ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದ ಶ್ರೀ ಶಿವವಿಷ್ಣು ದೇವಸ್ಥಾನದಲ್ಲಿ ಈವಾರ

By Shami
|
Google Oneindia Kannada News

ಸರಳ ಕನ್ನಡದಲ್ಲಿ ರಚಿತವಾಗಿರುವ 'ಸಿರಿಗನ್ನಡ ಗೀತರಾಮಾಯಣ' ( ಕಿರುಗಾವ್ಯ) ಕೃತಿ ಬಿಡುಗಡೆಗೆ ಅಣಿಯಾಗಿದೆ. ವಾಲ್ಮೀಕಿ, ಕುವೆಂಪು ಆದಿಯಾಗಿ ಅನೇಕರು ರಾಮಾಯಣ ಕಥಾವಸ್ತುವಿಗೆ ಮಾರುಹೋಗಿದ್ದಾರೆ. ಇವರೆಲ್ಲ ಭಾರತದ ಮೂಲನಿವಾಸಿಗಳು. ಆದ್ರೆ, ಅನಿವಾಸಿ ಕನ್ನಡಿಗರೊಬ್ಬರು ರಚಿಸಿದ ಪ್ರಪ್ರಥಮ ರಾಮಾಯಣ ಎಂಬ ಹೆಗ್ಗಳಿಗೆ ನಟರಾಜ ರಾಮಾಯಣ ಪಾತ್ರವಾಗುತ್ತಿರುವುದು ವಿಶೇಷ.

ವಾಷಿಂಗ್ಟನ್‌ ಪ್ರದೇಶದಲ್ಲಿರುವ ಶ್ರೀ ಶಿವವಿಷ್ಣು ದೇವಾಲಯದಲ್ಲಿ (ಇದೇ ಭಾನುವಾರ ಏಪ್ರಿಲ್ 13ರಂದು ನಡೆಯುವ ಶ್ರೀರಾಮನವಮಿ ವಿಶೇಷ ಕಾರ್ಯಕ್ರಮದಲ್ಲಿ ಈ ಕಿರುಗಾವ್ಯದ ಕರಡುಪ್ರತಿ ಬಿಡುಗಡೆಗೊಳ್ಳುತ್ತಿದೆ.

600ಕ್ಕೂ ಹೆಚ್ಚು ಚೌಪದಿಗಳಿಂದ ಕೂಡಿದ, ಸರಳ ಕನ್ನಡದಲ್ಲಿ ಮೈದಾಳಿದ ರಾಮಾಯಣ ಕಿರುಗಾವ್ಯವನ್ನು ಕಾವೇರಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯ ಹಾಲಿ ಅಧ್ಯಕ್ಷ ಡಾ|| ಮೈ.ಶ್ರೀ ನಟರಾಜ್ ರಚಿಸಿದ್ದಾರೆ. ಅಮೆರಿಕಾದ ಅತ್ಯಂತ ಹಳೆಯ ಕನ್ನಡ ಕೂಟಗಳಲ್ಲಿ ಕಾವೇರಿಯೂ ಒಂದು.

Kannada Ramayana book launch authored by Dr. M S Nataraj

ಮೂಲತಃ ಹಾಸನ ಜಿಲ್ಲೆ ಗೊರೂರಿನವರಾದ ನಟರಾಜ್, ನಾಲ್ಕು ದಶಕಗಳಿಂದ ಅಮೆರಿಕಾದ ಮೇರಿಲ್ಯಾಂಡ್ ನಿವಾಸಿ. ಚಾಟೂಕ್ತಿ, ಅಶುಕವಿತೆ, ನಾಟಕ ಮತ್ತು ಪ್ರಬಂಧ ರಚನೆಯಲ್ಲಿ ಸಿದ್ಧಹಸ್ತರಾದ ಅವರ ರಾಮಾಯಣ ಕಿರುಗಾವ್ಯವು, "ಎಂಎಸ್ಎನ್ ಅವರ ಮೇರುಕೃತಿ" ಎಂದು ಅವರನ್ನು ಹತ್ತಿರದಿಂದ ಬಲ್ಲವರು ಬಣ್ಣಿಸುತ್ತಿದ್ದಾರೆ. ಪುಸ್ತಕ-ಸಿಡಿ ಲಭ್ಯತೆ, ಬೆಲೆ, ಯಾವ ಅಂಗಡಿಯಲ್ಲಿ ಸಿಕ್ಕುತ್ತೆ ಮತ್ತಿತರ ವಿವರಗಳನ್ನು ಸಾವಕಾಶವಾಗಿ ನಮ್ಮ ಓದುಗರಿಗೆ ತಿಳಿಯಪಡಿಸಲಾಗುವುದು - ಸಂಪಾದಕ

ಅಮೆರಿಕಾದಲ್ಲಿ ಹಿಂದು ದೇವಾಲಯಗಳಿಗೆ ಬೇಡಿಕೆ ಹೆಚ್ಚು. ನಿತ್ಯ ಜಪ ತಪ ಪೂಜೆ ಮಾಡಿಸಿಕೊಳ್ಳುವ ಭಾಗ್ಯವಂತ ದೇವಾನುದೇವತೆಗಳಿಗೆ ಕೊರತೆ ಇಲ್ಲ. ವಾರಾಂತ್ಯ ಬಂದರೆ ಕೇಳುವುದೇ ಬೇಡ. ದೇವಾಲಯಗಳು ಭಕ್ತಿ ಭಾವ ಸಮರ್ಪಣೆಯ ಮಾಲ್ ನಂತೆಯೇ ಕಂಡುಬರುತ್ತವೆ. ದೈವಿಕ ಭಾವ ತುಂಬಿತುಳುಕುತ್ತದೆ. ಐದಾರು ವರ್ಷಗಳ ಹಿಂದೆ ನವೀಕರಣಗೊಂಡ ಮೇರಿಲ್ಯಾಂಡ್ ಶಿವವಿಷ್ಣು ದೇವಸ್ಥಾನ ಅಂಥ ಪ್ರಾರ್ಥನಾ ಮಂದಿರಗಳಲ್ಲಿ ಪ್ರಮುಖವಾದದ್ದು.

ಅಭಿಷೇಕ, ಅರ್ಚನೆ, ಗೋತ್ರ ಹೇಳಿ ಕುಂಕುಮಾರ್ಚನೆ, ಹೋಮ ಹವನ, ಪ್ರಸಾದ ವಿನಿಯೋಗಳಿಗಷ್ಟೇ ದೇಗುಳಗಳು ಸೀಮಿತವಾಗದಿರುವುದು ಗಮನಾರ್ಹ. ಕೊಡುಗೈ ಕರ್ಣರ ದಾನ ದತ್ತಿ ನೆರವಿನಿಂದ ವಿಶಾಲ ಸಭಾಂಗಣಗಳನ್ನು, ವಾಹನ ನಿಲ್ದಾಣ ವ್ಯವಸ್ಥೆಯನ್ನು ಆಡಳಿತ ಮಂಡಳಿಗಳು ಕಲ್ಪಿಸುತ್ತವೆ. ಸಭಾಂಗಣದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ, ಭಜನೆ, ಉಪನ್ಯಾಸ, ದೇವರನಾಮ, ಲಲಿತಾ ಸಹಸ್ರನಾಮ, ರುದ್ರ ಪಠಿಸುವವರು ಅದೆಷ್ಟೋ ಜನ ಇರ್ತಾರೆ.

ಅಂದಹಾಗೆ, ಇದೇ ಶನಿವಾರ ಮತ್ತು ಭಾನುವಾರ ( ಏಪ್ರಿಲ್ 12-13) ಶಿವವಿಷ್ಣು ದೇವಸ್ಥಾನದಲ್ಲಿ ಪುರಂದರ ಮತ್ತು ತ್ಯಾಗರಾಜರ ಆರಾಧನೆ ಇಟ್ಟುಕೊಳ್ಳಲಾಗಿದೆ. ಬೆಳಗ್ಗೆ 8 ರಿಂದ ಸಂಜೆ 8 ಗಂಟೆವರೆಗೆ ಸಂಗೀತ ಪ್ರಿಯರಿಗೆ ನಾದದಾಸೋಹ. ಶುಕ್ರವಾರ ಸಂಜೆಯಿಂದ ಭಾನುವಾರ ಸಂಜೆಯತನಕ ಪೇಯ್ಡ್ ಪ್ರಸಾದ ಸಮಾರಾಧನೆ ಶಿವವಿಷ್ಣು ದೇವಸ್ಥಾನದ ವಿಶೇಷತೆಗಳಲ್ಲಿ ಒಂದು. ಅಡುಗೆ ತಯ್ಯಾರಿ, ಊಟ ಬಡಿಸುವುದನ್ನು ಸ್ವಯಂಸೇವಕರು ಮಾಡುವರು.

ಈ ಶನಿವಾರ/ಭಾನುವಾರ ರಾತ್ರಿಯ ಅಡುಗೆ ಜವಾಬ್ದಾರಿಯನ್ನು ಗಂಡುಮಕ್ಕಳೇ ನಿರ್ವಹಿಸುತ್ತಿರುವುದು ಸುದ್ದಿ. ವಾಷಿಂಗ್ ಟನ್ ಪೋಸ್ಟ್ ಈ ಕುರಿತ ಚಿತ್ರ ವರದಿಯನ್ನು ಪ್ರಕಟಿಸಿದರೆ ಚೆನ್ನ. ಅಂತೂ, ಪುಸ್ತಕಪ್ರಿಯರಿಗೆ, ಸಂಗೀತ ಪ್ರಿಯರಿಗೆ, ದೇವರಿಗೆ ಹಣ್ಣು ಕಾಯಿ ಮಾಡಿಸುವವರಿಗೆ ಹಾಗೂ ನಳಪಾಕ ಪ್ರಿಯರಿಗೆ ಈ ವಾರ ಶುಭವಾರ. ಡಿಸಿ, ವರ್ಜೀನಿಯ, ವಾಷಿಂಗ್ಟನ್, ಬಾಲ್ಟಿಮೋರ್, ಮೇರಿಲ್ಯಾಂಡ್, ಜರ್ಮನ್ ಟೌನ್, ಹರ್ ಮಿಂಗ್ಡನ್ ಮುಂತಾದ ಬಡಾವಣೆಗಳಲ್ಲಿ ಝಾಂಡಾ ಊರಿರುವ ಕನ್ನಡ ಕುಟುಂಬಗಳಿಗೆ ಶುಭಮಸ್ತು ಮತ್ತು Happy Week-End.

English summary
First ever Ramayana ( Short verse) Kannada book authored by NRI Kannadiga, DR. M S Nataraj releasing on 13 April 2014 at Sri Shiva Vishnu Temple, MD, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X