ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ವಿಜೃಂಭಣೆಯ ವಚನಾಂಜಲಿ - 2013

By ವೆಂಕಟ್, ಸಿಂಗಪುರ
|
Google Oneindia Kannada News

ಕನ್ನಡ ಸಂಘ ಸಿಂಗಪುರ ಹಾಗೂ ವುಡ್‌ಲ್ಯಾಂಡ್ಸ್ ಸಿ.ಸಿ.ಯ ಜಂಟಿ ಆಯೋಗದಲ್ಲಿ, 2013-2015 ಸಾಲಿನ ಹೊಸ ಕಾರ್ಯಕಾರಿ ಸಮಿತಿಯ ನೇತೃತ್ವದಲ್ಲಿನ ಮೊದಲ ಕಾರ್ಯಕ್ರಮ "ವಚನಾಂಜಲಿ -2013" ಬಹು ವಿಜೃಂಭಣೆಯಿಂದ ಜುಲೈ 27, 2013ರಂದು ನೆರವೇರಿತು.

ವಿಶೇಷ ಅತಿಥಿಗಳಾಗಿ ಖ್ಯಾತ ಲೇಖಕಿ, ಹಾಗು ಮಾಜಿ ಸಚಿವೆ (ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಡಾ.ಲೀಲಾದೇವಿ ಆರ್. ಪ್ರಸಾದ್ ಹಾಗೂ ಸಿಂಗಪುರದ ಸೆಂಬವಾಂಗ್ ಜಿ.ಆರ್.ಸಿ (ವುಡ್‌ಲ್ಯಾಂಡ್ಸ್)ನ ಸಂಸತ್ ಸದಸ್ಯೆ ಮಿಸ್. ಎಲೀನ್ ಲೀ ಹಾಗೂ ಡೇವಿಡ್ ಸಿಮ್, ಬಿ.ಬಿ.ಎಮ್., ಸಿ.ಸಿ.ಸಿ ಛೇರ್‌ಮನ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಡಾ.ಲೀಲಾದೇವಿ.ಆರ್.ಪ್ರಸಾದ್, ಕನ್ನಡ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ವೈದ್ಯ, ಉಪಾಧಕ್ಷೆ ಕವಿತ ರಾಘವೇಂದ್ರ, ಸಂಘದ ಮಾಜೀ ಅಧ್ಯಕ್ಷರುಗಳಾದ ಪ್ರೊ.ಎ.ಎನ್.ರಾವ್, ಡಾ.ವಿಜಯ ಕುಮಾರ್ ಹಾಗೂ ಪ್ರಭುದೇವ ಅವರ ಸಮ್ಮುಖದಲ್ಲಿ ಜ್ಯೋತಿ ಬೆಳಗಿ ವಚನಾಂಜಲಿ-2013 ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚೈತ್ರಾ ಜಗದೀಶ್ ಹಾಗೂ ಶಶಿಮುಖಿ ಶಾನ್‌ಭಾಗ್ ಅವರು "ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ" ಪ್ರಾರ್ಥನ ಗೀತೆ ಹೇಳಿದರು. ವಿಶಾಲಾಕ್ಷಿ ವೈದ್ಯ ಅವರು ಗಣ್ಯ ವ್ಯಕ್ತಿಗಳಿಗೆ ಹಾಗೂ ಸಭಿಕರಿಗೆ ಸ್ವಾಗತ ಕೋರಿದರು.

Vachananjali-2013 by Kannada Sangha Singapore

ಸಮೂಹ ಗಾನಗಳ ಸಮಯದಲ್ಲಿ ಆಗಮಿಸಿದ Ms.Eleen Lee ಅವರು ಡಾ.ಲೀಲಾದೇವಿ ಆರ್. ಪ್ರಸಾದ್ ಅವರಿಗೆ ಹಾರ, ಶಾಲು ಹಾಗೂ ನೆನಪಿನ ಕಾಣಿಕೆಗಳಿಂದ ಗೌರವಿಸಿದರು. ಡಾ.ಲೀಲಾದೇವಿ ಆರ್.ಪ್ರಸಾದ್ ಅವರು ಸಹ ಬೆಂಗಳೂರಿಂದ ತಂದಂತಹ ಮಾಲೆ ಹಾಗೂ ಶಾಲುಗಳಿಂದ ಮಿಸ್. ಎಲೀನ್ ಲೀ ಅವರನ್ನು ಅಭಿನಂದಿಸಿದರು. ಎಲೀನ್ ಅವರಿಗೆ ಆಂಗ್ಲ ಭಾಷೆಯಲ್ಲಿದ್ದ ವಚನಗಳ ಭಾವಾರ್ಥದ ಪ್ರತಿ ನೀಡಲಾಗಿತ್ತು.

ನಾದನಿಧಿ ಭಾಗ್ಯಮೂರ್ತಿಯವರ ಮುಂದಾಳತ್ವದಲ್ಲಿ, ಸಹನ ರಾಮಚಂದ್ರ, ಶೋಭ ರಘು ಹಾಗೂ ಶೃತಿ ಆನಂದ್ ಅವರೊಂದಿಗಿನ ವಚನಗಳ ಗಾಯನ ಮತ್ತು ಪ್ರತೀ ವಚನದ ಗಾಯನಕ್ಕೂ ಡಾ. ಲೀಲಾದೇವಿ.ಆರ್.ಪ್ರಸಾದ್ ಅವರಿಂದ ನಡೆದ ಸೂಕ್ತ ವ್ಯಾಖ್ಯಾನ ನೆರೆದ ಸಭಿಕರಿಗೆ ಸಂಗೀತದ ಸುಧೆಯ ಜೊತೆಗೆ ವಚನಗಳ ಭಾವಾಮೃತವನ್ನು ಪಸರಿಸುವಲ್ಲಿ ಯಶಸ್ವಿಯಾಯಿತು.

ವಚನಮಯವಾದ ಸಭಾಂಗಣ : ಮಾನವ ಕಲ್ಯಾಣಕ್ಕೆ 12ನೇ ಶತಮಾನದ ಅದ್ಭುತವಾದಂತಹ ಕೊಡುಗೆಯಾದ ವಚನ ಸಾಹಿತ್ಯ ಹಾಗೂ ಇಂದಿಗೂ ಜೀವನದ ಪ್ರತೀ ಸಂದರ್ಭಗಳಿಗೂ ಪ್ರಸ್ತುತವೆನಿಸುವ ಅವುಗಳ ಸಾರಾಂಶವನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾ, ಡಾ.ಲೀಲಾದೇವಿ ಪ್ರಸಾದ್ ಅವರು ಇಡೀ ಸಭಾಂಗಣವನ್ನು ವಚನಮಯಗೊಳಿಸಿದರು. ಸಂಗೀತ ಮಾತ್ರವಲ್ಲದೆ, ವಚನಗಳನ್ನು ಭರತನಾಟ್ಯದಲ್ಲಿನ ಹಾವ-ಭಾವ ಅಭಿನಯಗಳೊಂದಿಗೆ ಸವಿಯುವ ಭಾಗ್ಯ ಪ್ರೇಕ್ಷಕರದಾಗಿತ್ತು. ರಚನ ಹೆಗ್ಡೆ ಅವರು ಅಕ್ಕಮಹಾದೇವಿಯವರ "ಬೆಟ್ಟದ ಮೇಲೊಂದು ಮನೆಯಮಾಡಿ" ವಚನಕ್ಕೆ ಅದ್ಭುತವಾದಂತಹ ನಾಟ್ಯವನ್ನು ಪ್ರಸ್ತುತ ಪಡಿಸಿದರೆ, ಶ್ರೀಲಕ್ಷ್ಮಿ ಅವರ ನೃತ್ಯ ಸಂಯೋಜನೆಯಲ್ಲಿ "ವಚನದಲ್ಲಿ ನಾಮಾಮೃತ ತುಂಬಿ" ಎನ್ನುವ ವಚನವು ಅಮೋಘವಾಗಿ ಮೂಡಿ ಬಂದಿತು.

ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ : ವಚನಾಂಜಲಿಯ ಪರವಾಗಿ ಕನ್ನಡ ಸಂಘ ಸಿಂಗಪುರವು 21 ಜುಲೈ 2013ರಂದು ವಯಸ್ಸಿನ ಆಧಾರವಾಗಿ ವಿಂಗಡಿಸಿದ ಮೂರು ಗುಂಪುಗಳಿಗೆ ವಚನ ಪಠನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಚನಗಳ ಉಚ್ಚಾರಣೆ, ವಚನದಲ್ಲಿನ ಪದಗಳಿಗೆ ಸ್ಪರ್ಧಾಳುಗಳು ನೀಡಿದ ಹಾವ-ಭಾವಗಳನುಗುಣವಾಗಿ ತೀರ್ಪುಗಾರರಾದ ಗಿರೀಶ್ ಜಮದಗ್ನಿ, ವಾಣಿ ರಾಮದಾಸ್ ಹಾಗೂ ಕವಿತಾ ಬಾದಾಮಿಯವರು ಸ್ಪರ್ಧಾಳುಗಳಿಗೆ ಅಂಕ ನೀಡಿದರು. ವಿಜೇತರೆಲ್ಲರಿಗೂ ಬಹುಮಾನವನ್ನು ಜುಲೈ 27ರ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಈ ವಚನ ಪಠನ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು ಎಲ್ಲ ಸಭಿಕರ ಸಮ್ಮುಖದಲ್ಲಿ ಮತ್ತೊಮ್ಮೆ ವಚನಗಳನ್ನು ಹೇಳಿ ನೆರೆದಿದ್ದ ಸಭಿಕರಿಂದ ಚಪ್ಪಾಳೆಗಳನ್ನು ಪಡೆದರು. ಈ ಕಾರ್ಯಕ್ರಮದ ನಿರೂಪಣೆಯನ್ನು ವಿಜಯ ಮಹಾಂತೇಶ್ ಶೀಗಿ ಅವರು ಸಮರ್ಪಕವಾಗಿ ನಿರ್ವಹಿಸಿದರೆ, ಇಡೀ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪ್ರಸ್ತುತಪಡಿಸುವ ಜವಾಬ್ದಾರಿಯನ್ನು ರಶ್ಮಿ ಉದಯ್‌ಕುಮಾರ್ ಹಾಗೂ ಕನ್ನಡ ಸಂಘದ ಸಹ ಕಾರ್ಯದರ್ಶಿಗಳಾದ ಕಿಶೋರ್ ಅವರು ವಹಿಸಿಕೊಂಡಿದ್ದರು.

ಕಿಶೋರ್ ಅವರು ವಂದನಾರ್ಪಣೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಪತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು. ಕೊನೆಯಲ್ಲಿ ರಮಣ ಭಟ್ ಅವರಿಂದ ವಿತರಿಸಲಾದ ಪ್ರಸಾದವನ್ನು ಸವಿದ ಸಭಿಕರು ರಾತ್ರಿ 10 ಗಂಟೆಯಾದರೂ ಕದಲದೆ ತಂತಮ್ಮ ಮಾತುಗಳಲ್ಲಿ ಮುಳುಗಿ ಹೋಗಿದ್ದರು. ಕನ್ನಡ ಸಂಘದ ಕಾರ್ಯಕ್ರಮ ಮುಗಿದ ನಂತರ ತಪ್ಪದೆ ನಡೆಯುವ ಉಭಯ ಕುಶಲೋಪರಿಯ ಈ ವೈಖರಿ ವಿಶಿಷ್ಟ ಹಾಗೂ ವಿಶೇಷವಲ್ಲವೆ?

English summary
Vachananjali-2013 from Kannada Sangha Singapore was successfully conducted in Singapore on 27th July. Former minister of Kannada and Culture Dr. Leeladevi R Prasad was the chief guest. Prizes were distributed to the winners of Vachana recitation competition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X