ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶ ಬಂದಿದ್ದು, ಕಾಯ್ ಕಡುಬು ತಿಂದಿದ್ದು ಶಿಕಾಗೊದಲ್ಲಿ

By ನಳಿನಿ ಮೈಯ
|
Google Oneindia Kannada News

ಸೆಪ್ಟೆಂಬರ್ 26 ಶನಿವಾರದಂದು ಪುಟ್ಟ ಇಲಿಯ, ದೊಡ್ಡ ಹೊಟ್ಟೆಯ ಗಣಪ ಆಗಮಿಸಿಯೇಬಿಟ್ಟ ಶಿಕಾಗೊವಲಯದ ಗಣೇಶನ ಹಬ್ಬಕ್ಕೆ, ವಿದ್ಯಾರಣ್ಯ ಕನ್ನಡ ಕೂಟಕ್ಕೆ. ಕ್ರಿಸ್‍ಮಸ್ ಹಬ್ಬಕ್ಕೆ ದೊಡ್ಡ ಹೊಟ್ಟೆಯ ಸಾಂಟಾ ಕ್ಲಾಸ್ ಬರುವುದೇ ಉಂಟಂತೆ! ಗಣೇಶನ ಹಬ್ಬಕ್ಕೆ ನಮ್ಮ ಗಣಪ ಬಾರದೆ ಇರುತ್ತನೆಯೆ?

ಲೆಮಾಂಟ್ ಎಂಬ ಬಡಾವಣೆಯಲ್ಲಿರುವ ಹಿಂದೂ ದೇವಾಲಯದಲ್ಲಿ ಅರ್ಚಕರಿಂದ ವಿಧ್ಯುಕ್ತವಾಗಿ ನಡೆದ ಗಣೇಶನ ಪೂಜೆ, ಅವನೆದುರು ಭಕ್ತಿಯಿಂದ ವಂದಿಸುತ್ತಾ ತಲೆ ಬಾಗಿ ಕುಳಿತ ಅಧ್ಯಕ್ಷ ರಾಮ ರಾವ್ ಮತ್ತು ಪತ್ನಿ ಚಿತ್ರಾ, ಎಲ್ಲೆಡೆಯಲ್ಲಿ ಸಂಭ್ರಮದಿಂದ ಓಡಾಡುತ್ತಿದ್ದ ಕನ್ನಡಿಗರು. ಎಲ್ಲವನ್ನೂ ನೋಡಿ, ನಸುನಗುತ್ತಾ ಆಶೀರ್ವದಿಸಿದ್ದೂ ಹೌದಂತೆ!

ಸಮಯಕ್ಕೆ ಸರಿಯಾಗಿ ಪೂಜೆ ಮುಗಿಯುತ್ತಲೇ ಶುರುವಾಯಿತು ಸಾಂಸ್ಕೃತಿಕ ಕಾರ್ಯಕ್ರಮ. ಶ್ರೇಯಾ ರಾಜೇಶ್ ಅವರಿಂದ ಪ್ರಾರ್ಥನೆ ಹಾಗೂ ಆಕಾಂಕ್ಷಾ ಶೇಖರ್ ಅವರಿಂದ ಭಾರತ ಮತ್ತು ಅಮೆರಿಕಾ ಎರಡೂ ದೇಶಗಳ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮದ ಶುಭಾರಂಭ. ಕರ್ನಾಟಕದ ನಾಡಗೀತೆಯಾದ ಕುವೆಂಪು ವಿರಚಿತ ಕವನ 'ಜಯಭಾರತ ಜನನಿಯ ತನುಜಾತೆ'ಯನ್ನು ಸಮೂಹಗಾನದ ತಂಡ ಸುಶ್ರಾವ್ಯವಾಗಿ ಹಾಡಿ ಸಭಿಕರ ಮೆಚ್ಚಿಗೆ ಪಡೆಯಿತು.

Gowri Ganesha festival by Kannadigas in Chicago

ಅಧ್ಯಕ್ಷ ರಾಮರಾವ್ ಅವರು ಸ್ವಾಗತ ಭಾಷಣ ಮಾಡಿ ಸಭಿಕರಿಗೆ ಮತ್ತು ವಿಶೇಷ ಅತಿಥಿಗಳಾಗಿ ಆಗಮಿಸಿದ ಹಾಸ್ಯಪಟು ಮೈಸೂರು ಆನಂದ್ ಹಾಗೂ ಭಾವಗೀತೆ ಗಾಯಕ ಪ್ರಣತಿ ರಾಘವೇಂದ್ರ ರಾವ್ ಅವರಿಗೆ ಸುಸ್ವಾಗತ ಕೋರಿದರು. ಇದುವರೆಗೆ ನಡೆಸಿದ ಕಾರ್ಯಕ್ರಮಗಳ ಬಗ್ಗೆ ಸ್ಥೂಲ ವಿವರಗಳನ್ನು ಕೊಟ್ಟು ಮುಂಬರುವ ಕಾರ್ಯಕ್ರಮಗಳಿಗಾಗಿ ಬೆಂಬಲವನ್ನು ಕೋರಿದರು.

ಮನರಂಜನಾ ಕಾರ್ಯಕ್ರಮ : 'ಗಜಮುಖನಿಗೆ ವಂದನೆ' ಎಂಬ ಮಕ್ಕಳ ಸಮೂಹ ಗಾನ. ಮಹಿಳೆಯರಿಂದ ಗಣೇಶ ಪಂಚರತ್ನ ಹಾಡುಗಾರಿಕೆ ಚೆನ್ನಾಗಿ ಮೂಡಿ ಬಂತು. ಎಲ್ಲರನ್ನೂ ದಂಗಾಗಿಸಿದ ಕಾರ್ಯಕ್ರಮ ಮಕ್ಕಳ ಆರ್ಕೆಸ್ಟ್ರಾ. ದೊಡ್ಡ ನಗರವಾದ ಶಿಕಾಗೊದ ಬಡಾವಣೆಗಳು ಒಂದು ಉತ್ತರದಲ್ಲಿ, ಮತ್ತೊಂದು ಪಶ್ಚಿಮದಲ್ಲಿ, ಇನ್ನೊಂದು ದಕ್ಷಿಣಕ್ಕೆ. ಹೀಗೆ ಚದುರಿ ಹೋದ ಎಲ್ಲ ಕಡೆಗಳಿಂದ ಮಕ್ಕಳನ್ನು ಒಟ್ಟು ಮಾಡಿ ವೀಣೆ, ಕೊಳಲು, ಸ್ಯಾಕ್ಸಾಫೋನ್, ಮೃದಂಗ, ಪಿಟೀಲು ಮುಂತಾದ ಎಲ್ಲ ವಾದ್ಯಗಳನ್ನೂ ಕ್ರೋಢೀಕರಿಸಿ ಉಳಿದ ಮಕ್ಕಳಿಂದ ಹಾಡಿಸಿ ಒಂದು ಆರ್ಕೆಸ್ಟ್ರಾ ಅಂದರೆ ಅದರ ಹಿಂದೆ ಎಷ್ಟು ಶ್ರಮ, ಪ್ರತಿಭೆ ಇರಬೇಕು!

ಅಂತಹ ಸವಾಲನ್ನು ಸ್ವೀಕರಿಸಿ ಗೆದ್ದವರು ಇದನ್ನು ಸಾಧ್ಯ ಮಾಡಿಸಿದ ಸರಸ್ವತಿ ರಂಗನಾಥನ್-ಸ್ಥಳೀಯ ಸಂಗೀತ ವಿದುಷಿ. ಸಭಿಕರಿಂದ ದೊಡ್ಡ ಚಪ್ಪಾಳೆ ಗಿಟ್ಟಿಸಿತು ಈ ಕಾರ್ಯಕ್ರಮ. ಕೇವಲ ಸಂಗೀತ ಮಾತ್ರವಲ್ಲ. ನೃತ್ಯ ಕೂಡಾ ಮಿಳಿತವಾಗಿತ್ತು ಈ ಮನರಂಜನೆಯಲ್ಲಿ. ಮಕ್ಕಳಿಂದ 'ಗಣಾರಾಧ್ಯ' ಹಾಗೂ 'ಬಾರಮ್ಮಾ' ನೃತ್ಯಗಳು ಪ್ರೇಕ್ಷಕರ ಮನವನ್ನು ಸೂರೆಗೊಂಡವು.

ಅಂದಿನ ವಿಶೇಷ ಅತಿಥಿ ಮೈಸೂರು ಆನಂದ್ ಅವರ ಹಾಸ್ಯ ಪ್ರಸ್ತುತಿ ಸಭಿಕರನ್ನು ಎಷ್ಟು ರಂಜಿಸಿತು ಎಂದರೆ ಕೊನೆಯಲ್ಲಿ ಅವರಿಗೆ ಸಭಿಕರೆಲ್ಲ ಎದ್ದು ನಿಂತು ಕರತಾಡನ ಮಾಡುವುದರ ಮೂಲಕ ತಮ್ಮ ಹೃತ್ಪೂರ್ವಕ ಅಭಿವಂದನೆಯನ್ನು ಸಲ್ಲಿಸಿದರು.

ಕೊನೆಯ ಎರಡು ರಾಗಸುಧೆಯನ್ನು ಹರಿಸುವ ಮೊದಲೇ ಖಜಾಂಚಿ ಶಂಕರ ಹೆಗ್ಡೆ ಅವರು ವಂದನಾರ್ಪಣೆ ಮಾಡಿದರು. ಸ್ಥಳೀಯ ಕಲಾವಿದರಿಂದ 'ವಾದ್ಯಸುಧೆ' ಕಾರ್ಯಕ್ರಮದಲ್ಲಿ, ಸಿತಾರ್, ಕೊಳಲು, ಹಾರ್ಮೋನಿಯಮ್, ಮೃದಂಗ ಮುಂತಾದ ಹಲವು ವಾದ್ಯಗಳಲ್ಲಿ ಹೊಮ್ಮಿಸಿದ ರಸಧಾರೆ ಹರಿದು ಬಂದಿತ್ತು.

ಮೋಡಿ ಮಾಡಿದ ಪ್ರಣತಿ ಭಾವಗೀತೆ : ಕೊನೆಯಲ್ಲಿ ಪ್ರಣತಿ ರಾಘವೇಂದ್ರ ರಾವ್ ಅವರಿಂದ ಭಾವಗೀತೆ ಗಾಯನ. ಇಷ್ಟು ಹೊತ್ತಿಗೆ ಎಲ್ಲರಿಗೂ ಕೂತು ಕೂತು ಸುಸ್ತಾಗಿರುತ್ತದೆ. ಸ್ವಲ್ಪ ಹೊಟ್ಟೆ ಹಸಿವೂ ಕಾಡುತ್ತಿರುತ್ತದೆ. ಆದರೆ ಅವೆಲ್ಲವನ್ನೂ ಮರೆಸಿ ಆತ್ಮವನ್ನು 'ಝಗ್' ಎಂದು ಏನೋ ಹೊಕ್ಕು ಜಾಗೃತಗೊಳಿಸಿದಂಥ ಅನುಭವ ಇವರು ಹಾಡಲು ಧ್ವನಿ ಎತ್ತಿದಾಗ! ಎಂತಹ ಕಂಠ! ಅದೆಂತಹ ಹಾಡುಗಾರಿಕೆ! ಸಿ ಅಶ್ವಥ್ ಮತ್ತೆ ಈ ರೂಪದಲ್ಲಿ ಬಂದರೇನೋ ಅನ್ನಿಸಿಬಿಟ್ಟಿತು ಅವರು ಹಾಡಿದಾಗ.

ಹೃದಯದಾಳದಲ್ಲಿ ಕುಳಿತು ನಮ್ಮನ್ನು ಮತ್ತೆ ಮತ್ತೆ ಕಾಡುವ ಗೀತೆಗಳು... 'ಬೆಟ್ಟದ ತುದಿಯಲ್ಲಿ', 'ಶ್ರಾವಣ ಬಂತು ಕಾಡಿಗೆ', 'ಒಂದಿರುಳು ಕನಸಿನಲಿ' ಮುಂತಾದ ಹಾಡುಗಳು ಭಾವಧಾರೆಯಾಗಿ ಸುರಿದು, ಹರಿದು ಪ್ರೇಕ್ಷಕರನ್ನು ತೋಯಿಸಿದವು. ಸ್ಥಳೀಯ ಗಾಯಕಿ ಚಿತ್ರಾ ರಾವ್ ಅವರ ಜೊತೆಯಾಗಿ ಹಾಡಿದರೆ ಪಕ್ಕ ವಾದ್ಯದಲ್ಲಿ ಸ್ಥಳೀಯ ಕಲಾವಿದರಾದ ಫಣೀಶ್ ರಾವ್, ಮುರಳೀಧರ ಕಜೆ, ದಿಲೀಪ್ ಕರ್ಕಿ, ಶ್ರೀ ರಾಜ ಕಳೆ ಏರಿಸಿದ್ದರು.

ಎಲ್ಲ ಕಾರ್ಯಕ್ರಮವನ್ನೂ ಅಚ್ಚ ಕನ್ನಡದಲ್ಲಿ ತಿಳಿಹಾಸ್ಯದೊಂದಿಗೆ ನಿರೂಪಿಸಿದವರು ಅನುಪಮಾ ಮಂಗಳವೇಧೆ ಮತ್ತು ರಮೇಶ್ ರಂಗಶ್ಯಾಮ್.

ಗಣೇಶನ ಹಬ್ಬ ಅಂದ ಮೇಲೆ ಭೋಜನ ಹೇಗಿರಬೇಕು, ನೀವೇ ಊಹಿಸಿ. ಅವನಿಗೆ ಪ್ರಿಯವಾದ ಉಸಳಿ, ಮೋದಕ, ಆಂಬೋಡೆ, ಜಾಮೂನು ಮುಂತಾದ ಭಕ್ಷ್ಯ ಭೋಜ್ಯಗಳು ಈಗಾಗಲೇ ರಸದೌತಣದಿಂದ ತಣಿದಿದ್ದ ಮನಸ್ಸಿನ ಜೊತೆಗೆ ರಸಗವಳದಿಂದ ಹೊಟ್ಟೆಯನ್ನೂ ತಣಿಸಿದವು.

ಇದೇ ಅಲ್ಲವೆ ಕನ್ನಡ ಕೂಟದ ಸಾರ್ಥಕ್ಯ? ಕನ್ನಡ ಬಂಧುಗಳೊಡನೆ ಕನ್ನಡತನದ ಒಂದು ಸೆಲಬ್ರೇಶನ್! ಹೃದಯಗಳನ್ನು ಬೆಸೆದು, ಹೊಸ ಸ್ನೇಹಸೇತುಗಳನ್ನು ಕಲ್ಪಿಸಿ ತನ್ನ ನಿರಂತರ ಸಾಂಸ್ಕೃತಿಕ ದೀಪವನ್ನು ಭವ್ಯವಾಗಿ ಬೆಳಗಿತ್ತು ಮತ್ತೊಂದು ಕನ್ನಡ ಕೂಟದ ಸಮಾರಂಭ.

English summary
Gowri Ganesha festival was celebrated by Kannada in Lemont, Illinois, USA. Stand up comedian Mysuru Anand and singer Pranati Raghavendra Rao from Karnataka enthralled the Kannadigas. A report by Nalini Maiya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X