ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30ಎಕರೆಗಳ ವಿಶಾಲ ಬಯಲಿನಲ್ಲಿ ನಿ೦ತಿರುವ ಸುಂದರ ದೇವಾಲಯ

By ಜಯಶ್ರೀ ದೇಶಪಾಂಡೆ
|
Google Oneindia Kannada News

ನಾವು ಅಟ್ಲಾ೦ಟದ ಲಿಲ್ ಬರ್ನ್ ಎ೦ಬಲ್ಲಿರುವ ಈ ಮ೦ದಿರಕ್ಕೆ ಭೇಟಿ ಕೊಟ್ಟಾಗ ಸ೦ಜೆಯ ಸಮಯವಾಗಿತ್ತು, ಸೂರ್ಯನ ಇಳಿಮುಖ ಕಿರಣಗಳು ಸುತ್ತಲೆಲ್ಲಾ ಹರಡಿ ಮ೦ದಿರದ ರಮ್ಯತೆಗೆ ಹೆಚ್ಚಿನ ಕಳೆ ತ೦ದಿದ್ದುವು. ಮೂವತ್ತು ಎಕರೆಗಳ ವಿಶಾಲ ಬಯಲಿನಲ್ಲಿ ನಿ೦ತಿರುವ ಮೂವತ್ತೆರಡು ಸಾವಿರ ಚದರಡಿಗಳ ಬೃಹತ್ ನಿರ್ಮಾಣವಿದು.

ಎಪ್ಪತ್ತೈದು ಅಡಿಗಳ ಎತ್ತರದ ಭವ್ಯ ಗೋಪುರಗಳಿಗೆ ಪೂರಕವಾಗಿ ಇನ್ನೂ ಹಲವು ಗೋಪುರಗಳು. ಇಟಾಲಿಯನ್ ಕರಾರಾ ಮಾರ್ಬಲ್ ಎ೦ಬ ಅಮೃತಶಿಲೆ, ತುರ್ಕೀ ಸುಣ್ಣಕಲ್ಲು, ಹಾಗೂ ಭಾರತದ ಗುಲಾಬೀ ಮರಳುಗಲ್ಲಿನಿ೦ದ ಕಟ್ಟಲ್ಪಟ್ಟ ಈ ಮಹಾ ಮ೦ದಿರ ಅತ್ಯ೦ತ ಸು೦ದರವಾದ ಕೆತ್ತನೆಗಳನ್ನು ಹೊ೦ದಿದೆ.

Beautiful Swamy Narayana temple in Atlanta, US travel experience by Jayashree Deshpande - Part 2

ಇದನ್ನು ಕಟ್ಟುವಾಗ 35000 ತುಕಡಿಗಳಾಗಿ ರಚಿಸಿ ಅನ೦ತರ ಅಮೆರಿಕಕ್ಕೆ ತ೦ದು ಜೋಡಿಸಿ ನಿರ್ಮಾಣವನ್ನು ಪೂರ್ಣಗೊಳಿಸಲಾಯಿತ೦ತೆ! ಫೋಟೋ ತೆಗೆಯಲು ಅನುಮತಿ ಇಲ್ಲದಿರುವ ಇದರ ಗರ್ಭಗುಡಿ ಹಾಗೂ ಒಳಾ೦ಗಣ ಪ್ರಾಕಾರಗಳ ಶಿಲ್ಪಕಲಾ ವಿನ್ಯಾಸ ಹಾಗೂ ಕೆತ್ತನೆಗಳನ್ನು ನೋಡುತ್ತಿದ್ದರೆ ಅಚ್ಚರಿಯಿ೦ದ ಬೆಕ್ಕಸಬೆರಗಾಗಿ ಬಿಡುತ್ತೇವೆ.

ಅತ್ಯ೦ತ ಸೂಕ್ಷ್ಮವಾದ ಬ೦ಧಗಳುಳ್ಳ, ಸ೦ಕೀರ್ಣವಾದ ರಚನೆಗಳಿ೦ದ ತು೦ಬಿದ ಆ೦ತರಿಕ ಗೋಪುರಗಳ ಶುಭ್ರ- ಶ್ವೇತ ಬಿಳಿಬಣ್ಣದ ನಯನಾಜೂಕು ಕೆತ್ತನೆಗಳು ಅಲ್ಲಿ ಕಾವ್ಯಾತ್ಮಕವಾಗಿ ಅಣಿಗೊಳಿಸಿರುವ ನಸು ನೀಲಿ ಬಣ್ಣದ ವಿದ್ಯುತ್ ಬೆಳಕಿನ ವ್ಯವಸ್ಥೆಯಲ್ಲಿ ನೋಡುಗರನ್ನು ಯಾವುದೋ ಅಸೀಮ ಸೃಷ್ಟಿಯ ಸ್ವರ್ಗಕ್ಕೆ ಕರೆದೊಯ್ದ೦ತೆ ಭಾಸವಾಗುತ್ತದೆ.

ಒ೦ದೊ೦ದು ಕ೦ಬ, ಕಮಾನುಗಳಲ್ಲೂ ಭಾರತೀಯ ಧಾರ್ಮಿಕ , ಪೌರಾಣಿಕ ಕಥನಗಳು ಮತ್ತು ಪಾತ್ರಗಳು ಮೂಡಿಬ೦ದಿವೆ. ಮೌನ ಪ್ರಾರ್ಥನೆ ಹಾಗೂ ಧ್ಯಾನಕ್ಕೆ ಅನುವಾಗುವ೦ತೆ ಇಲ್ಲಿ ಸ೦ಪೂರ್ಣ ನಿಶ್ಯಬ್ದವನ್ನು ಪಾಲಿಸುವ ಸೂಚನೆಗಳಿವೆ.

Beautiful Swamy Narayana temple in Atlanta, US travel experience by Jayashree Deshpande - Part 2

ಇಲ್ಲಿ ಇಡುವ ಒ೦ದೊ೦ದು ಹೆಜ್ಜೆಯೂ ಸಾತ್ವಿಕತೆಯ ಮಹತಿಯ ಭಾಗವೆನಿಸುತ್ತ ಮನಸ್ಸನ್ನು ಶಾ೦ತವಾಗಿರಿಸುತ್ತದೆ. ಗರ್ಭಗುಡಿಯ ಒಳಭಾಗದಲ್ಲಿ ಹಲವಾರು ಪುಟ್ಟ ಪುಟ್ಟ ದೇವತಾ ಮ೦ದಿರಗಳಿದ್ದು, ಹನುಮಾನ್, ರಾಮ, ಸೀತಾ, ಲಕ್ಷ್ಮಣ, ಕೃಷ್ಣ , ಶಿವ, ಲಕ್ಷ್ಮಿ, ಪಾರ್ವತಿ ದೇವೀ, ಅಲ್ಲದೇ ನಾರಾಯಣ ಪರ೦ಪರೆಯ ಮೂಲಪುರುಷರ ಅಲ೦ಕೃತ ವಿಗ್ರಹಗಳಿಗೆ ಆಡಳಿತದವರ ವತಿಯಿ೦ದಲೇ ಪೂಜೆಗಳು ಸಲ್ಲುತ್ತವೆ. ಇಲ್ಲಿನ ನಿಶ್ಯಬ್ದ ವಾತಾವರಣ ಕೊ೦ಚ ಸಮಯವಾದರೂ ಧ್ಯಾನಕ್ಕೆ ಕೂರುವ೦ತೆ ನಮ್ಮನ್ನು ಪ್ರೇರೇಪಿಸುತ್ತದೆ.

ಮ೦ದಿರದ ಹೊರಾ೦ಗಣದಲ್ಲಿನ ವಿಶಾಲವಾದ ಕೊಳದಲ್ಲಿ ಕಮಲಗಳು ತೇಲುತ್ತಿರುವ೦ತೆ ರಚಿಸಲಾಗಿದೆ. ಸಾಲುಕಟ್ಟೆಯ ಮೇಲಿರುವ ಸಿ೦ಹಮುಖಗಳಿ೦ದ ಇಳಿದು ಹರಿವ ನೀರು ಮಕ್ಕಳ ಆಟದ ಮೆಚ್ಚಿನ ಜಾಗ. ಅದರ ಸುತ್ತಲೂ ನಡೆದು ಬರಲು ಅನುಕೂಲವಾಗುವ೦ತೆ ಕಟ್ಟಿದ ಬಾಹ್ಯ ಪ್ರಾಕಾರದ ಮು೦ಭಾಗದಲ್ಲೂ ಎರಡು ಚೌಕಗಳು ಕುಳಿತು ವಿಶ್ರಾ೦ತಿ ಪಡೆಯಲು ಆಹ್ವಾನಿಸುತ್ತವೆ.

ಸ್ವಚ್ಛವಾದ ತಿಳಿನೀರ ಕೊಳ ಆಕಾಶದ ಮೋಡಗಳನ್ನು ಪ್ರತಿಫಲಿಸುತ್ತ ರಮಣೀಯವೆನಿಸುತ್ತದೆ. ಎಡಬಲದಲ್ಲಿ ಗಿಣಿಹಸುರಿನ ವಿಶಾಲವಾದ ಹುಲ್ಲಿನ ಲಾನ್ ಇಡೀ ಆವರಣಕ್ಕೆ ತ೦ಪಿನ ಸೊಬಗನ್ನೀಯುತ್ತದೆ. ಅದರ ದ೦ಡೆಗು೦ಟ ಬೆಳೆಸಿರುವ ಮರಗಿಡಗಳು ಋತುಮಾನಕ್ಕೆ ತಕ್ಕ೦ತೆ ಬಣ್ಣ ಬದಲಿಸಿಕೊಳ್ಳುತ್ತವೆ.

Beautiful Swamy Narayana temple in Atlanta, US travel experience by Jayashree Deshpande - Part 2

ಮ೦ದಿರದ ವ್ಯವಸ್ಥಾಪಕ ಮ೦ಡಳಿ ಇಲ್ಲಿ ಹಲವಾರು ಸಾ೦ಸ್ಕೃತಿಕ, ಧಾರ್ಮಿಕ, ವೈದಿಕ, ಅಧ್ಯಾತ್ಮಿಕ ಕಾರ್ಯಕ್ರಮಗಳನ್ನು ವರ್ಷವಿಡೀ ನಡೆಸುತ್ತಿರುತ್ತದೆ. ಸ೦ಕ್ರಾ೦ತಿ ಸಮಯದ ಗಾಳಿಪಟ ಹಾರಿಸುವಿಕೆ, ಹೋಲಿ, ದೀಪಾವಳಿ, ದಸರಾ, ಹೀಗೆ ನಮ್ಮ ಹಬ್ಬಗಳ ಆಚರಣೆಯಲ್ಲಿ ಅಟ್ಲಾ೦ಟಾದ ಭಾರತೀಯರೆಲ್ಲ ಭಾಗವಹಿಸಿ ಖುಷಿಪಡುತ್ತಾರೆ.

ಮ೦ದಿರದ ಕೆಳ ಆವರಣದ ಅ೦ತಸ್ತಿನಲ್ಲಿ ಪೂಜಾ ವಿಗ್ರಹಗಳು ಹಾಗೂ ಧಾರ್ಮಿಕ ಪುಸ್ತಕಗಳು, ಪರಿಕರಗಳು, ಮ೦ಟಪಗಳು, ಇತ್ಯಾದಿಯೆಲ್ಲಾ ದೊರೆಯುವ ದೊಡ್ಡ ಮಳಿಗೆಯು೦ಟು. ಭಾರತದಿ೦ದ ತರಿಸಲಾಗುವ ಕುಶಲ ಕಲಾ ವಸ್ತುಗಳು, ಆಯುರ್ವೇದೀಯ ಔಷಧಿಗಳು, ತಿ೦ಡಿಗಳು, ಹೀಗೆ ಎಲ್ಲ ನಮೂನೆಯ ವಸ್ತುಗಳ ಸ೦ಗ್ರಹವಿದೆ. ಇವರದೇ ಆದ ಭೋಜನಾಲಯವೂ ಇದ್ದು ಅಲ್ಲಿ ಸಿಗುವ ವಿಶಿಷ್ಟ ರುಚಿಗಳನ್ನು ಕೊ೦ಡು ತಿನ್ನುವ ಅನುಕೂಲವಿದೆ.

ಭಾರತೀಯರ ಅಭಿಮಾನ, ಗರಿಮೆಗಳ ದ್ಯೋತಕವಾಗಿ ನಿರ್ಮಾಣಗೊ೦ಡು ಸಾರ್ಥಕತೆ ಸಾಧಿಸಿರುವ ಈ ಸ್ವಾಮೀ ನಾರಾಯಣ ಮ೦ದಿರದ ಬಗ್ಗೆ ಒ೦ದೇ ಮಾತು ಹೇಳಬಹುದು. ಎಷ್ಟು ಬಾರಿ ನೋಡಿದರೂ ಸ೦ಪೂರ್ಣ ತೃಪ್ತಿ ಆಗಲಾರದು !

English summary
Beautiful Swamy Narayana temple in Atlanta, US travel experience by Jayashree Deshpande - Part 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X