ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಡುಗುವ ಚಳಿಯನ್ನೂ ಬೆಚ್ಚಗಾಗಿಸಿದ ಹೇಮಂತ ಗಾನ

By ನಾಗರಾಜ ಎಂ, ಕನೆಕ್ಟಿಕಟ್
|
Google Oneindia Kannada News

ಎತ್ತ ನೋಡಿದರೂ ಬಿಳಿ ಹಿಮದ ಗುಡ್ಡೆಗಳು, ಮೈ ಕೊರೆಯುತ್ತಿರುವ ಚಳಿಗಾಳಿ, ಬಿಳಿ ಹಿಮದ ಮೇಲೆ ಬಿದ್ದು ಕಣ್ಣು ಕೋರೈಸುತ್ತಿರುವ ಸೂರ್ಯನ ಕಿರಣಗಳು... ಎಲೆಗಳ ಹೊದಿಕೆಯಿಲ್ಲದೆ ಚಳಿಗೆ ಮೈಯೊಡ್ಡಿ ನಿಂತು ನಡುಗುತ್ತಿರುವ ಗಿಡ-ಮರಗಳು.. ಅಬ್ಬಾ.. ಯಾವಾಗ ಮುಗಿಯುತ್ತೋ ಈ ಚಳಿಗಾಲ ಎನ್ನುತ್ತಾ ದಪ್ಪನೆಯ ಕೋಟು ಏರಿಸಿಕೊಂಡು ಸಂಸಾರದೊಂದಿಗೆ ಕಾರ್ ನಲ್ಲಿ ಹೋಗ್ತಾ ರೇಡಿಯೋ ಬಟನ್ ಒತ್ತಿದಾಗ ಕೇಳಿ ಬರುತ್ತಿರೋ ಅಬ್ಬರದ PITBULLನ ವೆಸ್ಟೆರ್ನ್ RAP ಮ್ಯೂಸಿಕ್... ಅದಕ್ಕೆ ಸರಿಯಾಗಿ ಹಿಂದೆ ಕೂತು ತಲೆ ತೂಗುತ್ತಿರೋ ಮಗರಾಯ...

ಅಂತು ಇಂತೂ ಕಾರ್ ಪಾರ್ಕ್ ಮಾಡಿ ಒಳಗೆ ಹೋದ ತಕ್ಷಣವೇ...ಹಾ ಹಾ .. "ಎಲ್ಲಿರುವೇ ಮನವ ಕಾಡುವ ರೂಪಸಿಯೇ? ಬಯಕೆಯಾ, ಬಳ್ಳಿಯಾ ನಗುವ ಹೂವಾದ ಪ್ರೇಯಸಿ ನೀನು.. ಎಲ್ಲಿರುವೇ ನಲ್ಲೆ , ಎಲ್ಲಿರುವೇ?" ಎಂಬ ಧ್ವನಿ ಸುರಳಿ ಕೇಳಿ... ಯಾರಪ್ಪ ಇದು ...ಈ ದೂರದ ಅಮೆರಿಕಾದಲ್ಲಿ ಅದರಲ್ಲೂ ಈ ನಡುಗುವ ಚಳಿಯಲ್ಲಿ, ವಿರಹ ವೇದನೆಯಲ್ಲಿ ಹಾಡುತ್ತಾ ತನ್ನ ಪ್ರೇಯಸಿಯನ್ನು ಹುಡುಕುತ್ತಾ ಇರೋದು? ಅಂತ ಯೋಚಿಸುತ್ತಾ ನೋಡಿದರೆ.. ಈ ಹಾಡು ಕೇಳಿ ಬಂದಿದ್ದು ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟ ಆಯೋಜಿಸಿದ್ದ "ಹೇಮಂತ ಗಾನ" ಸಂಗೀತ ಸಂಜೆಯಲ್ಲಿ!

ಜನವರಿ 18, ಶನಿವಾರದಂದು ಕನೆಕ್ಟಿಕಟ್ನಲ್ಲಿರುವ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದ ಆಡಿಟೋರಿಯಮ್ನಲ್ಲಿ ನಡೆದ ಈ ಗಾನ ಸಂಜೆಗೆ ನೂರಾರು ಹೊರನಾಡ ಕನ್ನಡಿಗರು ತಮ್ಮ ಪರಿವಾರ ಸಮೇತ ತೀವ್ರ ಚಳಿಯಲ್ಲೂ (0 ಡಿಗ್ರಿ ಸೆಲ್ಸಿಯಸ್) ಉತ್ಸಾಹದಿಂದ ಭಾಗವಹಿಸಿದ್ದು ನೋಡಿದರೆ ಕನ್ನಡದ ಅಭಿಮಾನ ಎದ್ದು ಕಾಣುತ್ತಿತ್ತು.

Hoysala Kannada Koota celebrates Hemanta Gana

ಹೊಯ್ಸಳ ಕನ್ನಡ ಕೂಟದ ಅಧ್ಯಕ್ಷ ದಿನೇಶ್ ಹರ್ಯಾಡಿ ಹೇಮಂತ ಗಾನದ ಬಗ್ಗೆ ವಿವರಣೆ ಕೊಡುತ್ತ ಎಲ್ಲರನ್ನು ಸ್ವಾಗತಿಸಿದ ಮೇಲೆ.. ಪುಟಾಣಿ ಆದಿತ್ಯ ಹಾಡಿದ "ಶ್ರೀ ಅಯ್ಯಪ್ಪ ಸ್ವಾಮಿ ಸ್ತುತಿ"ಯೊಂದಿಗೆ ಈ ಗಾನ ಸಂಜೆ ಸರಿಯಾಗಿ 3 ಗಂಟೆಗೆ ಪ್ರಾರಂಭವಾಯಿತು. ನಂತರ ರಘು ಸೋಸಲೆ ಮತ್ತು ಸಂಗಡಿಗರು ಹಾಡಿದ ಕನ್ನಡ ನಾಡಗೀತೆ "ಜಯ ಭಾರತ ಜನನಿಯ ತನುಜಾತೆ! ಜಯಹೇ ಕರ್ನಾಟಕ ಮಾತೆ!" ಕೇಳಿಬಂದ ಕೂಡಲೇ ಸಭಿಕರೆಲ್ಲ ಎದ್ದು ನಿಂತು ತಾವೂ ಹಾಡತೊಡಗಿದರು.

ಗುರುರಾಜ್ "ನಿನ್ನಿಂದಲೇ ನಿನ್ನಿಂದಲೇ" ಎಂದು ರಾಗವಾಗಿ ಹಾಡಿದ ಮೇಲೆ ಪ್ರದೀಪ್ ಕುಮಾರ್ ದ.ರಾ. ಬೇಂದ್ರೆ ರಚಿತ ಒಂದು ಭಾವಗೀತೆ ಹಾಡಿದರು. ಕುಮಾರಿ ವರ್ಷಾ ಕುಲಕರ್ಣಿ ಹಾಡಿದ "ಆಚೆ ಮನೆ ಸುಬ್ಬಮ್ಮ"ನ ಉಪವಾಸ ವ್ರತದ ಭಾವಗೀತೆ ಹಾಡಿ ಎಲ್ಲರ ಮನ ಮೆಚ್ಚಿಸಿದರೆ, ವಿಜಯ್ ಮತ್ತು ಸೀಮಾ ಕುಲಕರ್ಣಿ "ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ" ಅಂತ ಹಾಡಿದಾಗ ನೆರೆದಿದ್ದ ಹೆಂಗಳೆಯರಲ್ಲಿ ಕೆಲವರಿಗಾದರೂ ದೂರದಲ್ಲಿರುವ ತಮ್ಮ ತಮ್ಮ ತೌರಿನ ನೆನಪು ಮಾಡಿದ್ದರಲ್ಲಿ ಅಚ್ಚರಿಯೇನಿಲ್ಲ.

ಅನಿಲ್ ಹುಲಿಕಲ್ "ಜೇನಿನ ಹೊಳೆಯೋ, ಹಾಲಿನ ಮಳೆಯೋ" ಅಂತ ಡಾ|ರಾಜ್ ಹಾಡು ಹಾಡಿದರೆ, ಸೂರಜ್ "ಸಂತೋಷಕೆ ಹಾಡು ನೀ ಸಂತೋಷಕೆ" ಅಂತ ಭರ್ಜರಿಯಾಗಿ ಹಾಡಿ ಕರಾಟೆ ಕಿಂಗ್ ಶಂಕರ್ ನಾಗ್ ಅವರ ನೆನಪಾಗುವಂತೆ ಮಾಡಿದರು. ಅಂಜು-ಸೋಮನಾಥ್ "ಈ ಸಂಭಾಷಣೆ", ವಿಶ್ವನಾಥ್ ಗೌಡ "ಆಸೆಯ ಭಾವ, ಒಲವಿನ ಜೀವ", ಹರ್ಷವರ್ಧನ್ "ಎಲ್ಲೆಲ್ಲೊ ಓಡುವ ಮನಸೇ", ರಘು ಸೋಸಲೆ "ನಲಿವ ಗುಲಾಬಿ ಹೂವೆ" ಅಂತ ಶುಶ್ರಾವ್ಯವಾಗಿ ಹಾಡಿದರೆ ಕು.ಸಚಿನ್ ಗೌಡ "ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೊನೆ, ಸಿಂಹ ಸಿಂಹ" ಅಂತ ಭರ್ಜರಿಯಾಗಿ ಹಾಡಿ ಸಾಹಸಸಿಂಹ ಡಾ|ವಿಷ್ಣುವರ್ಧನ್ ನೆನಪಾಗುವಂತೆ ಮಾಡಿದನು.

"ಏನ್ ಮಾಡ್ಲಿ ನಮ್ಮ ಮಿಸ್ಸು ಬಹಳ ಸ್ಟ್ರಿಕ್ಟು" ಅಂತಾ ಪುಟಾಣಿ ಅಖಿಲ್ ಹಾಡಿ ಕಂಪ್ಲೈಂಟ್ ಮಾಡಿದರೆ, ಸುಂದರೇಶ್ "ಬೆಳ್ಳಿ ಮೂಡಿತೋ, ಕೋಳಿ ಕೂಗಿತೋ", ಕು.ಇಂಚರ "ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ", ಕು.ರಿತ್ವಿಕ್ "ಜಯತು ಜಯ ವಿಟ್ಟಲ" , ವಿಜಯ "ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆ ಕೊನೆಯು ಎಲ್ಲಿದೆ", ಸ್ವರ್ಣ-ಕೃಷ್ಣ "ಸಂಕ್ರಾಂತಿ ಬಂತು ರತ್ತೋ ರತ್ತೋ", ಪ್ರಿಯಾ-ದಿನೇಶ್ "ನೀ ಬಂದು ನಿಂತಾಗ", ಶಶಿ ತಿರುಮಲೆ "ಎಲ್ಲಿರುವೇ ಮನವ ಕಾಡುವ ರೂಪಸಿಯೇ" , ಶ್ರೀಲೇಖ "ಸುಮ್ಮನೆ ಸುಮ್ಮನೆ" ಅಂತ ಅರ್ಥಗರ್ಭಿತವಾಗಿ ಭಾವಪೂರ್ಣವಾಗಿ ಹಾಡಿ ಮನರಂಜಿಸಿದರು.

ಹೀಗೆ ಸಾಲು ಸಾಲಾಗಿ ಹಳೆಯ ಹಾಗು ಹೊಸ ಕನ್ನಡಗೀತೆಗಳ ಜೊತೆಗೆ ಇನ್ನೂ ಹಲವರು ದೇವರ ಶ್ಲೋಕಗಳನ್ನು, ಭಾವಗೀತೆಗಳನ್ನು ಹಾಡಿದರೆ, ಕೆಲವರು ಗಿಟಾರ್, ಪಿಯಾನೋ, ವಯೋಲಿನ್, ಕೀ ಬೋರ್ಡ್ ನುಡಿಸಿ ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಿದರು.

ಈ ಹೇಮಂತ ಗಾನದ ವಿಶೇಷವೇನೆಂದರೆ ಹಾಡು ಹೇಳಲು ಮಕ್ಕಳಿಗೂ, ದೊಡ್ಡವರಿಗೂ ಹಾಗೂ ಹೊಸಬರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದು. ಮಕ್ಕಳ ಹಾಡು ಆದ ಮೇಲೆ ದೊಡ್ಡವರ ಹಾಡು.. ಹೀಗೆ ಸರಿಸಮನಾಗಿ ನಡೆದ ಈ ಸಮಾರಂಭದಲ್ಲಿ ಮಕ್ಕಳೂ ನಾವೇನೂ ಕಡಿಮೆಯಿಲ್ಲ ಎಂಬಂತೆ ಅಚ್ಚ ಕನ್ನಡದಲ್ಲಿ ಶುಶ್ರಾವ್ಯವಾಗಿ ಹಾಡಿದ್ದು ಎಲ್ಲರ ಮನಸೆಳೆಯಿತು.

ಒಮ್ಮೆಲೇ ಇಷ್ಟೊಂದು ಸವಿಗನ್ನಡದ ಹಾಡುಗಳನ್ನು ಕಿವಿಗಳಿಗೆ ಇಂಪಾಗುವಂತೆ ಕೇಳಿಸಿ, ನಾಲಿಗೆಗೆ ರುಚಿಯಾದ ಊಟ ಬಡಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟ ಹೊಯ್ಸಳ ಕನ್ನಡ ಕೂಟದವರಿಗೆ ಧನ್ಯವಾದಗಳನ್ನು ಹೇಳಿ ಮನೆ ಕಡೆ ಹೊರಟಾಗ ರಾತ್ರಿ 9ರ ಮೇಲಾಗಿತ್ತು. ಹೀಗೆ ಸರಿಸುಮಾರು 6 ಗಂಟೆಗಳ ತನಕ ನಡೆದ ಈ ಗಾನ ಸಂಜೆ ಎಲ್ಲರ ಕಿವಿ, ಮನ ತಣಿಸಿದ್ದಲ್ಲದೆ ಎಲ್ಲರಲ್ಲೂ ಗುಪ್ತವಾಗಿ ಅಡಗಿದ್ದ ಹಾಡುವ ಕಲೆಯನ್ನು ಹೊರಹೊಮ್ಮಿಸಿದ್ದಂತು ಅಕ್ಷರಶ: ನಿಜ.

ಕಾರಲ್ಲಿ ಕುಳಿತಾಗ ಮತ್ತೆ ರೇಡಿಯೋದಲ್ಲಿ ಕೇಳಿ ಬಂದ, ನೋಡಲು ಕೊಮಲಾಂಗಿಯಾದ "ಕೇಟಿ ಪೆರಿ" ವ್ಯಾಘ್ರಿಣಿಯಂತೆ "ರೋರ್" ಅಂತಾ ಘರ್ಜಿಸೊ ಹಾಡನ್ನು ಪಟ್ ಅಂತಾ ಬಂದ್ ಮಾಡಿ, ಪಕ್ಕದಲ್ಲೇ ಯಾಕೋ ಗರಂ ಆಗಿ ಕೂತಿದ್ದ ನಲ್ಲೆಯನ್ನು ನೋಡಿ "ನೀ ಬಂದು ಕುಂತಾಗ (ನಿಂತಾಗ ಅಲ್ಲ :) ), ಕುಂತು ನೀ ನಕ್ಕಾಗ, ಸೋತೆ ನಾನಾಗ" ಅಂತ ನನ್ನದೇ ರಾಗದಲಿ ನಾ.. ಹಾಡಿದರೆ, ವೆಸ್ಟೆರ್ನ್ RAP ಮ್ಯೂಸಿಕ್ ಪ್ರೇಮಿಯಾದ ಮಗರಾಯ ಹಿಂದಿನ ಸೀಟಲ್ಲಿ ಕೂತು "ಪದ ಪದ ಕನ್ನಡ ಪದನೆ, ನಾ ರತ್ನನ ಪದ ಕೇಳ್ಕೊಂಡು ಬೆಳೆದವ್ನೆ" ಅಂತಾ ಗುನುಗುತ್ತಿದ್ದ!

English summary
Hoysala Kannada Koota celebrated Hemanta Gana on 18th January, Saturday at Swamy Sathyanarayana temple in Connecticut, USA. Children and elders brought warmth amid body piercing chilling cold by singing variety of Kannada film songs. Report by Nagaraja Maheswarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X