• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೃಂದಾವನ ದಶಮಾನೋತ್ಸವ ವಾಹ್ ರೇ ವಾಹ್!

By ಶ್ರೀವತ್ಸ ಜೋಶಿ
|

ಯಾವುದೇ ಕಾರ್ಯಕ್ರಮವಿರಲಿ, ಎಷ್ಟೇ ಅಚ್ಚುಕಟ್ಟಾಗಿ ಆಯೋಜಿಸಬೇಕೆಂದುಕೊಂಡಿದ್ದರೂ ಮೆಲ್ಲಬೇಕಿರುವ ಮೊಸರವಲಕ್ಕಿಯಲ್ಲಿ ಕಲ್ಲು ಬಂದಂತೆ ಸಲ್ಲದ ಅಡೆತಡೆಗಳು ಬಂದೇ ಬರುತ್ತವೆ. ಆದರೆ, ನ್ಯೂಜೆರ್ಸಿಯಲ್ಲಿರುವ ಬೃಂದಾವನ ಕನ್ನಡ ಕೂಟದ ದಶಮಾನೋತ್ಸವ ಸಮಾರಂಭ ಸಣ್ಣಪುಟ್ಟ ಅಡೆತಡೆಗಳನ್ನು ಕೂಡ ಮೀರಿ ಭಲೇ ಎನಿಸಿಕೊಂಡಿದೆ. ಇಡೀ ಕಾರ್ಯಕ್ರಮವನ್ನು ಗುಲಾಬ್ ಜಾಮೂನಿನಂತೆ ಆಸ್ವಾದಿಸಿರುವ ಶ್ರೀವತ್ಸ ಜೋಶಿ ಅವರು, ಕಾರ್ಯಕ್ರಮದ ರೂವಾರಿ, ಬೃಂದಾವನ ಕನ್ನಡ ಕೂಟದ ಅಧ್ಯಕ್ಷೆ ಉಷಾ ಪ್ರಸನ್ನ ಅವರಿಗೆ ಬರೆದ ಆತ್ಮೀಯ ಪತ್ರ ಇಲ್ಲಿದೆ. ಓದಿ ಆನಂದಿಸಿ.

ಪ್ರೀತಿಯ ಉಷಾ ಪ್ರಸನ್ನ:

ನಮಸ್ಕಾರ. ನಿಮ್ಮ 'ಬೃಂದಾವನ' ಕನ್ನಡಕೂಟದ ದಶಮಾನೋತ್ಸವ (ಶನಿವಾರ 29 ನವೆಂಬರ್ 2014, ನ್ಯೂಜೆರ್ಸಿ, ಅಮೆರಿಕ) ಸಮಾರಂಭದಲ್ಲಿ ಸಾಂಸ್ಕೃತಿಕ ರಸದೌತಣ ಸವಿದ ಖುಷಿಯಿಂದ ನಿಮಗೆ ಈ ಪತ್ರ.

ಆಹಾ... ಎಷ್ಟು ಚೆನ್ನಾಗಿ ಆಯೋಜಿಸಿದ್ದೀರಿ ಕಾರ್ಯಕ್ರಮವನ್ನ! ಎಂಥ ಸಡಗರ ಸಂಭ್ರಮ! ಮದುವೆಮನೆಯೋ ಎಂಬಂತಿದ್ದ ಆತ್ಮೀಯ ವಾತಾವರಣ! ವಾಹ್ ರೇ ವಾಹ್... ಸಖತ್ ಮಜಾ ಸಿಕ್ತು. ನೆನೆಸಿಕೊಂಡು ಈಗಲೂ ಆ ಸವಿಯನ್ನು ಮೆಲುಕು ಹಾಕುತ್ತಿದ್ದೇನೆ.

ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ತುಂಬಾನೇ ಚೆನ್ನಾಗಿದ್ದವು. ಬೆಳಿಗ್ಗೆ ಹನ್ನೊಂದಕ್ಕೆ ಆರಂಭವಾದ ರಸಧಾರೆ ರಾತ್ರಿ ಹನ್ನೆರಡವರೆಗೂ ಹರಿಯಿತು, ಆದರೆ ಒಬ್ಬರಿಗಾದ್ರೂ ಒಂದೇಒಂದು ಕಾರ್ಯಕ್ರಮ ಬೋರ್ ಹೊಡೆಸಿತಾ ಕೇಳಿ. ಊಹುಂ. ಒಂದಕ್ಕಿಂತ ಒಂದು ಸೂಪರ್. [ನನ್ನ ಜೀವಮಾನದ ಮರೆಯಲಾರದ ಅನುಭವ]

ಡೆಟ್ರಾಯಿಟ್‌ನಿಂದ ಬಂದಿದ್ದ ಅನಿತಾ ಮತ್ತು ಸುನೀತಾ ಅನಂತಸ್ವಾಮಿ ಸೋದರಿಯರ ಭಾವಗೀತೆಗಳು... ನಮಗೆ ವಿಶೇಷವಾದೊಂದು ಅನುಭೂತಿಯನ್ನ ಕೊಟ್ಟವು. ಅವರ ತಂದೆ ದಿ.ಮೈಸೂರು ಅನಂತಸ್ವಾಮಿ, ಅಣ್ಣ ದಿ.ರಾಜು ಅನಂತಸ್ವಾಮಿಯರ ಚಿತ್ರ ನಮ್ಮ ಕಣ್ಮುಂದೆ ಹಾದುಹೋಯ್ತು. ಸುನೀತಾ ಅವರ ಮಗನೂ ಹಾಡ್ತಾನೆ ಅಂತ ಗೊತ್ತಿರ್ಲಿಲ್ಲ. 'ಕುರಿಗಳು ಸಾರ್ ಕುರಿಗಳು...' ಎಷ್ಟು ಚೆನ್ನಾಗಿ ಹಾಡಿದ! ಅಜ್ಜನಂತೆ ಮೊಮ್ಮಗ, ಸುಗಮಸಂಗೀತ ಕಲೆ ಆ ಹುಡುಗನಿಗೆ ರಕ್ತದಲ್ಲೇ ಬಂದಿದೆ. ಮತ್ತೆ, ಅವರಿಗೆಲ್ಲ ತಬಲಾ ಸಾಥ್ ನೀಡಿದ್ನಲ್ಲಾ ಆ ಪುಟ್ಟ ಹುಡುಗ ಹನ್ನೊಂದು ವರ್ಷದವನ ಕೈಚಳಕ ನೋಡಿ ನಮಗೆಲ್ಲ ರೋಮಾಂಚನ. ದಶಮಾನೋತ್ಸವಕ್ಕೆಂದೇ ವಿಶೇಷವಾಗಿ ರಚಿಸಿದ, ಸುನೀತಾ ಅವರು ಸ್ವರಸಂಯೋಜಿಸಿದ ಆ ಗೀತೆ ಸ್ವತಃ ನಿಮ್ಮ ಪತಿಮಹಾಶಯ ಪ್ರಸನ್ನ ಅವರೇ ಬರೆದದ್ದಂತೆ ಅಲ್ವಾ? ಅಬ್ಬಾ ಅವರು ಕವಿ ಅಂತ ಗೊತ್ತೇ ಇರಲಿಲ್ಲ ನಮಗೆ!

ಡಾ.ದೀಪ್ತಿ ನವರತ್ನ ಅವರು ನಡೆಸಿಕೊಟ್ಟ 'ಎಂ.ಎಸ್.ಸುಬ್ಬುಲಕ್ಷ್ಮಿಯವರಿಗೆ ಶ್ರದ್ಧಾಂಜಲಿ' ಗೀತಗಾಯನ ಕಾರ್ಯಕ್ರಮವೂ ಅಚ್ಚುಕಟ್ಟಾಗಿತ್ತು. ಸುಬ್ಬುಲಕ್ಷ್ಮಿಯವರ ಜನಪ್ರಿಯ ಹಾಡುಗಳನ್ನೆಲ್ಲ ನೆನಪುಮಾಡ್ಕೊಟ್ರು ಅವರು. ಹಾಗೆಯೇ ಎಂ.ಜಿ.ಪ್ರಸಾದ್ ಅವರು ನಿರೂಪಿಸಿದ, ಚೇತನ್ ಹೆಬ್ಬಾರ್ ಮತ್ತು ತಂಡದವರು ಶಾಸ್ತ್ರೀಯನೃತ್ಯ ಮಾಡಿ ತೋರಿಸಿದ ದಾಸೋತ್ಸವ ಕೂಡ ಸುಂದರವಾಗಿ ಮೂಡಿಬಂತು. ಅಂತೆಯೇ ಚಂದ್ರು-ಸತೀಶ್-ಅಶೋಕ್ ನಡೆಸಿಕೊಟ್ಟ ರಂಗಗೀತೆಗಳ ಕಾರ್ಯಕ್ರಮ. ದಾಸಸಾಹಿತ್ಯ, ರಂಗಗೀತೆಗಳು.. ಇವೆಲ್ಲ ನಿಜಕ್ಕೂ ಕನ್ನಡಭಾಷೆಯ ದೊಡ್ಡ ಆಸ್ತಿ.

ಮತ್ತೆ ನಿಮ್ಮ ಕನ್ನಡಕೂಟದ ಯುವಸದಸ್ಯರ ಉತ್ಸಾಹ, ಪ್ರತಿಭೆಗಳಂತೂ ಅದ್ಭುತ. ಕನ್ನಡ ಚಿತ್ರಗೀತೆಗಳಿಗೆ ಎಷ್ಟು ಸೊಗಸಾಗಿ ಡ್ಯಾನ್ಸ್ ಮಾಡಿದ್ರು ಅವರೆಲ್ಲ! ಆ ಪುಟ್ಟ ಹುಡುಗನೊಬ್ಬ ಸ್ಯಾಕ್ಸೊಫೋನ್‌ನಲ್ಲಿ 'ನಮ್ಮಮ್ಮ ಶಾರದೆ...', 'ತಂಬೂರಿ ಮೀಟಿದವ...' ಕೀರ್ತನೆಗಳನ್ನು ಅದೆಷ್ಟು ಲೀಲಾಜಾಲವಾಗಿ ನುಡಿಸಿದ! ಜರಿಲಂಗ ತೊಟ್ಟ ಆ ಚಿಕ್ಕಚಿಕ್ಕ ಹುಡುಗಿಯರೂ ಹಾಡುತ್ತ ಹೆಜ್ಜೆಹಾಕುತ್ತ ಎಷ್ಟು ಮುದ್ದಾಗಿ ಕಾಣಿಸ್ತಿದ್ರು. ಅವರಿಬ್ರ ಲಂಗಗಳ ಜರಿ ಸಿಕ್ಕಾಕ್‌ಕೊಂಡು ಒಂದುಕ್ಷಣ ಸಯಾಮಿಸ್ ಅವಳಿಗಳಂತೆ ಅವರು ಕಂಡುಬಂದದ್ದೂ ಒಂದು ಮುಗ್ಧಮನರಂಜನೆ ಆಯ್ತು ನಮಗೆಲ್ಲ.

ಕಂಡೆ ಕಂಡೆ ಕಂಡೆ ಕಂಡೆ ನಾ... ಅಮೆರಿಕನ್ನಡತಿಯರ ಕಂಸಾಳೆನರ್ತನಾ...

ನಾನು ಸೂಕ್ಷ್ಮವಾಗಿ ಗಮನಿಸಿದ್ದು ಏನ್ ಗೊತ್ತಾ, ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರೂ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ಅಭ್ಯಾಸ ಮಾಡಿ ಪ್ರೊಗ್ರಾಂ ಕೊಟ್ಟಿದ್ದಾರೆ ಅನ್ನೋದು ನೋಡಿದಕೂಡಲೇ ತಿಳೀತಿತ್ತು. ನಿಮ್ಮ ಕೂಟದ ಯುವತಿಯರೆಲ್ಲ ಸೇರಿ ಪ್ರಸ್ತುತಪಡಿಸಿದ ಕಂಸಾಳೆ ಕುಣಿತವಂತೂ ಸೂಪರ್ರೋಸೂಪರ್. ಮಣಭಾರದ ಕಂಚಿನತಾಳಗಳನ್ನು ಅದಕ್ಕೋಸ್ಕರ ಕರ್ನಾಟಕದಿಂದ ತರೆಸಿ, ತಾಲೀಮು ನಡೆಸಿ ಎಷ್ಟು ಚಂದ ಕುಣಿತ ಮಾಡಿದ್ರು. ಅದೇನು ಎನರ್ಜಿ, ಅದೆನು ಎಂತ್ಯುಸಿಯಾಸಂ ಅವ್ರಿಗೆಲ್ಲ! ಮೆಚ್ಚಲೇಬೇಕು!

ಸ್ಕಿಟ್‌ಗಳೂ ಸಖತ್ ನಗುಬರಿಸಿದ್ವು. ನ್ಯೂಯಾರ್ಕ್ ಕನ್ನಡಕೂಟದ ಸದಸ್ಯರು ಅಭಿನಯಿಸಿದ 'ಕಿವುಡು ಸಾರ್ ಕಿವುಡು' ಚೆನ್ನಾಗಿತ್ತು, ಕನೆಕ್ಟಿಕಟ್ ಕನ್ನಡಕೂಟದ ಸದಸ್ಯರು ಪ್ರಸ್ತುತಪಡಿಸಿದ 'Work from homeಊ Facebook ಪ್ರಪಂಚವೂ' ಅಂತೂ ಹೊಟ್ಟೆಹುಣ್ಣಾಗುವಂತೆ ನಗಿಸಿತು. Work-from-home ಮಾಡುವಾಗ ಲ್ಯಾಪ್‌ಟಾಪ್ onlineಆಗಿಯೇ ಇರುವುದಕ್ಕೆ Enter keyಯ ಮೇಲೆ ಪ್ರೆಷರ್ ಕುಕ್ಕರ್‌ನ ವೈಟ್ ಇಡೋ ಉಪಾಯ! ಓಹೋ ಒಮ್ಮೆ ಮಾಡಿನೋಡ್ಲೇಬೇಕಾದ್ದು ಇನ್ನೊಂದು ಸ್ಕಿಟ್ 'ಸಖತ್ ಬ್ರಹ್ಮಾಂಡ'ದಲ್ಲಿ ಟಿವಿಜ್ಯೋತಿಷಿಗಳಿಗೆ ಟಾಂಟ್ ಕೊಟ್ಟರೀತಿ, ಮುಂಡಾಮೋಚ್ತು ಕುಖ್ಯಾತ ನರೇಂದ್ರಶರ್ಮನನ್ನು ಗೇಲಿಮಾಡಿದ ರೀತಿ ಭಲೇ ಮಜಾ ಇತ್ತು.

ಕೊನೆಯಲ್ಲಿನ ರಸಮಂಜರಿಯಂತೂ "ಐಸಿಂಗ್ ( I sing ಅಲ್ಲ, ನಾನು ಹಾಡೋದಿಲ್ಲ ಕೇಳಿಆನಂದಿಸ್ತೇನೆ ಅಷ್ಟೇ) ಆನ್ ದ ಕೇಕ್" ಇದ್ದಹಾಗಿತ್ತು. ಬಾಸ್ಟನ್‌ನಿಂದ ಬಂದಿದ್ದ ಸೌಮ್ಯಶ್ರೀ, ಕ್ಯಾಲಿಫೋರ್ನಿಯಾದಿಂದ ಬಂದಿದ್ದ ಅಕ್ಷತಾ ಮತ್ತು ಕೃಷ್ಣ, ಹಾಗೂ ನಿಮ್ಮೂರಿನವರೇ ಆದ ಸಿಂಹಾದ್ರಿ, ಶ್ರೇಯಸ್, ಪವನ್, ನೇಹಾ... ಎಲ್ಲರೂ ಬಹಳ ಚೆನ್ನಾಗಿ ಹಾಡಿದ್ರು. ಪ್ರೊಫೆಷನಲ್ ಹಿನ್ನೆಲೆಗಾಯಕರಿಗೆ ಏನೇನೂ ಕಮ್ಮಿಯಿಲ್ಲ ಅವರೆಲ್ಲ. ಬೇರೆಬೇರೆ ಕಾಂಬಿನೇಷನ್‌ಗಳಲ್ಲಿ ಯುಗಳಗೀತೆಗಳನ್ನು ಆಯ್ದುಕೊಂಡಿದ್ದು ಕಾರ್ಯಕ್ರಮಕ್ಕೊಂದು ವಿಶಿಷ್ಟ ಅಂದ ಕೊಟ್ಟಿತು. ಎಲ್ಲ ಹಾಡುಗಳೂ ಚಂದ, ಶಿಲೆಗಳು ಸಂಗೀತವ ಹಾಡಿವೆ.... ಒಂಚೂರು ಹೆಚ್ಚೇ ಚಂದ! ಕೊನೆಯಲ್ಲಿ ಪ್ರೇಕ್ಷಕರ ಕುಣಿತಕ್ಕೆಂದೇ ಹಾಡಿದ 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ...', 'ಬೋರ್ಡು ಇರದ ಬಸ್ಸಿನ ಪಂಕಜಾ...', 'ಹುಟ್ಟಿದರೆ ಕನ್ನಡನಾಡಲಿ ಹುಟ್ಟಬೇಕು...' ಎಲ್ಲವೂ "ಅಗ್ದೀ ಛಲೋ."

ಇಷ್ಟೆಲ್ಲ ಬರೆದ ಮೇಲೆ ಊಟದ ವಿಚಾರ ಹೇಳದಿದ್ರೆ ಹೇಗೆ? ಇಷ್ಟು ಒಳ್ಳೆಯ ರುಚಿಕಟ್ಟಾದ ಊಟವನ್ನು ನಾನು ಇಲ್ಲಿನ ಬೇರಾವ ಸಮ್ಮೇಳನಗಳಲ್ಲಿ, ಕನ್ನಡಕೂಟ ಕಾರ್ಯಕ್ರಮಗಳಲ್ಲಿ ಕಂಡದ್ದಿಲ್ಲ. ಗುಲಾಬ್‌ಜಾಮೂನ್ ನೆನಪಿಸಿಕೊಂಡರೆ ಈಗಲೂ ಬಾಯಿಯಲ್ಲಿ ನೀರು! ಮೈಸೂರು ಮೂಲದವರ ವುಡ್‌ಲ್ಯಾಂಡ್ಸ್ ವೆಜಿಟೇರಿಯನ್ ಕ್ಯಾಟರರ್ಸ್ ವ್ಯವಸ್ಥೆಮಾಡಿದ್ದಂತೆ ಅಲ್ವಾ? ಅವರ ಬಿಜಿನೆಸ್ ಚೆನ್ನಾಗಿ ಮುಂದುವರಿಯಲಿ ಎಂದು ಸಂತೃಪ್ತ ಹೊಟ್ಟೆಗಳೆಲ್ಲ ಅವರನ್ನು ಆಶೀರ್ವದಿಸಿವೆ ಎಂದು ಆ ಕ್ಯಾಟರರ್ಸ್‌ಗೆ ತಿಳಿಸಿಬಿಡಿ.

ಇಡೀ ದಿನದ ಕಾರ್ಯಕ್ರಮದಲ್ಲಿ ಯಾವ್ದಾದ್ರೂ ಒಂದು ಅಂಶದಲ್ಲಾದ್ರೂ ನ್ಯೂನತೆ ಕಳಪೆಮಟ್ಟ ಹುಡುಕೋಣ ಅಂದ್ರೆ ಯಾವುದಕ್ಕೂ ಅವಕಾಶಕೊಡ್ಲಿಲ್ಲವಲ್ಲ ನೀವು! ಉದ್ದುದ್ದ ಭಾಷಣಕಾರರನ್ನು ಕರೆಸದೆ ಇದ್ದದ್ದಕ್ಕಾಗಿ ಪ್ರೇಕ್ಷಕರೆಲ್ಲರ ಪರವಾಗಿ ನಿಮಗೆ ವಿಶೇಷ ಅಭಿನಂದನೆಗಳು ಸಲ್ಲಬೇಕು. ಸಾಂಕೇತಿಕವಾಗಿ ಸಭಾಕಾರ್ಯಕ್ರಮ ಚಂದಗಾಣಿಸಿದ ಡಾ.ಮನೋಜ್ ಮಹಾಪಾತ್ರ (ನ್ಯೂಯಾರ್ಕ್‌ನಲ್ಲಿ ಭಾರತೀಯ ದೂತಾವಾಸದ ಮುಖ್ಯಸ್ಥ) ಮತ್ತು ಶ್ರೀನಿವಾಸ ಪ್ರಸಾದ್ (ಸಂಯುಕ್ತರಾಷ್ಟ್ರಸಂಸ್ಥೆಗೆ ನಿಯೋಜಿತ ಸಚಿವ) ಅವರಿಬ್ಬರಿಂದ ಎಲ್ಲರೂ ಕಲಿತುಕೊಳ್ಳಬೇಕು ಚಿಕ್ಕ-ಚೊಕ್ಕ ಭಾಷಣ ಮಾಡುವುದು ಹೇಗೆ ಅಂತ. ಮೈಕಾಸುರನ ಹಾವಳಿಯನ್ನು ದೂಷಿಸೋಣವೇ ಎಂದುಕೊಂಡರೆ ಅದನ್ನೂ ಅತ್ಯಾಶ್ಚರ್ಯಕರ ರೀತಿಯಲ್ಲಿ flawless ಆಗಿ ನಿಭಾಯಿಸಿದ್ರಿ.

ಮುಜುಗರ ಅನ್ನಿಸುವಷ್ಟು ಮಟ್ಟಿಗೆ ಯಾರನ್ನೇಆಗಲಿ ಹೊಗಳೋದು ನನ್ನ ಜಾಯಮಾನವೇ ಅಲ್ಲ. ನಿಮ್ಮನ್ನು ಹೊಗಳಿ ನನಗೇನೂ ಆಗ್ಬೇಕಾದ್ದೂ ಇಲ್ಲ [ತರ್ಲೆ-ತಮಾಷೆ ಮಾಡಿ ಗೋಳುಹೊಯ್ಯೊದನ್ನಾದ್ರೆ ಖಂಡಿತ ಮಾಡ್ತೇನೆ] ಆದರೆ, ಇವತ್ತು ಪ್ರಶಂಸೆಯ ಸುರಿಮಳೆ. ಏಕೆಂದರೆ ನೀವು & ನಿಮ್ಮ ತಂಡ fully deserve it.

ಒಟ್ಟಿನಲ್ಲಿ ಬೃಂದಾವನ ದಶಮಾನೋತ್ಸವವು ಒಂದು ಅಚ್ಚುಕಟ್ಟಾದ, ಆತ್ಮೀಯವಾದ, ಬಹುಕಾಲ ನೆನಪಲ್ಲುಳಿಯುವಂಥ ಕಾರ್ಯಕ್ರಮ. ಇದನ್ನು ಯಶಸ್ವಿಯಾಗಿ ನಡೆಸಿದ ನಿಮಗೆ ಮತ್ತು ನಿಮ್ಮ ಕೂಟದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು. ಕನ್ನಡ ವಾತಾವರಣವನ್ನು ಕಣ್ಮನ ಸೆಳೆವಂತೆ ಕಟ್ಟಿಕೊಟ್ಟಿದ್ದಕ್ಕೆ ಮನಸಾರೆ ಧನ್ಯವಾದಗಳು. [ಸಮ್ಮೇಳನ ಕಾರ್ಯಕರ್ತರಿಗೆ ಕೈಜೋಡಿಸಿ ನಮನ]

ಮತ್ತೊಮ್ಮೆ ಯಾವಾಗಾದರೂ ಭೇಟಿಯಾಗೋಣ,

ಇಂತೀ,

ಶ್ರೀವತ್ಸ ಜೋಶಿ, ವಾಷಿಂಗ್ಟನ್ ಡಿಸಿ.

English summary
Brindavana Kannada Koota celebrated 10th anniversary on 29th November in New Jersey, USA. Srivathsa Joshi, who enjoyed every bit of the program narrates how the event was organized to perfection by Usha Prasanna, president of the association and Brindavana team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more