈಟನ್ನು ಓದುತ್ತಾ ಬಂದವರಿಗೆ ಪರಿಚಯಿಸುವ ಅಗತ್ಯ ಇಲ್ಲ. ಆದರೆ, ಭಾರತದಲ್ಲಿ ಅಂತರ್ಜಾಲ ಬೃಹದಾಕಾರವಾಗಿ ಬೆಳೆಯುತ್ತಿರುವುದರಿಂದ, ಕನ್ನಡದ ಹೊಸ ಓದುಗರು ಸೃಷ್ಟಿಯಾಗುತ್ತಿರುವುದರಿಂದ ಕಸಾರಂ ಬಗ್ಗೆ ನಾಲ್ಕು ಮಾತುಗಳು ಅಗತ್ಯವಾಗಿದೆ.

ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇರುವಂತೆ ಅಮೆರಿಕಾದಲ್ಲಿ ಕನ್ನಡ ಸಾಹಿತ್ಯ ರಂಗ ಇದೆ ಅಂತ ನಾನು ಹೇಳಿದರೆ ಅದು ತಪ್ಪಾಗುತ್ತದೆ. ಯಾಕಂದ್ರೆ, 100 ವರ್ಷಗಳ ಇತಿಹಾಸ ಇರುವ ಕಸಾಪ ಎಲ್ಲಿ, 11 ವರ್ಷಗಳ ಇತಿಹಾಸವಿರುವ ಕಸಾರಂ ಎಲ್ಲಿ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಕಸಾಪ ಆಲದಮರ, ಕಸಾರಂ ಮನೆ ಹಿತ್ತಲಲ್ಲಿ ಬೆಳೆಯುತ್ತಿರುವ ಅರಳೀ ಮರ.

ಕನ್ನಡ ಸಾಹಿತ್ಯದ ಆವತ್ತಿನ ಸಂವೇದನೆಗಳು ಮತ್ತು ಇತ್ತೀಚಿನ ಆಗುಹೋಗುಗಳ ಬಗ್ಗೆ ಅವಿರತ ಸಂಪರ್ಕ ಇಟ್ಟುಕೊಂಡಿರುವವರು ಜಗತ್ತಿನಾದ್ಯಂತ ಕಾಣಸಿಗುತ್ತಾರೆ. ಅನೇಕ ಕಡೆಗಳಲ್ಲಿ ಈ ಆಸಕ್ತಿ ವೈಯಕ್ತಿಕ ನೆಲೆಯಲ್ಲಿದ್ದರೆ, ಕೆಲವೆಡೆ ಅದಕ್ಕೆ ಒಂದು ಸಾಂಘಿಕ ರೂಪ ಇರತ್ತೆ. ಇಂಥ ಸಂಘ ಅಥವಾ ಗುಂಪುಗಳನ್ನು ಚೆನ್ನೈ, ದೆಹಲಿ, ಗ್ರೇಟ್ ಬ್ರಿಟನ್, ಅಮೆರಿಕ, ಸಿಂಗಾಪುರಗಳಲ್ಲಿ ಕಾಣಬಹುದಾಗಿದೆ. ಬಿಡಿ ಹೂವುಗಳನ್ನು ಪ್ರೀತಿಯಿಂದ ಪೋಣಿಸಿ ಮಾಲೆಕಟ್ಟುವುದಕ್ಕೆ ಬಹಳ ತಾಳ್ಮೆ ಬೇಕು. ಅದರಲ್ಲೂ ಹೊರನಾಡು ಮತ್ತು ಎನ್ ಆರ್ ಐ ವಠಾರಗಳಲ್ಲಿ ಸಹನೆ ಜಾಸ್ತಿಬೇಕು.

Kannada Sahithya Ranga, US : Bi-annual convention, St Louis, Missouri

ಗಂಭೀರ ಸಾಹಿತ್ಯ ಅಲ್ಲ, ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸುವ, ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕಸಾರಂ ಆರಂಭವಾಗಿದ್ದು 2004ರಲ್ಲಿ. ಎರಡು ವರ್ಷಕ್ಕೊಮ್ಮೆ ಮೇಳವಿಸುವ ಸಾಹಿತ್ಯ ಸಮ್ಮೇಳನಕ್ಕೆ ಅವರು "ವಸಂತ ಸಾಹಿತ್ಯೋತ್ಸವ" ಎಂದು ಹೆಸರಿಟ್ಟುಕೊಂಡಿದ್ದಾರೆ. 2 ದಿನಗಳ ಏಳನೇ ವಸಂತ ಸಾಹಿತ್ಯೋತ್ಸವ ಈ ಬಾರಿ ಮಧ್ಯ ಅಮೆರಿಕಾದ ಸೈಂಟ್ ಲೂಯಿ ನಗರದಲ್ಲಿ ಏರ್ಪಾಟಾಗಿದೆ. ಮನ್ಮಥನಾಮ ಸಂವತ್ಸರದ ಮೇ 30 ಮತ್ತು 31, 2015. ಹ್ಯಾಪಿ ಯುಗಾದಿ!

ಕನ್ನಡ ಸಾಹಿತ್ಯದ ಚದುರಿದ ಪುಟಗಳನ್ನು ಜೋಡಿಸಿ, ಕ್ಯಾಲಿಕೊ ಬೈಂಡ್ ಹಾಕ್ಸಿ ಅದಕ್ಕೊಂದು ಗ್ರಂಥದ ರೂಪ ಕೊಡುವುದಕ್ಕೆ ಅಮೆರಿಕಾದ ನಾನಾ ರಾಜ್ಯಗಳಲ್ಲಿ ನೆಲೆಯಾಗಿರುವ ಅನೇಕಾನೇಕ ಕನ್ನಡಿಗರು ಶ್ರಮಿಸಿದ್ದಾರೆ. ಪ್ರಧಾನವಾಗಿ ನಾನು ಮೂವರನ್ನು ಗುರ್ತಿಸಬೇಕು. ಫಿಲಡಲ್ಫಿಯಾ ನಿವಾಸಿ ಡಾ. ಎಚ್ ವೈ ರಾಜಗೋಪಾಲ್, ಮೇರಿಲ್ಯಾಂಡ್ ನಿವಾಸಿ ಡಾ ಮೈ ಶ್ರೀ ನಟರಾಜ್ ಮತ್ತು ಇಲಿನಾಯ್ ನಲ್ಲಿ 30 ವರ್ಷ ಇದ್ದು, ಲಾಸ್ ಏಂಜಲೀಸಿನ ಅರ್ಕೇಡಿಯಾ ಬಡಾವಣೆಗೆ ಮೂವ್ ಆಗಿರುವ ನಾಗ ಐತಾಳ್.

ಕಸಾರಂನ ಸಕ್ರಿಯ ಸದಸ್ಯರಾದ ತ್ರಿವೇಣಿ ಶ್ರೀನಿವಾಸರಾವ್ (ಶಿಕಾಗೊ) ಮತ್ತು ಮೀರಾ (ನ್ಯೂಜೆರ್ಸಿ) ಅವರು ನನಗೆ ಕಳಿಸಿಕೊಟ್ಟಿರುವ ವಸಂತೋತ್ಸವದ ಕೆಲವು ವಿವರಗಳು ಹೀಗಿವೆ : ಏಳನೇ ವಸಂತ ಸಾಹಿತ್ಯೋತ್ಸವವನ್ನು ಸ್ಥಳೀಯ - ಸಂಗಮ ಕನ್ನಡ ಕೂಟದ ಸಹಯೋಗದಲ್ಲಿ ನಡೆಸಲಾಗುತ್ತದೆ; ಪ್ರಧಾನ್ ಗುರುದತ್ ಸಮ್ಮೇಳನದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಾರೆ; "ನಮ್ಮ ಬರಹಗಾರರು" ಕಾರ್ಯಕ್ರಮದ ಅಡಿಯಲ್ಲಿ ಅಮೆರಿಕಾದ ಕನ್ನಡ ಬರಹಗಾರರ ಇತ್ತೀಚಿನ/ಹೊಸ ಕೃತಿಗಳನ್ನು ಪರಿಚಯ ಮಾಡಿಕೊಡಲಾಗತ್ತೆ; ಲೇಖಕರು ತಮ್ಮ ತಮ್ಮ ಪುಸ್ತಕಗಳನ್ನು ಬಿಡುಗಡೆ ಮಾಡುವ, ಮಾರಾಟ ಮಾಡುವ ಅವಕಾಶವೂ ಇರತ್ತೆ.

ಲೇಖಕರ ಗಮನಕ್ಕೆ : ಕನ್ನಡದಿಂದ ಅನ್ಯ ಭಾಷೆಗಳಿಗೆ ಅನುವಾದಗೊಂಡ ಅಥವಾ ಅನ್ಯ ಬಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳಿಗೆ ಮನ್ನಣೆ. ಪುಸ್ತಕವು ಕಥೆ, ಕವಿತೆ, ವಿಜ್ಞಾನ, ಅನುವಾದ, ಮಕ್ಕಳ ಸಾಹಿತ್ಯ ಮುಂತಾದ ಯಾವುದೇ ಪ್ರಕಾರಗಳಿಗೆ ಸೇರಿರಬಹುದು. ತೊಂದ್ರೆಯಿಲ್ಲ. [ನಲ್ಮೆಯ ಕವಿಗಳಿಗೆ ಸಾಹಿತ್ಯ ರಂಗದ ಆತ್ಮೀಯ ಆಹ್ವಾನ]

- ಪುಸ್ತಕಗಳು 2013ರ ನಂತ್ರ ಪ್ರಕಟಗೊಂಡಿರಬೇಕು.
- ಈ ಮೊದಲು ಅಮೆರಿಕಾದಲ್ಲಿ ಎಲ್ಲಿಯೂ ಬಿಡುಗಡೆಯಾಗಿರದ ಕೃತಿಗಳನ್ನು ಮಾತ್ರ ಸಮ್ಮೇಳನದಲ್ಲಿ ಬಿಡುಗಡೆ ಮಾಡುವ ಅವಕಾಶ ಒದಗಿಸಲಾಗುವುದು.
- ಪುಸ್ತಕ ಬಿಡುಗಡೆ, ವಿಮರ್ಶೆಯನ್ನು ಅಪೇಕ್ಷಿಸುವ ಲೇಖಕರು ಸಮ್ಮೇಳನದಲ್ಲಿ ಉಪಸ್ಥಿತರಿರತಕ್ಕದ್ದು.
- ಪುಸ್ತಕ ಬಿಡುಗಡೆ/ವಿಮರ್ಶೆಗೆ ಆಯ್ಕೆ ಮಾಡುವುದರಲ್ಲಿ ಕಸಾರಂ ತೀರ್ಮಾನವೇ ಅಂತಿಮ.
- ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಲೇಖಕರು ಏಪ್ರಿಲ್ 25ರ ಒಳಗೆ ಸಂಪರ್ಕಿಸಬೇಕು.
- ಸಂಪರ್ಕ ವಿಳಾಸ- [email protected], [email protected]

ಕಸಾರಂ ಮೊದಲ ಸಮ್ಮೇಳನ ನಡೆದದ್ದು ಫಿಲಡಲ್ಫಿಯ, ನಂತರ ಲಾಸ್ ಏಂಜಲಿಸ್, ಶಿಕಾಗೊ, ವಾಷಿಂಗ್ ಟನ್ ಡಿಸಿ, ಸ್ಯಾನ್‌ಫ್ರಾನ್ಸಿಸ್ಕೊ, ಹ್ಯೂಸ್ಟನ್. ಹೀಗೆ, ಊರೆಲ್ಲ ಸುತ್ತಿರುವ ಕಸಾರಂ ಕರಗ ತಮ್ಮ ಮನೆಯಂಗಳಕ್ಕೆ ಬರುತ್ತಿರುವುದ ಕಂಡು ಸೈಂಟ್ ಲೂಯಿಯ ಕನ್ನಡ ಕೂಟ - ಸಂಗಮದ ಸದಸ್ಯರಿಗೆ ಅಪಾರ ಖುಷಿಯಾಗಿದೆ. ಈ ವಸಂತ ಸಾಹಿತ್ಯೋತ್ಸವಕ್ಕೆ ನಮ್ಮ ಪೂರ್ಣ ಬೆಂಬಲ ಇದೆ ಅಂತ ಸೈಂಟ್ ಲೂಯಿ ಕನ್ನಡ ಪ್ರಜೆ, ಡಾ ನವೀನ್ ಕೃಷ್ಣ ಅವರು ಹೇಳುತ್ತಿದ್ದುದು ಕ್ಯಾಲಿಫ್ ಅಕ್ಕ ಸಮ್ಮೇಳನದ ಸಮಯದಲ್ಲಿ ನನ್ನ ಕಿವಿಗೆ ಬಿದ್ದಿತ್ತು.


ಸಂಗಮ ಕನ್ನಡ ಕೂಟದಲ್ಲಿ ಬರಹಗಾರರು ಹೆಚ್ಚಿಲ್ಲದಿದ್ದರೂ ಕನ್ನಡ ಭಾಷೆ, ಸಾಹಿತ್ಯ ಪ್ರಿಯರಿಗೆ ಕೊರತೆಯೇನಿಲ್ಲ. ಹಾಗಾಗಿ, ಈ ವಸಂತ ಸಾಹಿತ್ಯೋತ್ಸವದಲ್ಲಿ ಕನ್ನಡ ಕಲರವಗಳಿಗೆ ಖಂಡಿತಾ ಏನೂ ಕಮ್ಮಿಯಾಗುವುದಿಲ್ಲ. ಅಂದಹಾಗೆ, ಸೈಂಟ್ ಲೂಯಿಯಲ್ಲಿ 4 ದಶಕ ವಾಸವಾಗಿದ್ದು ಇತ್ತೀಚೆಗೆ ಕಣ್ಮರೆಯಾದ ಡಾ. ಅಶ್ವಥ್ ರಾವ್ ಉತ್ತಮ ಬರಹಗಾರರಾಗಿದ್ದರು. ರೇಖಾ ಚಿತ್ರಗಳನ್ನು ಬಿಡಿಸುತ್ತಿದ್ದರು. ಹುಬ್ಭಳ್ಳಿಯ ಕೆಎಂಸಿ ಪದವೀಧರರಾಗಿದ್ದ (1962) ರಾವ್ ಮಿಸ್ಸೋರಿ ರಾಜ್ಯದ ಹೆಸರಾಂತ ಆರ್ಥೋಪಿಡಿಕ್ ವೈದ್ಯರಾಗಿದ್ದರು.

ಅಶ್ವಥ್ ಬದುಕಿದ್ದರೆ ಈ ಸಮ್ಮೇಳನ ಕಂಡು ಅದೆಷ್ಟು ಖುಷಿ ಪಡುತ್ತಿದ್ದರೋ ಏನೋ. ಏನೇ ಆಗಲಿ, ಸಂಗಮದ ಸದಸ್ಯರು ಮತ್ತು ಅಮೆರಿಕ ಕನ್ನಡ ಬರಹಗಾರರು ರಾವ್ ಅವರನ್ನು ಮಿಸ್ ಮಾಡಿಕೊಳ್ಳುವುದು ನಿಶ್ಚಿತ. ಅಂತೆಯೇ, ಮಿಸ್ಸೌರಿ ನದಿಯ ಪಶ್ಚಿಮ ದಂಡೆ ಕೂಡ.

English summary
Kannada Sahitya Ranga, a journey through the years. KSR, a Pan American Kannada literature, literary criticism org set for 7th edition of its 2 day literary convention in Saint Louis, Missouri. 30-31 May 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X