ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ನಾದತರಂಗಗಳು ಸೃಷ್ಟಿಸಿದ ಅನಂತ ಲೋಕ

By ಗಿರೀಶ್ ಜಮದಗ್ನಿ, ಸಿಂಗಪುರ
|
Google Oneindia Kannada News

ನಮ್ಮ ದೇವರು-ದೇವತೆಗಳ ಕೈಯಲ್ಲಿ ಕೊಳಲು, ತಂಬೂರಿ, ವೀಣೆ ಮುಂತಾದ ಸಂಗೀತ ವಾದ್ಯಗಳನ್ನು ಕಾಣುವುದು ಸಹಜ. ಆದರೆ ಯಾವ ದೇವರಗಳ ಕೈಯಲ್ಲೂ ವಯೊಲಿನ್ ಕಂಡದ್ದು ಇಲ್ಲ. ಏಕೆಂದರೆ ವಯೊಲಿನ್ ನಮಗೆ ಪಾಶ್ಚಾತ್ಯರಿಂದ ಬಳುವಳಿಯಾಗಿ ಬಂದ ತಂತಿ ವಾದ್ಯ! ಹಿಂದೆ ಹಾಡುಗಾರಿಕೆಯ ಜೊತೆ ವೀಣೆಯೋ ಇಲ್ಲ ಕೊಳಲನ್ನೂ ಸಹಾಯವಾಗಿ ಕಚೇರಿಗಳಲ್ಲಿ ಬಳಸಲಾಗುತ್ತಿತ್ತು. ಆದರೆ 19ನೇ ಶತಮಾನದಲ್ಲಿ ಸಂಗೀತಗಾರರಿಗೆ ಬ್ರಿಟಿಷರ ಮೂಲಕ ವಯೊಲಿನ್ ವಾದನದ ಪರಿಚಯವಾದ ಮೇಲೆ, ಈ ವಾದನ ಕರ್ನಾಟಕ ಮತ್ತು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಬೆರೆತು ಹೋಗಿದೆ ಮತ್ತು ನಮ್ಮದೇ ಆಗಿ ಹೋಗಿದೆ.

ಭಾರತೀಯ ಸಂಗೀತಕ್ಕೆ ಉಪಯೋಗಿಸಲು ಪಾಶ್ಚಾತ್ಯ ವಯೊಲಿನ್ ವಾದನಕ್ಕೆ ಸ್ವಲ್ಪ ಮಟ್ಟಿಗೆ ಬದಲಾವಣೆಯ ಅವಶ್ಯಕತೆಯಿತ್ತು. ಅದನ್ನು ಹಿಡಿದುಕೊಳ್ಳುವ ರೀತಿ, ತಂತಿಯನ್ನು ಮೀಟುವ ಕ್ರಮ, ವಾದನವನ್ನು ಶ್ರುತಿ ಮಾಡುವ ಬಗೆ ಮತ್ತು ನಮ್ಮ ಗಮಕಗಳನ್ನು ಸರಾಗವಾಗಿ ಈ ತಂತಿವಾದ್ಯದಲ್ಲಿ ಹೊಮ್ಮಿಸುವ ಕುಶಲತೆ... ಇದಕ್ಕೆಲ್ಲ ಸಂಗೀತಜ್ಞರು, ಬಾಲುಸ್ವಾಮಿ ದೀಕ್ಷಿತರ್ (ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮುತ್ತುಸ್ವಾಮಿ ದೀಕ್ಷಿತರ್ ಅವರ ತಮ್ಮ), ವರಾಹಪ್ಪ ಐಯ್ಯರ್ ಮತ್ತು ವಡಿವೇಲು ಅವರನ್ನು ವಯೊಲಿನ್ ವಾದನವನ್ನು ನಮ್ಮದಾಗಿಸುವಲ್ಲಿನ ಅವರ ಪರಿಶ್ರಮಕ್ಕೆ ಸ್ತುತಿಸುತ್ತಾರೆ.

ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವ 'ಕನ್ನಡೋತ್ಸವ' ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವ 'ಕನ್ನಡೋತ್ಸವ'

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಾಡುಗಾರಿಕೆ ಜೊತೆಗೆ ಈಗ ಕಡ್ಡಾಯವಾಗಿ ಪಕ್ಕವಾದನವಾಗಿರುವ ವಯೊಲಿನ್ ವಾದನವನ್ನು ಕರಗತ ಮಾಡಿಕೊಂಡು ಸಂಗೀತ ಪ್ರಿಯರನ್ನು ರಂಜಿಸಿರುವ ವಿದ್ವಾಂಸ ಮತ್ತು ವಿದುಷಿಯರ ದೊಡ್ಡ ಪಟ್ಟಿಯೇ ಇದೆ. ಅದರಲ್ಲಿ ಚೌಡಯ್ಯ, ಕುನ್ನಕುಡಿ ವೈದ್ಯನಾಥನ್, ಎಲ್. ಸುಬ್ರಮಣ್ಯಂ, ಲಾಲ್ಗುಡಿ ಜಯರಾಮನ್, ಎಂ.ಎಸ್. ಗೋಪಾಲಕೃಷ್ಣನ್, ಮೈಸೂರು ನಾಗರಾಜ್ ಮತ್ತು ಮಂಜುನಾಥ್, ಕುಮರೇಶ್ ಮತ್ತು ಗಣೇಶ್, ಟಿ.ಎನ್.ಕೃಷ್ಣನ್, ಎಂ. ಚಂದ್ರಶೇಖರನ್ ಮುಂತಾದವರು ಬಹಳ ಪ್ರಸಿದ್ಧರು.

Avasarala Kanyakumari violinist concert in Singapore

ಈ ದಿಗ್ಗಜರ ಸಾಲಿಗೆ ಸೇರುವ ಇನ್ನೊಂದು ಹೆಸರು, 50ಕ್ಕೂ ಹೆಚ್ಚು ವರುಷಗಳಿಂದ ಸಂಗೀತ ಕ್ಷೇತ್ರದಲ್ಲಿ ತಕ್ಕವಾದ ಪಕ್ಕವಾದನ ಮತ್ತು ಸೋಲೋ ಕಾರ್ಯಕ್ರಮಗಳಲ್ಲಿ ಸಂಗೀತ ಪ್ರಿಯರ ಮನಸೂರೆಗೊಂಡಿರುವ ಪದ್ಮಶ್ರೀ ಅವಸರಳ ಕನ್ಯಾಕುಮಾರಿ "ಮಾಮಿ" ಅವರದು. ಅವರ ಸಂಗೀತವನ್ನು ಆಸ್ವಾದಿಸುವ ಅವಕಾಶ ಸಿಂಗನ್ನಡಿಗರಿಗೆ ಮತ್ತು ಸಿಂಗಪುರದ ಸಂಗೀತ ರಸಿಕರಿಗೆ, ಫೆಬ್ರವರಿ 17ನೇ ತಾರೀಖು ಕನ್ನಡ ಸಂಘ (ಸಿಂಗಪುರ) ಆಯೋಜಿಸಿದ್ದ "ನಾದ ತರಂಗ" ಕಾರ್ಯಕ್ರಮದ ಮೂಲಕ ಲಭಿಸಿತ್ತು.

ದುಬೈನ 'ಧ್ವನಿ' ರಂಗಸಿರಿ ಉತ್ಸವದಲ್ಲಿ 'ಮೃಚ್ಛಕಟಿಕ' ನಾಟಕ ದುಬೈನ 'ಧ್ವನಿ' ರಂಗಸಿರಿ ಉತ್ಸವದಲ್ಲಿ 'ಮೃಚ್ಛಕಟಿಕ' ನಾಟಕ

ಕಾರ್ಯಕ್ರಮಕ್ಕೆ ಮುಂಚಿತವಾಗಿಯೇ ಎಲ್ಲ ಟಿಕೆಟ್ ಗಳು ಮಾರಾಟವಾಗಿದ್ದ ಕಾರಣ ಅಂದು ಸಿಂಗಪುರ್ ಪಾಲಿಟೆಕ್ನಿಕ್ ಸಭಾಂಗಣ ತುಂಬಿಹೋಗಿತ್ತು. ವೇದಿಕೆಯ ಮೇಲೆ ಉಪಸ್ಥಿತರಿದ್ದ ಕಲಾವಿದರೆಲ್ಲರೂ ಸಂಗೀತದಲ್ಲಿ ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡಿದವರೇ! ಕನ್ಯಾಕುಮಾರಿ ಅವರೊಂದಿಗೆ ಅನೂರ್ ಅನಂತಕೃಷ್ಣ ಶರ್ಮ (ಮೃದಂಗ), ಅನೂರ್ ವಿನೋದ್ ಶರ್ಮಾ (ತಬಲಾ), ಸುನಾದ್ ಅನೂರ್ (ಖಂಜಿರ), ಸೋಮಶೇಖರ ಜೋಯಿಸ್(ಕೊನ್ನಕೋಲ್) ಮತ್ತು ಅರುಣ್ ಕುಮಾರ್ (ಡ್ರಮ್) ಸಂಗೀತ ಸುಧೆಯನ್ನು ಉಣಬಡಿಸುವ ಜವಾಬ್ದಾರಿ ಹೊತ್ತಿದ್ದರೆ, ಈ ಮೇರು ಕಲಾವಿದರಿಗೆ ಸಂಗೀತ ಕ್ಷೇತ್ರದಲ್ಲಿ ಈಗ ಪ್ರವರ್ಧಮಾನಕ್ಕೆ ಬರುತ್ತಿರುವ ಕನ್ಯಾಕುಮಾರಿ ಅವರ ಶಿಷ್ಯರಾದ ಬಾಂಬೆ ವಿ. ಆನಂದ್ (ಸಿಂಗಪುರದಲ್ಲಿ ನೆಲಸಿದ್ದಾರೆ), ಸಾಯಿ ರಕ್ಷಿತ್ ಮತ್ತು ಪ್ರಣವ್ ಮಂಜುನಾಥ್ ಅವರು ತಕ್ಕ ಸಾಥ್ ನೀಡಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತ್ತು. ಅಂದು ಸಭಿಕರಿಗೆ ಈ ಯುವ ಕಲಾವಿದರ ಸಾಮರ್ಥ್ಯದ ಪರಿಚಯವಾಗಿತ್ತು.

Avasarala Kanyakumari violinist concert in Singapore

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಡೆಪ್ಯೂಟಿ ಹೈಕಮಿಷನರ್ ನಿನಾದ್ ದೇಶಪಾಂಡೆ ಅವರ ಆಮಂತ್ರಣದೊಂದಿಗೆ, ನಂತರ ಕಲಾವಿದರ ಪರಿಚಯದೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ದೊರೆತಿತ್ತು. ಮುಂದಿನ ಸುಮಾರು ನಾಲ್ಕು ಗಂಟೆಗಳ ಕಾಲ ನಾದ ತರಂಗಗಳು ಸಭಿಕರ ಹೃದಯನ್ಮನ ತಣಿಸಿ ಬೇರೊಂದು ಲೋಕಕ್ಕೇ ಕರೆದೊಯ್ದಿತ್ತು, ಸಂಗೀತ ರಸದೌತಣವನ್ನೇ ನೀಡಿತ್ತು! ಕಚೇರಿ ನಾಟಕುರಂಜಿ ರಾಗದ "ಚಲಮೇಲ" ವರ್ಣದಿಂದ ಶಾಸ್ತ್ರೀಯ ಚೌಕಟ್ಟಿನಲ್ಲೇ ಪ್ರಾರಂಭವಾಗಿ ಹಂಸಧ್ವನಿಯಲ್ಲಿ "ನಮ್ಮಮ್ಮ ಶಾರದೆ", ಶ್ರೀ ತ್ಯಾಗರಾಜ ವಿರಚಿತ ಶ್ರೀ ರಾಗದ ಪಂಚರತ್ನ ಕೃತಿ "ಎಂದರೋ ಮಹಾನುಭಾವುಲು", ರಾಗಮಾಲಿಕೆಯಲ್ಲಿನ "ಭಾವಯಾಮಿ ರಘು ರಾಮಂ", ವೇಗದ ಗತಿಯಲ್ಲಿ ನುಡಿಸಿದ ಚೆಂಚು ಕಾಂಭೋಜಿಯ "ವರರಾಗ ಲಯ", ರಾಗಾಲಾಪನೆಯೊಂದಿಗೆ ಸುಂದರವಾಗಿ ಪ್ರಸ್ತುತ ಪಡಿಸಿದ ಮಧುರ ರಾಗ ಚಾರುಕೇಶಿಯಲ್ಲಿ ಕನ್ಯಾಕುಮಾರಿ ಅವರದೇ ಸ್ವಂತ ರಚನೆ, ಶ್ಯಾ(ಸಾ)ಮರಾಗದಲ್ಲಿ ಹಿತವಾಗಿ ಹೊಮ್ಮಿದ "ಅನ್ನಪೂರ್ಣೆ ವಿಶಾಲಾಕ್ಷಿ", ಕರಹರಪ್ರಿಯ ರಾಗದಲ್ಲಿ ಇಂಪಾಗಿ ಮೂಡಿಬಂದ "ರಾಮ ನೀ ಸಮಾನಮೆವರು", ಚಂದ್ರಜ್ಯೋತಿಯಲ್ಲಿ ಭಕ್ತಿ ಭಾವನೆಯ ಸೆರೆ ಹಿಡಿದ "ಬಾಗಾಯೆನಯ್ಯ"ದ ನಂತರ ಪ್ರೇಕ್ಷಕರ ಕೋರಿಕೆ ಮೇರೆಗೆ ನುಡಿಸಿದ ಕದನಕುತೂಹಲ ರಾಗದ ಜನಪ್ರಿಯ "ರಘುವಂಶ ಸುಧಾ" ಕೃತಿ, ಸಭಿಕರನ್ನು ಕುಳಿತಲ್ಲೇ ತಾಳಕ್ಕೆ ಕುಣಿಯುವಂತೆ ಮಾಡಿ ಕಚೇರಿಯನ್ನು ಮುಂದಿನ ರೋಚಕ ಘಟ್ಟಕ್ಕೆ ಅಣಿಗೊಳಿಸಿತ್ತು.


ನಂತರ ಅಂದಿನ ಕಚೇರಿಯ ಮುಖ್ಯ ಪ್ರಸ್ತುತಿ ನಾಲ್ಕು ರಾಗಗಳಲ್ಲಿ (ಚಂದ್ರಕೌನ್ಸ್, ರೇವತಿ, ಶಿವರಂಜನಿ ಮತ್ತು ನಾಗಸ್ವರಾವಳಿ) ನಿರರ್ಗಳವಾಗಿ ಮೂಡಿ ಬಂದ ರಾಗಂ-ತಾನಂ-ಪಲ್ಲವಿ, ಕನ್ಯಾಕುಮಾರಿ ಅವರ ವಿದ್ವತ್ತು ಮತ್ತು ಅವರಿಗೆ ವಯೊಲಿನ್ ವಾದನದ ಮೇಲಿರುವ ಸಂಪೂರ್ಣ ಹಿಡಿತದ ಪ್ರದರ್ಶನ ನೀಡಿತ್ತು. ನಾಲ್ಕು ವಿಭಿನ್ನ ಶೈಲಿಯ ರಾಗಗಳನ್ನು, ಅವುಗಳ ಭಾವ ಭೇದವಾಗಿಸದೆ ಚತುರತೆಯಿಂದ ಹೆಣೆಯುವ ಅವರ ರೀತಿ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ತದನಂತರ ವಾದ್ಯ ಗೋಷ್ಠಿಯವರು ಪ್ರಸ್ತುತ ಪಡಿಸಿದ ತನಿಯಾವರ್ತನೆ ಬಹಳ ವಿಶೇಷವಾಗಿತ್ತು. ಶ್ಲೋಕಗಳನ್ನು ತಾಳಕ್ಕೆ ತನಿಯಾವರ್ತನೆಯ ಮಧ್ಯೆ ಅಳವಡಿಸಿಕೊಂಡಿದ್ದು ವಿನೂತನವಾಗಿತ್ತು. ಕೊನ್ನಕೋಲ್ ನಲ್ಲಿ ಸೋಮಶೇಖರ್ ಅವರು ತಮ್ಮ ವಿಶಿಷ್ಟವಾದ ಪ್ರಸ್ತುತಿಯೊಂದಿಗೆ ಮತ್ತು ನಾನಾ ತರಹದ ಸಂಗೀತ ವಾದ್ಯಗಳನ್ನು ತಮ್ಮ ಡ್ರಮ್ ಪ್ಯಾಡ್ ನಿಂದಲೇ ಸಮಯಕ್ಕೆ ಸರಿಯಾಗಿ ಹೊಮ್ಮಿಸಿ ಅಚ್ಚರಿಗೊಳಿಸಿದ ಅರುಣ್, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

Avasarala Kanyakumari violinist concert in Singapore

ತನಿಯಾವರ್ತನೆಯ ನಂತರ ಸುಮಾರು ಮೂವತ್ತು ನಿಮಿಷ ಜನಪ್ರಿಯ ಹಾಡುಗಳಾದ ಗೋವಿಂದ ನಾಮಾವಳಿ, ಆಡಿಸಿದಳು ಯಶೋದೆ, ಪಿಬರೇ ರಾಮರಸಂ, ಕರೆದರೆ ಬಾರದೆ, ತಂದಾನಾನ ಅಹಿ, ಚಿನ್ನಂಚಿರು ಕಿಳಿಯೇ, ಇಂಗ್ಲಿಷ್ ನೋಟ್, ವೆಂಕಟಾಚಲ ನಿಲಯಂ ಮತ್ತು ಭಾಗ್ಯಾದ ಲಕ್ಷ್ಮಿ ಬಾರಮ್ಮ ಕೃತಿಗಳನ್ನು ತಡೆಯಿಲ್ಲದೆ ಒಂದರ ನಂತರ ಒಂದನ್ನು ನುಡಿಸಿ ಕಚೇರಿಯನ್ನು ನೆರೆದಿದ್ದವರಿಗೆ ಆಪ್ಯಾಯಮಾನವಾಗಿಸಿದ್ದರು.

ದೀರ್ಘ ಕಚೇರಿಗಳೇ ಅಪರೂಪವಾಗಿರುವ ಈ ದಿನಗಳಲ್ಲೂ, ಸುಮಾರು ನಾಲ್ಕು ಘಂಟೆಗಳ ಅವಧಿಯ ಅಂದಿನ ಕಚೇರಿ "ಪವಮಾನ" ಮಂಗಳ ಕೃತಿಯೊಂದಿಗೆ ಕೊನೆಗೊಂಡಾಗ ನಾದಲೋಕದಲ್ಲಿ ವಿಹರಿಸುತ್ತಿದ್ದ ಸಭಿಕರಿಗೆ "ಕಚೇರಿ ಮುಗಿದೇ ಹೋಯಿತಾ?" ಅನಿಸಿದ್ದು ಅತಿಶಯವಲ್ಲ. ನಾದಸುಧೆಯಲ್ಲಿ ಮಿಂದೆದ್ದ ಸಂಗೀತಾಭಿಮಾನಿಗಳು ಧನ್ಯತೆಯಿಂದ ಎದ್ದು ನಿಂತು ಮೆಚ್ಚುಗೆಯ ದೀರ್ಘ ಕರತಾಡನ ಮಾಡಿದ್ದು ಅಂದಿನ ಕಚೇರಿಗೆ ಯೋಗ್ಯವಾಗಿತ್ತು.

Avasarala Kanyakumari violinist concert in Singapore

ಹಾಡುಗಾರಿಕೆಯನ್ನೇ ಹೆಚ್ಚಾಗಿ ಕೇಳುವ, ವಾದ್ಯ ಕಚೇರಿಯನ್ನು ಅಷ್ಟಾಗಿ ಇಷ್ಟ ಪಡದ ಸಂಗೀತಾಭಿಮಾನಿಗಳೂ ಕೂಡ ಕಾರ್ಯಕ್ರಮದ ಕೊನೆಯವರೆಗೂ ಇದ್ದು, ವಾದ್ಯ ಕಚೇರಿಗಳಲ್ಲಿ ಸಿಗುವ ವಿಶಿಷ್ಟ ಆನಂದದ ಫಲಾನುಭವಿಗಳಾಗಿದ್ದರು. ನಾದ ತರಂಗಗಳ ಮಿಡಿತಕ್ಕೆ ಸಭಿಕರಲ್ಲಿದ್ದ ಪಂಡಿತರು, ಪಾಮರರು ಮತ್ತು ಸಂಗೀತವನ್ನು ಪದ್ಧತಿಗಳ ಗಡಿ ಮೀರಿ ಇಷ್ಟ ಪಡುವ ಕಲಾಭಿಮಾನಿಗಳೆಲ್ಲಾ ತಲೆದೂಗಿ ಆನಂದಿಸಿದ್ದು, ಕಾರ್ಯಕ್ರಮವನ್ನು ಮುತುವರ್ಜಿಯಿಂದ ಆಯೋಜಿಸಿದ ಕನ್ನಡ ಸಂಘ (ಸಿಂಗಪುರ)ದ ಕಾರ್ಯಕಾರಿ ಸಮಿತಿಗೆ ಧನ್ಯತಾ ಭಾವ ತಂದಿತ್ತು. ಸಾಧ್ವಿ ಸಂಧ್ಯಾ ಮತ್ತು ಕವಿತಾ ರಾಘವೇಂದ್ರ ಅವರ ಅಚ್ಚುಕಟ್ಟಾದ ನಿರೂಪಣೆ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿತ್ತು.

English summary
Padma Shri Avasarala Kanyakumari is a violinist from South India who specializes in Carnatic music. She enthralled the packed audience in Singapore at Nada Tarangini music concert organized by Kannada Sangha (Singapore). Report by Girish Jamadagni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X