ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐರಿಶ್ ಕನ್ನಡಿಗರ ಸಂಭ್ರಮ ಇಮ್ಮಡಿಸಿದ ಗಣೇಶ

By ಯಮುನಾ ಅರುಣ್, ಡಬ್ಲಿನ್
|
Google Oneindia Kannada News

ಭಾದ್ರಪದ ಮಾಸ ಬರುತ್ತಿದ್ದಂತೆ ಐರ್ಲೆಂಡ್ ನಲ್ಲಿರುವ ಐರಿಶ್ ಕನ್ನಡ ಸಂಘದಲ್ಲಿ ಸಂಭ್ರಮವೋ ಸಂಭ್ರಮ. ಕನ್ನಡಿಗರೆಲ್ಲ ಸೇರಿ ವಿಘ್ನ ನಿವಾರಕ ಗಣಪನನ್ನು ಪೂಜಿಸುವ ಪರಿಯಿದೆಯಲ್ಲ... ಕಳೆದ ದಶಕದಿಂದ ಇದೇ ಸಂತೋಷ, ಸಂಭ್ರಮ ಐರಿಶ್ ಕನ್ನಡಿಗರಲ್ಲಿ ಮನೆಮಾಡಿದೆ. ಪ್ರತೀವರ್ಷವೂ ವಿಜೃಂಭಣೆಯಿಂದಲೇ ಗಣೇಶೋತ್ಸವ ಆಚರಿಸಲಾಗುತ್ತಿದೆ.

ಐರ್ಲೆಂಡ್‌ನ ಡಬ್ಲಿನ್‌ನಲ್ಲಿರುವ ಫಿಬಲ್‌ಸ್ಟೋನ್ ಕಮ್ಯೂನಿಟಿ ಸೆಂಟರಿನಲ್ಲಿ 20ನೇ ಸೆಪ್ಟೆಂಬರ್ ನಂದು ಗಣೇಶ ನಮ್ಮೆಲ್ಲರ ಭಕ್ತಿಗೆ ಮೆಚ್ಚಿ, ಕಡುಬಿನ ನೈವೇದ್ಯ ಸ್ವೀಕರಿಸಿ ನಮ್ಮನ್ನು ಆಶೀರ್ವದಿಸಿದ. ಸಂಘದ ಸದಸ್ಯರೆಲ್ಲರೂ ನಿಸ್ವಾರ್ಥದಿಂದ ದುಡಿದು, ಭರ್ತಿ ಉತ್ಸಾಹದಿಂದ ಗಣೇಶನನ್ನು ಪೂಜಿಸಿ, ಶ್ರದ್ಧೆಯಿಂದ ಎಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. [ಗಣೇಶನ ಹಬ್ಬಕ್ಕೆ ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ!]

Irish Kannada Sangha celebrates Ganeshotsava

ಈ ವರ್ಷ ಯಾವುದೇ ವಿಘ್ನ ಬರದಿರಲಪ್ಪ ಎಂದು ದೊಡ್ಡವರು, ಸಣ್ಣವರು ಎಲ್ಲ ಸೇರಿ 150ಕ್ಕೂ ಹೆಚ್ಚು ಕನ್ನಡಿಗರು ಸೇರಿದ್ದರು. ಕನ್ನಡಿಗರು ಹೇಗೆ ಗಣೇಶೋತ್ಸವ ಆಚರಿಸುತ್ತಾರೆಂದು ನೋಡಲು ಕೆಲ ಆಂಗ್ಲ ಸ್ನೇಹಿತರು ಕೂಡ ಅಲ್ಲಿಗೆ ಬಂದಿದ್ದರು. ಭಕ್ತವತ್ಸಲ, ಕರುಣಾಸಾಗರ ಗಣೇಶ ಮೊದಲೇ ಸುಂದರ! ಆತ ಇನ್ನಷ್ಟು ಸಂದರವಾಗಿ ಕಾಣಲು ಮತ್ತೊಂದಿಷ್ಟು ಅಲಂಕಾರ! ಗಣೇಶನ ಸಂಭ್ರಮವಂತೂ ಹೇಳತೀರದು!

ಎಲ್ಲ ಅಲಂಕಾರಗಳು ಮುಗಿದ ಮೇಲೆ ಶಾಸ್ತ್ರೋಕ್ತವಾಗಿ ಗಣಪತಿಯನ್ನು ಪೂಜಿಸಲಾಯಿತು. ಗಣೇಶನ ಪೂಜೆಯ ನಂತರ ಇದ್ದೇ ಇತ್ತಲ್ಲ ಹೊಟ್ಟೆಯ ಪೂಜೆ. ಗಜಾನನನ ನೈವೇದ್ಯಕ್ಕೆಂದು ತಯಾರಿಸಲಾಗಿದ್ದ ಕಡುಬು, ಮೋದಕ ಸಮೇತ 21 ಬಗೆಯ ಪ್ರಸಾದಗಳು, ಬಾಳೆ ಎಲೆಯ ಭರ್ಜರಿ ಊಟದ ಸಮೇತ ಭಕ್ತಾದಿಗಳ ಹೊಟ್ಟೆ ಸೇರಿದವು.

Irish Kannada Sangha celebrates Ganeshotsava

ಎಲ್ಲರೂ ಸಾಂಪ್ರದಾಯಿಕ ಉಡುಗೆತೊಡುಗೆಗಳಲ್ಲಿ ಬಂದಿದ್ದು ಕಣ್ಣಿಗೂ ಹಬ್ಬದಂತಿತ್ತು. ಮಕ್ಕಳಿಗಾಗಿ ರೂಪಿಸಲಾಗಿದ್ದ ವಿದ್ಯಾಧಿಪತಿ ಗಣೇಶನ ಕುರಿತ ವಿಡಿಯೋ ಮನಸೆಳೆಯಿತು. ಗಣಪನ ಚಿತ್ರಕ್ಕೆ ಬಣ್ಣ ತುಂಬುವ ಸ್ಪರ್ಧೆ ಕೂಡ ಏರ್ಪಡಿಸಲಾಗಿತ್ತು. ಉಟೋಪಚಾರ ಮುಗಿದ ನಂತರ ಸಂಘದ ಸದಸ್ಯರಿಗೆಲ್ಲ ಸಂಪ್ರದಾಯದಂತೆ ತಾಂಬೂಲ ನೀಡಿದ್ದು, ಹಬ್ಬಕ್ಕೆ ಮತ್ತಷ್ಟು ಕಳೆ ತಂದಿತ್ತು.

ಪೂಜೆ, ಊಟೋಪಚಾರ ಮುಗಿದ ಮೇಲೆ ಇನ್ನೇನಿದೆ? ನಮ್ಮನ್ನೆಲ್ಲ ಹರಸಿದ ಗಣಪನನ್ನು ಅಷ್ಟೇ ಸಂಭ್ರಮದಿಂದ ಕಳಿಸಿಕೊಡಲೇಬೇಕಲ್ಲ? ಮತ್ತೊಮ್ಮೆ ಭರ್ಜರಿ ಮೆರವಣಿಗೆಯ ಮೂಲಕ, ಗಂಟೆ ಜಾಗಟೆ ಸದ್ದುಗಳೊಂದಿಗೆ ಗಣೇಶನನ್ನು ವಿಸರ್ಜಿಸಲಾಯಿತು. ಮುಂದಿನ ವರ್ಷ ಮತ್ತೆ ಬೇಗನೆ ಬರುತ್ತೇನೆಂದು ಗಣೇಶನೂ ಟಾಟಾ ಹೇಳಿದ. [ಶಾಸ್ತ್ರಬದ್ಧವಾಗಿ ಗಣಪತಿಯನ್ನು ವಿಸರ್ಜಿಸುವ ಕ್ರಮ]

Irish Kannada Sangha celebrates Ganeshotsava

ಇಷ್ಟೆಲ್ಲ ಕಾರ್ಯಕ್ರಮಗಳನ್ನು ಅತ್ಯುತ್ತಮವಾಗಿ ಮತ್ತು ಶಿಸ್ತಿನಿಂದ ಆಯೋಜನೆ ಮಾಡಿದ್ದಕ್ಕೆ ಐರಿಶ್ ಕನ್ನಡ ಸಂಘದ ಪದಾಧಿಕಾರಿಗಳಿಗೆ ಥ್ಯಾಂಕ್ಸ್ ಹೇಳಲೇಬೇಕು. ಒಟ್ಟಿನಲ್ಲಿ ಡಬ್ಲಿನ್ ಕನ್ನಡಿಗರೆಲ್ಲ ಸೇರಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದರ ಜೊತೆಗೆ ಗಣೇಶನನ್ನು ಪೂಜಿಸುತ್ತ ಒಂದಿಷ್ಟು ಸಂತಸದ ಕ್ಷಣಗಳನ್ನು ಕಳೆದೆವು.
English summary
A decade of celebrating Ganesha Chaturthi by Irish Kannadigara Sangha (IKS) was organised in a spectacular style on 20th September 2015 at the Phibblestown community centre, Dublin, Ireland. The very professional organisation of the event, equally reflected the enormous experience, enthusiasm and energy of the members of the IKS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X