ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದನ, ಸಂಗೀತದ ಸಾಣೆಯಲ್ಲಿ ತೇದ ಶ್ರೀಗಂಧ

By ವಿಶ್ವ ಶರ್ಮ, ಸ್ಯಾನ್ ರಮೋನ್, ಕ್ಯಾಲಿಫೊರ್ನಿಯಾ
|
Google Oneindia Kannada News

ಸ್ಯಾನ್ ಹೋಸೆ ಕ್ಯಾಲಿಫೋರ್ನಿಯಾದಲ್ಲಿ ಅದ್ಧೂರಿಯಾಗಿ ನಡೆದ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನಾ ಗಣೇಶ ಪೂಜೆಯಲ್ಲಿ ಬಾಲಕಿಯೊಬ್ಬಳು ಸುಶ್ರಾವ್ಯವಾಗಿ ಹಾಡುತ್ತಿದ್ದಳು. ಪೂಜೆಯಲ್ಲಿದ್ದವರೆಲ್ಲಾ ಆಕೆಯ ಗಾನಚಾತುರ್ಯದಿಂದ ತನ್ಮಯರಾಗಿ ತಲೆದೂಗಿದ್ದರು. ನಂತರ ಊಟವಾಗುತ್ತಿರುವಾಗ ಇವಳ ಹಾಡಿನ ಬಗ್ಗೆಯೇ ಮಾತು. ಪಿ.ಬಿ ಶ್ರೀನಿವಾಸರ ಹಳೆಯ ಹಾಡಂತೆ "ಇವಳು ಯಾರು ಬಲ್ಲಿರೇನು? ಇವಳ ಹೆಸರ ಹೇಳಲೇನು? ಇವಳ ದನಿಗೆ ತಿರುಗದರಿರುವರೇನು? ಇವಳು ಏಕೋ ಬಂದು ಮನವ ಸೆಳೆದಳು.." ಎಂದು ಮನಸು ಗುನುಗುತ್ತಿತ್ತು. ಇವಳು ಚಿಗುರು ಪ್ರತಿಭೆ ಚಂದನಾ.

ತಾನ್‌ಸೇನ್ ಹಾಡಿದರೆ ಮೃಗಗಳೂ ಆಕರ್ಷಿತವಾಗುತ್ತಿದ್ದವು ಎಂದು ಕೇಳಿದ್ದೇವೆ. ಕುಮಾರವ್ಯಾಸನು ಹಾಡಿದರೆ ಕಲಿಯುಗ ದ್ವಾಪರವಾಗುವುದು ಎಂದು ಕೇಳಿದ್ದೇವೆ. ಆದರೆ ಒಂದು ಕಂಠ ಮಾಧುರ್ಯಕ್ಕೆ ಮರುಳಾಗಿ ನಾವು ಅದರ ಮೂಲವನ್ನು ಹುಡುಕಿ ಹೋಗುವುದು ಅತಿವಿರಳ. ಹಾಗೆ ಹುಡುಕಿ ಹೋದಾಗ ಗೊತ್ತಾಗಿದ್ದು, ಸುರಗಾನದ ಚಿಲುಮೆ ಬೆಂಗಳೂರಿನ ಮುದ್ದಾದ ಕುಮಾರಿ ಚಂದನ ಮುರಳೀಧರ ಎಂಬ ಬಾಲಕಿ ಎಂದು.

ಮೂರು ದಿವಸಗಳ ಅಕ್ಕ ಸಮ್ಮೇಳನದಲ್ಲಿ ನಾನಾ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಕಿಕ್ಕೇರಿ ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ ಮಕ್ಕಳ 'ಅಕ್ಕ ಐಡಲ್' ಭಾಗ ಮುಗಿಸಿ, ಕಾಫಿಯನ್ನು ಹುಡುಕಿಕೊಂಡು ಹೊರಟಾಗ ಬಹಳ ಇಂಪಾದ ಧ್ವನಿ ಕೇಳಿತು. ಸಂಸ್ಕೃತಿ ಸಚಿವೆ ಉಮಾಶ್ರೀಯವರು ಭಾಗವಹಿಸಲಿದ್ದ Women's Forumನಲ್ಲಿ ಕುಮಾರಿ ಚಂದನ ಹಾಡುತ್ತಿದ್ದರು. ಕಾಫಿ ಮರೆತು ಅಲ್ಲೆ ಕುಳಿತೆ. [ಸಂಗೀತ ಮಾಂತ್ರಿಕರ ಭ್ರಮೆ]


ಮುಂದಿನ ದಿನವೂ ಹಾಡಿನ ಇಂಪು ಕೇಳಿ ಹುಡುಕಿ ಹೊರಟೆ. ಹಾಸ್ಯ ಚಕ್ರವರ್ತಿ ಪ್ರೊ. ಕೃಷ್ಣೇಗೌಡರು 'ಭಾವಧಾರೆ' ಎನ್ನುವ ಕಾರ್ಯಕ್ರಮದಲ್ಲಿ ಭಾಷೆ ಪದ್ಯ ಸಂಗೀತ ಇವುಗಳ ಮೇಲೆ ವ್ಯಾಖ್ಯಾನ ಮಾಡುತ್ತಿದ್ದರು ಹಾಗೂ ಚಂದನಳಿಂದ ಹಾಡಸುತ್ತಿದ್ದರು. ಅಲ್ಲೇ ಕುಳಿತೆ. [ಮೆರೆಯುವವರ ಮೆರೆದಾಟ ಕ್ಷಣಿಕ]

ಅಕ್ಕಸಮ್ಮೇಳನದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಚಂದನ ಹಾಗೂ ಅವರ ತಾಯಿ ವಿಜಯ ಹಾಗೂ ತಂದೆಯವರು ಮುರಳಿ ಸಿಕ್ಕಿದ್ದರು. ಅಗ ಈ ಸುಂದರ ಬಾಲಕಿಯ ಮಧುರ ಕಂಠದ ಬಗ್ಗೆ ಹೆಚ್ಚು ವಿಚಾರ ತಿಳಿಯಿತು. ನಮ್ಮ ಊರಲ್ಲಿ ಇವಳ ಕಾರ್ಯಕ್ರಮ ಮಾಡಬಹುದೆ ಎಂದು ಅವರ ತಾಯನ್ನ ಕೇಳಿದೆ. ಅವರು ಒಪ್ಪಿದರು.

ದೇವ ಪೂಜೆಯಲ್ಲಿ ಅರ್ಪಿಸುವ ಚಂದನ ಎಂದರೆ ಗಂಧದ ಮರದ ತುಂಡೊದನ್ನು ಸಾಣೆಮಣೆಯ ಮೇಲೆ ದಿವ್ಯ ಅರ್ಪಣ ಭಾವದಿಂದ ಗಂಗೆ ನೀನೇ ಎನ್ನುವ ನೀರಿನೊಡನೆ ತೇಯ್ದಾಗ ಸಿಗುವ ತಂಪಾದ, ಅತಿಮೃದುವಾದ ಶ್ರೀಗಂಧದ ಸುರಭಿಯ ಸಾರ. ಕುಮಾರಿ ಚಂದನಳ ಮದುರ ಗಾನವೂ ಅಂತೆಯೆ. ಕರ್ನಾಟಕ ಶಾಸ್ತ್ರೀಯ ಸಂಗಿತದ ಶ್ರೀಗಂಧವನ್ನು ಸುಗಮ ಸಂಗೀತದ ಸಾಣೆಯಲ್ಲಿ ಗುರು ಕೃಪೆಯ ಗಂಗೆಯಲ್ಲಿ ಅವಳ ಜನ್ಮದತ್ತವಾದ ದಿವ್ಯ ಭಾವದೊಂದಿಗೆ ತೇಯ್ದಾಗ ಸಿಗುವ ಸಾರ ಚಂದನಳ ಕನ್ನಡ ಗಾಯನ. ಇವಳ ಕಂಠದ ಇಂಪು ಕೇಳಿದವರು ಶ್ರೀಕೃಷ್ಣನ ಕೊಳಲಿಗೆ ಗೋಪರು ಸೆರೆಯಾದಂತೆ ತನ್ಮಯರಾಗುತ್ತಾರೆ.


ಶಾಸ್ತ್ರೀಯ ಸಂಗೀತವಾಗಲಿ, ಸುಗಮ ಸಂಗೀತವಾಗಲೀ ಶ್ರುತಿ ಪೆಟ್ಟಿಗೆಯೊಂದಿಗೆ ಒಂಟಿಯಾಗಾಗಲೀ, ಅ ತಕ್ಷಣ ಏರ್ಪಡಿಸಿದ ಪಕ್ಕವಾದ್ಯ ಮತ್ತು ಇತರ ಗಾಯಕರೊಡನಾಗಲೀ ಅಕ್ಕ ಸಮ್ಮೇಳನದ ನಿರ್ವಾಹಕರು ಕರೆದಾಗ ಸಂತೋಷವಾಗಿ ಹಾಡಿದ್ದಳು. ಈಗಾಗಲೆ ಹದಿಮೂರು ವರ್ಷದ ಕುಮಾರಿ ಚಂದನ "ನಾವು ಗೆಳೆಯರು" ಚಲನಚಿತ್ರದ ಹಿನ್ನೆಲೆ ಗಾಯಕಿ; ಅತಿವಿರಳವಾಗಿ ಅವಕಾಶ ಸಿಕ್ಕುವ 2013ರ ಮೈಸೂರು ದಸರಾ ನವಮಿ ಹಬ್ಬದ ದಿನ ಎರಡು ಗಂಟೆಗಳ ಕಾಲ ಕಛೇರಿ ಮಾಡಿದ್ದಾಳೆ; ದೇವರ ನಾಮ, ಭಗವದ್ಗೀತೆ ಹಲವಾರು ಕಛೇರಿಗಳಲ್ಲಿ ಬಹಳಷ್ಟು ಬಹುಮಾನಗಳು ಇವಳದಾಗಿವೆ.

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಚಿನ್ಮಯ ರಾವ್ ಅವರಿಂದಲೂ ಹಾಗೂ ಸುಗಮ ಸಂಗೀತವನ್ನು ನರಹರಿ ದೀಕ್ಷಿತ್ ಅವರಿಂದಲೂ ಕಲಿಯುತ್ತಿದ್ದಾಳೆ. ಹಾಗೆಯೆ, ಓದಿನಲ್ಲೂ ಮುಂದು. ಲಾಸ್ ಏಂಜಲಿಸ್ ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಗಣೇಶ ಹಬ್ಬದಲ್ಲಿ ಚಂದನಾ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 20 ನಿಮಿಷಗಳ ಕಾಲ ಸುಗಮ ಸಂಗೀತದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಎಲ್ಲರ ಮೆಚ್ಚಿಗೆಗೆ ಪಾತ್ರಳಾಗಿದ್ದಾಳೆ. ಲಾಸ್ ಏಂಜಲಿಸ್ ಪುತ್ತಿಗೆ ಮಠದಲ್ಲಿಯು ಯಶಸ್ವಿಯಾಗಿ ಕಾರ್ಯಕ್ರಮ ನೀಡಿ ದೇವರ ಅನುಗ್ರಹಕ್ಕೆ ಪಾತ್ರಳಾಗಿದ್ದಾಳೆ.


ಕುಮಾರಿ ಚಂದನಾ ಅವರ ಸುಗಮ ಸಂಗೀತ ನಮ್ಮ ಸ್ಯಾನ್ ರಮೋನ್ ಶ್ರೀ ದತ್ತ ಸಾಯ್ ಮಂದಿರದಲ್ಲಿ ದಿಢೀರ್ ಸಂಗೀತ ಸಭೆ ಏರ್ಪಡಿಸಿದ್ದೆವು. ಶಾಸ್ತ್ರೀಯ ಸಂಗಿತ, ಭಾವಗೀತೆಗಳು, ಹಾಗೂ ಸುಗಮ ಸಂಗೀತ ತುಂಬಿದ್ದ ಕಾರ್ಯಕ್ರಮ ಬಹಳ ಸೊಗಸಾಗಿ ಸಾಗಿತು. ಸಂಗೀತ ವಿಶಾರದರು ಇವಳ ಉಚ್ಛಾರಣೆ, ಸ್ವರ, ರಾಗವನ್ನು ಶೈಲಿ ಮುಂತಾದ ಗಾಯನ ಕಲೆಯನ್ನು ಬಹಳವಾಗಿ ಪ್ರಸಂಶಿಸಿದರು. ಅವಳ ಹಾಡು ಕೇಳುತ್ತಿದ್ದಾಗ ಚಿಕ್ಕ ಮಕ್ಕಳು, ಹಿರಿಯರಿಗೆ ಏಳಲು ಮನಸ್ಸಾಗಲಿಲ್ಲ ಎಂದು ಆನಂದ ಪಟ್ಟರು. ನಮ್ಮ ಪುರೋಹಿತರು ಸಹ ಅದ್ಭುತವಾಗಿತ್ತು ಎಂದು ಹೊಗಳಿ ಬಹುಮಾನವಾಗಿ ವೇದಮಂತ್ರದೊಂದಿಗೆ ಶಾಲನ್ನು ಹೊದಿಸಿದರು. ಎಲ್ಲೆಲ್ಲೂ ಗುರು ಕೃಪೆ ಒದಗಿರುವ ಈ ಬಾಲಕಿ ಸಂಗೀತದ ಹೆಮ್ಮರವಾಗುದರಲ್ಲಿ ಸಂದೇಹವಿಲ್ಲ.

ಯೋಗ ಜೀವನದಲ್ಲಿ ನಿರತನಾದವನ ಸಣ್ಣ ಆದೇಶ. ನಿನಗೆ ಮಾನುಷೀ ವಿಣೆ, ಹಾಗೂ ಸರಸ್ವತಿ ವಿಚಾರ ಹೇಳಿದ್ದೇನೆ, ವ್ಯಸನಗಳು ಮತ್ತು ಹೆಮ್ಮೆ ನಿನ್ನ ಬಳಿಗೆ ಬರದಿರಲಿ; ಪ್ರಾಣಾಯಾಮ ಗುರುಗಳಿಂದ ಕಲಿತು ಆಭ್ಯಾಸ ಮಾಡು; ಸದಾ ಸರಳತೆ ನಿನ್ನ ಮುತ್ತಿರಲಿ, ಜೇನ ನೀತಿ ನಿನ್ನದಾಗಲಿ, ನುಡಿಯಲ್ಲಿ ನಡೆಯಲ್ಲಿ ಲೋಕಕ್ಕೆ ಸವಿ ಜೇನಾಗು, ಚಂದನ ನೀನು ಕರ್ನಾಟಕದ ಹಿರಿಮೆಗೆ ಕಾರಣವಾಗು. [ರಘು ಹಾಲೂರು ಸಂದರ್ಶನ]

Child artist Chandana mesmerizes US Kannadigas

ಜೇನ ನೀತಿ

ಜೇನನುಡಿಯನಾಡು ಎಡೆಬಿಡದ ತೊಡಕಮಡಿಲಲಿ ಉಡುಗಿ
ಅನುಗಾಲ ಮಲನಾಡ ಮಳೆಯಂತೆ ಸುರಿವ ಕಹಿಯನುಣುವರಿಗೆ
ದೀನತನದ ಮುಕ್ತಿ ದಾರಿಯ ಬೆಳಕ ಬೀರ್ವ ಹಾಡಲಿ ||
ಜೇನಸವಿಯ ನೀಡು ಕುಂದುಕೊರತೆಯಿಂದ ಅಂಧರಾಗಿ
ಕೊನೆಯಿರದ ಆಸೆಯಸೆಳೆತದಿಂದ ತಮ್ಮನೇ ಮಾರಿ ಉಣುವರಿಗೆ
ಖಿನ್ನತೆಯಿರದ ಉನ್ನತ ಬಾಳುವೆಯ ಹಿರಿಮೆ ತೋರ್ವ ಹಾಡಲಿ ||
ಜೇನ ಗೂಢ ಮರ್ಮ ಬಿಡಿಸು ಉಣದೆ ಉಣಿಸದೆ ಕೂಡುವ ನಿಪುಣರಿಗೆ
ನಲಿಯುತ ಹಾಡಿ ಆಡಿ ಸವಿಸವಿಯುತ ಜೀವ ಕಣವ ಹರಡಿ
ಗಲಿಬಿಲಿಯ ಸಂತೆಯಲಿ ಸಂತನಂತಿರುವರ ಮಹಿಮೆ ಸಾರ್ವ ಹಾಡಲಿ ||

English summary
Chandana Murali, a 13-year old girl from Bengaluru, stole everyone's heart at AKKA with multiple performances that included a session with Prof. Krishne Gowda. People were so thrilled by her singing that they independently organized a small concert from her in San Ramon a week after AKKA Sammelana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X