ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಕನ್ನಡ ಸಾಹಿತ್ಯ ರಂಗದ ವಸಂತ ಸಾಹಿತ್ಯೋತ್ಸವ

By Prasad
|
Google Oneindia Kannada News

Sixth Vasanta Sahityotsava in America
ಹ್ಯೂಸ್ಟನ್ (ಟೆಕ್ಸಸ್ ಸಂಸ್ಥಾನ)- ಅಮೆರಿಕದಲ್ಲಿ ನೆಲೆಸಿರುವ ಕನ್ನಡ ಸಾಹಿತ್ಯಾಸಕ್ತರನ್ನೆಲ್ಲ ಒಂದುಗೂಡಿಸಿ ಅವರ ವಿಚಾರ ವಿನಿಮಯಕ್ಕಾಗಿ ಒಂದು ಸತ್ವಶಾಲಿಯಾದ ವೇದಿಕೆಯನ್ನು ಒದಗಿಸಿರುವ ಕನ್ನಡ ಸಾಹಿತ್ಯ ರಂಗಕ್ಕೀಗ ದಶಮಾನೋತ್ಸವ ಸಂಭ್ರಮ. ಅಮೆರಿಕನ್ನಡಿಗರ ಸಾಹಿತ್ಯಾಸಕ್ತಿಯನ್ನು ಪೋಷಿಸಿ, ಅವರನ್ನು ತಮ್ಮ ಅನುಭವಗಳ ಬಗ್ಗೆ ಸೃಜನಾತ್ಮಕವಾಗಿ ಬರೆಯಲು ಪೋತ್ಸಾಹಿಸಿ, ಅವರ ಬರವಣಿಗೆಗಳನ್ನು ಪ್ರಕಟಿಸಿ ಸಾಧ್ಯವಾದಷ್ಟು ಮಂದಿ ಕನ್ನಡಿಗರ ಗಮನಕ್ಕೆ ತರುವ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿದೆ ಈ ಸಂಘಟನೆ.

ಪ್ರತಿ ಎರಡು ವರ್ಷಕ್ಕೊಮ್ಮೆ ಅಮೆರಿಕದಲ್ಲಿಯೇ 'ವಸಂತ ಸಾಹಿತ್ಯೋತ್ಸವ' ಎಂಬ ಹೆಸರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನೂ ನಡೆಸುತ್ತದೆ. ಈ ವರ್ಷ ವಸಂತ ಸಾಹಿತ್ಯೋತ್ಸವವನ್ನು ಮೇ 18 ಮತ್ತು 19ರಂದು ಅಮೆರಿಕದ ಟೆಕ್ಸಸ್ ಸಂಸ್ಥಾನದ ಹ್ಯೂಸ್ಟನ್‌ನಲ್ಲಿ ಅಲ್ಲಿನ ಕನ್ನಡ ಸಂಘದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಕನ್ನಡದ ಖ್ಯಾತ ಲೇಖಕ, ವಿದ್ವಾಂಸ ಮತ್ತು ಚಿಂತಕ ಪ್ರೊ.ಕೆ.ವಿ.ತಿರುಮಲೇಶ ಅವರು ಮುಖ್ಯ ಅತಿಥಿಗಳಾಗಿ ಬರುತ್ತಿದ್ದಾರೆ. 'ಕನ್ನಡದ ಮುನ್ನಡೆ - ಸವಾಲುಗಳು ಮತ್ತು ಅವಕಾಶಗಳು' ಎಂಬ ವಿಚಾರದ ಕುರಿತು ಅವರು ಆಶಯಭಾಷಣ ಮಾಡುವವರಿದ್ದಾರೆ.

ಈ ಹಿಂದಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ರಂಗವು ಫಿಲಡೆಲ್ಫಿಯ, ಲಾಸ್ ಏಂಜಲಿಸ್, ಚಿಕಾಗೊ, ವಾಷಿಂಗ್ಟನ್ ಡಿ.ಸಿ, ಮತ್ತು ಸಾನ್ ಫ್ರಾನ್ಸಿಸ್ಕೋ ನಗರಗಳಲ್ಲಿ ವಸಂತ ಸಾಹಿತ್ಯೋತ್ಸವವನ್ನು ಯಶಸ್ವಿಯಾಗಿ ನಡೆಸಿದೆ.

ಪ್ರತಿ ಸಮ್ಮೇಳನದಲ್ಲೂ ಒಂದು ಮುಖ್ಯ ವಿಚಾರ (ಥೀಮ್) ಇಟ್ಟುಕೊಂಡು, ಅದರ ಬಗ್ಗೆ ಅಮೆರಿಕನ್ನಡಿಗರಿಂದ ಬರೆಸಿದ ಲೇಖನಗಳನ್ನು ಸಂಕಲಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಈಬಾರಿಯ ಪುಸ್ತಕದ ಹೆಸರು ಬೇರು-ಸೂರು. ಇದು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಮೆರಿಕನ್ನಡಿಗರು ಈ ದೇಶಕ್ಕೆ ವಲಸೆಬಂದು ಇಲ್ಲಿ ತಮ್ಮ ಬದುಕನ್ನು ಕಂಡುಕೊಳ್ಳುವಾಗಿನ ಅನುಭವಗಳನ್ನು ಅಕ್ಷರಗಳಲ್ಲಿ ದಾಖಲಿಸಿರುವ ಬರಹಗಳ ಗುಚ್ಛ. ಇದರ ಜತೆಗೇ ದಿ. ಹಾಸನ ರಾಜಾರಾವ್ ಅವರ ಅಪ್ರಕಟಿತ ಇಂಗ್ಲಿಷ್ ಕಾದಂಬರಿ 'ಸಾಂಗ್ ಆಫ್ ವುಮನ್'ನ ಕನ್ನಡ ಅನುವಾದ 'ನಾರೀಗೀತ' (ಅನುವಾದಕರು: ಸಿ.ಎನ್.ಶ್ರೀನಾಥ್) ಸಹ ಬಿಡುಗಡೆಗೊಳ್ಳಲಿದೆ.

ರಾಜಾರಾವ್ ಅವರ ಬದುಕು-ಬರಹಗಳ ಕುರಿತು ವಿಚಾರಸಂಕಿರಣವನ್ನೂ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಈ ಪುಸ್ತಕಗಳು ಲೋಕಾರ್ಪಣೆಗೊಳ್ಳುವುದಷ್ಟೇ ಅಲ್ಲದೆ ಕಳೆದ ಸಮ್ಮೇಳನದಿಂದೀಚೆಗೆ ಪ್ರಕಟವಾದ ಅಮೆರಿಕನ್ನಡಿಗ ಬರಹಗಾರರ ಪುಸ್ತಕಗಳನ್ನೂ ಮತ್ತು ಅವುಗಳ ಲೇಖಕರನ್ನೂ ಸಭೆಗೆ ಪರಿಚಯ ಮಾಡಿಕೊಡುವ, ಕೃತಿಗಳನ್ನು ವಿಮರ್ಶಿಸುವ ಕಾರ್ಯಕ್ರಮವೂ ಇರುತ್ತದೆ. ಜೊತೆಗೆ ಈ ಹೊಸ ಪುಸ್ತಕಗಳನ್ನು ಸಮ್ಮೇಳನದಲ್ಲೇ ಕೊಳ್ಳಲು ಅನುಕೂಲವಾಗುವಂತೆ ಒಂದು ಪುಸ್ತಕ ಸಂತೆಯನ್ನೂ ಏರ್ಪಡಿಸಲಾಗಿದೆ.

ಅಮೆರಿಕನ್ನಡಿಗ ಲೇಖಕರನ್ನೊಳಗೊಂಡ ಸಾಹಿತ್ಯ ಗೋಷ್ಠಿ, ಮುಖ್ಯ ಅತಿಥಿ ಲೇಖಕರೊಂದಿಗೆ ಸಂವಾದ, ಹಿರಿಯ ಲೇಖಕರ ಸ್ಮರಣೆ ಮುಂತಾದ ಕಾರ್ಯಕ್ರಮಗಳೂ ಇವೆ. ಇಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳಿಗೆ ಪ್ರೋತ್ಸಾಹ ನೀಡಲು, ಮತ್ತು ಆ ಬಗ್ಗೆ ಆಸ್ಥೆ ವಹಿಸಿ ಅತ್ಯಂತ ಶ್ರದ್ಧೆಯಿಂದ ಕೆಲಸಮಾಡುತ್ತಿರುವ ತಂದೆ ತಾಯಿಯರಿಗೆ ಕೃತಜ್ಞತೆ ತೋರುವ ಕಾರ್ಯಕ್ರಮವಿರುತ್ತದೆ. ಇವೆಲ್ಲದರ ಜೊತೆಗೆ, ಸಾಹಿತ್ಯ ಮತ್ತು ಕರ್ನಾಟಕ ಕಲಾಪರಂಪರೆಯ ಪೋಷಣೆಗೆ ಒತ್ತು ಕೊಟ್ಟು ರೂಪಿಸಲಾದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳಿರುತ್ತವೆ. ಟೆಕ್ಸಸ್ ಸಂಸ್ಥಾನದ ಹ್ಯೂಸ್ಟನ್, ಡಲ್ಲಾಸ್, ಆಸ್ಟಿನ್ ಮುಂತಾದ ನಗರಗಳಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಸೇರಿ ಪ್ರಸ್ತುತಪಡಿಸುವ 'ಕಾವ್ಯ ನೃತ್ಯ' ಈಬಾರಿಯ ಪ್ರಧಾನ ಆಕರ್ಷಣೆ. ಅಂತೆಯೇ, ನ್ಯೂಜೆರ್ಸಿಯ ಕನ್ನಡಿಗರು ಪ್ರಸ್ತುತಪಡಿಸುವ 'ಅಹಲ್ಯಾ' ಯಕ್ಷಗಾನ ಪ್ರದರ್ಶನವಿದೆ.

ಸಮ್ಮೇಳನದಲ್ಲಿ ಕಡಿಮೆ ಕಾಲಾವಕಾಶದಲ್ಲಿಯೇ ಕನ್ನಡ ಸಾಹಿತ್ಯ ರಂಗದ ವಿವಿಧ ಉದ್ದೇಶಗಳಿಗನುಸಾರವಾಗಿ ಕಲಾಪಗಳನ್ನು ನಡೆಸಬೇಕಾದ್ದರಿಂದ ಒಟ್ಟಿನಲ್ಲಿ ಕಾರ್ಯಕ್ರಮಗಳು ದಟ್ಟವಾಗಿರುತ್ತವೆ. ಸಮಯ ಪರಿಪಾಲನೆ ಅತಿ ಮುಖ್ಯವಾಗುತ್ತದೆ. ಪ್ರತಿಯೊಂದು ಕಾರ್ಯಕ್ರಮವೂ ಪ್ರಕಟಿಸಿದ ವೇಳೆಗೆ ಸರಿಯಾಗಿ ಮೊದಲಾಗಿ ನಿಯಮಿತ ಕಾಲಾವಧಿಯಲ್ಲಿ ಕೊನೆಗೊಳ್ಳುತ್ತದೆ. ಈ ಸಾಹಿತ್ಯಹಬ್ಬದ ಇನ್ನೊಂದು ವೈಶಿಷ್ಟ್ಯವೆಂದರೆ ಇಲ್ಲಿ ಹಾರ ತುರಾಯಿಗಳ, ಮೆರವಣಿಗೆ ರಾಜೋಪಚಾರಗಳ ಡೌಲು, ಅಬ್ಬರಗಳಿಲ್ಲ. ಕೇವಲ ಔಪಚಾರಿಕತೆಗಿಂತ ವೈಚಾರಿಕತೆಗೆ ಹೆಚ್ಚು ಬೆಲೆ.

ಇದುವರೆಗಿನ ಐದು ಸಮ್ಮೇಳನಗಳು: ಒಂದು ಸಿಂಹಾವಲೋಕನ

ವರ್ಷ 2004
ಸ್ಥಳ : ಫಿಲಡೆಲ್ಫಿಯಾ
ಮುಖ್ಯ ಅತಿಥಿ: ಪ್ರೊ. ಪ್ರಭುಶಂಕರ
ಪ್ರಕಟಿತ ಗ್ರಂಥ: ಕುವೆಂಪು ಸಾಹಿತ್ಯ ಸಮೀಕ್ಷೆ
ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ: ಕುವೆಂಪು ಅವರ 'ಬೆರಳ್ಗೆ ಕೊರಳ್ ನಾಟಕ ಪ್ರದರ್ಶನ

ವರ್ಷ 2005
ಸ್ಥಳ : ಲಾಸ್ ಏಂಜಲೀಸ್
ಮುಖ್ಯ ಅತಿಥಿ: ಪ್ರೊ. ಬರಗೂರು ರಾಮಚಂದ್ರಪ್ಪ
ಪ್ರಕಟಿತ ಗ್ರಂಥ: ಆಚೀಚೆಯ ಕತೆಗಳು (ಕಡಲಾಚೆಯ ಕನ್ನಡ ಕಥಾಸಂಕಲನ)

ವರ್ಷ 2007
ಸ್ಥಳ : ಶಿಕಾಗೊ
ಮುಖ್ಯ ಅತಿಥಿಗಳು: ಪ್ರೊ. ಅ.ರಾ.ಮಿತ್ರ ಮತ್ತು ಡಾ. ಎಚ್.ಎಸ್.ರಾಘವೇಂದ್ರ ರಾವ್
ಪ್ರಕಟಿತ ಗ್ರಂಥ: ನಗೆಗನ್ನಡಂ ಗೆಲ್ಗೆ! (ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯದ ಬೆಳವಣಿಗೆಯನ್ನು ವೀಕ್ಷಿಸುವ ಗ್ರಂಥ)
ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ: ಅನಕೃ ಅವರ 'ಹಿರಣ್ಯಕಶಿಪು ನಾಟಕ ಪ್ರದರ್ಶನ

ವರ್ಷ 2009
ಸ್ಥಳ : ವಾಷಿಂಗ್ಟನ್ ಡಿಸಿ.
ಮುಖ್ಯ ಅತಿಥಿಗಳು: ವೀಣಾ ಶಾಂತೇಶ್ವರ ಮತ್ತು ವೈದೇಹಿ
ಪ್ರಕಟಿತ ಗ್ರಂಥ: ಕನ್ನಡ ಕಾದಂಬರಿ ಲೋಕದಲ್ಲಿ ಹೀಗೆ ಹಲವು ಕಳೆದ ಕಾಲು ಶತಮಾನದ ಪ್ರಮುಖ ಕನ್ನಡ ಕಾದಂಬರಿಗಳ ಅವಲೋಕನ
ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ: ಕೃಷ್ಣಮೂರ್ತಿ ಪುರಾಣಿಕರ 'ರಾಧೇಯ ನಾಟಕ ಪ್ರದರ್ಶನ

ವರ್ಷ 2011
ಸ್ಥಳ : ಸ್ಯಾನ್‌ಫ್ರಾನ್ಸಿಸ್ಕೊ
ಮುಖ್ಯ ಅತಿಥಿಗಳು: ಸುಮತೀಂದ್ರ ನಾಡಿಗ ಮತ್ತು ಭುವನೇಶ್ವರಿ ಹೆಗಡೆ
ಪ್ರಕಟಿತ ಗ್ರಂಥ: ಮಥಿಸಿದಷ್ಟೂ ಮಾತು (ಅಮೆರಿಕದ ಕನ್ನಡಿಗರ ಸಲ್ಲಾಪ-ಹರಟೆ-ಚಿಂತನೆ)
ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ: ಪುತಿನ ಅವರ 'ಹರಿಣಾಭಿಸರಣ ಸಂಗೀತರೂಪಕ

***
ಕನ್ನಡ ಸಾಹಿತ್ಯ ರಂಗದ ಅಂತರಜಾಲ ತಾಣ: http://www.kannadasahityaranga.org

English summary
6th Vasanta Sahityotsava organized by Kannada Sahitya Ranga will be held in Texas, USA from May 18 to 19, 2013. Noted write K.V. Thirumalesh will be the chief guest of the mega Kannada event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X