ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವಕಾಲಕ್ಕೂ ಸಲ್ಲುವ 'ಮುಖ್ಯಮಂತ್ರಿ'ಗೊಂದು ಸಲಾಂ!

By ಗಿರೀಶ್ ಜಮದಗ್ನಿ, ಸಿಂಗಪುರ
|
Google Oneindia Kannada News

ನನಗಿರುವ ಹತ್ತು ಹಲವು ಅಭಿರುಚಿಗಳಲ್ಲಿ ನಾಟಕರಂಗವೂ ಒಂದು. ಸಿಕ್ಕ ಅವಕಾಶಗಳನ್ನೆಲ್ಲಾ ಬಳಸಿಕೊಂಡು ರಂಗದ ಅಂತರಂಗವನ್ನು ಅರಿಯಲು ಪ್ರಯತ್ನ ಮಾಡುತ್ತಿರುತ್ತೇನೆ. ಮುಂಬೈನಲ್ಲಿದ್ದಾಗ "ಮೈಸೂರು ಅಸೋಸಿಯೇಷನ್"ನಲ್ಲಿ ಆಗಾಗ ನಡೆಯುತ್ತಿದ್ದ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರವಹಿಸುತ್ತಿದ್ದೆ. ಮುಂಬೈನಲ್ಲಿ ರಂಗ ನಿರ್ದೇಶಕರಾಗಿ ಹೆಸರುವಾಸಿಯಾದ ಡಾ|| ಬಿ.ಆರ್. ಮಂಜುನಾಥ್, ಮಂಜುನಾಥಯ್ಯ, ಗೀತಾ ವಿಶ್ವನಾಥ್ ಮುಂತಾದ ದಿಗ್ಗಜರ ಗರಡಿಯಲ್ಲಿ ಪಳಗುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ.

ಮುಂದೆ ವೃತ್ತಿ ನನ್ನನ್ನು ಕರೆತಂದು ನಿಲ್ಲಿಸಿದ ಸಿಂಗಪುರದಲ್ಲಿ ಕನ್ನಡ ಸಂಘ (ಸಿಂಗಪುರ) ವರ್ಷಕ್ಕೊಮ್ಮೆ ನಡೆಸುತ್ತಿದ್ದ ನಾಟಕೋತ್ಸವದಲ್ಲಿ ಪಾಲ್ಗೊಂಡ ಅನುಭವವೂ ಸಾರ್ಥಕತೆ ದೊರಕಿಸಿದೆ, ರಂಗದ ಹಲವು ಆಯಾಮಗಳನ್ನು ನನಗೆ ಪರಿಚಯಿಸಿದೆ. ವಿದೇಶದಲ್ಲಿ ನೆಲಸಿರುವವರಿಗೆ ಒಂದು ವಿಶಿಷ್ಟ ಅನುಕೂಲವೇನೆಂದರೆ, ನಮ್ಮ ನಾಡಿನಿಂದ ಆಗಾಗ್ಗೆ ಇಲ್ಲಿಗೆ ಬರುವ ಹಿರಿಯ, ಪ್ರಸಿದ್ಧ ಕಲಾವಿದರ ಪರಿಚಯ ಮತ್ತು ಅವರೊಂದಿಗೆ ನಮ್ಮ ಒಡನಾಟ. ನಮ್ಮೊಂದಿಗೆ ಅವರು ಇರುವ ಎರಡು ಮೂರು ದಿನಗಳಲ್ಲೇ ನಮ್ಮವರಾಗಿ ಬಿಡುತ್ತಾರೆ, ಆಪ್ತರಾಗಿಹೋಗುತ್ತಾರೆ. ನಮ್ಮ ದೇಶದಲ್ಲಿದ್ದಾಗ, ನಮ್ಮ ಕಲಾವಿದರನ್ನು ಆತ್ಮೀಯವಾಗಿ ಮಾತಾನಾಡಿಸುವುದಿರಲಿ, ಹತ್ತಿರದಿಂದ ನೋಡಲೂ ಸಾಧ್ಯವಾಗುವುದಿಲ್ಲ.[ಸಿಂಗನ್ನಡಿಗರೂ ಬಣ್ಣ ಹಚ್ಚುವಂತೆ ಮಾಡಿದ 'ಮುಖ್ಯಮಂತ್ರಿ']

Kannada Play Mukhyamantri enacted in Singapore

ಈ ವಿಷಯದಲ್ಲಿ ಅನಿವಾಸಿಯರೆಲ್ಲರೂ ಅದೃಷ್ಟವಂತರೇ ಸರಿ! ಅಷ್ಟೇ ಅಲ್ಲ. ಕನ್ನಡ ಸಂಘ (ಸಿಂಗಪುರ) ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ನಮ್ಮ ದೇಶದ ಕಲಾವಿದರು ಇಲ್ಲಿ ನೀಡುವ ಕಾರ್ಯಕ್ರಮದಲ್ಲಿ ಆದಷ್ಟು ಸ್ಥಳೀಯರನ್ನು ಸೇರಿಸಿ ಕಾರ್ಯಕ್ರಮ ಮಾಡುವ ಒಂದು ಪ್ರಶಂಸನೀಯ ಪರಿಪಾಠವನ್ನು ನಡೆಸಿಕೊಂಡು ಬರುತ್ತಿದೆ. ಇದರಿಂದ ಹಲವು ಉದಯೋನ್ಮುಖ ಕಲಾವಿದರಿಗೆ ಅನುಕೂಲವಾಗಿದೆ, ನುರಿತ ಕಲಾವಿದರ ಜೊತೆಗೂಡಿ ಕಾರ್ಯಕ್ರಮ ಮಾಡುವ ಅನುಭವವನ್ನು ದೊರಕಿಸಿಕೊಟ್ಟಿದೆ. ನನಗೂ ಇಂತಹ ಅವಕಾಶಗಳು ಆಗಾಗ ಸಿಕ್ಕಿರುವುದು ನನ್ನ ಸೌಭಾಗ್ಯವೇ ಎಂದುಕೊಳ್ಳುತ್ತೇನೆ.

ಇತ್ತೀಚಿಗೆ ಇಂತಹುದೇ ಒಂದು ಸುವರ್ಣಾವಕಾಶವನ್ನು ಕನ್ನಡ ಸಂಘ (ಸಿಂಗಪುರ) ನನಗೆ ಮತ್ತು ಇನ್ನಿತರ ಸ್ಥಳೀಯ ಕಲಾವಿದರಿಗೆ ದಯಪಾಲಿಸಿತ್ತು. "ಮುಖ್ಯಮಂತ್ರಿ" ನಾಟಕದ 609ನೇ ಪ್ರದರ್ಶನ ಸಿಂಗಪುರದಲ್ಲಿ ಕಳೆದ ಶನಿವಾರ, ಅಂದರೆ 20ನೇ ಮೇ 2017ರಂದು ಆಯೋಜಿತಗೊಂಡಿತ್ತು. ನ್ಯೂಜಿಲೆಂಡ್, ಆಸ್ಟ್ರೇಲಿಯಾದಲ್ಲಿ ಯಶಸ್ವಿ ಪ್ರದರ್ಶನ ನೀಡಿ ಸಿಂಗಪುರಕ್ಕೆ ಬಂದಿತ್ತು ಬೆಂಗಳೂರಿನ "ಕಲಾಗಂಗೋತ್ರಿ" ತಂಡ. ಡಾ|| ಚಂದ್ರು ಅವರಿಗೆ ಹೆಸರು ತಂದುಕೊಟ್ಟ ಪ್ರತಿಷ್ಠಿತ ನಾಟಕ "ಮುಖ್ಯಮಂತ್ರಿ"ಯಲ್ಲಿ ವಿದ್ಯಾಮಂತ್ರಿ ಪ್ರಜಾಪತಿ ಶಿವಡೆಯ ಪಾತ್ರ ಮಾಡಿ, ರಂಗದ ಹಿಂದೆ ಮತ್ತು ಹೊರಗೆ ಕಲಾವಿದರೊಂದಿಗೆ ಬೆರೆತಾಗಿನ ನನ್ನ ಅನುಭವವೇ ಈ ಪುಟ್ಟ ಲೇಖನ.[ದೋಹಾ ಕನ್ನಡಿಗರ ನಲಿದಾಡಿಸಿದ ಶ್ರೀನಾಥ್, ರವಿಶಂಕರ್]

Kannada Play Mukhyamantri enacted in Singapore

ನಾಟಕದ ಕೆಲವು ದಿನದ ಮುಂಚೆ ನಮಗೆ ನಮ್ಮ ಪಾತ್ರದ ಸಂಭಾಷಣೆಯನ್ನು ಕೊಟ್ಟಿದ್ದರು. ಹಿಂದಿನ ಮತ್ತು ಮುಂದಿನ ದೃಶ್ಯಗಳ ಬಗ್ಗೆ ತಿಳಿಯದೆ ಮತ್ತು ನಾಟಕದ ಕಥಾ ಹಂದರದ ಪರಿಚಯ ಇಲ್ಲದ್ದರಿಂದ ನಮಗೆ ಅನಿಸಿದ ರೀತಿ ಧ್ವನಿ ಏರಿಳಿತ ಮಾಡಿ ನಮ್ಮ ನಮ್ಮಲ್ಲೇ ಅಭ್ಯಾಸ ಮಾಡಿದ್ದೆವು. ಮುಖ್ಯ ಪಾತ್ರಧಾರಿಗಳ ಜೊತೆಗೇ ನಮ್ಮ ಸಂಭಾಷಣೆಗಳು ಇದ್ದಿದ್ದರಿಂದ, ಸಂಭಾಷಣೆಯನ್ನು ಕಲಿತು ತಯಾರಾಗುವುದನ್ನು ಬಿಟ್ಟು ಹೆಚ್ಚೇನೂ ಮಾಡಲಾಗಲಿಲ್ಲ. ಅದೂ ಅಲ್ಲದೆ, ನಾಟಕದಲ್ಲಿ ಪ್ರಮುಖವಾದ ರಂಗದ ಮೇಲಿನ ಚಲನ ವಲನಗಳ ಮತ್ತು ರಂಗ ಪ್ರವೇಶದ ಮಗ್ಗುಲುಗಳ ಕಲ್ಪನೆ ನಮಗಿರಲಿಲ್ಲ. ಎಲ್ಲ ಕಲಾವಿದರ ಜೊತೆ ಒಂದಿಷ್ಟು ಬಾರಿ ತಾಲೀಮು ನಡೆಯಲೇಬೇಕೆಂದು "ಕಲಾಗಂಗೋತ್ರಿ"ಯ ಡೈರೆಕ್ಟರ್ ಮತ್ತು ಹಿರಿಯ ಕಲಾವಿದ ಡಾ|| ಬಿ.ವಿ.ರಾಜಾರಾಮ್ ಮೊದಲೇ ತಾಕೀತು ಮಾಡಿದ್ದರು.

ನಮಗೆ ಎಷ್ಟೇ ಅನುಭವವಿದ್ದರೂ, ಹಿರಿಯ, ನುರಿತ ಕಲಾವಿದರೊಂದಿಗೆ ನಾಟಕ ಮಾಡುವುದು ಹೇಗೋ, ಏನೋ ಎನ್ನುವ ದುಗುಡವಂತೂ ಇತ್ತು ನಮಗೆ. ನಾಟಕಕ್ಕೆ ಎರಡು ದಿನ ಮುಂಚೆಯೇ ಆಸ್ಟ್ರೇಲಿಯಾದಿಂದ "ಕಲಾಗಂಗೋತ್ರಿ" ತಂಡ ಸಿಂಗಪುರಕ್ಕೆ ಬಂದಿಳಿದಿತ್ತು. ತಂಡದ ಹೆಚ್ಚಿನವರಿಗೆ ಇದು ಸಿಂಗಪುರಕ್ಕೆ ಮೊದಲ ಭೇಟಿಯಾದ್ದರಿಂದ ಅವರಿಗೆ ಇಲ್ಲಿಯ ಸ್ಥಳೀಯ, ಜಗತ್ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಉತ್ಸಾಹವಿತ್ತು. ಈ ಸುಡು ಬೇಸಿಗೆಯಲ್ಲಿ, ಮೈ ಬೆವರಿಳಿಸುವ ಬಿಸಿಲಿನಲ್ಲಿ ದಿನವಿಡೀ ಸಿಂಗಪುರದ ಉದ್ದಗಲಕ್ಕೂ ಓಡಾಡಿ ಕಲಾವಿದರು ದಣಿದಿದ್ದರೂ, ಸಿಕ್ಕ ಎರಡು ರಾತ್ರಿಗಳಲ್ಲಿ ಕಲಾವಿದರೊಂದಿಗೆ ನಮ್ಮ ರಿಹರ್ಸಲ್ ನಡೆಯಿತು.

Kannada Play Mukhyamantri enacted in Singapore

ಎಷ್ಟೇ ಸುಸ್ತಾಗಿದ್ದರೂ, ರಿಹರ್ಸಲ್ ಶುರುವಾದಾಗ ಅದೇನೋ ಶಕ್ತಿ ಆ ಕಲಾವಿದರಲ್ಲಿ ಸಂಚಾರವಾಗುತ್ತಿತ್ತು. ಅವರಲ್ಲಿ ಉಕ್ಕುತ್ತಿದ್ದ ಆ ಉತ್ಸಾಹ, ದಿನವೆಲ್ಲಾ ಕಚೇರಿಯಲ್ಲಿ ದುಡಿದು, ದಣಿದು ರಿಹರ್ಸಲ್ನ ಸೇರುತ್ತಿದ್ದ ನಮ್ಮನ್ನೂ ಹುರಿದುಂಬಿಸುವಷ್ಟಿತ್ತು! ನೆನಪಿರಲಿ, ಕಲಾವಿದರ ತಂಡದಲ್ಲಿ 60ರ ಹರೆಯ ಮೇಲ್ಪಟ್ಟವರೇ ಹೆಚ್ಚಿದ್ದರು. ಅವರ ವಯೋಸಹಜ ತೊಂದರೆಗಳ ನಡುವೆಯೂ ಅವರ ಆ ಅದಮ್ಯ ಉತ್ಸಾಹ ಯುವಕರನ್ನು ನಾಚಿಸುವಂತಿತ್ತು.

ಒಟ್ಟಿನಲ್ಲಿ ನಾಟಕ ಚೆನ್ನಾಗಿ ಬರಬೇಕೆಂಬ ಅವರ ಆ ಧನಾತ್ಮಕ ಧೋರಣೆ ನನಗೆ ಬಹಳ ಮೆಚ್ಚುಗೆಯಾಯ್ತು. ಸ್ವಲ್ಪ ಸ್ನೇಹಮಯವಾಗಿ ಗದರಿಕೊಳ್ಳುತ್ತಾ, ಹೆಚ್ಚಾಗಿ ಆತ್ಮೀಯ ನುಡಿಗಳಿಂದ ಸ್ಥಳೀಯ ಕಲಾವಿದರನ್ನು ಆ ಎರಡು ರಾತ್ರಿಗಳಲ್ಲಿ ಆದಷ್ಟು ಸಜ್ಜುಗೊಳಿಸಿದ್ದರು. ಸ್ಥಳೀಯ ಕಲಾವಿದರೂ ಅಷ್ಟೇ. ಅದೇ ಉತ್ಸಾಹ ಮತ್ತು ಸಿಕ್ಕ ಅವಕಾಶವನ್ನು ಎರಡೂ ಕೈಯಲ್ಲಿ ಬಾಚಿಕೊಳ್ಳುತ್ತಾ "ಮುಖ್ಯಮಂತ್ರಿ" ತಂಡದಲ್ಲಿ ಒಂದಾಗಿಬಿಟ್ಟಿದ್ದರು.

Kannada Play Mukhyamantri enacted in Singapore

ನಾಟಕದ ದಿನ ರಂಗದ ಮೇಲೊಂದು ಬಾರಿ ರಿಹರ್ಸಲ್ ನಡೆಸಬೇಕೆಂದು ನಿಶ್ಚಯಿಸಲಾಗಿತ್ತು. ಆದರೆ ರಂಗ ಸಜ್ಜಿಕೆ ಮತ್ತು ಇತರ ಕೆಲಸ ಕಾರ್ಯಗಳಿಂದ ಅದು ಆಗಲೇ ಇಲ್ಲ. ರಂಗದ ಚಟುವಟಿಕೆಗಳಲ್ಲಿ ನನಗೆ ಬಹಳ ಕುತೂಹಲ ಮೂಡಿಸುವುದು - ಗ್ರೀನ್ ರೂಮಲ್ಲಿ ನಡೆಯುವ ತಯ್ಯಾರಿ. ರಂಗ ಪ್ರವೇಶಕ್ಕೆ ಮುನ್ನ ಕಲಾವಿದರು ಮಾಡಿಕೊಳ್ಳುವ ಸಿದ್ಧತೆ, ಆ ಸಂಭ್ರಮ, ಕಲಾವಿದರು ಅವರವರಲ್ಲೇ ನಡೆಸಿಕೊಳ್ಳುವ ಸಂಭಾಷಣೆಯ ಅಭ್ಯಾಸ. ನಾಟಕವನ್ನೇ ವೃತ್ತಿಯಾಗಿ ಮಾಡಿಕೊಂಡಿರುವ ಹಲವು ಕಲಾವಿದರಿರುವ "ಕಲಾಗಂಗೋತ್ರಿ" ತಂಡದ ರಂಗದ ಹಿಂದಿನ ಚಟುವಟಿಕೆಗಳನ್ನು ನೋಡುವ ಕುತೂಹಲ ಬಹಳ ದಿನದಿಂದ ನನಗಿತ್ತು. ಅದಕ್ಕೇ, ನಾಟಕವನ್ನು ಸಭಿಕರ ಜೊತೆ ಕುಳಿತು ನೋಡುವ ಅವಕಾಶವಿದ್ದರೂ (ನಾನಿದ್ದ ದೃಶ್ಯದ ಹಿಂದೆ ಮತ್ತು ನಂತರ), ನಾನು ಹೆಚ್ಚು ಸಮಯ ಗ್ರೀನ್ ರೂಮಲ್ಲಿ ಕಲಾವಿದರೊಂದಿಗೆ ಕಳೆದೆ. ಬಹಳಷ್ಟು ವಿಷಯಗಳನ್ನು ಗಮನಿಸಿದೆ.

ಬಹಳ ಮುಖ್ಯವಾಗಿ ನಾನು ಗಮನಿಸಿದ್ದು ಅಂದರೆ, ಎಲ್ಲ ಕಲಾವಿದರ ಕ್ಷಮತೆ. ಹಿಂದಿನ 608 ಪ್ರದರ್ಶನಗಳಲ್ಲಿ ನೂರಿನ್ನೂರು ಬಾರಿ ಅದೇ ಪಾತ್ರ ಅವರುಗಳು ಮಾಡಿದ್ದರೂ ಕೂಡ, ನಾನು ಯಾರಲ್ಲೂ ಅತಿನಂಬಿಕೆ, "ನನಗೆಲ್ಲಾ ಗೂತ್ತು" ಎನ್ನುವ ಉಡಾಫೆಯನ್ನು ಕಾಣಲಿಲ್ಲ. ವಿಶೇಷವೆಂದರೆ ಎಲ್ಲ ಕಲಾವಿದರಿಗೂ ಎಲ್ಲ ಪಾತ್ರಗಳ ಸಂಭಾಷಣೆ ಗೊತ್ತಿತ್ತು. ಹಿರಿಯ, ಕಿರಿಯ ಕಲಾವಿದರೆಲ್ಲರೂ ಮೇಕಪ್ ಮಾಡಿಕೊಳ್ಳುತ್ತಲೋ, ಕಾಸ್ಟ್ಯೂಮ್ ಸರಿಮಾಡಿಕೊಳ್ಳುತ್ತಾಲೋ ತಮ್ಮ ಸಹ ಪಾತ್ರದ ಕಲಾವಿದರೊಂದಿಗೆ ಒಮ್ಮೆ ಸೂಕ್ಷ್ಮವಾಗಿ ಸಂಭಾಷಣೆಯ ತಾಲೀಮು ನಡೆಸುತ್ತಿದ್ದುದನ್ನು ಕಂಡೆ.

Kannada Play Mukhyamantri enacted in Singapore

ಡಾ|| ಬಿ.ವಿ.ರಾಜಾರಾಮ್ ನಂತಹ ಹಿರಿಯ ಕಲಾವಿದರೂ ಕೂಡ ಸೈಡ್ ವಿಂಗ್ ನಲ್ಲಿ ಸ್ಕ್ರಿಪ್ಟ್ ಮೇಲೆ ಒಮ್ಮೆ ಕಣ್ಣಾಡಿಸುತ್ತಿದ್ದುದನ್ನು ನೋಡಿದೆ. ಇನ್ನು ಸ್ಥಳೀಯ ಕಲಾವಿದರನ್ನು ನಡೆಸಿಕೊಂಡ ರೀತಿಯೂ ಬಹಳ ಅಪ್ಯಾಯಮಾನ. ನಮ್ಮ ದೃಶ್ಯದ ಮೊದಲು ನಮ್ಮನ್ನು ಹುರಿದುಂಬಿಸಿ ಕಳುಹಿಸಿ, ದೃಶ್ಯ ಮುಗಿಸಿ ಬಂದಾಗ ಬೆನ್ನು ತಟ್ಟಿ "ಚೆನ್ನಾಗಿ ಬಂತು ರೀ" ಎಂದು ಹೇಳಿ ನಮ್ಮ ಬಗ್ಗೆ ನಾವೇ ಹೆಮ್ಮೆಪಟ್ಟುಕೊಳ್ಳುವಂತೆ ಮಾಡುತ್ತಿದ್ದರು. ನಾಟಕ ಮುಗಿದ ಮೇಲೆ, ಸ್ಥಳೀಯ ಕಲಾವಿದರೆಲ್ಲರಿಗೂ "ಕಲಾ ಗಂಗೋತ್ರಿ", ನಾಟಕದಲ್ಲಿ ಭಾಗಿಯಾದುದಕ್ಕೆ ಕೊಟ್ಟ "ಪ್ರಮಾಣ ಪತ್ರ"ವಂತೂ ಅನಿರೀಕ್ಷಿತ ಮತ್ತು ಅವರ ಆ ನಡೆ ಅಭಿನಂದನೀಯ.

ಇನ್ನು "ಮುಖ್ಯಮಂತ್ರಿ" ನಾಟಕದ ಬಗ್ಗೆ ಹೇಳುವುದೇನಿದೆ? ನಾಟಕದ ಕಥಾ ಹಂದರ ಸಾರ್ವಕಾಲಿಕ. ಮೂರು ದಶಕಗಳಿಂದಲೂ ಕನ್ನಡ ಕಲಾರಸಿಕರ ಮನಸೂರೆಗೊಂಡಿರುವ ಈ ನಾಟಕ ಅಂದಿಗೂ ಮತ್ತು ಇಂದಿಗೂ ಪ್ರಸ್ತುತ ಎಂದರೆ ರಾಜಕೀಯದ ವಿದ್ಯಮಾನಗಳ ಪರಿಸ್ಥಿತಿ ತಿಳಿಯುತ್ತದೆ. ಈ ಮೂವತ್ತು ವರ್ಷಗಳಲ್ಲಿ ನಾಟಕದ ಸಂಭಾಷಣೆ ಮತ್ತು ನಾಟಕದಲ್ಲಿ ಬದಲಾವಣೆಯೇ ಆಗಿಲ್ಲ ಎಂದು ತಂಡದಿಂದ ತಿಳಿದಾಗ ಸೋಜಿಗವಾಯ್ತು!

ನಾಟಕದ ಉಸಿರು, ಜೀವಾಳ, ಮೂಲಾಧಾರ... "ಮುಖ್ಯಮಂತ್ರಿ" ಚಂದ್ರು. "ಲೀಲಾಜಾಲ" ಎಂಬ ಪದಕ್ಕೆ ಸಂಪೂರ್ಣ ಅರ್ಥ ಬೇಕಿದ್ದರೆ, ಡಾ|| ಚಂದ್ರು ಅವರ "ಮುಖ್ಯಮಂತ್ರಿ" ಪಾತ್ರ ನೋಡಬೇಕು. ಪಾತ್ರವೇ ಅವರೋ, ಅವರೇ ಪಾತ್ರವೋ ಹೇಳಲಸಾಧ್ಯ. ಅವರ ಮಾತಿನ ವೈಖರಿ, ವರಸೆ, ಗತ್ತು, ಗಮ್ಮತ್ತು, ಕರಾರುವಕ್ಕಾದ ಸಮಯಕ್ಕೆ ಸಂಭಾಷಣೆ, ಆಂಗಿಕ ಅಭಿನಯ, ನಗು, ಓಹ್.. ಪಾತ್ರವನ್ನೇ ಧಾರೆ ಎರೆದುಕೊಂಡು ಆ ಎರಡು ಗಂಟೆಗಳು ಮುಖ್ಯಮಂತ್ರಿಯೇ ಆಗಿಬಿಡುತ್ತಾರೆ.

Kannada Play Mukhyamantri enacted in Singapore

ಸಂಭಾಷಣೆಯೇ ಪ್ರಧಾನವಾಗಿರುವ ಈ ನಾಟಕದಲ್ಲಿ ಬರುವ ಎಲ್ಲಾ ಪಾತ್ರಗಳು ಮುಖ್ಯವೇ. ಡಾ|। ಬಿ.ವಿ.ರಾಜಾರಾಮ್ ಅವರ ನಿರ್ದೇಶನ ಮತ್ತು ಪ್ರಮುಖ ಪಾತ್ರ (ದುಬೆ)ದ ನಿರ್ವಹಣೆ ಬಹಳ ಅಚ್ಚುಕಟ್ಟು. ಹಿರಿಯ ಕಲಾವಿದರಾದ ಶ್ರೀನಿವಾಸ ಮೇಷ್ಟ್ರು, ಟಿ.ವಿ.ಗುರುಮೂರ್ತಿ, ಎಚ್.ಎನ್.ಚಂದ್ರಶೇಖರ್, ಕಿಟ್ಟಿ ಮತ್ತು ಡಾ|| ಎಂ.ಎಸ್. ವಿದ್ಯಾ ಈ ನಾಟಕದ ಬೆನ್ನೆಲುಬು.

ಯುವ ಕಲಾವಿದರಾದ ಶ್ರೀನಿವಾಸ್ ಕೈವಾರ, ಕೋಡಿ ರಾಜೇಶ್, ನಿಖಿತಾ ಭರತ್ ಮತ್ತು ದುರ್ಗಾದಾಸ್ ಅವರು ತಮ್ಮ ನಟನೆಯಿಂದ ಸಿಂಗನ್ನಡಿಗರ ಚಪ್ಪಾಳೆಗಿಟ್ಟಿಸಿಕೊಂಡದ್ದು ಅಂದಿನ ವಿಶೇಷ. ಒಟ್ಟಿನಲ್ಲಿ ಒಂದು ಒಳ್ಳೆಯ ನಾಟಕ ನೋಡಿದ ಅನುಭವ ಎಲ್ಲರಿಗು. ಈ ನಾಟಕ ಆದಷ್ಟು ಬೇಗ 1000ನೇ ಪ್ರದರ್ಶನ ಕಾಣಲಿ ಎಂದು ಹಾರೈಸುತ್ತಾ, ನನಗೆ ಈ ನಾಟಕದಲ್ಲಿ ಭಾಗಿಯಾಗಲು ಅವಕಾಶ ನೀಡಿದ "ಕನ್ನಡ ಸಂಘ(ಸಿಂಗಪುರ)" ಕಾರ್ಯಕಾರಿ ಸಮಿತಿಗೂ ಮತ್ತು ಮಾರ್ಗದರ್ಶನ ನೀಡಿದ "ಕಲಾ ಗಂಗೋತ್ರಿ" ತಂಡಕ್ಕೆ ಅನಂತ ನಮನಗಳು.

English summary
609th show of political Kannada Play 'Mukhyamantri' was enacted in Singapore by Kala Gangotri troupe. The show was organized by Kannada Sangha Singapore. Mukhyamantri Chandru as the chief minister steals the show. Girish Jamadagni, who also played a role in the drama shares his experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X