ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಬಿಎಸ್ ಅವರೊಂದಿಗೆ 2010ರಲ್ಲಿ ನಡೆಸಿದ ಸಂದರ್ಶನ

By Prasad
|
Google Oneindia Kannada News

PB Srinivas interview in 2010 in Singapore
ಕನ್ನಡ ಸೇರಿದಂತೆ ಎಂಟು ಭಾಷೆಗಳಲ್ಲಿ ತಮ್ಮ ಅದ್ಭುತ ಕಂಠದಿಂದ ಗಾನಸುಧೆ ಹರಿಸಿದ್ದ 'ಗಾನ ಕೋಗಿಲೆ' ಡಾ. ಪಿ.ಬಿ. ಶ್ರೀನಿವಾಸ್ (83) ಅವರು ಏ.14ರಂದು ಚೆನ್ನೈನ ಸ್ವಗೃಹದಲ್ಲಿ ಗಾನಲೀನವಾದರು. ಸಮ್ಮೋಹನಗೊಳಿಸುತ್ತಿದ್ದ ಅವರ ಹಾಡನ್ನು ಕೇಳಿ ಮೈಮರೆಯುತ್ತಿದ್ದವರು ತೀರ ವಿರಳ. ಡಾ. ರಾಜ್ ಕುಮಾರ್ ಅವರ ಯಶಸ್ಸಿನಲ್ಲಿ ಪಿಬಿ ಅವರ ಪಾಲುದಾರಿಕೆಯೂ ಇದೆ ಎಂದರೆ ತಪ್ಪಾಗಲಾರದು. ಅವರ ಸಾವಿನಿಂದ ಭಾರತೀಯ ಚಿತ್ರರಂಗ ಶೋಕದಲ್ಲಿ ಮುಳುಗಿದೆ. ಈ ಸಂದರ್ಭದಲ್ಲಿ, 2010ರಲ್ಲಿ ಅವರು ಸಿಂಗಪುರಕ್ಕೆ ಭೇಟಿ ನೀಡಿದಾಗ ಮಾಡಿದ ಅವರ ಸಂದರ್ಶನವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ.

***
27, 28ನೇ ನವಂಬರ್ 2010ರಂದು "ಸಿಂಗಪುರ ಪಾಲಿಟೆಕ್ನಿಕ್ ಕನ್ವೆನ್ಷನ್ ಸೆಂಟರ್"ನ ಸಭಾಂಗಣದಲ್ಲಿ 7ನೇ ವಿಶ್ವಕನ್ನಡ ಸಾಂಸ್ಕೃತಿಕ ಸಮ್ಮೇಳನ - ಕನ್ನಡಸಂಘ (ಸಿಂಗಪುರ) ಹಾಗೂ ಹೃದಯವಾಹಿನಿ ಪತ್ರಿಕೆ ಮಂಗಳೂರು ಇವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಸುಸಂದರ್ಭದಲ್ಲಿ ಕನ್ನಡ ಸುವರ್ಣ ಚಿತ್ರಯುಗದ ಅತ್ಯಂತ ಮಧುರ ಹಾಗೂ ಹಿರಿಯ ಗಾಯಕರಾದ ಡಾ. ಪಿ. ಬಿ. ಶ್ರೀನಿವಾಸ್ ಅವರಿಗೆ "ವಿಶ್ವಮಾನ್ಯ ಸುವರ್ಣ" ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಆಗ ಪಿ.ಬಿ.ಶ್ರೀನಿವಾಸ್ ಅವರೊಂದಿಗೆ ಸಿಂಗಪುರದ ಸುದ್ದಿವಾಹಿನಿ ತಂಡದವರಿಂದ ನಡೆದ ಸಂದರ್ಶನದ ವಿವರಣೆ ನಿಮಗಾಗಿ...

***
80ರ ಹರೆಯದ ಹಿರಿಯ ಡಾ.ಪಿ.ಬಿ.ಎಸ್ ಅವರು ತಮಗಾಗಿ ಕಾದಿರಿಸಲಾಗಿದ್ದ ಸಭಾಂಗಣದ ಕೊಠಡಿಯೊಂದರಲ್ಲಿ ಮೇಜಿನ ಮೇಲೆ ತಮ್ಮ ತಲೆ ತಗ್ಗಿಸಿ ತಮ್ಮ ಪುಸ್ತಕದಲ್ಲಿ ವಿಶ್ವಕನ್ನಡ ಸಮ್ಮೇಳನಕ್ಕಾಗಿ ಒಂದು ಕವನ ಬರೆಯುತ್ತಿದ್ದರು. ಸಿಂಗಪುರದ ಸುದ್ದಿವಾಹಿನಿ ತಂಡದವರು ಒಕ್ಕೂರಲಿನಿಂದ, "ನಮಸ್ಕಾರ ಸರ್, ನಾವು ಸಿಂಗಪುರ ಸುದ್ದಿವಾಹಿನಿ ತಂಡದವರು, ನಿಮ್ಮ ಸಂದರ್ಶನ ಮಾಡಲು ಇಚ್ಚಿಸುತ್ತೇವೆ" ಎಂದಾಗ ನಮ್ಮತ್ತ ನೋಡಿ, ಬರೆಯುತ್ತಿದ್ದ ಪೆನ್, ಪೇಪರ್ ಬದಿಗೊತ್ತಿ "ಪ್ರತಿನಮಸ್ಕಾರ ಎಲ್ಲರಿಗೂ, ಗಾಯಕನಾಗುವುದಕ್ಕೆ ಮೊದಲು ನಾನು ಬಿ.ಕಾಂ ಮುಗಿಸಿ ಕೆಲವು ತಿಂಗಳು ನಿಮ್ಮಂತೆ ಜರ್ನಲಿಸ್ಟ್ ಆಗಿದ್ದೆ" ಎಂದು ಕುರ್ಚಿಯತ್ತ ಕೈ ತೋರಿದರು.

ಪ್ರಶ್ನೆ: ಸರ್, ಡಾ. ರಾಜ್ ಅವರ ಒಂದೊಂದು ನಟನೆಯಲ್ಲಿ, ನಿಮ್ಮ ಶಾರೀರದಲ್ಲಿ ಪ್ರೀತಿ, ವಾತ್ಸಲ್ಯ, ಮಮತೆ, ನೋವು, ನಲಿವು ಭಾವನೆಗಳನ್ನು ನಿಮ್ಮ ಕಂಠದಲ್ಲಿ ಹೇಗೆ ತರುತ್ತಿದ್ದಿರಿ?

ಪಿ.ಬಿ.ಎಸ್ : ನೋಡಿ ಜಿ.ಕೆ. ವೆಂಕಟೇಶ್ ಹಾಗೂ ರಾಜ್ ಒಳ್ಳೆಯ ಗೆಳೆಯರು. ಓಹಿಲೇಶ್ವರ ಚಿತ್ರ ರೆಕಾರ್ಡಿಂಗ್ ನಡೀತಾ ಇತ್ತು. ಅವರೇ ಹಾಡಿಕೊಂಡಿದ್ದರು ಒಂದೆರಡು ಶ್ಲೋಕ, ಹಾಡು ಅವರಿಗಾಗಿ. ಮತ್ತೆ ಕ್ಲೈಮಾಕ್ಸ್ ಹಾಡಿಗೆ ಜಿ.ಕೆ. ವೆಂಕಟೇಶ್ ರಾಜ್ ಬಳಿ ಕೇಳಿದ್ರಂತೆ "ಒಬ್ಬ ಹುಡುಗ ಬಂದಿದ್ದಾನೆ, ಚೆನ್ನಾಗಿ ಹಾಡ್ತಾನೆ. ನಿನಗಾಗಿ ಅವನಿಂದ ಒಂದು ಹಾಡು ಹಾಡಿಸಬೇಕು ಎಂದಿದ್ದೇನೆ, ಏನಂತೀಯ?" ಎಂದು. ರಾಜ್ ಅವರು "ಜಮಾಯಿಸಿಬಿಡು" ಎಂದರಂತೆ. ರೆಕಾರ್ಡಿಂಗ್ ಮಾಡಿ ಆಯಿತು, ಚಿತ್ರೀಕರಣ ಆಯಿತು. ಮತ್ತೆ ಚಿತ್ರ ನೋಡುವಾಗ ಡಾ.ರಾಜ್ ಅವರು ವೆಂಕಟೇಶ ಇಲ್ಲಿ ಬಾ ಎಂದು ಕರೆದು "ಅವರು ಹಾಡುವಾಗ ನನಗೆ ಅನಿಸಿತು, ನಾನೇ ಹಾಡುತ್ತಿದ್ದೇನೆ ಎಂದು" ಅಂತ ವಿಸ್ಮಿತರಾಗಿ ಹೇಳಿದರಂತೆ. "ಇನ್ನು ಮುಂದೆ ಅವರೇ ಹಾಡಲಿ, ನನ್ನ ಶರೀರ-ಅವರ ಶಾರೀರ" ಎಂದರಂತೆ. ನನ್ನ ಕಂಠದಲ್ಲಿ ಭಾವನೆಗಳು, ಇದು ದೇವರ ನಿರ್ಣಯ, ಅನುಗ್ರಹ ಎಂದು ಮಾತ್ರ ಹೇಳಬಲ್ಲೆ.

ಪ್ರಶ್ನೆ: ಆಗಿನ ಕಾಲದಲ್ಲಿ ರೆಕಾರ್ಡಿಂಗ್ ಈಗಿನಷ್ಟು ತಾಂತ್ರಿಕವಾಗಿ ಮುಂದುವರೆದಿರಲಿಲ್ಲ? ಇದರಿಂದ ನಿಮ್ಮ ಧ್ವನಿಮುದ್ರಣಕ್ಕೆ ತೊಂದರೆ ಆಗುತ್ತಿತ್ತೇ?

ಪಿ.ಬಿ.ಎಸ್: ಖಂಡಿತ ಇಲ್ಲ, ಆಗ ಈಗಿನಷ್ಟು ಪಕ್ಕವಾದ್ಯಗಳ ಅಬ್ಬರವಿರಲಿಲ್ಲ. ನಮ್ಮ ಹಾಡಿನಲ್ಲಿ ಪದಗಳ ಸ್ಪಷ್ಟತೆ ಮೂಡಿ ಬರುತ್ತಿತ್ತು. ಒಂದು ರೀತಿಯಲ್ಲಿ ನಮಗೆ ಒಳ್ಳೆಯದೇ ಆಯಿತು.

ಪ್ರಶ್ನೆ: ರಫಿ-ಶಮ್ಮಿ ಕಪೂರ್‌ಗೆ, ಮುಖೇಶ್-ರಾಜ್‌ಕಪೂರ್‌ಗೆ, ಪಿ.ಬಿ.ಎಸ್-ರಾಜ್‌ಕುಮಾರ್ ಅವರಿಗೆ; ಹಾಗೆ ಇನ್ನಿತರ ಭಾಷೆಗಳಲ್ಲಿ ಇನ್ನು ಯಾವ ನಾಯಕರಿಗೆ ನಿಮ್ಮ ಧ್ವನಿ ಬಹಳ ಒಪ್ಪುತ್ತಿತ್ತು?

ಪಿ.ಬಿ.ಎಸ್: ತಮಿಳಿನಲ್ಲಿ ಜೆಮಿನಿ ಗಣೇಶನ್ ಅವರಿಗೆ ನನ್ನ ಧ್ವನಿ ಒಪ್ಪುತ್ತದೆ ಎಂದು ಹೇಳುತ್ತಿದ್ದರು. ಹಿನ್ನಲೆ ಗಾಯಕರ ಧ್ವನಿ ಒಬ್ಬ ಕಲಾವಿದನಿಗೇ ಅನ್ವಯಿಸುವುದು ಎಂಬುದು ಭ್ರಮೆ ಎಂದೇ ಹೇಳಬಹುದು. ಏಕೆಂದರೆ ಬಹಳಷ್ಟು ಬಾರಿ ಒಬ್ಬ ನಟನಿಗೇ ಹಾಡುತ್ತಿದ್ದರೆ ಆ ನಟನಿಗೇ-ಧ್ವನಿ ಎಂಬ ಅಭಿಪ್ರಾಯ ಮೂಡಿ ಬರುತ್ತದೆ.

ಪ್ರಶ್ನೆ: ನೀವು ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಜೊತೆ ಹಿಂದಿ ಭಾಷೆಯ "ಮೈ ಭಿ ಲಡ್ಕೀ ಹೂಂ" ಎಂಬ ಚಿತ್ರದಲ್ಲಿ "ಚಂದಾ ಸೆ ಹೋಗಾ" ಹಾಡನ್ನು ಹಾಡಿದ್ದೀರ.... ಆ ಹಾಡು ಹಾಗೂ ಲತಾಜಿ ಅವರೊಡನೆ ಹಾಡಿದ ಅನುಭವದ ನೆನಪಿದೆಯೇ?

ಪಿ.ಬಿ.ಎಸ್: ಮೊದಲಿನಿಂದಲೂ ಗಾನಕೋಗಿಲೆ ಲತಾಮಂಗೇಶ್ಕರ್ ಅವರ ಜೊತೆ ಹಾಡಬೇಕೆಂಬ ಹಂಬಲ ನನಗೆ ಇತ್ತು. ಅವರೊಡನೆ ಹಾಡಿದ್ದು ನನ್ನ ಕನಸು ನನಸಾಯಿತು. ಅದೊಂದು ಅಪೂರ್ವ ಅನುಭವ, ಅವಿಸ್ಮರಣೀಯ ನೆನಪು. ನನ್ನ ಮಗಳ ಹೆಸರು "ಸಂಗೀತಲತ" ಎಂದರು. ಲತಾಜೀ ಅವರಿಗೆ ನನ್ನ ಉರ್ದು ಕೇಳಿ ಬಹಳ ಅಚ್ಚರಿಯಾಯಿತು.

ಪ್ರಶ್ನೆ: ಅಂದಿನ ಹಿಂದಿ ಗಾಯಕರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಪಿ.ಬಿ.ಎಸ್: ರಫಿ ಅವರು ಅದ್ಭುತ ಕಲಾವಿದ. ಹಾಗೆಯೇ ಹಿರಿಯ ಕಲಾವಿದ ಮನ್ನಾಡೆ ಅವರು ಕೂಡ. ಇಬ್ಬರ ಕಂಠಸಿರಿ ಬಹಳ ಚೆನ್ನಾಗಿತ್ತು. ಇವರೀರ್ವರಿಗೂ ಶಾಸ್ತ್ರೀಯ ಸಂಗೀತದ ತಳಹದಿ ಇತ್ತು. ಹಾಗೆಯೇ ಮುಖೇಶ್ ಮತ್ತು ತಲತ್ ಕೂಡ ಸೊಗಸಾಗಿ ಹಾಡುತ್ತಿದ್ದರು. ನನಗೆ ಒಂದಿನಿತೂ ಶಾಸ್ತ್ರೀಯ ಸಂಗೀತದ ತಳಹದಿ ಇರಲಿಲ್ಲ. ಶಾಸ್ತ್ರೀಯ ಸಂಗೀತ ಕಲಿಯಬೇಕೆಂದು ಹೋದೆ. ಆದರೆ ವರ್ಣಕ್ಕಿಂತ ಮುಂದೆ ಆಗಲೇ ಇಲ್ಲ. ಇತಿಶ್ರೀ ಹಾಡಿದೆ. ಮೊದಲಿನಿಂದಲೂ ನನಗೆ ಚಿತ್ರಗಳಲ್ಲಿ ಹಾಡಬೇಕು ಎಂಬ ಹಂಬಲ ಮಾತ್ರ ಬಹಳ ಇತ್ತು. ಯಾವ ಹಾಡೇ ಕೇಳಲಿ ಅದನ್ನು ಹಾಗೆಯೇ ಹಾಡುತ್ತಿದ್ದೆ. ಒಂದು ಚಿತ್ರದಲ್ಲಿ ಆ ಮೇರು ನಟನಿಗೆ ಹಾಡಿದೆ ಮಿಕ್ಕದ್ದೆಲ್ಲವೂ ನಿಮಗೇ ಗೊತ್ತು. (ಮೇಲೆ ಕೈ ತೋರುತ್ತಾ) ಇದು ಆ ದೇವರಿತ್ತದ್ದು. ನಾನು ಬರೀ ಎಲ್.ಒ.ಎಲ್. (ನಗುತ್ತಾ) ಅಂದರೆ ಲವರ್ ಆಫ್ ಲಾಂಗ್ವೇಜಸ್.

ಎಂಟು ಭಾಷೆಗಳನ್ನು ಬಲ್ಲವನು ನಾನು. ಹಿಂದಿಯಲ್ಲಿ ಘಜಲ್‌ಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದೆ. ಅದಕ್ಕೆ "ಪ್ರೇಮ ಗೀತೆಗಳು" ಎಂದು ಟೈಟಲ್ ಕೊಟ್ಟು ಬಿಟ್ಟರು. ಉರ್ದು ಭಾಷೆ ಘಜಲ್‌ಗೆ ಹೇಳಿ ಮಾಡಿಸಿದಂತಿದೆ. ಚೆನ್ನೈನಲ್ಲಿ ವುಡ್‌ಲ್ಯಾಂಡ್ಸ್ ಡ್ರೈವ್ ಇನ್ ರೆಸ್ಟೋರಾಂಟಿನಲ್ಲಿ ಕುಳಿತು ಅನೇಕ ಘಜಲ್‌ಗಳನ್ನು ರಚಿಸಿದ್ದೇನೆ.

ಪ್ರಶ್ನೆ: ಸರ್, ಪಿ.ಬಿ.ಎಸ್. ಎಂದಾಕ್ಷಣ ಹಣೆಯಲ್ಲಿ ಶ್ರೀಚರಣ, ಜರಿ ಶಾಲು ಇದು ಟ್ರೇಡ್ ಮಾರ್ಕ್. ತಲೆಗೆ ಸದಾ ಟೋಪಿ(ಟರ್ಬನ್) ಏಕೆ?

ಪಿ.ಬಿ.ಎಸ್: ನಗುತ್ತಾ ಆ ಟೋಪಿ ನನಗೆ ಒಂದು ಸಮಾರಂಭದಲ್ಲಿ ಅಭಿಮಾನಿಗಳು ನೀಡಿದ್ದು. ಸಂಗೀತ ರಸಿಕರಿಲ್ಲದೆ ನಾವಿಲ್ಲ. ಅದನ್ನು ನೀಡುವಾಗ ಅವರು "ಈ ಟೊಪ್ಪಿಯಲ್ಲಿ ನಾವು ನಮ್ಮ ಪ್ರೀತಿ, ಮೆಚ್ಚುಗೆ, ಪ್ರಶಂಸೆ, ಆದರ, ಗೌರವ, ಅಭಿಮಾನಗಳನ್ನು ತುಂಬಿದ್ದೇವೆ" ಎಂದರು. ಆ ತುಂಬು ಪ್ರೀತಿ, ಹಾರೈಕೆ ಆದರಾಭಿಮಾನ ತುಂಬಿದ ಪೇಟ/ಟೊಪ್ಪಿಯನ್ನು ನಾನು ಅಂದಿನಿಂದ ಶಿರಸಾವಹಿಸಿ ಧರಿಸುತ್ತಿದ್ದೇನೆ. ಐ ಆಲ್ವೇಸ್ ಸೆ "ಹ್ಯಾಟ್ಸ್‌ಆಫ್ ಟು ಮೈ ಫಾಲೋಅರ್ಸ್!".

ಪ್ರಶ್ನೆ: ಸರ್ ನಿಮ್ಮ ಹೀರೋ?

ಪಿ.ಬಿ.ಎಸ್: (ನಗುತ್ತಾ) ಇದನ್ನು ಹೇಳಲೇ ಬೇಕಿಲ್ಲ, ಎಲ್ಲರಿಗೂ ಗೊತ್ತಿರುವ ವಿಷಯ. ಮಹಾನುಭಾವನಾತ (ಕೈಮುಗಿದರು).

ಸಂದರ್ಶಿಸಿದವರು - ವಾಣಿ ರಾಮದಾಸ್, ವಸಂತ್ ಕುಲಕರ್ಣಿ, ಸುರೇಶ್, ವೆಂಕಟ್, ಗಿರೀಶ್ ಜಮದಗ್ನಿ (ಸುದ್ದಿವಾಹಿನಿ ತಂಡ, ಸಿಂಗಪುರ)

English summary
Veteran South Indian play back singer PB Srinivas (83) is no more. PBS breathed his last in Chennai on 14th April. In the memory of Dr. PBS Oneindia is publishing an interview conducted by Singapore Kannada Sangha in 2010 when he visited Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X