• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ಹವ್ಯಕ ಸಮ್ಮೇಳನ ಕುರಿತಾದ ಸೊಗಸಾದ ವರದಿ

By ಶ್ರೀವತ್ಸ ಜೋಶಿ
|

ಪಲ್ಲಕ್ಕಿ ಮತ್ತು ಉತ್ಸವದಂತೆಯೇ ಎರಡು ದಿನಗಳ "ಹವ್ಯಕ ಸಮ್ಮೇಳನ" ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿರುವ ಚಿನ್ಮಯ ಮಿಷನ್ ಪ್ರಾಂಗಣದಲ್ಲಿ ಜುಲೈ 3 ಮತ್ತು 4ರಂದು ಕೂಡ ತುಂಬಾ ಸೊಗಸಾಗಿ ಜರುಗಿತು. ಅತ್ಯಂತ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಒಂದು ಸಮುದಾಯ ಸಮ್ಮೇಳನವನ್ನು ಹೇಗೆ ನಡೆಸಬಹುದು ಎಂಬುದಕ್ಕೆ ಮಾದರಿಯೆನಿಸುವಂತೆ ಇತ್ತು ಈ ಸಮ್ಮೇಳನ.

'ಅಮೆರಿಕ ಹವ್ಯಕ ಸಮುದಾಯ' ಸಮ್ಮೇಳನಕ್ಕೆಂದೇ ಅಮೆರಿಕದಲ್ಲಿರುವ ಕನ್ನಡಿಗ ರಾಜ್ ಪರ್ತಜೆ ಅವರು ಈ ಪಲ್ಲಕ್ಕಿಯನ್ನು ನಿರ್ಮಿಸಿದ್ದರು. ಅಮೆರಿಕ ದೇಶದ ಸ್ವಾತಂತ್ರ್ಯದಿನಾಚರಣೆ ರಜೆಯ ವಾರಾಂತ್ಯದಲ್ಲಿ ನಡೆದ ಸಮ್ಮೇಳನಕ್ಕೆ ನನ್ನನ್ನೂ ವಿಶೇಷವಾಗಿ ಆಹ್ವಾನಿಸಿದ್ದರು, ಸಮ್ಮೇಳನ ಸಂಚಾಲಕರಾಗಿದ್ದ ನನ್ನ ಸ್ನೇಹಿತ ಶಿವು ಭಟ್ ಅವರು.

ಪಲ್ಲಕ್ಕಿ ಉದ್ಘಾಟನೆ ಮತ್ತು ಉತ್ಸವದ ಬಗ್ಗೆ ನನಗೂ ಕುತೂಹಲವಿತ್ತು. ಅಂಥದೊಂದು ರೋಮಾಂಚಕಾರಿ ಅನುಭವವನ್ನು ತಪ್ಪಿಸಿಕೊಳ್ಳಬಾರದೆಂದು ನಾನು ಸಮ್ಮೇಳನ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿಯೇ ಹೋಗಿದ್ದೆ. ಶುಕ್ರವಾರ ಸಂಜೆಯ ಹಿತಕರ ವಾತಾವರಣ. ಪಲ್ಲಕ್ಕಿಯ ನಿರ್ಮಾತೃ ರಾಜ್ ಪರ್ತಜೆಯವರದೇ ವ್ಯಾನ್‌ನಲ್ಲಿ ಆಗಲೇ ಸಿಂಗಾರಗೊಂಡು ಕೂತಿದ್ದ ಪಲ್ಲಕ್ಕಿಯನ್ನು ಹೊರತೆಗೆದು ಶಿವು ಭಟ್ ಸೇರಿದಂತೆ ನಾಲ್ಕು ಜನರು ಅದನ್ನು ಭುಜಗಳಿಗೇರಿಸಿ ಚಿನ್ಮಯ ಮಿಷನ್ ಪ್ರಾಂಗಣದಲ್ಲಿ ಪ್ರದಕ್ಷಿಣೆ ತಂದು ಸಭಾಂಗಣದೊಳಕ್ಕೆ ತಂದರು. ಆ ಕ್ಷಣಗಳ ಒಂದು ಚಿಕ್ಕ ವಿಡಿಯೋ ಕ್ಲಿಪ್ಪಿಂಗ್ ಇಲ್ಲಿ ನಿಮಗಾಗಿ.

ಅಚ್ಚುಕಟ್ಟಾದ ಮನರಂಜನೆ, ರುಚಿಕಟ್ಟಾದ ಊಟೋಪಚಾರ : ಒಂದಕ್ಕಿಂತ ಒಂದು ಉತ್ತಮ ಮನರಂಜನಾ ಕಾರ್ಯಕ್ರಮಗಳು. ರುಚಿಕಟ್ಟಾದ ಊಟೋಪಚಾರ, ಕಾಫಿ-ತಿಂಡಿ ವ್ಯವಸ್ಥೆ (ವಾಷಿಂಗ್ಟನ್‌ನ ಪ್ರಸಿದ್ಧ ಕನ್ನಡಿಗ ಹೊಟೆಲ್ ಉದ್ಯಮಿ ಆನಂದ್ ಪೂಜಾರ್ ನಿರ್ವಹಣೆ), ಸಮುದಾಯದವರೆಲ್ಲ ಒಂದೇ ಕುಟುಂಬದವರು, ಒಂದೇ ಮನೆಯವರು ಎಂಬ ಹಬ್ಬದ ವಾತಾವರಣ ಅಲ್ಲಿ ಮೂಡಿತ್ತು.

ಮುಖ್ಯವಾಗಿ ವಲಸಿಗರ ಎರಡನೇ ತಲೆಮಾರಿನವರಿಗೆ (ಅಂದರೆ ಇಲ್ಲಿ ಅಮೆರಿಕದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ) ಹವ್ಯಕ ಸಂಸ್ಕೃತಿಯ ಮಹತ್ವವನ್ನು ಪರಿಚಯಿಸುವ, ಆಧುನಿಕತೆಯಲ್ಲೂ ಸನಾತನ ಸಂಪ್ರದಾಯಗಳನ್ನು ಅರಿಯುವ ಅವಕಾಶ. ಅಮೆರಿಕದ ಉದ್ದಗಲದಿಂದ ಸುಮಾರು ನಾಲ್ನೂರೈವತ್ತರಷ್ಟು ಜನ ಹವ್ಯಕ ಬಂಧುಬಾಂಧವರು ಭಾಗವಹಿಸಿದ್ದರು. [ವಾಷಿಂಗ್ಟನ್ ಹವ್ಯಕ ಸಮ್ಮೇಳನಕ್ಕೆ ಪಲ್ಲಕಿಯ ಮೆರುಗು!]

ಅಷ್ಟೇ ಅಲ್ಲ, ಕರ್ನಾಟಕಕ್ಕೆ ಹೋಗಿ ವರ್ಷಗಟ್ಟಲೆ ಹವ್ಯಕ ಜನರೊಂದಿಗೇ ಇದ್ದು ಆ ಸಮುದಾಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಪುಸ್ತಕಗಳನ್ನೂ ಬರೆದಿರುವ, ಹವ್ಯಕ-ಕನ್ನಡ ಭಾಷೆಯಲ್ಲಿ ಮಾತಾಡಲೂ ಬಲ್ಲ ಅಮೆರಿಕನ್ ಮಹಿಳೆ ಹೆಲೆನ್ ಉಲ್ರಿಚ್ ಎಂಬುವರೂ ಸಮ್ಮೇಳನದಲ್ಲಿ ಹಾಜರಿದ್ದರು, ಹವ್ಯಕ ಸಂಸ್ಕೃತಿ ಅವತ್ತು-ಇವತ್ತು ಎಂಬ ಕುರಿತು ಅವರದೊಂದು ಉಪನ್ಯಾಸವೂ ಇತ್ತು.

ಬೆರಗು ಮೂಡಿಸಿದ ದ್ಯುತಿ ಚಿತ್ತಾರ : ಶುಕ್ರವಾರ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಖ್ಯ ಆಕರ್ಷಣೆ ವಿನಯ್ ಹೆಗಡೆ ಅವರಿಂದ 'ಬೆಳಕಿನ ಚಿತ್ತಾರ' ಗ್ಲೋ ಆರ್ಟ್. ಕಳೆದ ವರ್ಷ 'ಅಕ್ಕ' ಸಮ್ಮೇಳನದಲ್ಲಿ ಪ್ರದರ್ಶನ ನೀಡಿದ್ದ Vinay Hegde ಆಗಲೇ ಅಮೆರಿಕನ್ನಡಿಗರಿಗೆ ಪರಿಚಿತರು. ಈಬಾರಿ ತನ್ನದೇ ಸಮುದಾಯದ ಸಮ್ಮೇಳನದಲ್ಲಿ ಮತ್ತಷ್ಟು ಹೊಸ ರೀತಿಯ ದ್ಯುತಿಚಿತ್ತಾರಗಳನ್ನು ಮೂಡಿಸಿ ಬೆರಗುಗೊಳಿಸಿದರು.

ವಿಶೇಷ ಆಹ್ವಾನಿತ ಕಲಾವಿದೆ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ಭಾವ-ಭಕ್ತಿಧಾರೆ ಗಾಯನ ಕಾರ್ಯಕ್ರಮವೂ ಇತ್ತು. ಭೋಜನದ ನಂತರ ಟೊರಾಂಟೊದ ಯಕ್ಷಮಿತ್ರ ತಂಡದವರಿಂದ 'ಶಿವಪಂಚಾಕ್ಷರಿ ಮಹಿಮೆ' ಯಕ್ಷಗಾನ ಪ್ರದರ್ಶನ. ಕರಾವಳಿಯ ಪ್ರಸಿದ್ಧ ಯಕ್ಷಗಾನ ಮೇಳಗಳಿಗೆ ಯಾವ ರೀತಿಯಲ್ಲೂ ಕಮ್ಮಿಯಿಲ್ಲದ ಪೂರ್ಣಪ್ರಮಾಣದ ಮೇಳ ಟೊರಾಂಟೊ(ಕೆನಡಾ)ದ ಯಕ್ಷಮಿತ್ರ ತಂಡ. ಸುಮಾರು ಎರಡು ಗಂಟೆ ಅವಧಿಯ ಯಕ್ಷಗಾನ ಅತ್ಯದ್ಭುತವಾಗಿತ್ತು.

ಶನಿವಾರ ಬೆಳಗ್ಗೆ ಮಕ್ಕಳಿಂದ 'ವಿಜ್ಞಾನ ಕಲಾ ಮೇಳ' ವಸ್ತುಪ್ರದರ್ಶನ ಪ್ರಾತ್ಯಕ್ಷಿಕೆಗಳು. ಪಕ್ಕದ ಹಾಲ್‌ನಲ್ಲಿ ರುದ್ರಾಭಿಷೇಕ ಪೂಜಾಕಾರ್ಯಕ್ರಮ, ಅದರ ಕೊನೆಗೆ 'ಅಯಂ ಬ್ರಹ್ಮನ್- I'm Brahman' (ಅನಿವಾಸಿ ಯುವಪೀಳಿಗೆಗೆ ಭಾರತೀಯ ಸಂಸ್ಕೃತಿ, ಮುಖ್ಯವಾಗಿ ಶಂಕರಭಗವತ್ಪಾದರ ತತ್ತ್ವಗಳನ್ನು ಅಮೆರಿಕನ್ ಇಂಗ್ಲಿಷ್ ಭಾಷೆಯಲ್ಲೇ ಸುಲಭವಾಗಿ ಅರ್ಥವಾಗುವಂತೆ ಡಾ.ಮೈ.ಶ್ರೀ.ನಟರಾಜ ಅವರು ಬರೆದಿರುವ ಕಿರುನಾಟಕ) ಪುಸ್ತಕ ಬಿಡುಗಡೆ.

ಭಾರತದಿಂದ ಬಂದಿರುವ ಸಂಗೀತ ಕಲಾವಿದ ನಾಗರಾಜ ಹೆಗಡೆಯವರಿಂದ ಹಿಂದೂಸ್ಥಾನಿ ಶೈಲಿಯಲ್ಲಿ ಅಮೋಘ ಬಾನ್ಸುರಿ ವಾದನ. ಶುದ್ಧಸಾರಂಗ್ ರಾಗದ ಪ್ರಸ್ತುತಿಯ ನಂತರ ಭಟಿಯಾಲ್-ಮಾಂಡ್ ಮಿಶ್ರಣದ ಧುನ್ ಮತ್ತೊಂದು ಪಹಾಡಿ ರಾಗದ ಧುನ್‌ಗಳನ್ನು ಕೇಳಿದಾಗ ಗೋಕುಲದಲ್ಲಿ ಕೃಷ್ಣ ಬಹುಶಃ ಇದೇರೀತಿ ಕೊಳಲು ನುಡಿಸುತ್ತಿದ್ದನಿರಬಹುದು ಎಂದುಕೊಂಡರು ಶ್ರೋತೃಗಳು.

ಮಧ್ಯಾಹ್ನದ ನಂತರವೂ ಒಂದಾದ ಬಳಿಕ ಒಂದು ಉತ್ಕೃಷ್ಟ ಮನರಂಜನಾ ಕಾರ್ಯಕ್ರಮಗಳು. ನೃತ್ಯ, ಹಾಡು, ಫ್ಯಾಷನ್ ಶೋ ಮುಂತಾದವುಗಳ ಜತೆಯೇ ಹವ್ಯಕ ರೀತಿರಿವಾಜುಗಳನ್ನು ನೆನಪಿಸುವ ಪ್ರಹಸನಗಳು, 'ಗಪ್ಪತ್ ಹೆಗಡೆ ಕಗ್ಗೊಲೆ ಪ್ರಹಸನ' - ಶೋಲೆ ಗಬ್ಬರ್ ಸಿಂಗ್ ದೃಶ್ಯಾವಳಿಯ ಹವ್ಯಕ ಅವತರಣಿಕೆ ಹೊಟ್ಟೆಹುಣ್ಣಾಗುವಷ್ಟು ನಗಿಸಿತು. ಪುಟ್ಟ ಮಕ್ಕಳ ತಂಡವು ಪಂ.ವಿನಾಯಕ ಹೆಗಡೆ ಅವರ ಸಂಗೀತ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ 'ಸ್ವರಾಂಜಲಿ'(ಇಂಗ್ಲಿಷ್, ಹಿಂದಿ, ಕನ್ನಡ ಗೀತೆಗಳ ಸಿಂಫೊನಿ) ಮಕ್ಕಳ ಪ್ರತಿಭೆಗೆ ಕೈಗನ್ನಡಿಯಾಯ್ತು. ತೇಜಸ್ವಿ (Shankar Junior) ಅವರ 'ಗಿಲಿ ಗಿಲಿ ಮ್ಯಾಜಿಕ್' ಪ್ರದರ್ಶನವಂತೂ ಹಿರಿಕಿರಿಯರೆನ್ನದೆ ಎಲ್ಲರನ್ನೂ ರೋಮಾಂಚನಗೊಳಿಸಿತು.

'ಹ'ಸುರು ಕಾನನ ಪರಿಸರ; 'ವ್ಯ'ಸನ ವೇದವಾಙ್ಮಯವಿಚಾರ; 'ಕ'ಸುವು ಪ್ರತಿಭೆಯ ಮೇರುಶಿಖರ - ಇದು 'ಹವ್ಯಕ' ಸಮುದಾಯದ ಒಟ್ಟಂದ ಎಂದು ನನ್ನ ಅಭಿಪ್ರಾಯ. 'ಹವ್ಯಕ ಸಮುದಾಯವೆಂದರೆ ತಲೆಯಿಂದ ಅಂಗುಷ್ಠದವರೆಗೂ ಪ್ರತಿಭಾವಂತರು' ಎಂದು ಮೊನ್ನೆ ಪಲ್ಲಕ್ಕಿಯ ಪೋಸ್ಟ್‌ಗೆ ಮಿತ್ರರೊಬ್ಬರು ಪ್ರತಿಕ್ರಿಯೆಯಲ್ಲಿ ಬರೆದಿದ್ದರು. ಅದರಲ್ಲಿ ಉತ್ಪ್ರೇಕ್ಷೆಯೇನಿಲ್ಲ ಎಂದು ನನಗೆ ಎರಡು ದಿನಗಳ ಅಲ್ಲಿನ ಅಷ್ಟೂ ಚಟುವಟಿಕೆಗಳನ್ನು ನೋಡಿದಾಗ ಅನಿಸಿತು. ಅದನ್ನೇ ನಾನು ಅಲ್ಲಿ 'ಸಮ್ಮೇಳನದ ಕುರಿತು ಎರಡು ಮಾತು' ಆಡುತ್ತ ಹೇಳಿದೆ. ಹೊಗಳಿಕೆ ನನ್ನಿಂದ ಅಷ್ಟು ಸುಲಭವಾಗಿ ಬರುವುದಿಲ್ಲ. ಬಂದರೆ ಅಮೇಲೆ ಅದರಲ್ಲಿ ಚೌಕಾಶಿಯಿಲ್ಲ. ಈ ಸಮ್ಮೇಳನ ಅಂಥ ಹೊಗಳಿಕೆಗೆ ಸಂಪೂರ್ಣ ಅರ್ಹತೆ ಹೊಂದಿತ್ತು. ಶಿವು ಭಟ್ ಮತ್ತು ಬಳಗದವರಿಗೆಲ್ಲ ಅಭಿನಂದನೆಗಳು.

English summary
Havyaka Association of America (HAA) had organized Havyaka sammelana to showcase it's culture during independence day holidays in Washington DC on July 3-5, 2015, with a theme of Pallaki Utsava. The program was well planned and was treat for everyone. Report by special correspondent in Washington DC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X