ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ನಡ ಸಂಚಿಕೆಗಳಿಗೆ ಕಂಪ್ಯೂಟರ್ ತಂತ್ರಾಂಶದ ಕಾಣಿಕೆ

By ವಿಶ್ವೇಶ್ವರ ದೀಕ್ಷಿತ್, ಅಮೆರಿಕಾ
|
Google Oneindia Kannada News

ಹರಿ ಅಂದರೆ ನೆನಪಾಗುವುದು ಅವರ ಮಾತುಗಳು. ನಿರರ್ಗಳವಾಗಿ, ಆ ದಂಡೆಯಿಂದ ಈ ದಂಡೆಗೆ ಬಡಿಯುತ್ತ, ಪಕ್ಕದ ಗಿಡ ಮರಗಳನ್ನು ಮಾತಾಡಿಸುತ್ತ, ಸಸಿಗಳನ್ನು ಪೋಷಿಸುತ್ತ ಹರಿಯುವ ಕನ್ನಡ ನದಿ ನಮ್ಮ ಹರಿ. ಮಾತು ಅಂದರೆ ಹಾಳು ಹರಟೆ ಅಲ್ಲ. ಗಂಭೀರ ವಿಷಯಗಳನ್ನು ಸಹಜವಾಗಿ ಚರ್ಚಿಸುವುದು. ಹರಿಯ ಜ್ಞಾನ ಆಳವಾಗಿತ್ತು, ಹರವು ಅಪಾರವಾಗಿತ್ತು. ಕಠಿನ ವಿಷಯಗಳನ್ನು ಎಲ್ಲರಿಗೂ ತಿಳಿಯುವ ಹಾಗೆ ತರ್ಕಬದ್ಧವಾಗಿ ಉದಾಹರಣೆ ಸಹಿತ ಮಾತಿನಲ್ಲಿ ವಿವರಿಸುವುದು ಹರಿಯ ವೈಶಿಷ್ಟ್ಯವಾಗಿತ್ತು.

ಮಾತೆಂದರೆ ಹರಿಗೆ ಎಷ್ಟು ಆಪ್ತವಾಗಿತ್ತು ಎಂದು ತಿಳಿಯಲು ಅವರ ಪುಸ್ತಕಗಳ ಹೆಸರುಗಳೆ ಸಾಕು: ಮಾತಿನ ಮಂಟಪ, ಮಾತಿನ ಚಪ್ಪರ, ಮಾತಿನ ಚಾವಡಿ, ಮಾತಿನ ಮಲ್ಲಿಗೆ, ಮಾತೇ ಮುತ್ತು. ಇವೆಲ್ಲ ಪ್ರಬಂಧ, ವಿಮರ್ಶೆ, ವಿಚಾರ, ಸಂಶೋಧನೆಗಳನ್ನೊಳಗೊಂಡ ಪ್ರೌಢ ಲೇಖನಗಳ ಹೊತ್ತಿಗೆಗಳು.

Harihareshwara is responsible for Kannada awareness in America

ಶಿವನಿಗೆ ಅಭಿಷೇಕ ಪ್ರಿಯ ಮತ್ತು ವಿಷ್ಣುವಿಗೆ ಅಲಂಕಾರ ಪ್ರಿಯ ಎಂದು ಹೇಳಿಕೆ. ನಮ್ಮ ಹರಿ-ಹರ-ಈಶ್ವರನಿಗೆ ಎರಡು ಪ್ರಿಯ. ಮಾತಿನ ಅಭಿಷೇಕ, ಮಾತಿನ ಅಲಂಕಾರ. ಆದರೆ ಈ ಅಲಂಕಾರ ಅಭಿಷೇಕಗಳು ತಮಗಲ್ಲ, ಕೇಳುಗರಿಗೆ. ಹರಿಯ ಪುಸ್ತಕಗಳು ಯಾರಿಗೂ ಎಟುಕದ ಪಾಂಡಿತ್ಯದ ಓದಲಾಗದ ಕಂತೆಗಳಲ್ಲ.

ಉತ್ತಮ ಲೇಖಕರ ಬಗ್ಗೆ ಸಾಮಾನ್ಯವಾಗಿ ಹೇಳುವುದು ಪುಸ್ತಕ ತನ್ನಿಂದ ತಾನೆ ಓದಿಸಿಕೊಂಡು ಹೋಗುತ್ತದೆ'' ಎಂದು. ಆದರೆ ಹರಿಯ ಪುಸ್ತಕ ನೀವು ಓದುವುದೂ ಇಲ್ಲ, ಅದು ಓದಿಸಿಕೊಂಡು ಹೋಗುವುದೂ ಇಲ್ಲ! ಓದನ್ನೆ ಮೀರಿ ಹರಿಯೆ ನಿಮ್ಮ ಎದುರು ಕುಳಿತು ಮಾತಾಡುತ್ತಿದ್ದಾರೆ ಎನ್ನುವ ಅನುಭವ ಸಹಜ. ಮಾತೆ ಹರಿಯ ಆತ್ಮಕಥೆ? ಮೌನ ಮಾತನಾಡಿಸಿದಾಗ''. ಹರಿಯ ಪುಸ್ತಕ ಓದಿದಾಗ ಮೌನ ನಿಮ್ಮದಾದರೆ, ಮಾತು ಹರಿಯದು.

ಎರಡನೆಯದಾಗಿ, ಹರಿಯ ಕನ್ನಡ ಪ್ರೇಮ ಕೇವಲ ಬರಹಕ್ಕೆ ಸೀಮಿತವಾಗಿರಲಿಲ್ಲ. ಹರಿ ಕನ್ನಡದಲ್ಲಿ, ಕನ್ನಡಿಗರಲ್ಲಿ ಒಂದಾಗಿ ಬೆರೆತುಕೊಂಡರು. ಕನ್ನಡ ಸಂಘಗಳನ್ನು ಕಟ್ಟಿದರು. ಅಮೆರಿಕದ ಕನ್ನಡ ಕೂಟಗಳ ಸಾಹಿತ್ಯ ಸಂಚಿಕೆಗಳನ್ನು ಸಂಪಾದಿಸಿದರು. ಕನ್ನಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದರು. ಉತ್ತುಂಗದಲ್ಲಿ ನಿಲ್ಲುವುದು ಅವರ ಅಮೆರಿಕನ್ನಡ ಪತ್ರಿಕೆ. ಇದೊಂದು ಸಾಹಸವೆ ಸರಿ. ಎರಡು ತಿಂಗಳಿಗೊಮ್ಮೆ 50ಕ್ಕೂ ಹೆಚ್ಚು ಪುಟಗಳನ್ನು ಪ್ರಕಟಿಸುವ ಉದ್ದೇಶ.

Harihareshwara is responsible for Kannada awareness in America

ತಾಂತ್ರಿಕ ತೊಂದರೆಗಳಿರಲಿ, ಅಮೆರಿಕೆಯಲ್ಲಿ ಕನ್ನಡ ಬರೆಯುವವರಾರು? ಬರೆದರೂ ಓದುವವರಾರು? ಪಾಟ್ಸ್‌ಟೌನ್ ಎನ್ನುವ ಅಮೆರಿಕೆಯ ಮೂಲೆಯೊಂದರಲ್ಲಿ ಕುಳಿತು ಅಮೆರಿಕೆಯ ಉದ್ದಗಲಕ್ಕೂ ಬರಹಗಾರರನ್ನೂ ಓದುಗರನ್ನೂ ಕಲೆ ಹಾಕಿದವರು ಹರಿ. ಕಲೆ ಹಾಕಿದರು ಅನ್ನುವುದಕ್ಕಿಂತ ಹುಟ್ಟು ಹಾಕಿ, ಪೋಷಿಸಿ, ಬೆಳೆಸಿದರು ಎನ್ನುವುದೆ ಉಚಿತ. ತನಗೆ ಕನ್ನಡ ಬರುವುದಿಲ್ಲ, ಕನ್ನಡ ಬರಹಗಾರನಲ್ಲ ಎಂದುಕೊಂಡ ಅನೇಕರು ಅಮೆರಿಕನ್ನಡದ ಪುಟಪುಟಗಳಲ್ಲಿ ಅವಿಸ್ಮರಣೀಯರಾಗಿದ್ದಾರೆ.

1983-84ರಲ್ಲಿ ಕನ್ನಡ ಬರೆಯಲು, ಸಂಪಾದಿಸಲು, ಮತ್ತು ಲೇಸರ್ ಪ್ರಿಂಟರ್ ನಲ್ಲಿ ಮುದ್ರಿಸಲು ಒಂದು ಕಂಪ್ಯೂಟರ್ ತಂತ್ರಾಂಶ ಒಂದನ್ನು ನಿರ್ಮಿಸಿದ್ದೆ. ನನ್ನ ಕೆಲ ಮುದ್ರಿತ ಕವಿತೆಗಳನ್ನು ಅಂದಿನ ಲಾಸ್ ಏಂಜಲೀಸ್ ಕನ್ನಡ ಕೂಟದ ಪಿಕ್‌ನಿಕ್ ನಲ್ಲಿ ಮೊದಲ ಬಾರಿ ಇತರರಿಗೆ ತೋರಿಸಿದೆ. ರಾತ್ರಿ ಮನೆಗೆ ಬಂದಾಗ ದೂರವಾಣಿ ಕರೆ ನಾನು ಹರಿ ಅಂತ....'' ಈಗಿನಂತೆ ಸೆಲ್ ಫೋನುಗಳು ಇದ್ದರೆ ನಾನು ಪಿಕ್‌ನಿಕ್‌ನಲ್ಲಿ ಇದ್ದಾಗಲೆ ಕರೆಯುತ್ತಿದ್ದರೊ ಏನೋ. ಇದು ಅವರ ಜಾಗೃತ ಕನ್ನಡ ಪ್ರಜ್ಞೆಗೆ ಉದಾಹರಣೆ.

ಅಮೆರಿಕೆಯ ಯಾವ ಮೂಲೆಯಲ್ಲೆ ಯಾವ ಕನ್ನಡ ಸಂಗತಿ ನಡೆದರೂ ಅದು ಹರಿಯ ಅರಿವಿನ ಪರಿಧಿಯಲ್ಲೆ. ಹೀಗೆ ಶುರುವಾದ ನಮ್ಮ ಮಾತುಕತೆ ಮುಗಿದದ್ದೆ ಇಲ್ಲ. ಮುಂಚೆಯೆ ನನ್ನನ್ನು ಅರಿತವರಲ್ಲ, ನಾನು ಮುದ್ರಿಸಿದ್ದನ್ನು ಕಂಡವರಲ್ಲ. ಆ ಒಂದೆ ದೂರವಾಣಿ ಕರೆಯಲ್ಲಿ, ಅಮೆರಿಕನ್ನಡಕ್ಕೆ ನನ್ನ ಸೇರಿಕೆಯಾಗಿತ್ತು. ಅಮೆರಿಕನ್ನಡದ ಮೊದಲನೆಯ ಸಂಚಿಕೆ ಜಯರಾಮ ಉಡುಪ ಅವರ ಕೈಬರಹದಲ್ಲಿ ಮೂಡಿದ್ದರೆ, ಎರಡನೆಯ ಸಂಚಿಕೆಯಿಂದ ನನ್ನ ತಂತ್ರಾಂಶದಿಂದ ಮುದ್ರಿಸಿದ ಲೇಖನಗಳು ಬರತೊಡಗಿದವು.

ಅಮೆರಿಕನ್ನಡ ಅನ್ನುವ ಪದವೆ ನಮ್ಮ ಪ್ರಜ್ಞೆಯಲಿ ಹಾಸು ಹೊಕ್ಕಾಗಿ ಸೇರಿದೆ. ಪತ್ರಿಕೆಯ ಜೊತೆಗೆ ಇದು ಹರಿಯ ಇನ್ನೊಂದು ಅಪೂರ್ವ ಕಾಣಿಕೆ. ಅಮೆರಿಕೆಯಲ್ಲಿ ಕನ್ನಡದ ಜಾಗೃತಿಗೆ ಹರಿ ಮತ್ತು ಅವರ ಅಮೆರಿಕನ್ನಡ ಪತ್ರಿಕೆ ಕಾರಣ. ಅಮೆರಿಕಯೆಲ್ಲಿ ಕನ್ನಡದ ಹರಿಕಾರ ಹರಿಯೆ ಎಂದು ನಿಸ್ಸಂಶಯವಾಗಿ ಹೇಳಬಹುದು.

English summary
Harihareshwara is responsible for Kannada awareness in America. He worked selflessly for the growth of Kannada in USA. He encouraged everyone to write in Kannada. Vishwesh Dixit shares his experience with Hari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X