ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈ : ಪದ್ಮಶ್ರೀ ಬಿ ಜಯಶ್ರೀ ಮುಡಿಗೇರಿದ 'ಬಸವ ಭೂಷಣ' ಪ್ರಶಸ್ತಿ

By ಅಡಿಗ ಕೆ.ವಿ, ದುಬೈ
|
Google Oneindia Kannada News

"ನೀನೊಲಿದರೆ ಕೊರಡು ಕೊನರುವುದಯ್ಯ, ನೀನೊಲಿದರೆ ಬರಡು ಹಯನಹುದಯ್ಯ, ನೀನೊಲಿದರೆ ವಿಷವು ಅಮೃತವಹುದಯ್ಯ, ನೀನೊಲಿದರೆ ಸಕಲ ಪಡಿಪದಾರ್ಥಗಳು ಇದಿರಲಿರ್ಪವು ಕೂಡಲಸಂಗಮದೇವಾ" ಅಂದರು ಬಸವಣ್ಣನವರು.

ಭಗವಂತನ ಅನುಗ್ರಹದಿಂದ ಕೂಡಿದ ಸಕಲ ಕಲಾ ವಿದ್ವಾನರಿಂದ, ಪ್ರತಿಭಾನ್ವಿತ ಕಲಾವಿದರ ಕಲೆಯ ಪ್ರದರ್ಶನಗಳಿಂದ ಮೇ 4ರ ಶುಕ್ರವಾರ ಸಂಜೆ ಬಸವ ಸಮಿತಿ ದುಬೈಯವರ 12ನೇ ವರ್ಷದ ಬಸವ ಜಯಂತಿಯ ಆಚರಣೆ ಹಾಗು 'ಬಸವ ಭೂಷಣ' ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ಜರಗಿತು.

ಅನಂತ್ ನಾಗ್ ಗೆ ಕತಾರ್ ಕನ್ನಡಿಗರಿಂದ 'ಕಲಾಭಿನವ ರತ್ನ' ಬಿರುದು
ಬಸವಣ್ಣನವರ ತೊಟ್ಟಿಲು ಪೂಜೆ, ನಾಮಕರಣ, ಮುತೈದೆಯರಿಂದ ಉಡಿ ತುಂಬುವುದು ಇಂತಹ ಸಾಂಪ್ರದಾಯಿಕ ಆಚರಣೆಗಳು ಶಾಸ್ತ್ರೋಕ್ತವಾಗಿ ನೆರವೇರಿದರೆ, ಪೂರ್ಣಕುಂಭ ಕಲಶ ಮತ್ತು ಚೆಂಡೆ ವಾದನಗಳೊಂದಿಗೆ ಮೆರವಣಿಗೆಯಲ್ಲಿ ಅತಿಥಿಗಳಾದ ಪಟ್ಟದ ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು, ಪೂಜ್ಯ ಶ್ರೀ ಶಿವಶಾಂತವೀರ ಶರಣರು ಚಿಕ್ಕೇನಕೊಪ್ಪ ಬಳಗಾನೂರ ಮಠ, ಇಬ್ರಾಹಿಂ ಸುತಾರ್, ಬಿ. ಜಯಶ್ರೀ, ಪ್ರೀತಿ ನಾಗರಾಜ್ ಹಾಗು ಗಣ್ಯರನ್ನು ಕರೆತರಲಾಯಿತು.

B Jayashree coferred with Basava Bhushan award in Dubai

ಸಂಕೀರ್ಣ ನೃತ್ಯಶಾಲೆಯ ವಿದ್ಯಾರ್ಥಿನಿಯರು ಪುಷ್ಪಾಂಜಲಿ ನೃತ್ಯದ ಮೂಲಕ ವಿಘ್ನರಾಜನನ್ನು ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅತಿಥಿಗಳು ಹಾಗು ಬಸವ ಸಮಿತಿಯ ಸಲಹಾ ಮಂಡಳಿ ಸದಸ್ಯರು ಬಸವಣ್ಣಗೆ ನಮನ ಸಲ್ಲಿಸಿ, ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ತಮ್ಮ ಪ್ರಾಥನೆಯ ಹಾಡಿನ ಮೂಲಕ ಉದಯ್ ನಂಜಪ್ಪ ಹಾಗು ರಮ್ಯಾ ಜಾಗೀರ್ದಾರ್ ಬಸವ ಬೆಳಗನ್ನು ಎಲ್ಲೆಡೆ ಪಸರಿಸಿದರು.

ಸಭಾ ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಪರವಾಗಿ ಸಂಗಮೇಶ್ ಬಿಸರಳ್ಳಿಯವರು ಎಲ್ಲಾ ಅಥಿತಿಗಳಿಗೆ ಹಾಗು ಗಣ್ಯರಿಗೆ ಸ್ವಾಗತ ಕೋರಿದರು. ಚಿಕ್ಕೇನಕೊಪ್ಪ ಶರಣರು ಮಾತನಾಡುತ್ತ ಬಸವಣ್ಣನವರ ಕಲ್ಯಾಣ ರಾಜ್ಯದ ಕನಸನ್ನು ನನಸು ಮಾಡಲು ಅನುಸರಿಸಬೇಕಾದ ಜೀವನ ಸೂತ್ರಗಳನ್ನು ವಚನ ಸಾಹಿತ್ಯದ ಆಧಾರಗಳ ಮೂಲಕ ಚೆನ್ನಾಗಿ ಮನವರಿಕೆ ಮಾಡಿದರು. ಕಾಯಕದ ನಡುವೆ ಕಳೆದು ಹೋಗದೆ ತಮ್ಮ ಸಂಪ್ರದಾಯ, ಆಚರಣೆಗಳನ್ನು ನಡೆಸಿಕೊಂಡು ಬರುತ್ತಿರುವ ದುಬೈಯ ಬಸವ ಅನುಯಾಯಿಗಳನ್ನು ಕೊಂಡಾಡಿದರು.

ಗಿರಿಜಾ ಲೋಕೇಶ್ ಅವರಿಗೆ ಪ್ರತಿಷ್ಠಿತ 'ಧ್ವನಿ' ಪ್ರಶಸ್ತಿ
ಕಳೆದ ತಿಂಗಳಷ್ಟೇ ಭಾರತದ ನಾಲ್ಕನೇ ಸರ್ವೋಚ್ಚ ನಾಗರೀಕ ಪ್ರಶಸ್ತಿಯಾದ 'ಪದ್ಮಶ್ರೀ' ಇಂದ ಪುರಸ್ಕೃತರಾದ ಭಾವೈಕ್ಯತೆಯ ಸಾಕಾರಮೂರ್ತಿ ಇಬ್ರಾಹಿಂ ಸುತಾರರವರು 45 ನಿಮಿಷಗಳ ಕಾಲ ತಮ್ಮ ಮಾತಿನಿಂದ ಇಡೀ ಸಭಾಂಗಣವನ್ನು ಸಮ್ಮೋಹನಗೊಳಿಸಿದರು. ಓದಿದ್ದು ಕೇವಲ 3ನೇ ತರಗತಿಯವರೆಗಾದರೂ, ಸಜ್ಜನರ ಸತ್ಸಂಗಿಗಳ, ಸ್ವಾಮಿಗಳ, ಪಂಡಿತರ ಸಂಗದಿಂದ ಸ್ವಪರಿಶ್ರಮದಿಂದ ನಿರಂತರ ಅಭ್ಯಾಸವೆಂಬ ತಪಸ್ಸಿನಿಂದ, ವೇದಗಳ, ವಚನಗಳ, ಪುರಾಣ ಗ್ರಂಥಗಳ ವಿವಿಧ ಧರ್ಮಗಳ ಗ್ರಂಥಗಳ, ಸಿದ್ದಾಂತ ಶಿಖಾಮಣಿಯ ಕುರಾನ್ ನ ಆಳವಾದ ಅಧ್ಯಯನ ಮಾಡಿದ ಕನ್ನಡದ ಕಬೀರ, ಅಭಿನವ ಶರೀಫ ಭಾವೈಕ್ಯತೆಯ ದಾಸ.

B Jayashree coferred with Basava Bhushan award in Dubai

ಲಿಂಗವ ನೆರೆನಂಬಿದಾತ, ಜಂಗಮಕೆ ಧನವ ಸವೆಸುವಾತ ಜವನ ಬಾಯಲು ಬಾಲವ ಕೊಯ್ದು ಹೋದಾತ ಆತ ಜಾಣನು ಎಂದು ವಚನವನ್ನು ಅರ್ಥೈಸಿ ಜಾಣರಾಗಲು ಮಾರ್ಗವನ್ನು ತಿಳಿಸಿದರು. ಹಾಗೆಯೇ 'ಏಕಂ ಸತ್ ವಿಪ್ರಾ: ಬಾಹುವಿದಾ : ವದಂತಿ' ಎಂದು ದೇವರೊಬ್ಬನೇ ನಾಮ ಹಲವು ಎನ್ನುವ ವಾದವನ್ನು ವೇದ, ಗೀತೆ ಹಾಗು ಕುರಾನ್ ಗಳ ಉಲ್ಲೇಖ ಮಾಡಿ ನೆರೆದವರಿಗೆ ಮನದಟ್ಟು ಮಾಡಿದರು. ದೇವರು ಸರವಂತರ್ಯಾಮಿ, ವಿಶ್ವವ್ಯಾಪಿ ಎಂದು ಬಸವಣ್ಣನವರ, ಅಲ್ಲಮ ಪ್ರಭುಗಳ ಅಕ್ಕನವಚನಗಳ ಮೂಲಕ ಸಾಮ್ಯತೆಯನ್ನು ತಿಳಿಸಿದರು. ಸುಶ್ರಾವ್ಯವಾಗಿ ದಸರಾ ಪದವನ್ನು ಹಾಡಿದರು, ಕ್ರಮಬದ್ಧವಾಗಿ ಸ್ಪಷ್ಟ ಉಚ್ಚಾರದಿಂದ ಸಂಸ್ಕೃತದ ವೇದಗಳ ಸೂಕ್ತಗಳನ್ನು, ಮಂತ್ರಗಳನ್ನುಚ್ಛರಿಸಿದರು. ಕುರಾನ್ ಪಠಿಸಿದ ಇಬ್ರಾಹಿಂ ಸುತಾರರವರು ವೇದಿಕೆಯ ಮೇಲೆ ಅಖಂಡ ಭಾರತದ ಪ್ರತಿರೂಪರಾದರು.

ಪದ್ಮಶ್ರೀ ಬಿ. ಜಯಶ್ರೀಯವರಿಗೆ ಬಸವ ಭೂಷಣ ಪ್ರಶಸ್ತಿ

ವೇದಿಕೆಯಲ್ಲಿದ್ದ ಅಥಿತಿಗಳು, ಬಸವ ಸಮಿತಿಯ ಸದಸ್ಯರು ಹಾಗು ನೆರೆದಿದ್ದ ಗಣ್ಯರ ಅಭಿಮಾನಿಗಳ ಮತ್ತು ಪ್ರೇಕ್ಷಕರ ಮುಂದೆ 'ಬಸವ ಭೂಷಣ' ಪ್ರಶಸ್ತಿಯನ್ನು ಖ್ಯಾತ ರಂಗಭೂಮಿ ಕಲಾವಿದೆ, ಚಲನಚಿತ್ರ ರಂಗದ ಕಂಠದಾನ ಕಲಾವಿದೆ ಜಯಶ್ರೀ ಅವರಿಗೆ ಪ್ರದಾನಿಸಲಾಯಿತು.

B Jayashree coferred with Basava Bhushan award in Dubai

ನಂತರ ಮಾತನಾಡಿದ ಜಯಶ್ರೀಯವರು ನಾನು ಪೂರ್ಣ ಮನಸ್ಸಿನಿಂದ, ಖುಷಿಯಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇವೆ ಎಂದು ನುಡಿದರು. ಈ ಸಂಧರ್ಭದಲ್ಲಿ ಅವರ ಜೊತೆ ಅವರ ಆತ್ಮಚರಿತ್ರೆ 'ಕಣ್ಣಾಮುಚ್ಚೇ ಕಾಡೇ ಗೂಡೆ'ಯನ್ನು ನಿರೂಪಿಸಿದ ಪತ್ರಕರ್ತೆ ಪ್ರೀತಿ ನಾಗರಾಜ್ ರವರು ಇದ್ದರು. ಪ್ರೀತಿಯವರು ಪುಸ್ತಕದ ಕೆಲವು ಉದಾಹರಣೆಗಳನ್ನು, ನಿದರ್ಶನಗಳನ್ನು ವಿವರಿಸಿದರೆ ಜಯಶ್ರೀಯವರು ತಮ್ಮ ನೆನಪಿನ ಬುಟ್ಟಿಯನ್ನು ಬಿಚ್ಚಿ ಅನುಭವವನ್ನುತಿಳಿಸಿದರು. ರಂಗ ಗೀತೆ, ವಚನ ಹಾಡುವುದರ ಮೂಲಕ ಪ್ರೇಕ್ಷಕರ ಮನಸೂರೆಗೊಂಡರೆ ಅವರು ಕೊನೆಯದಾಗಿ ಹಾಡಿದ ರಂಗದ ಚರಮಗೀತೆ 'ಸಾವಿರದ ಶರಣವ್ವ ಕರಿಮಾಯೇ ತಾಯೇ' ಹಾಡು ಇಡೀ ಸಭಾಂಗಣದಲ್ಲಿ ವಿದ್ಯುತ್ ಸಂಚಾರವನ್ನುಂಟು ಮಾಡಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಸ್ವಾಮೀಜಿಗಳವರು ಸಾಧ್ಯವಾದಷ್ಟು ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು. ಹೊರದೇಶದಲ್ಲಿದ್ದರು ಬಸವ ಆದರ್ಶಗಳನ್ನು ಎತ್ತಿ ಹಿಡಿಯುತ್ತಿರುವ ಬಸವ ಸಮಿತಿ ದುಬೈಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

B Jayashree coferred with Basava Bhushan award in Dubai

ಸ್ಥಳೀಯ ಕಲಾವಿದರಿಂದ ಹಾಗು ತಾಯ್ನಾಡಿನಿಂದ ಆಗಮಿಸಿದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಖ್ಯಾತ ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕ ರಾಮಚಂದ್ರ ಹಡಪದ್ ಮತ್ತು ಕನ್ನಡ ಚಲನಚಿತ್ರ ಹಿನ್ನೆಲೆ ಗಾಯಕಿ ಅರ್ಪಿತಾ ವೇಣು ಅವರ ಸಂಗೀತ ರಸಮಂಜರಿ ನೆರೆದವರನ್ನು ಹುಚ್ಚೆದ್ದು ಕುಣಿಸಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಪೋಷಕರನ್ನು, ಅಥಿತಿಗಳನ್ನುಹಾಗೂ ಕಲಾವಿದರನ್ನು ಗೌರವಿಸಲಾಯಿತು. ಬಸವ ಸಲಹಾ ಸಮಿತಿಯ ಸದಸ್ಯರುಗಳಾದ ಸಂಗಮೇಶ್ ಬಿಸರಳ್ಳಿ, ಚಂದ್ರ ಶೇಖರ್ ಲಿಂಗದಳ್ಳಿ, ಸತೀಶ್ ಹಿಂಡೇರ, ಮುರುಗೇಶ್ ಗಾಜರೆ, ಡಾ. ಶಿವಕುಮಾರ್, ರುದ್ರಯ್ಯ ನವಲಿ ಹಿರೇಮಠ್, ಜಗದೀಶ್ ಲಾಲಿ, ಡಾ .ಮಮತಾ ರೆಡ್ಡೇರ ಮುಂತಾದವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ್ದರು. ನೀಮಾ ಹಾಗು ಸುರೇಶ ಚನ್ನಣ್ಣನವರ್ ತಯಾರಿಸಿದ ರುಚಿಕರ ದಾಸೋಹ ಎಲ್ಲರನ್ನೂ ಸಂತೃಪ್ತಗೊಳಿಸಿತು.

ಉದಯ ಲಕ್ಷ್ಮಿ ಮತ್ತು ರಶ್ಮಿ ನಾಗಟನ್ ರವರು ಕಾರ್ಯಕ್ರಮವನ್ನು ಸಹ ನಿರೂಪಣೆ ಮಾಡಿದರು, ಮಂಜುಳಾ ಪರದೆಯ ಹಿಂದೆ ಸಹಕರಿಸಿದರು. ಆರತಿ ಅಡಿಗರವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಗೈದರು.

English summary
Kannada theatre artist B Jayashree has been conferred with Basava Bhushan award in Dubai by Basava Samiti. Jayashree enthralled the audience with theatre songs. Kannada Kabir Ibrahim Sutar was the chief guest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X