• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವ 'ಕನ್ನಡೋತ್ಸವ'

By ಕೆಂಪೇಗೌಡ ಉತ್ಸವ ವರದಿ ತಂಡ
|

ಎಲ್ಲರೂ ಕಾತುರದಿಂದ ಕಾಯುತ್ತಿದ್ದ ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವ, ಕನ್ನಡೋತ್ಸವ ಶನಿವಾರ ದಿನಾಂಕ ಫೆಬ್ರವರಿ 23ರಂದು ಹಸಿರ ಸಿರಿಯ ನಾಡು ಸಿಂಗಪುರದ ಖ್ಯಾತ ಕಲ್ಲಾಂಗ್ ಸಭಾಗೃಹದಲ್ಲಿ ಸಡಗರದಿಂದ ಜರುಗಿತು.

ವಿಶ್ವ ಒಕ್ಕಲಿಗರ ಮಹಾ ವೇದಿಕೆ (ರಿ), ಕನ್ನಡ ಸಂಘ (ಸಿಂಗಪುರ)ದ ಸಹಕಾರದೊಂದಿಗೆ ಈ ಭವ್ಯ ಸಮಾರಂಭವನ್ನು ಆಯೋಜಿಸಿತ್ತು. ಅಂದು ಬೆಳ್ಳಂಬೆಳಿಗ್ಗೆ ಸಭಾಗೃಹದ ಮುಂದೆ ಕನ್ನಡ ನಾಡಿನ ಜಾನಪದ ಕಲಾವಿದರು ತಮ್ಮ ಡೊಳ್ಳು ಕುಣಿತ ಮತ್ತು ಸಿಂಗಪುರದ ಸಿಂಹ ನಾಟ್ಯ (ಲಯನ್ ಡಾನ್ಸ್)ದ ತಂಡ ತಮ್ಮ ಕಲಾ ಪ್ರದರ್ಶನದೊಂದಿಗೆ ಕನ್ನಡ ನಾಡಿನಿಂದ ಬಂದ ಗೌರವಾನ್ವಿತ ಅತಿಥಿಗಳನ್ನು ಸ್ವಾಗತಿಸಿದರು. ದೇಶ ವಿದೇಶಗಳಿಂದ ಆಗಮಿಸಿದ ಅತಿಥಿಗಳನ್ನು ಮುಗುಳ್ನಗೆಯಿಂದ ಸ್ವಾಗತಿಸಿದ ಉತ್ಸವದ ಸ್ವಯಂ ಸೇವಕರು ಬಹಳ ದಕ್ಷತೆಯಿಂದ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿ ಸಭಿಕರನ್ನೆಲ್ಲ ಸಭಾಗೃಹದಲ್ಲಿ ಆಸೀನಗೊಳಿಸಿದರು.

ಸಿಂಗಪುರದಲ್ಲಿ ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವ

ಇಡೀ ಕಾರ್ಯಕ್ರಮವು ಮೂರು ಭಾಗಗಳಲ್ಲಿ ವಿಭಾಗಿಸಲ್ಪಟ್ಟಿದ್ದವು. ಮೊದಲ ವಿಭಾಗವನ್ನು ಕೆಂಪೇಗೌಡ ಉತ್ಸವ ಮುಂಜಾನೆ ಹತ್ತರಿಂದ ಆರಂಭವಾಗಿ ಮಧ್ಯಾಹ್ನದ ಊಟದವರೆಗೆ ಯೋಜಿಸಲಾಗಿತ್ತು. ಊಟದ ನಂತರದ ಕನ್ನಡೋತ್ಸವವನ್ನು ಸಂಜೆಯ ಲಘು ಉಪಹಾರದವರೆಗೆ ಆಯೋಜಿಸಲಾಗಿತ್ತು. ಲಘು ಉಪಹಾರದ ನಂತರ ಕನ್ನಡದ ರೆಬೆಲ್ ಸ್ಟಾರ್, ದಿವಂಗತ ಅಂಬರೀಶ್ ಅವರ ಸವಿನೆನಪಿನಲ್ಲಿ ಮೂರನೆಯ ಮತ್ತು ಕೊನೆಯ ವಿಭಾಗದಲ್ಲಿ "ಅಂಬಿ ಅಮರ" ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಸರಿಯಾಗಿ ಹತ್ತುಗಂಟೆಗೆ ಸಮಾರಂಭ ಆರಂಭವಾಯಿತು. ಶ್ರೀರಕ್ಷಾ ಮತ್ತು ತಂಡದವರು ಗಣೇಶವಂದನೆ ಮತ್ತು ನಿತ್ಯೋತ್ಸವ ಹಾಡುಗಳನ್ನು ಬಹಳ ಇಂಪಾಗಿ ಪ್ರಸ್ತುತ ಪಡಿಸಿದರು. ನಂತರ ಒಕ್ಕಲಿಗರ ಮಹಾ ವೇದಿಕೆಯ ಅಧ್ಯಕ್ಷರಾದ ಭಾರತಿ ಶಂಕರ್ ಮತ್ತು ಅವರ ತಂಡದವರು ಕನ್ನಡ ನಾಡಗೀತೆ "ಜಯ ಭಾರತ ಜನನಿಯ ತನುಜಾತೆ" ಹಾಡನ್ನು ಪ್ರಸ್ತುತಪಡಿಸಿದಾಗ ಎಲ್ಲ ಸಭಾಸದಸ್ಯರು ಎದ್ದು ಹಾಡಿನಲ್ಲಿ ಜೊತೆಗೂಡಿದ್ದು ವಿಶೇಷವಾಗಿತ್ತು.

ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಹೊತ್ತಿತೋ ಹೊತ್ತಿತು ಕನ್ನಡದ ದೀಪ

ಸಿಂಗಪುರದ ನೃತ್ಯ ತಂಡಗಳು ಸಿಂಹನಾಟ್ಯ ಹಾಗೂ ಮಲಯ ನೃತ್ಯಗಳನ್ನು ಪ್ರದರ್ಶಿಸಿದವು. ವಿದುಷಿ ಪವಿತ್ರಾ ರಾಜೇಶ್ ಅವರ ತಂಡ ಭರತ ನಾಟ್ಯವನ್ನು ಪ್ರದರ್ಶಿಸಲು ವೇದಿಕೆಗೆ ಏರಿತು. ಮುದಾಕರಾತ್ತ ಮೋದಕಂ, ಹೊತ್ತಿತೋ ಹೊತ್ತಿತು ಕನ್ನಡದ ದೀಪ, ಅಹಿಗಿರಿ ನಂದಿನಿ ಮುಂತಾದ ಜನಪ್ರಿಯ ಕೃತಿಗಳನಾಧರಿಸಿ ತಂಡ ಪ್ರದರ್ಶಿಸಿದ ಸುಂದರ ಭರತನಾಟ್ಯ ನೆರೆದಿದ್ದ ಜನರನ್ನು ರಂಜಿಸಿತು. ನಂತರ ಕಲಾವಿದೆ ಜಯಲಕ್ಷ್ಮಿ ಅವರು ಅರ್ಧನಾರೀಶ್ವರ ಭರತನಾಟ್ಯವನ್ನು ಪ್ರದರ್ಶಿಸಿ ಜನಮನವನ್ನು ಸೆಳೆದರು.

ವೇದಿಕೆ ಅಲಂಕರಿಸಿದ ಸ್ವಾಮೀಜಿಗಳು ಕಲಾವಿದರು

ವೇದಿಕೆ ಅಲಂಕರಿಸಿದ ಸ್ವಾಮೀಜಿಗಳು ಕಲಾವಿದರು

ಈ ಸುಂದರ ಕಲಾಪ್ರದರ್ಶನದ ನಂತರ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ಅತಿಥಿಗಳನ್ನು ವೇದಿಕೆಗೆ ಕರೆಯಲಾಯಿತು. ಪೂಜ್ಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ ಅವರುಗಳನ್ನು ವೇದಿಕೆಗೆ ಕರೆತರಲಾಯಿತು. ಸಿಂಗಪುರದಲ್ಲಿ ಭಾರತದ ಹೈ ಕಮೀಶನರ್ ಜಾವೇದ್ ಅಶ್ರಫ್, ಚಿತ್ರನಟ ಯಶ್, ಸುಮಲತಾ ಅಂಬರೀಷ್, ರಾಜಕಾರಣಿಗಳಾದ ಸಿ ಟಿ ರವಿ, ಎಸ್ ಟಿ ಸೋಮಶೇಖರ್, ಹ್ಯಾರಿಸ್, ವಿಶ್ವ ಒಕ್ಕಲಿಗರ ವೇದಿಕೆಯ ಪದಾಧಿಕಾರಿಗಳಾದ ವೈ. ಡಿ. ರವಿಶಂಕರ್, ಕನ್ನಡವೇ ಸತ್ಯ ರಂಗಣ್ಣ ಮತ್ತು ಉತ್ಸವದ ಸ್ವಾಗತ ಕಮೀಟಿಯ ಅಧ್ಯಕ್ಷರಾದ ವೆಂಕಟೇಶಮೂರ್ತಿ ವೇದಿಕೆಯ ಮೇಲಿದ್ದ ಇತರ ಗಣ್ಯರು. ದೀಪ ಬೆಳಗಿಸುವುದರ ಮೂಲಕ ಸಭೆಯ ಶುಭಾರಂಭ ಮಾಡಲಾಯಿತು.

'ವ್ಯಾಪಾರಿ ಕೇಂದ್ರವಾಗಿದ್ದ ಬೆಂಗಳೂರು, ಅಸಾಧ್ಯ ಬುದ್ಧಿವಂತ ಕೆಂಪೇಗೌಡ'

ಭಾರತದ ಹೈಕಮೀಶನರ್ ಜಾವೇದ್ ಅಶ್ರಫ್

ಭಾರತದ ಹೈಕಮೀಶನರ್ ಜಾವೇದ್ ಅಶ್ರಫ್

ವೈ. ಡಿ. ರವಿಶಂಕರ್ ಅವರ ಸ್ವಾಗತ ಭಾಷಣದ ನಂತರ ಭಾರತದ ಹೈಕಮೀಶನರ್ ಅವರಾದ ಜಾವೇದ್ ಅಶ್ರಫ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಅವರು ಐನೂರು ವರ್ಷಗಳ ಹಿಂದೆ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡನ ದೂರದೃಷ್ಟಿಯನ್ನು ಪ್ರಶಂಸಿಸಿದರಲ್ಲದೇ, ಇಂದಿನ ವಿಶ್ವಕ್ಕೆ ಅದರಲ್ಲೂ ಸಿಂಗಪುರಕ್ಕೆ ಕನ್ನಡಿಗರ ಕೊಡುಗೆಯನ್ನು ಕುರಿತು ಅರ್ಥಪೂರ್ಣವಾಗಿ ಮಾತನಾಡಿದರು. ಅವರ ನಂತರ ಕನ್ನಡವೇ ಸತ್ಯ ರಂಗಣ್ಣ ಅವರು ಮಾತನಾಡಿ, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ನಾಡಪ್ರಭು ಕೆಂಪೇಗೌಡ ಹಾಕಿಕೊಟ್ಟ ಉಜ್ವಲ ಪರಂಪರೆಯನ್ನು ವಿಶ್ವದ ಕನ್ನಡಿಗರೆಲ್ಲರೂ ಮತ್ತೊಮ್ಮೆ ನೆನೆಸಿಕೊಳ್ಳುವಂತೆ ಮಾಡುವುದು ಎಂದು ಹೇಳಿದರು.

ಅಗಲಿದ ಸಿದ್ದಗಂಗಾ ಶ್ರೀ, ಅಂಬರೀಶ್ ಗೆ ಸಂತಾಪ

ಅಗಲಿದ ಸಿದ್ದಗಂಗಾ ಶ್ರೀ, ಅಂಬರೀಶ್ ಗೆ ಸಂತಾಪ

ನಂತರ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ದೇಹಾಂತ್ಯ, ಅಂಬರೀಷ್ ಅವರ ಅಕಾಲಿಕ ಮರಣ ಮತ್ತು ಪುಲ್ವಾಮದಲ್ಲಿ ಯೋಧರ ಹತ್ಯೆಗೆ ಸಂತಾಪ ಸೂಚಿಸಲು ಒಂದು ನಿಮಿಷದ ಮೌನವನ್ನು ಆಚರಿಸಲಾಯಿತು. ಚಲನಚಿತ್ರ ನಟಿ ಸುಮಲತಾ ಅಂಬರೀಷ್ ಅವರು ರೆಬೆಲ್ ಸ್ಟಾರ್ ಎಂದು ಖ್ಯಾತರಾದ ಕನ್ನಡನಾಡಿನ ಕಣ್ಮಣಿ ದಿವಂತಗ ಅಂಬರೀಷ್ ಅವರ ಕೊಡುಗೆಯನ್ನು ನೆನೆದರು. ನಂತರ ಖ್ಯಾತ ಚಲನಚಿತ್ರ ನಟ ಯಶ್ ಅವರು ಮಾತನಾಡಿ, ಸಿಂಗಪುರದ ಪಿತಾಮಹ ಲೀ ಕುಆನ್ ಯೂ ಅವರನ್ನು ನೆನೆದು ಜಗತ್ತಿಗೆ ಅವರು ಹಾಕಿಕೊಟ್ಟ ಸನ್ಮಾರ್ಗವನ್ನು ನೆನೆದರು. ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಸಭಿಕರನ್ನುದ್ದೇಶಿಸಿ ಮಾತನಾಡಿದ ನಂತರ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ನಂಜಾವಧೂತ ಸ್ವಾಮೀಜಿ ಅವರುಗಳು ಸಿಂಗಪುರದಲ್ಲಿರುವಂತಹ ಭಾವೈಕ್ಯತೆಯನ್ನು ಪ್ರಶಂಸಿಸಿ ನಮ್ಮ ಕನ್ನಡನಾಡಿನಲ್ಲಿ ಕೂಡ ಇಂತಹ ಭಾವೈಕ್ಯತೆ ಸಾಧ್ಯವಾಗುವಂತೆ ಮಾಡುವುದರ ಬಗ್ಗೆ ಒತ್ತು ಕೊಟ್ಟು ಆಶೀರ್ವಚನ ನೀಡಿದರು.

ಇದಾದ ನಂತರ ಉತ್ಸವ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸಾಧನೆ ಮಾಡಿದ ಮಹನೀಯರಿಗೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ಪುರಸ್ಕಾರ, ವಿಶ್ವ ಕನ್ನಡ ರತ್ನ ಪ್ರಶಸ್ತಿ ಹಾಗೂ ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಎಲ್ಲ ಸಾಧಕರಿಗೆ ಪರಮಪೂಜ್ಯ ಸ್ವಾಮೀಜಿಗಳ ಅಮೃತ ಹಸ್ತದಿಂದ ಪ್ರಶಸ್ತಿ ಪತ್ರ ಕೊಡಿಸಿ, ಶಾಲು ಮತ್ತು ಹಾರಗಳನ್ನು ಹಾಕಿ ಸನ್ಮಾನ ಮಾಡಲಾಯಿತು.

ಬ್ರಿಟನ್ನಿನಲ್ಲಿ ಕನ್ನಡದ ಕಂಪು ಹಬ್ಬುತ್ತಿರುವ ಹರೀಶ್ ರಾಮಯ್ಯ

ಕೆಂಪೇಗೌಡ ಅಂತಾರಾಷ್ಟ್ರೀಯ ಪುರಸ್ಕಾರ

ಕೆಂಪೇಗೌಡ ಅಂತಾರಾಷ್ಟ್ರೀಯ ಪುರಸ್ಕಾರ

ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ಪುರಸ್ಕಾರ ಪಡೆದ ಮಹನೀಯರು:

* ಪರಿಸರ - ಕೆ. ಅಮರನಾರಾಯಣ (ನಿವೃತ್ತ ಐ ಎ ಎಸ್ ಅಧಿಕಾರಿ, ಬೆಂಗಳೂರು)

* ಕೃಷಿ, ವಿಜ್ಞಾನ - ಡಾ. ರಾಜೇಂದ್ರ ಪ್ರಸಾದ್ (ಉಪಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ)

* ಸಮುದ್ರ ವಿಜ್ಞಾನ - ಪ್ರೊ. ವೆಂಕಟೇಶ ಭೈರಪ್ಪ (ವಿಜ್ಞಾನಿಗಳು, ಸಿಂಗಪುರ)

* ಪತ್ರಿಕೋದ್ಯಮ - ಬಿ.ವಿ. ನಾಗರಾಜ್ (ಸಾಗರದಾಚೆ ಕನ್ನಡ ಪತ್ರಿಕೋದ್ಯಮ, ಕೆನಡಾ)

* ಉದ್ಯಮ - ಬಿ ಕೃಷ್ಣಪ್ಪ (ಉದ್ಯಮಿ, ಸಮಾಜಸೇವಕರು, ಬೆಂಗಳೂರು)

* ವೈದ್ಯಕೀಯ ಶಿಕ್ಷಣ - ಡಾ. ಭಗವಾನ್ (ಸಾಮಾನ್ಯ ಶಸ್ತ್ರಚಿಕಿತ್ಸಾ ತಜ್ಞರು, ಬೆಂಗಳೂರು)

* ಮನಃಶಾಸ್ತ್ರ - ಡಾ. ಕೆ. ಆರ್. ಶ್ರೀನಿವಾಸ್ (ಮಾನಸಿಕ ತಜ್ಞರು)

* ಸಂಗೀತ - ಭಾಗ್ಯಮೂರ್ತಿ (ಸಿಂಗಪುರ)

ವಿಜಯರಂಗ, ವಸಂತ, ವೆಂಕಟ

ವಿಜಯರಂಗ, ವಸಂತ, ವೆಂಕಟ

ವಿಶ್ವಕನ್ನಡ ರತ್ನ ಪ್ರಶಸ್ತಿ ಪಡೆದ ಸಾಧಕರು: ಈ ಪ್ರಶಸ್ತಿಗೆ ಪಾತ್ರರಾದ ಸಿಂಗಪುರದ ಮೂವರು ಕನ್ನಡಿಗರ ಹೆಸರುಗಳು 'ವಿ'ಯಿಂದ ಪ್ರಾರಂಭವಾಗುತ್ತದೆ ಎನ್ನುವುದು ವಿಶೇಷ.

* ವಿಜಯರಂಗ ಪ್ರಸಾದ್ - ಅಧ್ಯಕ್ಷರು, ಕನ್ನಡ ಸಂಘ ಸಿಂಗಪುರ

* ವಸಂತ ಕುಲಕರ್ಣಿ - ಕವಿಗಳು, ಅಂಕಣಕಾರರು, ಸಿಂಗಪುರ

* ವೆಂಕಟ ರತ್ನಯ್ಯ - ಕವಿಗಳು, ಕಲಾವಿದರು, ಸಿಂಗಪುರ

ವಿಶ್ವಮಾನ್ಯ ಒಕ್ಕಲಿಗ ಪ್ರಶಸ್ತಿ ಪಡೆದ ಮಹನೀಯರು:

* ಟಿ ತಿಮ್ಮೇಗೌಡ - ಉದ್ಯಮಿಗಳು, ಸಮಾಜಸೇವೆ, ಬೆಂಗಳೂರು

* ಎನ್ ಚಿದಾನಂದ - ಸಮುದಾಯಸೇವೆ, ತಿಪಟೂರು

* ಡಾ. ಎಮ್ ಎಸ್ ಸಣ್ಣಸ್ವಾಮಿಗೌಡ - ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು, ಮೈಸೂರು

'ಧ್ವನಿ ಶ್ರೀರಂಗ' ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಸಿಕೆ ಗುಂಡಣ್ಣ ಆಯ್ಕೆ

'ವಿಶ್ವ ಒಕ್ಕಲಿಗ' ಸ್ಮರಣ ಸಂಚಿಕೆ ಬಿಡುಗಡೆ

'ವಿಶ್ವ ಒಕ್ಕಲಿಗ' ಸ್ಮರಣ ಸಂಚಿಕೆ ಬಿಡುಗಡೆ

ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ವಿಶ್ವ ಒಕ್ಕಲಿಗರ ಮಹಾ ವೇದಿಕೆಯ ದಶಮಾನೋತ್ಸವದ ಸ್ಮರಣ ಸಂಚಿಕೆ "ವಿಶ್ವ ಒಕ್ಕಲಿಗ"ವನ್ನು ಬಿಡುಗಡೆ ಮಾಡಲಾಯಿತು. ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡರ ಭಾವಗೀತೆಗಳ ಧ್ವನಿಸುರುಳಿಯನ್ನು ಸಹ ಈ ಸಂದರ್ಭದಲ್ಲಿ ಬಿಡುಗಡಿ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಭವ್ಯವಾದ, ಸುಸಜ್ಜಿತವಾದ ಸಭಾಂಗಣದಲ್ಲಿ ಅತ್ಯಾಧುನಿಕವಾದ ಎಲ್ ಇ ಡಿ ಪರದೆಗಳ ಮೇಲೆ ಸೊಗಸಾಗಿ ಕಾರ್ಯಕ್ರಮಗಳ ವಿವರವನ್ನು ಅಚ್ಚುಕಟ್ಟಾಗಿ ಮೂಡಿಸುವಂತೆ ಮಾಡಿದ್ದರು ಆಯೋಜಕರು. ಸಂದರ್ಭೋಚಿತ ಚಿತ್ರಗಳ ಮತ್ತು ಮಾಹಿತಿಗಳನ್ನು ಸುಂದರವಾಗಿ ಮೂಡಿಸುವ ಈ ರಂಗು ರಂಗಿನ ವ್ಯವಸ್ಥೆ ಕಾರ್ಯಕ್ರಮಕ್ಕೆ ತುಂಬಾ ಮೆರುಗು ತಂದಿತ್ತು. ಕಾರ್ಯಕ್ರಮ ನಿರೂಪಣೆ ಮಾಡಿದ ಮಾಯಾಗೌಡ ಮತ್ತು ಕಲಾವಿದ, ಚಿತ್ರನಟ ಅರುಣ್ ಸಾಗರ್ ಅವರು ತಮ್ಮ ಸಮಯೋಚಿತ ನಿರೂಪಣೆ ಮತ್ತು ಒಟ್ಟಾರೆ ಕಾರ್ಯಕ್ರಮದ ಅಚ್ಚುಕಟ್ಟಾದ ನಿರ್ವಹಣೆಯಿಂದ ಸಭಿಕರನ್ನು ರಂಜಿಸಿದರು.

ಮಧ್ಯಾಹ್ನದ ಊಟಕ್ಕೆ ಎಲ್ಲ ಅತಿಥಿಗಳು ಮತ್ತು ಸಭಾಸದರನ್ನು ಸ್ವಯಂಸೇವಕರು ಆತ್ಮೀಯವಾಗಿ ಭೋಜನ ವ್ಯವಸ್ಥೆ ಮಾಡಿದ್ದಲ್ಲಿಗೆ ಕರೆದೊಯ್ದರು. ರುಚಿಕಟ್ಟಾದ ಭೋಜನವನ್ನು ಮಾಡಿದ ನಂತರದ ರಂಜನೀಯ ಕಾರ್ಯಕ್ರಮಗಳ ರಸದೌತಣಕ್ಕೆ ಸಭಾಸದರು ಕಾತರದಿಂದ ಕಾಯುತ್ತಿದ್ದರು. (ಕಾರ್ಯಕ್ರಮದ ಎರಡನೇ ಮತ್ತು ಮೂರನೇ ಭಾಗಗಳ ವರದಿಯನ್ನು ಮುಂದಿನ ಲೇಖನದಲ್ಲಿ ಮಾಡಲಾಗುವುದು).

English summary
2nd International Nadaprabhu Kempegowda Utsava 'Kannadotsava' celebrated in Singapore. Many degnitaries from all over the world were felicitated with coveted awards. Nirmalananda Swamiji, actor Yash, Sumalatha Ambareesh graced the occasion. The event was organized by Vishwa Okkaligara Maha Vedike and Singapore Kannada Sangha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X