ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಸಿ 377 : ಸುಪ್ರೀಂ ತೀರ್ಪೂ, ಲೈಂಗಿಕ ಆಸಕ್ತಿಯೂ

By ಭರತ್ ಎನ್ ಶಾಸ್ತ್ರಿ
|
Google Oneindia Kannada News

ಡಿಸೆಂಬರ್ 11, 2013ರಂದು ದೆಹಲಿ ಹೈ ಕೋರ್ಟಿನ ತೀರ್ಪೊಂದನ್ನು ತಳ್ಳಿಹಾಕುತ್ತ, ಸುಪ್ರೀಮ್ ಕೋರ್ಟ್ ಇಂಡಿಯನ್ ಪೀನಲ್ ಕೋಡ್ ನ 377 ಸೆಕ್ಷನ್ ಪ್ರಕಾರ ಸಲಿಂಗರತಿಯನ್ನು ಕಾನೂನು ಬಾಹಿರ ಎಂದು ಘೋಷಿಸಿದೆ. ತನ್ಮೂಲಕ ಮುಖ್ಯವಾಹಿನಿಯ ಪ್ರಸಾರ ಮಾಧ್ಯಮಗಳಿ(ಗೆ) ಕೆಲವು ದಿನಗಳ ಜೀವನೋಪಾಯವನ್ನು ಕರುಣಿಸಿದೆ. ಜತೆ(ಗೇ), ಕೆಲವು ಜ್ಞಾನಪೀಠಿಗಳಿ(ಗೆ) ಹಾಗೂ ನಮ್ಮ ಸಮಾಜವು ಸುಲಭವಾಗಿ ಮರೆತುಬಿಡಬಹುದಾದ ಲೇಖಕರಿ(ಗೆ) ಪ್ರತಿಭಟನೆಗೆ ಹಾಗೂ ಸುದ್ದಿಯಲ್ಲಿರಲು ಒಂದು ಅವಕಾಶವನ್ನೂ ಕರುಣಿಸಿದೆ.

ಏನಿದು 'ಗೇ' ವರ್ತನೆ?

ಲೈಂಗಿಕತೆ ಮತ್ತು ಲೈಂಗಿಕ ಆಸಕ್ತಿ ಬಹಳ ಸಂಕೀರ್ಣವಾದ ವಿಷಯ. ಗಂಡು ಹೆಣ್ಣಿನ ಪರಸ್ಪರ ಆಕರ್ಷಣೆ ಎಲ್ಲರಿಗೂ ತಿಳಿದ ವಿಷಯ, ಅಂತೆಯೇ ಸಲಿಂಗಿಗಳ ಪರಸ್ಪರ ಆಕರ್ಷಣೆಯೂ, ಅಸ್ತಿತ್ವದಲ್ಲಿರುವ ಸಂಗತಿಯೇ. ಹೇಗೆ ಎಲ್ಲಾ ಬಣ್ಣದ ಜನರು ಈ ಪ್ರಪಂಚದಲ್ಲಿ ಇದ್ದಾರೋ, ಅಂತೆಯೇ ಜನರ ಲೈಂಗಿಕತೆಯೂ ಭಿನ್ನವಾಗಿ ಇರುವುದರಲ್ಲಿ ಆಶ್ಚರ್ಯವಿಲ್ಲ. ಹೇಗೆ ನಮ್ಮಲ್ಲಿ ಕೆಲವರು ಎಡಚರೋ, ಹಾಗೆಯೇ ವೈಯುಕ್ತಿಕ ಲೈಂಗಿಕ ಆಕರ್ಷಣೆಯೂ ನಮ್ಮ ಕೈಯಲ್ಲಿ ಇಲ್ಲ. ಇದಕ್ಕೆ ಕಾರಣ ಹುಡುಕುವುದೂ ಕಷ್ಟಸಾಧ್ಯವಾದ ವಿಷಯ, ಏಕೆಂದರೆ ಇದು ಕೇವಲ 'ಜೆನೆಟಿಕ್' ಅಲ್ಲ!

ಹಲವು ಶತಮಾನಗಳ ಮಡಿವಂತಿಕೆಯ ಫಲವಾಗಿ, ಹಾಗೂ ಮಿಕ್ಕವರು ಏನೆಂದುಕೊಳ್ಳುತ್ತಾರೋ ಎಂಬ ಭೀತಿಯಿಂದ, ಭಾರತದಲ್ಲಿ ಜನರು ತಮ್ಮ ವೈಯುಕ್ತಿಕ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡದಿರಬಹುದು. ಆದರೆ ವಿಶ್ವದ ಹಲವು ದೇಶಗಳಲ್ಲಿರುವ ಜನರ ಲೈಂಗಿಕತೆಯ ಬಗ್ಗೆ ಅಂಕಿ-ಅಂಶಗಳು ಲಭ್ಯವಿದೆ. ಈ ಅಂಕಿ-ಅಂಶಗಳು ಪ್ರತಿ ನೂರು ಪುರುಷರಲ್ಲಿ ಒಬ್ಬ ಅಥವಾ ಇಬ್ಬರು ಮತ್ತೊಬ್ಬ ಪುರುಷನತ್ತ ಲೈಂಗಿಕವಾಗಿ ಆಕರ್ಷಿತರಾಗುತ್ತಾರೆ ಎಂದೂ ಹಾಗೂ ಪ್ರತಿ ನೂರು ಸ್ತ್ರೀಯರಲ್ಲಿ ಒಬ್ಬಳು ಸ್ತ್ರೀ ಮತ್ತೊಬ್ಬ ಸ್ತ್ರೀಯಲ್ಲಿ ಆಕರ್ಷಿತಳಾಗುತ್ತಾಳೆ ಎನ್ನುವ ತಾತ್ಪರ್ಯ ದೊರೆಯುತ್ತದೆ. ಈ ಅಂಕಿ-ಅಂಶಗಳನ್ನು ಸೆಕ್ಯುಲರ್ ವಿಧಾನಗಳಲ್ಲೇ ಪಡೆಯಲಾಗಿದೆ. (ಭಾರತದ 'ಸೆಕ್ಯುಲರ್' ವಿಧಾನ ಅಲ್ಲ! ನಿಘಂಟಿನ ಅರ್ಥದಲ್ಲಿ ಸೆಕ್ಯುಲರ್)

IPC section 377 : Homosexuality and mentality of people

ಇಂದಿನ ತ್ವರಿತಗತಿಯ, 'ಸುದ್ದಿ ಸ್ಫೋಟ'ದ ಕಾಲದಲ್ಲಿ ಯಾವುದೇ ವಿಷಯವನ್ನು ತಕ್ಕಮಟ್ಟಿಗೆ ತಿಳಿಯುವ ಮೊದಲೇ ಜನರು ಅಭಿಪ್ರಾಯ ಮಂಡನೆಗೆ ಮುಂದಾಗುವುದರಿಂದ ಸುಪ್ರೀಮ್ ಕೋರ್ಟಿನ ಮೇಲ್ಕಾಣಿಸಿದ ತೀರ್ಪಿನ ಬಗ್ಗೆಯೂ ಪರ-ವಿರೋಧದ ಚರ್ಚೆಗಳು ಮಾಧ್ಯಮದಲ್ಲಿ ಆಗಲೇ ಪ್ರಾರಂಭವಾಗಿವೆ. ಎಲ್ಲಕ್ಕೂ ಉದ್ಯಮೀಕೃತ ಪಾಶ್ಚಿಮಾತ್ಯ ದೇಶಗಳನ್ನು ಅಂಧಾನುಕರಣೆ ಮಾಡುವ ಜನರು ಈ ತೀರ್ಪಿನಿಂದ ಭಾರತ ಹಿಂದುಳಿದ ದೇಶವಾಯಿತು ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಢೋಂಗಿ ಸಂಪ್ರದಾಯವಾದಿಗಳ ಬೆಂಬಲ ಪಡೆಯಲು, ಹಾಗೂ ತಾವು ಕಾಂಗ್ರೆಸ್ಸಿಗಿಂತಲೂ ಭಿನ್ನ ಎಂದು ತೋರಿಸಿಕೊಳ್ಳಲು ಬಿಜೆಪಿಯ ಅಧ್ಯಕ್ಷ ಮಹೋದಯರು "ಅಸಹಜ ಹಾಗೂ ಅನೈಸರ್ಗಿಕವಾದುದನ್ನು" ಒಪ್ಪಲು ಸಾಧ್ಯವಿಲ್ಲ ಎಂದು ಘೋಷಿಸಿಬಿಟ್ಟಿದ್ದಾರೆ. ಮುಂದಿನ ಹೆಜ್ಜೆಯಾಗಿ ಬಿಜೆಪಿಯ ವಕ್ತಾರರು "ಅದು ಕೇವಲ ರಾಜನಾಥ ಸಿಂಹರ ವೈಯುಕ್ತಿಕ ಅಭಿಪ್ರಾಯ" ಎಂದು "ಕಾಗೆ ತಿನ್ನುವ" ಪರಿಸ್ಥಿತಿ ಬಂದರೂ ಬರಬಹುದು.

ಇನ್ನು ಸುಪ್ರೀಮ್ ಕೋರ್ಟಿನ ತೀರ್ಪಿನ ವಿಷಯಕ್ಕೆ ಬರುವುದಾದರೆ, ಸುಪ್ರೀಮ್ ಕೋರ್ಟ್ ಕೇವಲ ನಮ್ಮ ದೇಶದ ಪೀನಲ್ ಕೋಡ್ ನಲ್ಲಿರುವ ಅಂಶಗಳನ್ನು ಎತ್ತಿ ಹಿಡಿದಿದೆ. ಇದೊಂದು ದೋಷಪೂರಿತ (ಮತ್ತು ಮಾನವ ಹಕ್ಕುಗಳಿಗೆ ವಿರುದ್ಧವಾದ) ಕಾನೂನು ಎನ್ನುವುದು ವೈಜ್ಞಾನಿಕವಾಗಿ ಸಿದ್ಧವಾದಾಗ ಅದನ್ನು ಪರಿಷ್ಕರಿಸಬೇಕಾದ ಹೊಣೆ ಸಂಸತ್ತಿನದ್ದು. ಆದರೆ ಈ ತೀರ್ಪಿಗೆ, ಹಲವರು ಆರೋಪಿಸುವಂತೆ ಸುಪ್ರೀಮ್ ಕೋರ್ಟ್ ಏಕೆ ಹೊಣೆ ಹೊರಬೇಕು ಎನ್ನುವುದು ಅರ್ಥವಾಗದ ವಿಷಯ. ಇನ್ನು ಈ ವಿಷಯದ ಬಗ್ಗೆ ತಿಳಿವಳಿಕೆಯೇ ಇಲ್ಲದ ಸಂಸದರಿಂದ ಹಾಗೂ ರಾಜಕೀಯ ಪಕ್ಷಗಳಿಂದ ಇದಕ್ಕೆ ಬೇಕಾದ ಅರ್ಥಪೂರ್ಣ ಸಂವಾದದ ನಿರೀಕ್ಷೆ ಇಟ್ಟುಕೊಳ್ಳುವುದು ಹೇಗೆ?

ಚೋದ್ಯದ ಸಂಗತಿಯೆಂದರೆ ಈ ಕಾನೂನಿನ ಹಿನ್ನೆಲೆ ಬ್ರಿಟಿಶ್ ಚಕ್ರಾಧಿಪತ್ಯದ ಅಡಿಯಲ್ಲಿದ್ದ ಹೆಚ್ಚಿನ ವಸಾಹತುಗಳಲ್ಲಿ ಸೆಕ್ಷನ್ 377ನೇ ವಿಧಿಯ ಕಾನೂನು ಇದೆ. ಮತ್ತು ಈ ಕಾನೂನಿನ ಮೂಲ ಪ್ರೇರಣೆ ಬೈಬಲ್ಲಿನ ಬೋಧನೆ ಎನ್ನುವುದು ಹಲವು ಜನರಿಗೆ ತಿಳಿಯದ ಸಂಗತಿ.

ವಾಸ್ತವವಾಗಿ, ಇಂತಹ ಅಪರೂಪದ, ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಪುರಾತನ ಭಾರತೀಯ ಸಮಾಜ ಹೆಚ್ಚು ಔದಾರ್ಯದಿಂದ ನಡೆದುಕೊಂಡಿದೆ. ಭಾರತೀಯ ಚಿಂತನೆಯಲ್ಲಿ ಕಾಮಕ್ಕೆ ಇರುವ ಅಪ್ರಾಶಸ್ತ್ಯ ಹಾಗೂ ಧರ್ಮ, ಅರ್ಥ ಮತ್ತು ಮೋಕ್ಷಗಳೂ ಕಾಮದಷ್ಟೇ ಮುಖ್ಯವಾಗಿರುವುದರಿಂದ ಯಥಾಪ್ರಕಾರ ಈ ಪ್ರವೃತ್ತಿ ಹಾಗು ಅದರ ಕುರಿತಾದ ಔದಾರ್ಯ ಎರಡೂ ಗೌಣವಾಗಿವೆ.

'ಗೇ' ಪ್ರವೃತ್ತಿ 'ಜೆನೆಟಿಕ್' ಆಗಿರುವ ಸಾಧ್ಯತೆಗಳಿದ್ದರೂ ಸಂಪೂರ್ಣವಾಗಿ ವಂಶವಾಹಿಗಳನ್ನೇ ಇದಕ್ಕೆ ದೂರುವುದು ಕಷ್ಟದ ವಿಷಯ. ಏಕೆಂದರೆ ವಿರುದ್ಧ ಲಿಂಗದಲ್ಲಿ ಆಸಕ್ತಿ ಇರುವ ತಂದೆ-ತಾಯಿಗಳಿಗೆ ಸಲಿಂಗಾಸಕ್ತಿಯಿರುವ ಸಂತಾನ ಹುಟ್ಟಬಹುದು. ಆದ್ದರಿಂದ ಸಲಿಂಗಾಸಕ್ತಿ ಬೆಳೆಯುವುದು ಒಂದು 'ಆಯ್ಕೆ'ಯಿಂದಾಗಿ ಅಲ್ಲ! ಜನರು ಇದನ್ನು ತಿಳಿದರೆ 'ಗೇ' ಜನಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು ದೂರವಾಗುತ್ತವೆ.

English summary
Homosexuality and mentality of people. Supreme Court of India has ruled that section 377 of Indian Penal Code, which deals with unnatural sex, in India is against law. People have been commenting on this sensitive subject without knowing the subject in depth. An article by Bharat N Sastry, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X