ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ರಂಗೋತ್ಸವ 'ನಾಟಕ ಚೈತ್ರ', ಇಂದೇ ಟಿಕೆಟ್ ಖರೀದಿಸಿ

By ಕಿರಣ್ ಜಯಂತ್
|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದ ಹವ್ಯಾಸಿ ರಂಗಕಲಾವಿದರು ಒಗ್ಗೂಡಿ ಕಟ್ಟಿದ ತಂಡವೇ "ನಾಟಕ ಚೈತ್ರ". ಈ ತಂಡದ ಉದ್ದೇಶಗಳಲ್ಲಿ ಮುಖ್ಯವಾದವು ಎರಡು. ಮೊದಲನೆಯದು ಅಮೆರಿಕನ್ನಡಿಗರಿಗೆ ಉತ್ತಮ ಗುಣಮಟ್ಟದ ಕನ್ನಡ ನಾಟಕಗಳನ್ನು ಪ್ರಸ್ತುತಪಡಿಸಬೇಕೆನ್ನುವ ಅದಮ್ಯ ಬಯಕೆ ಹಾಗು ಪ್ರಾಮಾಣಿಕ ಪ್ರಯತ್ನ. ಎರಡನೆಯದು ಒಂದು ಸ್ವಯ೦ ಸೇವಕ ಸ೦ಸ್ಥೆಗೆ ಧನ ಸಹಾಯ ಮಾಡುವ ಸಾರ್ಥಕತೆ.

ಈ ಎರಡೂ ಒತ್ತಾಸೆಗಳನ್ನು ಎದೆಬಡಿತದಂತೆ ತೊಡಗಿಸಿಕೊಂಡಿರುವ ವಿಶಿಷ್ಟ ದ್ವೈವಾರ್ಷಿಕ ನಾಟಕ ಉತ್ಸವ "ನಾಟಕ ಚೈತ್ರ". ಪ್ರತಿ ಎರಡು ವರ್ಷಕ್ಕೊಮ್ಮೆ ಮೂಡಿ ಬರುವ ಈ ಕಾರ್ಯಕ್ರಮ ಎರಡು ವಿಭಿನ್ನ ನಾಟಕಗಳನ್ನು ಬಹಳ ಶ್ರದ್ಧೆ ಹಾಗು ಶ್ರಮದಿಂದ ತಯಾರಿಸಿ, ಉತ್ಸಾಹದಿಂದ ಪ್ರಸ್ತುತಪಡಿಸುತ್ತದೆ.

Kannada drama festival Nataka Chaitra in Santa Clara, USA

ಹಿಂದೆ ಆಡಿದ ನಾಟಕಗಳು

ನಾಟಕ ಚೈತ್ರ ತಂಡ 2010ರಲ್ಲಿ ಟಿ.ಎನ್. ಸೀತಾರಾಮ್ ರವರ "ನಮ್ಮೊಳಗೊಬ್ಬ ನಾಜೂಕಯ್ಯ" ಮತ್ತು ಎಚ್ ದುಂಡಿರಾಜ್ ರವರ "ಕೊರಿಯಪ್ಪನ ಕೊರಿಯೋಗ್ರಫಿ" ನಾಟಕಗಳನ್ನು ಪ್ರದರ್ಶಿಸಿ ಇದರಿಂದ ಸಂಗ್ರಹವಾದ ಮೊತ್ತವನ್ನು "ಮೈತ್ರಿ" ಸಂಸ್ಥೆಗೆ ಸಂದಾಯ ಮಾಡಿತ್ತು.

2012ರಲ್ಲಿ ಬಿ.ಆರ್.ಲಕ್ಷ್ಮಣ್ ರಾವ್ ರವರ "ನಂಗ್ಯಾಕೋ ಡೌಟು" ಮತ್ತು ಚಂದ್ರಶೇಖರ ಕಂಬಾರರ "ಸಾಂಬಶಿವ ಪ್ರಹಸನ" ನಾಟಕಗಳನ್ನು ಪ್ರಸ್ತುತಪಡಿಸಿ ಇದರಿಂದ ಸಂಗ್ರಹವಾದ ಮೊತ್ತವನ್ನು "Second Harvest Food Bank" ಮತ್ತು "OSAAT" ಸಂಸ್ಥೆಗಳಿಗೆ ಸಂದಾಯ ಮಾಡಿತ್ತು.

ಹಾಗೆಯೇ 2014ರಲ್ಲಿ ರಾಜೇಂದ್ರ ಕಾರಂತರ "ಮುದ್ದಣ್ಣನ ಪ್ರಮೋಷನ್ ಪ್ರಸಂಗ" ಮತ್ತು ಕೆ.ವಿ. ಅಕ್ಷರ ರವರ "ಚೂರಿಕಟ್ಟೆ ಅರ್ಥಾತ್ ಕಲ್ಯಾಣಪುರ" ನಾಟಕಗಳನ್ನು ಪ್ರದರ್ಶಿಸಿ ಇದರಿಂದ ಸಂಗ್ರಹವಾದ ಮೊತ್ತವನ್ನು "ಶ್ರೀ ಶಂಕರ ಕ್ಯಾನ್ಸರ್ ಫೌಂಡೇಶನ್"ಗೆ ದಾನ ಮಾಡಿತ್ತು.

Kannada drama festival Nataka Chaitra in Santa Clara, USA

ಈ ಬಾರಿ ಪ್ರದರ್ಶನಗೊಳ್ಳುತ್ತಿರುವ ನಾಟಕಗಳ ವಿವರಗಳು ಇಂತಿವೆ:

ಖ್ಯಾತ ನಾಟಕಕಾರ ರಾಜೇಂದ್ರ ಕಾರಂತರ "ಮರಣ ಮೃದಂಗ" ಒಂದು ರಾಜಕೀಯ ಲೇಪನವುಳ್ಳ ನಾಟಕ. ಇದೊಂದು ಸಾವಿನ ದವಡೆಗೆ ಸಿಲುಕಿರುವ ನಾಡಿನ ಮುಖ್ಯಮಂತ್ರಿಗೆ ಸಂಬಂಧಿಸಿದ ಅಂತಃಕರಣ ಕಲಕುವ ಕಥೆ. ಸಾವಿನ ಮುಂದೆ ಐಶ್ವರ್ಯ-ಅಂತಸ್ತು-ಅಧಿಕಾರ ಎಲ್ಲವೂ ನಿಷ್ಪ್ರಯೋಜಕ ಎಂಬ ಮರ್ಮವಿರುವ ಈ ನಾಟಕದ ವಸ್ತು ಗಂಭೀರವಾದರೂ ಆ ವಿಷಯಗಳನ್ನು ದಾಟಿಸಲು ಆಯ್ಕೆ ಮಾಡಿಕೊಂಡಿರುವ ವಿಧಾನ ಬಹಳ ಸರಳ. ರಾಜಕೀಯ ಲೇವಡಿ, ಮಾಧ್ಯಮಗಳ ಅತಿವರ್ತನೆ ಬಿಂಬ, ಮೂಢನಂಬಿಕೆಯ ಮಂಪರು, ಅಧಿಕಾರ ಲಾಲಸೆಯ ಕ್ರೌರ್ಯ ಒಂದಕ್ಕೊಂದನ್ನು ಜೋಡಿಸಿ ಮನರಂಜನಾತ್ಮಕವಾಗಿ ಕಾರಂತರು ರಚಿಸಿದ್ದಾರೆ. ಆಗ ತಾನೆ ಅಧಿಕಾರ ಕಳೆದುಕೊಂಡ ಮಾಜಿ ಮುಖ್ಯಮಂತ್ರಿಯೊಬ್ಬನ ತಹತಹಿಕೆಯನ್ನು ತೋರಿಸುತ್ತಲೇ ನೋಡುಗರೂ ಆತ್ಮವಿಮರ್ಶೆ ಮಾಡಿಕೊಳ್ಳುವಂತಹ ವಾತಾವರಣವನ್ನು ನಾಟಕಕಾರರು ನಿರ್ಮಾಣ ಮಾಡಿದ್ದಾರೆ. ಈ ನಾಟಕವನ್ನು ನಿರ್ದೇಶಿಸುತ್ತಿರುವುದು ಅಶೋಕ ಉಪಾಧ್ಯ.

"ಮರಿಯಂಳ ಮೂರನೇ ಮದುವೆ" ರಾಜೇಂದ್ರ ಕಾರಂತರು ಜನಪ್ರಿಯ ಇಂಗ್ಲಿಷ್ ನಾಟಕಕಾರ ಪಿ. ಜಿ. ವೊಡ್ಹೌಸ್ ರ ನಾಟಕದಿಂದ ಪ್ರೇರಿತರಾಗಿ ಒಂದು ಹಾಸ್ಯ ನಾಟಕ ರಚಿಸಿ ಕನ್ನಡ ರಂಗಭೂಮಿಗೆ ಕೊಟ್ಟ ಕೊಡುಗೆ. ಈ ನಗೆ ನಾಟಕದ ಕಥಾವಸ್ತು - ಒಂದು ಪಾಳು ಬಿದ್ದ ಅರಮನೆಯನ್ನು ಮಾಲೀಕ ಮತ್ತು ಸ್ವಾಮಿನಿಷ್ಠ ಅಡುಗೆ ಭಟ್ಟ ಒಬ್ಬ ವಿದೇಶಿ ಮಹಿಳೆ ಮರಿಯಮ್ ಳಿಗೆ ಮಾರಾಟ ಮಾಡುವ ಸಂಚು. ನಾಟಕದಲ್ಲಿ ಬಂದು ಹೋಗುವ ವಿಭಿನ್ನ ಪಾತ್ರವರ್ಗಗಳು ಇವರಿಬ್ಬರ ಕಾರ್ಯಯೋಜನೆಗೆ ಅಡ್ಡಿಪಡಿಸಿ ಗಲಿಬಿಲಿ-ಗೊಂದಲ ಉಂಟುಮಾಡುತ್ತಾರೆ. ಕೊನೆಗೂ ಅರಮನೆ ಮಾರಾಟವಾಗುತ್ತದೆಯೋ, ಮರಿಯಮ್ಮಳ ಮೂರನೇ ಮದುವೆಯಲ್ಲಿ ಸುಖಾಂತ್ಯಗೊಳ್ಳುತ್ತದೆಯೋ ನೀವೇ ನಾಟಕ ನೋಡಿ ತಿಳಿದುಕೊಳ್ಳಿ. ಈ ನಾಟಕವನ್ನು ನಿರ್ದೇಶಿಸುತ್ತಿರುವವರು ಶರ್ಮಿಳ ವಿದ್ಯಾಧರ.

ನಾಟಕ ನೋಡಲು ಬನ್ನಿ, ಪ್ರೋತ್ಸಾಹಿಸಿ

ಈ ಬಾರಿಯ ಪ್ರದರ್ಶನದಿ೦ದ ಒಟ್ಟುಗೂಡುವ ಮೊತ್ತವನ್ನು ನಾಟಕ ಚೈತ್ರ ತಂಡ "ಓಸಾಟ್"(One School At A Time)ಗೆ ದಾನ ಮಾಡುವ ಸದುದ್ದೇಶ ಇಟ್ಟುಕೊ೦ಡಿದೆ. ನಾಟಕ ಚೈತ್ರದ ಯಶಸ್ಸಿಗೆ ಅಡಿಪಾಯ ನಿಮ್ಮ ಪ್ರೋತ್ಸಾಹ ಮತ್ತು ನಿರಂತರ ಉತ್ತೇಜನ!

ಫೆಬ್ರವರಿ 13, 14ರಂದು ಸಾಂತಾ ಕ್ಲಾರಾದಲ್ಲಿ ಪ್ರದರ್ಶನವಾಗುತ್ತಿರುವ ಎರಡು ನಾಟಕಗಳ ರಸದೌತಣ ಸವಿಯಲು ನಾಟಕ ಚೈತ್ರ ವೆಬ್ ಸೈಟಿನಲ್ಲಿ ಇಂದೇ ಟಿಕೆಟ್ ಖರೀದಿ ಮಾಡಿ. ಡಿಸೆಂಬರ್ 31ರ ಒಳಗೆ ಖರೀದಿ ಮಾಡಿದ್ದಲ್ಲಿ early bird ರಿಯಾಯಿತಿ ಕೂಡ ಪಡೆಯಬಹುದು.

English summary
Amateur Kannada artists have formed one community 'Nataka Chaitra' in San Francisco bay area to play Kannada dramas once in two years. In February 2016 the troupe is playing two Kannada plays, Mariyamla Moorane Maduve and Marana Mrudanga written by playwrite Rajendra Karanth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X