ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಸಿಹಿ, ಹೋಳಿಗೆಯ ಸವಿಯೊಂದಿಗೆ ಸಿಂಗಪುರದಲ್ಲಿ ಉಲಿದ 'ಇಂಚರ'!

By ಮಾಲಾ ಶಿವಕುಮಾರ್, ಸಿಂಗಪುರ
|
Google Oneindia Kannada News

"ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ..." ಜ್ಞಾನಪೀಠ ಪ್ರಶಸ್ತಿ ವಿಜೇತ, ನಮ್ಮ ನವೋದಯ ಕವಿ ದ.ರಾ. ಬೇಂದ್ರೆಯವರ ಪ್ರಖ್ಯಾತ ಕವಿತೆಯ ಸಾಲುಗಳಂತೆ, ಪ್ರತಿ ವರ್ಷವು ಕಾಲಕ್ಕೆ ಅನುಗುಣವಾಗಿ ವಸಂತ ಋತು ಪ್ರಕೃತಿಯ ನಿಯಮವನ್ನು ಪಾಲಿಸಿ ಎಲ್ಲರ ಬಾಳಲ್ಲಿ ನವ ಚೇತನ ಮೂಡಿಸುತ್ತದೆ. ಕನ್ನಡ ಸಂಘ ಸಿಂಗಪುರದ ನೂತನ ಕಾರ್ಯಕಾರಿ ಸಮಿತಿಯು [2019-2021] ಚಂದ್ರಮಾನ ಹೊಸ ವರ್ಷದ ಆಗಮನಕ್ಕೆ ಮಧುರ ಗಾನ ಹಾಗು ಅಣಕ ಹಾಸ್ಯವನ್ನೊಳಗೊಂಡ "ಇಂಚರ" ಕಾರ್ಯಕ್ರಮವನ್ನು ಮೇ 26ರಂದು ಸಂಯೋಜಿಸಿತ್ತು.

ಸಿಂಗಪುರದ ಸ್ಪ್ರಿಂಗ್ ಸಭಾಂಗಣದ ಆವರಣದಲ್ಲಿ ಸಂಜೆ 4.30ರ ಹೊತ್ತಿಗೆ, ಸಿಂಗನ್ನಡಿಗರ ಜನಸಮೂಹ ನೆರೆಯಲು ಶುರುವಾಯಿತು. ಪ್ರವೇಶದ ಮಾರ್ಗದಲ್ಲಿ ಆದರಿಸುವ "ಸ್ವಾಗತ್"ರವರ ಟೇಬಲ್ ಮೇಲೆ ಜೋಡಿಸಿದ ತಿಂಡಿ, ತಿನಿಸು, ಚಹಾ-ಕಾಫಿ ಆಕರ್ಷಕವಾಗಿತ್ತು. ಕನ್ನಡ ಸಂಘ ಕಾರ್ಯಕಾರಿ ಸಮಿತಿಯವರು ಸದಸ್ಯರನ್ನು ಆತ್ಮೀಯತೆಯಿಂದ ಸ್ವಾಗತಿಸಲು, ಮಾವಿನ ಎಲೆ-ಹೂವಿನಿಂದ ರಚಿಸಲ್ಪಟ್ಟ ರಂಗೋಲಿಯು ಯುಗಾದಿಯ ಪರಿಸರವನ್ನು ಎಲ್ಲೆಡೆ ಪಸರಿಸುತ್ತಿತ್ತು.

ಸಿಂಗಪುರದಲ್ಲಿ ಮೇ 26ರಂದು ಕನ್ನಡದ ಕೋಗಿಲೆಗಳ ಇಂಚರ ಸಿಂಗಪುರದಲ್ಲಿ ಮೇ 26ರಂದು ಕನ್ನಡದ ಕೋಗಿಲೆಗಳ ಇಂಚರ

ರಿಜಿಸ್ಟ್ರೇಷನ್ ಡೆಸ್ಕ್ ನ ಸ್ವಯಂ ಸೇವಕರು ತಡವಿಲ್ಲದೆ ಪ್ರೇಕ್ಷಕರ ಪ್ರವೇಶ ಚೀಟಿಯಲ್ಲಿರುವ ಹೆಸರುಗಳನ್ನು ಗುರುತಿಸಿ, "ಸಿಂಗಾರ 2019" ಪತ್ರಿಕೆಯನ್ನು ವಿತರಿಸಿದರು. ಇಂಚರ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರಾದ "ಡ್ಯೂಕ್ಸ್ ಲೆಜೆಂಡ್" ತಮ್ಮ ಯೋಜನೆಗಳ ಬಗ್ಗೆ ಮಾಹಿತಿ ನೀಡಿ "ಲಕ್ಕಿ ಡ್ರಾ" ಕೂಪನ್ಗಳನ್ನು ಭರ್ತಿ ಮಾಡಿಸಿದರು. ದ್ವಾರಾಧಿಕಾರಿಗಳ ಹಸನ್ಮುಖ ಆತಿಥ್ಯವು ವಿಶಾಲವಾದ ಸಭಾಂಗಣದೊಳಗೆ ಕರೆದೊಯ್ಯಿತು.

Inchara - musical evening enthralls Kannadigas in Singapore

ಕೆಂಪು ಹಳದಿ ವಸ್ತ್ರಗಳಿಂದ ಸಿಂಗರಿಸಿದ ವೇದಿಕೆಯ ಪರದೆ ಅಂಚುಗಳು, ವೇದಿಕೆಯ ಸುತ್ತಲು ಸುಂದರವಾಗಿ ಅಲಂಕೃತವಾದ ವರ್ಣಮಯ ಹೂವು, ಹಕ್ಕಿ, ಚಿಟ್ಟೆ, ಮಾವಿನ ಮರದ ಪರಿಕರಗಳು "ಹೊಂಗೆ ಹೂವ ತೊಂಗಳಲಿ, ಭೃಂಗದ ಸಂಗೀತ ಕೇಳಿ ಮತ್ತೆ ಕೇಳ ಬರುತಿದೆ.... ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ......" ಸಾಲುಗಳನ್ನು ಮೆಲಕು ಹಾಕುವಂತೆ ಮಾಡಿತು. ಬಣ್ಣ ಬಣ್ಣವಾಗಿ ಥಳ ಥಳಿಸುತ್ತಿದ್ದ ವೇದಿಕೆಯ ಬೆಳಕು ಮತ್ತು ತಂಪಾದ ವಾತಾವರಣದ ಹಿನ್ನಲೆಯಲ್ಲಿ ಕೇಳಿಬರುತ್ತಿದ್ದ ಇಂಪಾದ ಸಂಗೀತ, ಕಾರ್ಯಕ್ರಮ ಪ್ರಾರಂಭವಾಗಲು ಎದುರುನೋಡುವಂತೆ ಮಾಡಿತು.

ಮಜಾ ಟಾಕೀಸ್ ಪ್ರಖ್ಯಾತಿಯ 'ವರಲಕ್ಷ್ಮಿ', ಕನ್ನಡ ದೂರದರ್ಶನ ಚಂದನ ವಾಹಿನಿಯ ನಿರೂಪಕಿ, ಕನ್ನಡ ಕಿರುತೆರೆ ನಟಿ, ತಮ್ಮ ಅನವದ್ಯ ವಾಕ್ಸರಣಿಗೆ ಪ್ರಸಿದ್ಧರಾದ ಅಪರ್ಣಾ ವಸ್ತಾರೆಯವರ ನಿರೂಪಣೆಯಿಂದ ಸಂಗೀತ ಸಂಜೆ ಆರಂಭವಾಯಿತು. ಜೋಗಿ ಗಾನದ ಪ್ರಖ್ಯಾತಿಯ ಗಾಯಕಿ ಸುನಿತಾ, ಕನ್ನಡ ಕೋಗಿಲೆ ಕಾರ್ಯಕ್ರಮದ ಫೈನಲಿಸ್ಟ್ ಗಣೇಶ್ ಕಾರಂತ್, ಸೆಮಿ-ಫೈನಲಿಸ್ಟ್ ಸುರಕ್ಷಾ ದಾಸ್ "ಯುಗ ಯುಗಾದಿ ಕಳೆದರು" ಕವಿತೆಯಿಂದ ಗಾನ ಸಂಜೆಯ ನಾಂದಿ ಹಾಡಿದರು.

ಸಿಂಗಪುರದಲ್ಲಿ ನಾದತರಂಗಗಳು ಸೃಷ್ಟಿಸಿದ ಅನಂತ ಲೋಕ ಸಿಂಗಪುರದಲ್ಲಿ ನಾದತರಂಗಗಳು ಸೃಷ್ಟಿಸಿದ ಅನಂತ ಲೋಕ

ಸಂಜೆಯ ಸಂಗೀತಕ್ಕೆ ಕೀಬೋರ್ಡ್ ವಾದನದಲ್ಲಿ ಉಮಾಶಂಕರ್ ಹಾಗು ರಿಧಂ ಪ್ಯಾಡ್ ನಲ್ಲಿ ಶ್ರೀನಿವಾಸ್ ವಾದ್ಯವೃಂದ ನೆರವು ನೀಡಿದರು. ಕನ್ನಡ ಚಲನಚಿತ್ರದ ರೆಟ್ರೋ ಕಾಲದ ಸುಸ್ವರ ಮಧುರ ಹಾಡುಗಳು "ನೀ ಬಂದು ನಿಂತಾಗ, ತಮ್ ನಮ್ ಎನ್ನುತ, ಜೀವ ವೀಣೆ ಮಿಡಿದು, ನಗುವ ನಯನದಿಂದ, ರೆಕ್ಕೆ ಇದ್ದರೆ ಸಾಕೆ, ಜೊತೆ ಜೊತೆಯಲಿ, ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಿ, ನಗಬೇಕು ನಾವು, ಮೊದಲು ಮಾತಾಡಲು, ನನ್ನ ನಿನ್ನ ಪ್ರೇಮ ಗೀತೆ" ಪ್ರೇಕ್ಷಕರನ್ನು ಸುನಾದ ನಂದನವನದ ವಿಹಾರದಲ್ಲಿ ಸಮ್ಮೋಹನಗೊಳಿಸಿತು.

"ಎಲ್ಲೊ ಜೋಗಪ್ಪ ನಿನ್ನರಮನೆ"ಯಿಂದ ರೋಮಾಂಚನಗೊಳಿಸಿ "ಜೋಕೆ ನಾನು ಬಳ್ಳಿಯ ಮಿಂಚು" ಎಂದು ಎಲ್ಲರನ್ನು ಸ್ವಲ್ಪ ಕುಲುಕಿಸಿದ ಸುನಿತಾ ಅವರ ಹಾಡುಗಳಿಗೆ ಚಪ್ಪಾಳೆಯ ಸುರಿಮಳೆಯಾದರೆ, ಅವರಿಂದ ನುರಿತ ಶಿಷ್ಯ ಗಣೇಶ್ ಕಾರಂತ್ ಹಾಡಿದ 'ಬೆಳಗೆದ್ದು ಯಾರ ಮುಖವ' ಹಾಗು 'ಸೀರೇಲಿ ಹುಡುಗೀರ ನೋಡಲೇ ಬಾರದು' ಹಾಡುಗಳು ಮತ್ತು ಶಿಷ್ಯೆ ಸುರಕ್ಷಾ ದಾಸ್ ಹಾಡಿದ ರೆಕ್ಕೆ ಇದ್ದರೆ ಸಾಕೆ ಹಾಡು, ಸುನಿತಾ ಅವರ ಉತ್ತಮ ಗಾನ ತರಬೇತಿಗೆ ಪುರಾವೆಯಾಗಿತ್ತು.

Inchara - musical evening enthralls Kannadigas in Singapore

ಸಂಗೀತ ಸಮೂಹದಲ್ಲಿ ತಮ್ಮ ಸಿಹಿಯಾದ ಸಂವಹನೆಯಿಂದ ಕಾರ್ಯಕ್ರಮವನ್ನು ನಿರೂಪಿಸುತ್ತ ಅಪರ್ಣಾರವರು "ಇಂಚರ" ಸಂಜೆಯ ಹಾಸ್ಯ ಮುಖವನ್ನು ಪರಿಚಯಿಸಿದರು. ಮಿಮಿಕ್ರಿ ಗೋಪಿ ಎಂದು ಜನಪ್ರಿಯರಾದ ಗೋಪಾಲ್.ಎಚ್ ಕನ್ನಡ ರಂಗಭೂಮಿ, ದೂರದರ್ಶನ ಮತ್ತು ಚಲನಚಿತ್ರ ನಟ. M.Sc ಮತ್ತು M.Ed ಶೈಕ್ಷಣಿಕ ಪದವಿಗಳನ್ನು ಹೊಂದಿರುವ ಅವರು ಅಭಿನಯದಲ್ಲಿ ತೊಡಗಿಸಿಕೊಳ್ಳುವ ಮುನ್ನ 20 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಚಿತ್ರರಂಗದ ಜನಪ್ರಿಯ ನಟ, ಖಳ ನಟ ಹಾಗು ಹಾಸ್ಯ ನಟರಾದ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್, ದಿನೇಶ್, ಮುಸರಿ ಕೃಷ್ಣಮೂರ್ತಿ, ಎನ್ ಎಸ್ ರಾವ್, ದೊಡ್ಡಣ್ಣ ಹೀಗೆ ಹೆಸರಿಸಲು ಕೆಲವರನ್ನು ಅಣಕದಿಂದ ಅನುಕರಿಸಿ ಎಲ್ಲರನ್ನು ಹೊಟ್ಟೆ ಒಡೆಯುವಷ್ಟು ನಗಿಸಿದ ಅವರಿಗೆ ಚಪ್ಪಾಳೆಯ ಸುರಿಮಳೆ ಧಾರಾಕಾರವಾಗಿ ಸುರಿಯಿತು. ಅವರ ಪ್ರತಿಭೆಯು ನಟರಿಗೆ ಸೀಮಿತವಾಗದೆ ರಾಜಕೀಯ ನಾಯಕರನ್ನು ಕುಚೋದ್ಯದ ಪರಿಹಾಸ್ಯಕ್ಕೆ ಒಳಪಡಿಸಿ ಪ್ರೇಕ್ಷಕರನ್ನು ಕೇಕೆ ಹಾಕಿ ನಗುವಂತೆ ಮಾಡಿ ಹಾಸ್ಯ ಸಂಜೆಗೆ ಥಳಕು ತುಂಬಿದರು.

ಸಿಂಗಪುರದಲ್ಲಿ ದಾಸಶ್ರೇಷ್ಠ ಪುರಂದರ ನಮನ -2018 ಸಿಂಗಪುರದಲ್ಲಿ ದಾಸಶ್ರೇಷ್ಠ ಪುರಂದರ ನಮನ -2018

ಕನ್ನಡ ಸಂಘ ಸಿಂಗಪುರದ ಅಧ್ಯಕ್ಷೆ ರಶ್ಮಿ ಉದಯಕುಮಾರ್ ಯುಗಾದಿಯ ಶುಭಾಶಯಗಳನ್ನು ಕೋರುತ್ತ, ತಮ್ಮ ಹೊಸ ಕಾರ್ಯಕಾರಿ ಸಮಿತಿ ಅವಧಿಯ ಸಂಕಲ್ಪ "ಭವಿಷ್ಯದ ಬಾಗಿಲು ತೆರೆಯುವುದು" ಎಂದು ಪರಿಚಯಿಸಿದರು. ಸಂಘದ ಕಾರ್ಯಯೋಜನೆಯ "ಮುಂದಿನ ಪೀಳಿಗೆಯನ್ನು ಬೆಳೆಸಿ ಪ್ರೋತ್ಸಾಹಿಸುವ" ಉದ್ದೇಶವನ್ನು, ತಮ್ಮ ಮೊದಲನೇ ಕಾರ್ಯಕ್ರಮ "ಇಂಚರ" ದಲ್ಲೇ ಕಾರ್ಯರೂಪಕ್ಕೆ ತಂದರು.

Inchara - musical evening enthralls Kannadigas in Singapore

ಸಿಂಗನ್ನಡಿಗ ಪುಟಾಣಿಗಳು ಕನ್ನಡ ಚಿತ್ರರಂಗದ ರೆಟ್ರೋ ಕಾಲದ ನಟ-ನಟಿಯರ ವೇಷಭೂಷಣಗಳನ್ನು ಧರಿಸಿ ಗಣೇಶ್ ಕಾರಂತ್ ಹಾಡಿದ "ಸಂತೋಷಕ್ಕೆ" ಹಾಡಿಗೆ ವೇದಿಕೆಯ ಮೇಲೆ ರಾಂಪ್ ವಾಕ್ ಮಾಡಿದ ಸೊಗಸು, ಮಕ್ಕಳ ಸಾಂಸ್ಕೃತಿಕ ಆಸಕ್ತಿ ಹಾಗು ಆತ್ಮವಿಶ್ವಾಸವನ್ನು ಪ್ರಕಾಶಿಸುತಿತ್ತು. ಕೇವಲ ಒಂದು ದಿನದಲ್ಲಿ ಪುಟಾಣಿಗಳನ್ನು ತಯಾರಿ ಮಾಡಿದ ಶ್ರುತಿ, ಐಶ್ವರ್ಯ ಹಾಗು ಪೋಷಕರ ಶ್ರಮ ಮೆಚ್ಚತಕ್ಕದು. ಪಾತ್ರ ವಹಿಸಿದ ಮಕ್ಕಳನ್ನು ವೇದಿಕೆಯ ಮೇಲೆ ಅಪರ್ಣಾರವರು ಪ್ರತ್ಯೇಕವಾಗಿ ಪರಿಚಯಿಸಿ ಅವರ ತಂಡದವರಿಂದ ಮಕ್ಕಳಿಗೆ ಕೊಡಿಸಿದ ಕಿರು ಕಾಣಿಕೆ, ಪ್ರೋತ್ಸಾಹ ಹಾಗು ಮೆಚ್ಚುಗೆಯ ಸಂಕೇತವಾಗಿತ್ತು.

ಸಂಘದ ಕಾರ್ಯದರ್ಶಿ ಪವನ್ ಡಿ ಜೋಶಿಯವರ ಅಭಿನಂದನಾ ಭಾಷಣದ ಹಿನ್ನಲೆಯಲ್ಲಿ, ಕನ್ನಡ ಸಂಘ ಸಿಂಗಪುರದ ಪರವಾಗಿ ಅಧ್ಯಕ್ಷೆ ರಶ್ಮಿ ಉದಯಕುಮಾರ್ ಹಾಗು ಉಪಾಧ್ಯಕ್ಷ ಕೆ ಜೆ ಶ್ರೀನಿವಾಸ್ ಕಲಾವಿದರಿಗೆ ಮತ್ತು ಪ್ರಯೋಜಕರಿಗೆ ನೆನಪಿನ ಕಾಣಿಕೆಗಳನ್ನು ನೀಡಿದರು. ಕಾರ್ಯಕಾರಿ ಸಮಿತಿಯ ಸದಸ್ಯರಿಗೆ, ಸ್ವಯಂ ಸೇವಕರಿಗೆ, ಸಭಾಂಗಣದ ಆಡಳಿತಕ್ಕೆ, ಧ್ವನಿ ನಿರ್ವಹಿಸಿದ ಅಲಿ ಮತ್ತು ಸಿಬ್ಬಂದಿ ವರ್ಗಕ್ಕೆ, ಊಟ ತಿಂಡಿಯ ವ್ಯವಸ್ಥೆಯನ್ನು ಮಾಡಿದ 'ಸ್ವಾಗತ್', ನೀರಿನ ಬಾಟೆಲ್ ಆಯೋಜಿಸಿದ GIIS, ಛಾಯಾಗ್ರಹಣದ ಬೈಟು ಸ್ಟುಡಿಯೊಸ್, ಆಕಾಂಕ್ಷ ಸಿನಿ ಕಂಬೈನ್ಸ್, ಸಂಘದ ಎಲ್ಲ 'ಸಪೋರ್ಟಿನ್ಗ್ ಪಾರ್ಟನರ್ಸ್'ಗೆ ಹಾಗು ಪ್ರೇಕ್ಷಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಇಂಚರ ಕಾರ್ಯಕ್ರಮದ ಪ್ರಾಯೋಜಕರಾದ "ಡ್ಯೂಕ್ಸ್ ಲೆಜೆಂಡ್" ಆಯೋಜಿಸಿದ್ದ 'ಲಕ್ಕಿ ಡ್ರಾ' ಬಹುಮಾನಿತರಿಗೆ "ಗಿಫ್ಟ್ ಹಾಂಪರ್" ಕಾಣಿಕೆ ನೀಡಲಾಯಿತು.

ಸಂಪೂರ್ಣ ಕಾರ್ಯಕ್ರಮವನ್ನು ಶಬ್ದ ಸಂಪತ್ತಿನ ಸುಮಧುರ ಶೈಲಿಯಲ್ಲಿ ಪ್ರೇಕ್ಷಕರೊಟ್ಟಿಗೆ ಸೆರೆಹಿಡಿದಿಟ್ಟ ಅಪರ್ಣಾರವರು ಹಳೆಯ ಹೊನ್ನಿನ ಇಂಪಾದ ಗೀತೆಗಳನ್ನು ಪ್ರಸ್ತುತ ಪಡಿಸಲು ಕನ್ನಡ ಸಂಘ ಸಿಂಗಾಪುರವು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟಿದಕ್ಕೆ ಹಾಗು ಕಲಾವಿದರನ್ನು ಆದರದಿಂದ ಸತ್ಕರಿಸಿದಕ್ಕೆ ತಮ್ಮ ಮನದಾಳದ ಮಾತುಗಳಿಂದ ವಿನಮ್ರ ಪ್ರಣಾಮಗಳನ್ನು ಅರ್ಪಿಸಿದರು.

Inchara - musical evening enthralls Kannadigas in Singapore

ಕಾರ್ಯಕ್ರಮದ ಅಂತಿಮ ಹಂತದಲ್ಲಿ ಕನ್ನಡ ಗುಂಗನ್ನು ಹೊಮ್ಮಿಸುತ್ತ "ಕನ್ನಡ ಮಣ್ಣನು ಮರಿಬೇಡ" ಕೊಂಚ ತುಂಟತನಕ್ಕೆ "ಸುತ್ತ ಮುತ್ತಲು ಸಂಜೆಗತ್ತಲು" "ರಸಿಕ ರಸಿಕ", ಯುವಕರಿಗೆ "ಟುವ್ವಿ ಟುವ್ವಿ ಎಂದು ಹಾಡುವ" "ಕಾರ್ ಕಾರ್ ಎಲ್ನೋಡಿ ಕಾರ್" ಕನ್ನಡಿಗರ ವೈವಿಧ್ಯಮಯಕ್ಕೆ "ನೋಡಿ ಸ್ವಾಮಿ ನಾವಿರೋದೇ ಹೀಗೆ" ಹಾಡುಗಳ ತುಣುಕು ಮಿಶ್ರಣ ಮಾಡಿ ಸಕ್ಕತ್ತ್ ಟಚ್ಚ್ ಕೊಟ್ಟು ಮಂಗಳಕ್ಕೆ "ಕುಲದಲ್ಲಿ ಕೀಳ್ ಯಾವುದೋ ಹುಚ್ಚಪ್ಪ" ಹಾಡಲು, ಗಾಯಕರಿಗೆ ಸ್ಪಂದಿಸಿ ಮೈಮರೆತು ಕುಣಿದ ಸಿಂಗನ್ನಡಿಗರ ಹುರುಪಿಗೆ ದೊಡ್ಡ ಸಲಾಮ್!

ಇಂಪಾದ ಗೀತೆ ಮತ್ತು ಹಾಸ್ಯ ಪ್ರದರ್ಶನ ಕೂಡಿದ "ಇಂಚರ" ಸಂಜೆಯನ್ನು ಸಿಹಿ ಹೋಳಿಗೆ ಜೊತೆ ಸವಿದು, ಕನ್ನಡ ಸಂಘ ಸಿಂಗಪುರ ಕಾರ್ಯಕಾರಿ ಸಮಿತಿಯ ಯಶಸ್ಸಿನ ಮೊದಲ ಮೆಟ್ಟಿಲಿಗೆ ಶುಭಾಶಯಗಳನ್ನು ಕೋರುತ್ತ ಮುಂಬರುವ ಕಾರ್ಯಕ್ರಮಗಳನ್ನು ಪ್ರತೀಕ್ಷಿಸುತ್ತೇನೆ!

English summary
Kannada Sangha Singapore celebrated Inchara - musical evening organized by new officer bearers of the association. Actress Aparna, Singer Sunitha, Ganesh Karanth, Mimicry Gopi and others entralled the audience in Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X