• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡತನ ಇರುವುದು ಕಲಾತ್ಮಕ ಚಿತ್ರಗಳಲ್ಲಿ : ಗಿರೀಶ್ ಕಾಸರವಳ್ಳಿ

By ರೇಖಾ ಹೆಗಡೆ ಬಾಳೇಸರ
|

"ಕನ್ನಡ ಚಿತ್ರೋದ್ಯಮಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ, ಬೆಲೆ ತಂದುಕೊಟ್ಟಿರುವವು ಇಲ್ಲಿನ ಕಲಾತ್ಮಕ ಚಿತ್ರಗಳು. ಕನ್ನಡತನ, ಸಾಹಿತ್ಯ, ಸಂಸ್ಕೃತಿ, ನೆಲ-ನುಡಿ, ಪ್ರಸಕ್ತ ವಿದ್ಯಮಾನಗಳೊಂದಿಗೆ ಸಂಬಂಧ ಇಟ್ಟುಕೊಂಡಿರುವವು ಇಲ್ಲಿನ ಆಫ್ ಬೀಟ್ ಚಿತ್ರಗಳು ಮಾತ್ರ" ಎಂದು ಪ್ರಸಿದ್ಧ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯಪಟ್ಟರು. ಕನ್ನಡ ಸಂಘ ಸಿಂಗಪುರ ಏರ್ಪಡಿಸಿದ್ದ 'ಸಂಭಾಷಣೆ- ಗಿರೀಶ್ ಕಾಸರವಳ್ಳಿಯವರ ಜೊತೆ ಒಂದು ಸಂಜೆ' ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸೆಪ್ಟೆಂಬರ್ 6ರ ಸಂಜೆ ನಡೆದ ಈ 'ಸಂಭಾಷಣೆ ಜೊತೆ ಔತಣ' ಕಾರ್ಯಕ್ರಮ, ಕನ್ನಡ ಚಿತ್ರೋದ್ಯಮದ ಸ್ಥಿತಿಗತಿಯ ಬಗ್ಗೆ, ಗುಣಮಟ್ಟದ (ಅಥವಾ ಅದರ ಅನುಪಸ್ಥಿತಿಯ) ಬಗ್ಗೆ ಪ್ರತ್ಯಕ್ಷ ಒಳನೋಟವನ್ನು ಪಡೆಯುವ ಅಪೂರ್ವ ಅವಕಾಶವನ್ನು ಸಿಂಗನ್ನಡಿಗರಿಗೆ ಒದಗಿತ್ತು. ಚಿತ್ರೋದ್ಯಮದ ಇಂದಿನ ಕಳಪೆ ಸಾಧನೆಗೆ, ಗುಣಮಟ್ಟ ಕುಸಿತಕ್ಕೆ ಕಾರಣಗಳೇನು, ಇದರ ಕಾಯಕಲ್ಪ ಹೇಗೆ ಸಾಧ್ಯ ಎಂಬ ಬಗ್ಗೆ ಕಾಸರವಳ್ಳಿ ಅವರು ವಿವರವಾಗಿ ವಿಶ್ಲೇಷಿಸಿದರು. ಅವರ ಮಾತು ಆತ್ಮೀಯವಾಗಿ, ಸರಳವಾಗಿ ಇದ್ದು, ಅವರ ನೇರ ನಡೆ, ನುಡಿ, ವ್ಯಕ್ತಿತ್ವಕ್ಕೆ ಕನ್ನಡಿಯಾಗಿತ್ತು. ಇದೇ ವೇಳೆ ಕಟು ಸತ್ಯ ಹಾಗೂ ತಿಳಿ ಹಾಸ್ಯ ಎರಡನ್ನೂ ಹೊಸೆದು ಮಾಡಿದ 'ನಗೆ ಚಾಟಿ'ಯಂತೆಯೂ ಇತ್ತು.

ಗುಣಮಟ್ಟ ಶೋಚನೀಯ : "ಕನ್ನಡದಲ್ಲಿ ಈಗ ವರ್ಷಕ್ಕೆ ಸುಮಾರು 150 ಚಿತ್ರಗಳು ತಯಾರಾಗುತ್ತಿವೆ. ಸಂಖ್ಯೆಯೊಂದೇ ಅಳತೆಗೋಲಾದರೆ ಚಿತ್ರೋದ್ಯಮ ಉತ್ತಮ ಮಟ್ಟದಲ್ಲಿ ಇದೆ. ಆದರೆ ಗುಣಮಟ್ಟವನ್ನು ಗಮನಿಸಿದರೆ ನಮ್ಮ ಸ್ಥಿತಿ ಶೋಚನೀಯವಾಗಿದೆ. ಎಲ್ಲಿಯವರೆಗೆ ಕನ್ನಡ ಚಿತ್ರೋದ್ಯಮ ಹೊರಭಾಷೆಯ ನಿರ್ಮಾಪಕರ, ವಿತರಕರ ಹಿಡಿತದಲ್ಲಿರುತ್ತದೆಯೋ ಅಲ್ಲಿಯವರೆಗೆ ಕನ್ನಡತನದ ಕಂಪು ಬೀರುವ, ಭಾಷೆಯ ಹಿತ ಬಯಸುವ ಉತ್ತಮ ಚಿತ್ರಗಳು ಬರಲು ಸಾಧ್ಯವಿಲ್ಲ. ಹೊರಗಿನಿಂದ ಬರುವ ಜನಕ್ಕೆ ವಾಣಿಜ್ಯ ಉದ್ದೇಶ ಮುಖ್ಯವೇ ಹೊರತು ಕನ್ನಡದ ಸೊಗಡಲ್ಲ" ಎಂದ ಕಾಸರವಳ್ಳಿ ಅವರು, ಚಿತ್ರೋದ್ಯಮ ಕನ್ನಡಿಗರ ಕೈತಪ್ಪಿ ಹೋಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಭಾಷೆಯ ಮೇಲೆ ಪ್ರೀತಿ, ಗೌರವ ಇಲ್ಲದ ಕಲಾವಿದರನ್ನು ಕರೆಸಿ ಹಾಡಿಸುವ, ಪಾತ್ರ ಮಾಡಿಸುವ ಟ್ರೆಂಡ್ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಕನ್ನಡ ಚಿತ್ರಗಳನ್ನು ಮಾರಾಟ ಮಾಡಲು ಕುಳಿತ ಹೊರಗಿನ ಮಾರಾಟಗಾರರು (ವಿತರಕರು) ಇಂಥ ಭಾಷಾವಿನಾಶಿ ಬೆಂಕಿಗೆ ಗಾಳಿ ಊದುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಶಸ್ತಿಗಾಗಿ ಸಿನೆಮಾ ಅಲ್ಲ : ಕನ್ನಡದ ಸಾಹಿತ್ಯಿಕ ಲೋಕ ಸಿನೆಮಾ ರಂಗದೊಂದಿಗೆ ಬೆರೆತು, ಚಿತ್ರ ನಿರ್ಮಾಣದಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಕೊಂಡರೆ ಚಿತ್ರೋದ್ಯಮದಲ್ಲಿ ಗುಣಮಟ್ಟ ವಾಪಸ್ ಬರಲು ಸಾಧ್ಯ ಎಂಬ ಆಶಾವಾದ ಮಂಡಿಸಿದ ಕಾಸರವಳ್ಳಿ, ಕಲಾತ್ಮಕ ಚಿತ್ರರಂಗ ಸಾಹಿತ್ಯವಲಯದಿಂದ ದೂರ ಇಲ್ಲ ಎಂದೂ ಸ್ಪಷ್ಟಪಡಿಸಿದರು. 'ಯುರೋಪಿನ ಚಿತ್ರೋತ್ಸವಗಳಿಗಾಗಿ, ಪ್ರಶಸ್ತಿಗಳಿಗಾಗಿ ಕಲಾತ್ಮಕ ಚಿತ್ರಗಳನ್ನು ಮಾಡುತ್ತಾರೆ' ಎಂಬ ಆರೋಪವನ್ನು ತಿರಸ್ಕರಿಸಿದ ಅವರು, ಇವತ್ತು ಕನ್ನಡದ ನೆಲ-ನುಡಿ, ಆಗು-ಹೋಗುಗಳಿಗೆ ಸ್ಪಂದಿಸುತ್ತಿರುವವು, ಸಾಹಿತ್ಯದೊಂದಿಗೆ ಸಂಪರ್ಕ ಇಟ್ಟುಕೊಂಡಿರುವವು ಇಂಥ ಚಿತ್ರಗಳೇ ಹೊರತು ಜನಪ್ರಿಯ ಸಿನೆಮಾಗಳಲ್ಲ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು.

ನಂತರ ಸಿಂಗನ್ನಡಿಗರ ಜೊತೆ 'ಪ್ರಶ್ನೋತ್ತರ'ದಲ್ಲಿ ಪಾಲ್ಗೊಂಡ ಅವರು, ಪ್ರೇಕ್ಷಕರ ಪಾಲ್ಗೊಳ್ಳುವಿಕೆಯಿಂದ ನಿರ್ಮಾಣವಾಗುವ ಸಿನೆಮಾಗಳು ಚಲನಚಿತ್ರಗಳ ಗುಣಮಟ್ಟ ಸುಧಾರಿಸಲು ಸಹಾಯಕವಾಗಬಹುದು ಎಂಬ ಆಶಾವಾದ ವ್ಯಕ್ತಪಡಿಸಿದರು. ಚಾನೆಲ್ಗಳ ಹಸ್ತಕ್ಷೇಪ ಅತಿಯಾಗಬಹುದೆಂಬ ಕಾರಣಕ್ಕೆ ತಾವು ಟಿವಿ ಧಾರಾವಾಹಿಗಳ ನಿರ್ಮಾಣಕ್ಕೆ ಮರಳಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇದೇ ರೀತಿ 'ಹಸ್ತಕ್ಷೇಪ ಇಲ್ಲ' ಎಂಬ ಕಾರಣಕ್ಕೆ ತಾವು ಕೆಲವು ನಿರ್ಮಾಪಕರ ಜೊತೆ ಮತ್ತೆ ಮತ್ತೆ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿರುವುದನ್ನೂ ತಿಳಿಯಪಡಿಸಿದರು.

ತಾವು ನಡೆದು ಬಂದ ದಾರಿ, ಜೊತೆ ಕೆಲಸ ಮಾಡಿದ ಕೆಲವು ಹಿರಿ-ಕಿರಿಯ ಕಲಾವಿದರ ವರ್ತನೆ, ತಮ್ಮ ಹಲವು ಚಿತ್ರಗಳು ಮೂಡಿ ಬಂದ ಬಗೆ... ಹೀಗೆ ಹಲವು ವಿ‌ಷಯಗಳನ್ನು ಈ ಸಂದರ್ಭದಲ್ಲಿ ಮೆಲುಕಾಡಿದ ಅವರು, ಈ ಮೂಲಕ ಸಿಂಗಪುರ ಕನ್ನಡಿಗರ ಸಿನೆಮಾ ತಿಳಿವಳಿಯನ್ನು ವಿಸ್ತರಿಸಿದರು.

ಯುನೈಟೆಡ್ ಎಂಟರ್ಟೈನ್ಮೆಂಟ್ ಅಂಡ್ ಮೀಡಿಯಾ ಪ್ರೈ. ಲಿ. ಮತ್ತದರ ಸಹಭಾಗಿಗಳು ಸಿಂಗಪುರದಲ್ಲಿ ಸೆಪ್ಟೆಂಬರ್ 5ರಿಂದ 8ರವರೆಗೆ ಏರ್ಪಡಿಸಿದ್ದ 'ದರ್ಪಣ್- ಬಂಗಾಳಿ ಚಲನಚಿತ್ರೋತ್ಸವ'ದಲ್ಲಿ ಪಾಲ್ಗೊಳ್ಳಲೆಂದು ಕಾಸರವಳ್ಳಿ ಅವರು ಇಲ್ಲಿಗೆ ಭೇಟಿ ನೀಡಿದ್ದರು. ಚಿತ್ರೋತ್ಸವದಲ್ಲಿ ಅವರ 'ಕೂರ್ಮಾವತಾರ' ಚಲನಚಿತ್ರದ ಪ್ರದರ್ಶನ ಇತ್ತು. ಜೊತೆಗೆ 'ಬದಲಾಗುತ್ತಿರುವ (ಚಲನ)ಚಿತ್ರಗಳು, ಬದಲಾವಣೆಗಳನ್ನು ಚಿತ್ರಿಸುವುದು' ಎಂಬ ವಿ‌ಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲೂ ಅವರು ಸಂವಾದಕರಾಗಿ ಪಾಲ್ಗೊಂಡಿದ್ದರು. 'ಕೂರ್ಮಾವತಾರ' ಪ್ರದರ್ಶನದಲ್ಲಿ ಸಿಂಗಪುರ ಕನ್ನಡಿಗರು ಪಾಲ್ಗೊಂಡು, ಸಿನೆಮಾ ಮಾಧ್ಯಮದ ಮೇಲಿನ ಕಾಸರವಳ್ಳಿ ಅವರ ಚಾತುರ್ಯಕ್ಕೆ ಸಾಕ್ಷಿಯಾದರು.

ಕನ್ನಡ ಸಂಘ ಸಿಂಗಪುರದ ಅಧ್ಯಕ್ಷೆ ವಿಶಾಲಾಕ್ಷಿ ವೈದ್ಯ ಅವರು ಗಿರೀಶ್ ಕಾಸರವಳ್ಳಿ ಅವರನ್ನು ಸ್ವಾಗತಿಸಿದರೆ, ಜಯಶ್ರೀ ಭಟ್ ಅವರು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘದ ಪರವಾಗಿ ಮಾಜಿ ಅಧ್ಯಕ್ಷ ಗುರುಪ್ರಕಾಶ್ ಅವರು ಕಾಸರವಳ್ಳಿ ಅವರನ್ನು ಹಾಗೂ ದರ್ಪಣ ಸಂಸ್ಥೆಯ ಅಮಿತ್ ಅವರನ್ನು ಸನ್ಮಾನಿಸಿದರು. ಪ್ರಶ್ನೋತ್ತರ ಕಾರ್ಯಕ್ರಮವನ್ನು ವಿಜಯ ರಂಗ ಪ್ರಸಾದ್ ಅವರು ನಡೆಸಿಕೊಟ್ಟರೆ, ಸಂಘದ ಉಪಾಧ್ಯಕ್ಷೆ ಕವಿತಾ ರಾಘವೇಂದ್ರ ಅವರು ವಂದನಾರ್ಪಣೆ ಮಾಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Most regarded Kannada film director Girish Kasaravalli was in Singapore to participate in Bengali Film Festival. On that occasion he chatted with Kannada Sangha, Singapore and shared his experience and views about film industry. Here is excerpts from the luncheon meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more