ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಅತ್ಯಾಚಾರದ ಬಗ್ಗೆ ಸಿಂಗಪುರ ಓದುಗರ ಅಭಿಮತ

By ಗಿರೀಶ್ ಜಮದಗ್ನಿ, ಸಿಂಗಪುರ
|
Google Oneindia Kannada News

Girish Jamadagni, Singapore
ಎಲ್ಲರೂ ಬಹುಕಾತರದಿಂದ ಕಾದಿದ್ದ ಪ್ರಳಯ ಆಗಲೇ ಇಲ್ಲ! ಆದರೆ, ದೆಹಲಿಯಲ್ಲಿ ಒಂದು ಅಮಾಯಕ ಹುಡುಗಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ರಾಷ್ಟ್ರಮಟ್ಟದಲ್ಲೇ ಒಂದು ಹೊಸ ಸಂಚಲನೆಯನ್ನೇ ಮೂಡಿಸಿದೆ. ಮನೆಯಲ್ಲಿ, ಕಚೇರಿಯಲ್ಲಿ, ಬೀದಿಗಳಲ್ಲಿ ಎಲ್ಲೆಲ್ಲೂ ಆ ಘಟನೆಯ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಆರೋಪಿಗಳಿಗೆ ಶಿಕ್ಷೆ ಏನಾಗಬೇಕು? ಮರಣ ದಂಡನೆಯಾ? ರಾಸಾಯನಿಕ ಮದ್ದುಗಳಿಂದ ನಪುಂಸಕರನ್ನಗಿಸುವುದಾ? 30 ವರ್ಷ ಕಠಿಣ ಸಜೆಯಾ? ಎಂದೆಲ್ಲಾ ತಮ್ಮದೇ ಆದ ವಿಚಾರಗಳನ್ನು ಮಂಡಿಸುತ್ತಿದ್ದಾರೆ. ರಾಜಕೀಯ ಪಕ್ಷಗಳೂ ಸಿಕ್ಕ ಅವಕಾಶಗಳನ್ನು ತಮ್ಮದೇ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆದರೆ, ದೇಶದಲ್ಲಿ ಇಷ್ಟೆಲ್ಲಾ ಅಲ್ಲೋಲ ಕಲ್ಲೋಲವಾದರೂ, ದುರದೃಷ್ಟವಷಾತ್ ದೇಶದ ಹಲವು ಕಡೆ ಮಹಿಳೆ ಮತ್ತು ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ.

ದೇಶದ ಹೊರಗೂ ಈ ಘಟನೆ ಹಲವು ಮಾಧ್ಯಮಗಳ ಮೂಲಕ ಪ್ರಚಾರ ಪಡೆದುಕೊಂಡಿದೆ. ಬಾಧಿತ ಮಹಿಳೆ ಇಹಲೋಕ ಯಾತ್ರೆಯ ಯಾತನೆ ಮುಗಿಸಿದ್ದು ಸಿಂಗಪುರದಲ್ಲಿ. ಇಲ್ಲಿಯ ಪ್ರತಿಷ್ಠಿತ ದಿನಪತ್ರಿಕೆ "ಸ್ಟ್ರೈಟ್ಸ್ ಟೈಮ್ಸ್" ಡಿಸೆಂಬರ್ 30ರ ತನ್ನ ಭಾನುವಾರದ ಸಂಚಿಕೆಯಲ್ಲಿ ಮುಖಪುಟವನ್ನೊಳಗೊಂಡಂತೆ ಹಲವು ಪುಟಗಳಲ್ಲಿ ಈ ಅತ್ಯಾಚಾರದ ಕೂಲಂಕುಷವಾದ ವಿವರಣೆ ನೀಡಿದೆ. ಹುಡುಗಿಯನ್ನು ಸಿಂಗಪುರಕ್ಕೆ ಸ್ಥಳಾಂತರಿಸಿದ ಬಗ್ಗೆ ಅವಳನ್ನು ಶುಶ್ರೂಷೆ ಮಾಡುತ್ತಿದ್ದ ವೈದ್ಯರುಗಳಲ್ಲೇ ಅಸಹಮತವಿದೆ. ಈ ನಿರ್ಧಾರವನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗಿದೆ ಎನ್ನುವ ಮಾತುಗಳು ಕೂಡ ಅಲ್ಲಲ್ಲಿ ಕೇಳಿಬರುತ್ತಿದೆ. ನಿಧಾನವಾಗಿಯಾದರೂ ಗುಣಹೊಂದುತ್ತಿದ್ದ ಅವಳನ್ನು ಹಠಾತ್‌ ಆಗಿ ಸಿಂಗಪುರಕ್ಕೆ ವರ್ಗಾಯಿಸಿದ್ದು ಎಷ್ಟು ಸಮಂಜಸ ಎಂದು ಪ್ರಶ್ನಿಸುತ್ತಿದ್ದಾರೆ. ಅದು ಏನೇ ಇರಲಿ, ಹುಡುಗಿಯನ್ನು ಸಿಂಗಪುರಕ್ಕೆ ಕರೆತರದಿದ್ದರೆ ಈ ಘಟನೆ ಇಲ್ಲಿಯ ಮಾಧ್ಯಮಗಳಲ್ಲಿ ಇಷ್ಟೊಂದು ಪ್ರಚಾರ ಪಡೆಯುತ್ತಿರಲಿಲ್ಲವೇನೋ!

"ನಿಮ್ಮ ದೇಶದಲ್ಲಿ ಯಾಕೆ ಇಷ್ಟೊಂದು ಅತ್ಯಾಚಾರ ಪ್ರಕರಣಗಳು? ಹೆಂಗಸರು ಒಬ್ಬರೇ ಹಗಲು ಹೊತ್ತು ಓಡಾಡುವುದೂ ಕಷ್ಟವಂತೆ? ನಿರ್ಭಯವಾಗಿ, ಯಾವಹೊತ್ತಿನಲ್ಲೂ ಒಂಟಿಯಾಗಿ ಓಡಾಡಬಹುದಾದ ಸಿಂಗಪುರದಲ್ಲಿ ನಿಮ್ಮ ಹೆಂಡತಿಗೆ ಬಹಳ ಸ್ವಾತಂತ್ರವಿದೆಯಲ್ಲವೇ? ನಿಮ್ಮ ದೇಶದಲ್ಲಿ ಯಾಕೆ ಸಿಂಗಪುರದಲ್ಲಿ ಇರುವ ಹಾಗೆ ಅತ್ಯಾಚಾರಿಗಳಿಗೆ ಕಠಿಣ ಸಜೆಯಿಲ್ಲ?..." ಎಂದು ಇಂದು ಬೆಳಗ್ಗೆ ಪ್ರಶ್ನೆಗಳ ಮಳೆ ಸುರಿಸಿದ ನನ್ನ ಚೀನಿ ಸಹೋದ್ಯೋಗಿಗೆ ಸಮಂಜಸವಾದ ಉತ್ತರ ನೀಡಲು ಪ್ರಯತ್ನ ಪಟ್ಟು ಸೋತಿದ್ದೆ.

ಇಂತಹ ಘಟನೆಗಳು ಮತ್ತು ಅವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಡೆದುಕೊಳ್ಳುವ ಬಣ್ಣ ಮತ್ತು ತೀಕ್ಷ್ಣತೆ ಭಾರತದ ಪ್ರತಿಷ್ಠೆಗೆ ಕೆಟ್ಟದ್ದನ್ನೇ ಮಾಡುತ್ತದೆ. ಈಗಾಗಲೇ ಭಾರತ ಮತ್ತು ಭಾರತೀಯರ ಮೇಲೆ ಹೊರ ರಾಷ್ಟ್ರಗಳಲ್ಲಿ ಇರುವ ಅನಾದಾರ ಮತ್ತು ಸಂಶಯದ ನೋಟಗಳು ಇನ್ನೂ ಹೆಚ್ಚುವಂತೆ ಮಾಡುತ್ತದೆ. "ಎಲ್ಲಾ ಬಣ್ಣ ಮಸಿ ನುಂಗಿತು" ಎನ್ನುವ ಹಾಗೆ ಇಂತಹ ಘಟನೆಗಳು ನಿಧಾನವಾಗಿ ಪ್ರಗತಿಪಥದತ್ತ ಪುಟ್ಟ ಹೆಜ್ಜೆ ಇಡುತ್ತಿರುವ ಭಾರತದ ಬಗ್ಗೆ ತಪ್ಪು ಅಭಿಪ್ರಾಯನ್ನೂ ಮೂಡಿಸುತ್ತದೆ.

ಹೆಣ್ಣು ದೇವರನ್ನು ಒಂದಿಲ್ಲೊಂದು ಹಬ್ಬದಲ್ಲಿ ವರ್ಷವಿಡೀ ಭಕ್ತಿ ಮತ್ತು ಆದರದಿಂದ ಪೂಜಿಸುವ ನಮ್ಮ ರಾಷ್ಟ್ರದಲ್ಲಿ ಮಹಿಳೆಯರಿಗೇ ಇಂತಹ ದುಃಸ್ಥಿತಿ ಬಂದಿರುವುದು ಅಸಹನೀಯ. ನಮ್ಮ ಸಮಾಜದಲ್ಲಿರುವ ಈ ಪಿಡುಗನ್ನು ಹದ್ದುಬಸ್ತಿಗೆ ತರಲು ಎಲ್ಲಿಂದ, ಏನು, ಹೇಗೆ ಶುರುಮಾಡಬೇಕೆನ್ನುವ ವಿಚಾರಗಳು ಇನ್ನೂ ಬರೀ ಚರ್ಚೆಗಳಲ್ಲೇ ಉಳಿದಿವೆ. ಅತ್ಯಾಚಾರ ವಿರೋಧಿ ಕಾನೂನಿನಲ್ಲಂತೂ ಮಹತ್ತರ ಬದಲಾವಣೆಗಳಾಗಲೇ ಬೇಕು, ನಿಜ. ಆದರೆ, ಅದಕ್ಕಿಂತ ಹೆಚ್ಚಾಗಿ ನಮ್ಮ ಆಚಾರ ವಿಚಾರಗಳಲ್ಲೂ ಬದಲಾವಣೆಯಾಗಬೇಕು.

ಸಿನೆಮಾ, ಟಿ.ವಿ ಮಾಧ್ಯಮಗಳಲ್ಲಿ ರೋಚಕವಾಗಿ ತೋರಿಸುವ ಮಹಿಳೆಯರ ಮೇಲಿನ ಹಿಂಸೆ, ಅತ್ಯಾಚಾರ ಮತ್ತು ದೌರ್ಜನ್ಯದ ದೃಶ್ಯಗಳಿಗೆ ಕಡಿವಾಣ ಹಾಕಬೇಕು. ಗಂಡು ಸಮಾಜ ಮಹಿಳೆಯರನ್ನು ನೋಡುವ ದೃಷ್ಟಿ ಬದಲಾಗಬೇಕು. ಹೆಣ್ಣು ಮಕ್ಕಳ ಮೇಲೆ ಹೇರುವ ಕ್ಷುಲ್ಲಕ ಕಟ್ಟಳೆಗಳನ್ನು ಕಡಿಮೆ ಮಾಡಿ, ಗಂಡು ಮಕ್ಕಳಿಗೆ ಮಹಿಳೆಯರನ್ನು ಗೌರವಿಸುವ ಸಂಸೃತಿಯನ್ನು ಚಿಕ್ಕಂದಿನಿಂದಲೇ ಹೇಳಿಕೊಡಬೇಕು. ಈಗಾಗಲೇ ತಡವಾಗಿದ್ದರೂ, ಇಂದಿನಿಂದಲೇ ಇವೆಲ್ಲಾ ಕಾರ್ಯಗತವಾಗಬೇಕು. ಇಲ್ಲದಿದ್ದರೆ ಗಣತಂತ್ರವನ್ನು ಯಶಸ್ವಿಯಾಗಿ ಪರಿಪಾಲಿಸುವ ಕೆಲವು ರಾಷ್ಟ್ರಗಳಲ್ಲಿ ಒಂದಾದ ಭಾರತ, ಅತಂತ್ರ ಮತ್ತು ಅನಾಗರೀಕತೆಯ ಸ್ಥಿತಿ ತಲುಪುವ ದಿನ ದೂರವಿಲ್ಲ.

English summary
Girish Jamadagni, a Kannadiga and citizen of Singapore, compares the law and situation pertaining to atrocities on women in India and Singapore. He says, we should change our way of thinking about women and try to be more responsible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X