ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಮಂತರ ವೈಭವದ ಖಯಾಲಿಯ ವಾಚು

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

Story of my wrist watch
ಈಗಿನ ಸ್ಮಾರ್ಟ್ ಮೊಬೈಲು ಫೋನುಗಳು ಕೈ ಗಡಿಯಾರ, ಅಲಾರ್ಮ್ ಕ್ಲಾಕ್ ಇತ್ಯಾದಿ ಇತ್ಯಾದಿಗಳ ಕೆಲಸಗಳನ್ನೆಲ್ಲಾ ಮಾಡುವಾಗ ಈ ಕೈಗಡಿಯಾರದ ಮಹತ್ವ ಕಮ್ಮಿಯಾಗಿದೆಯೇನೋ ಅನಿಸುತ್ತದೆ. ಅನೇಕರು ಇತ್ತೀಚೆಗೆ ಕೈಗಡಿಯಾರಗಳನ್ನು ಕಟ್ಟಿಕೊಳ್ಳುವುದೇ ಇಲ್ಲ. ಆದರೂ ವಾಚು ಈಗಿನ ಫ್ಯಾಷನ್ ಯುಗದಲ್ಲಿ ತನ್ನ ಮೂಲ ಉದ್ದೇಶವನ್ನು ಹಿಂದೆ ಬಿಟ್ಟು ಅನೇಕ ಶ್ರೀಮಂತರ ವೈಭವದ ಖಯಾಲಿಯಾಗಿ ಹೊರ ಹೊಮ್ಮಿದೆ ಎನಿಸುತ್ತದೆ. ಈಗ ಯಾವುದೇ ವೈಭವದ ಮಾಲ್ ನೋಡಿ, ಇಲ್ಲವೇ ಏರ್‌ಪೋರ್ಟ್‌ಗಳನ್ನು ನೋಡಿ. ಅಲ್ಲಿ ಬೇರೇ ಏನೂ ಇರದಿದ್ದರೂ ವೈಭವದ ವಾಚುಗಳ ಅಂಗಡಿ ಇದ್ದೇ ಇರುತ್ತದೆ. ಅಲ್ಲಿನ ವಾಚುಗಳ ಬೆಲೆಯನ್ನು ನೋಡಿದರೆ ನಮ್ಮಂತಹ ಸಾಧಾರಣ ಜನರ ತಲೆ ದಿಮ್ಮೆನ್ನುತ್ತದೆ.

ಜಗತ್ತಿನ ಅತ್ಯಂತ ದುಬಾರಿ ವಾಚು ಚೋಪಾರ್ಡ 201 ಎಂಬ ವಾಚು. ಇದರ ಬೆಲೆ 2.5 ಕೋಟಿ ಅಮೆರಿಕನ್ ಡಾಲರುಗಳು. ಯಾವುದೋ ಅರಬ್ಬೀ ಶೇಖ್ ಇದನ್ನು ಕೊಂಡುಕೊಂಡಿರಬೇಕಷ್ಟೆ. ಒಂದು ಕಾಲಕ್ಕೆ ಸಾಮಾನ್ಯ ವಾಚು ತಯಾರಿಕಾ ಘಟಕಗಳಾಗಿದ್ದ ಸ್ವಿಟ್ಜರ್‌ಲ್ಯಾಂಡಿನ ಪ್ರಮುಖ ಬ್ರ್ಯಾಂಡ್‌ಗಳಾದ ರೋಲೆಕ್ಸ್, ಟ್ಯಾಗ್ ಹೀವರ್, ಕಾರ್ಟಿಯರ್, ಮೊಂಟ್‌ಬ್ಲಾಂಕ್ ಇತ್ಯಾದಿಗಳು ಇಂದು ವೈಭವದ ಬ್ರ್ಯಾಂಡ್‌ಗಳಾಗಿ ಪರಿವರ್ತನೆ ಹೊಂದಿವೆ. ಇದಲ್ಲದೇ ವಾಚುಗಳನ್ನು ರೂಪಾಂತರಗೊಳಿಸಿ ಅಂತರಿಕ್ಷ ಯಾನಕ್ಕೆ ಮತ್ತು ಸಮುದ್ರದಾಳದ ಜಿಗಿತಕ್ಕೆ ಅಣಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಈಗಂತೂ ಆಪಲ್ ಮತ್ತು ಪೆಬಲ್‌ನಂತಹ ತಂತ್ರಜ್ಞಾನದ ದೈತ್ಯ ಕಂಪನಿಗಳು ಈ ಕೈವಾಚುಗಳನ್ನೂ ಇನ್ನೂ ಒಂದು ಹೆಜ್ಜೆ ಮುಂದೆ ಕರೆದೊಯ್ದು, ಈ ವಾಚುಗಳು ನಮ್ಮ ಸ್ಮಾರ್ಟ್ ಫೋನುಗಳೊಂದಿಗೆ ವೈರ್‌ಲೆಸ್ ಸಂಪರ್ಕ ಹೊಂದುವಂತೆ ಅಭಿವೃದ್ಧಿಗೊಳಿಸಿವೆ. ಅಂದರೆ ನಮಗೊಂದು ಎಸ್ ಎಮ್ ಎಸ್ ಅಥವಾ ಫೋನು ಬಂದರೆ, ನಮ್ಮ ವಾಚು ಅಲ್ಲಾಡುತ್ತದೆ ಅಥವಾ ಗುಣುಗುಟ್ಟುತ್ತದೆ! ಇದರರ್ಥ ಕೇವಲ ನಮ್ಮ ಫೋನು ಮಾತ್ರ ಸ್ಮಾರ್ಟ್ ಅಲ್ಲ, ನಮ್ಮ ವಾಚು ಕೂಡ ಸ್ಮಾರ್ಟ್ ವಾಚು ಆಗಿ ಬದಲಾಗುತ್ತಿದೆ! ನಮ್ಮ ಇಂಜಿನಿಯರುಗಳು ಮತ್ತು ವಿಜ್ಞಾನಿಗಳಿಗೆ ಜೈ ಎನ್ನಬಹುದು ತಾನೆ?

ಸಮಯವನ್ನು ತೋರಿಸಲು ತಯಾರಾದ ಈ ಕೈ ವಾಚು ಸಮಯದ ಹೊಡೆತಕ್ಕೆ ಸಿಕ್ಕು ಅನೇಕ ಮಾರ್ಪಾಟುಗಳನ್ನು ಕಂಡಿದೆ. ಪರಿವರ್ತನೆ ಈ ಜಗತ್ತಿನ ನಿಯಮವಷ್ಟೇ? ಅದಕ್ಕೆ ವಾಚು ಕೂಡ ಹೊರತಲ್ಲ. ಕೇವಲ ಸಮಯವನ್ನು ತೋರುವ ಯಂತ್ರಕ್ಕೆ ಸೀಮಿತವಾಗದೇ ಅದು ತನ್ನನ್ನು ನವೀನತೆಯ ಫ್ಯಾಷನ್‌ನ ಚಿಹ್ನವಾಗಿ ಪರಿವರ್ತನೆಗೊಂಡು ಇನ್ನೂ ವಿಕಸಿಸಿದೆ. ಸ್ಮಾರ್ಟ್ ವಾಚು ಆಗಿ ಬದಲಾಯಿಸಿ ವಿಕಾಸದ ಹೊಸ ಶಿಖರವನ್ನೇರತೊಡಗಿದೆ. ಏನೇ ಆಗಲಿ ಈ ಜಗತ್ತಿನ ರಂಗಭೂಮಿಯಲ್ಲಿ ಕಾಲರಾಯನ ಓಟ ಮಾತ್ರ ಸಾಗುತ್ತಿರುತ್ತದೆ. ಅದನ್ನು ನಿಲ್ಲಿಸಲಾಗುವುದಿಲ್ಲ. ನಿಧಾನಗೊಳಿಸಲಾಗುವುದಿಲ್ಲ. ವಸ್ತುಗಳು, ಪಾತ್ರಗಳು ಮತ್ತು ಪ್ರೇಕ್ಷಕರಾದ ನಾವು ನೀವೆಲ್ಲ ಬದಲಾಗುತ್ತಿರುತ್ತೇವೆ ಅಷ್ಟೇ.

English summary
Wrist watch is not just an instrument to see the time or just a fashion item, now-a-days the watch has become smart too like our mobile phones. It makes us realize that we have run along with the time. Times have changed, so wrist watches. By the by, do you wear wrist watch?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X