ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಹೋಟೆಲ್ ತೆರೆಯುವ ಸಂಕಷ್ಟಗಳು

By ಸಂದರ್ಶನ: ಸುರೇಶ ಎಚ್. ಸಿ., ಸಿಂಗಪುರ
|
Google Oneindia Kannada News

(ಸಂದರ್ಶನ ಮುಂದುವರಿದಿದೆ...)

ಪ್ರಶ್ನೆ : ರೆಸ್ಟೋರೆಂಟ್ ತೆರೆಯಲು ನಮ್ಮ ದೇಶದಲ್ಲೇ ಸಾಕಷ್ಟು ಸಂಕಷ್ಟಗಳಿರುವಾಗ ಹೊರದೇಶದಲ್ಲಿ ಸಂಕಷ್ಟಗಳನ್ನೆದುರಿಸುವುದು ಸಾಮಾನ್ಯ. ಸಿಂಗಪುರದಲ್ಲಿ ನಿಮಗೆ ಎದುರಾದ ಸಂಕಷ್ಟಗಳೇನು?

ಹೇಮಮಾಲಿನಿ : ನಮಗೆ ಎದುರಾದ ಅತೀದೊಡ್ಡ ಸಂಕಷ್ಟ ಅಡುಗೆಗೆ ಬೇಕಾದ ಪದಾರ್ಥಗಳದ್ದು. ನಾವು ಕೆಲವು ತಿಂಗಳ ಹಿಂದೆಯೇ ಸಿಂಗಪುರಕ್ಕೆ ಬಂದು ಇಲ್ಲಿ ದೊರಕುವ ಎಲ್ಲಾ ತರಹದ ಪದಾರ್ಥಗಳನ್ನು ಅಡುಗೆಯಲ್ಲಿ ಪ್ರಯೋಗರೂಪದಲ್ಲಿ ಬಳಸಿ ನೋಡಿದೆವು. ಆದರೆ ಅಡುಗೆಯಲ್ಲಿ ಬೆಂಗಳೂರಿನ ನಮ್ಮ ರೆಸ್ಟೋರೆಂಟ್‌ನ ರುಚಿ ಇಲ್ಲಿ ಬರಲಿಲ್ಲ; ಹಾಗಾಗಿ ಬಹುತೇಕ ಸಾಮಗ್ರಿಗಳು ನಮಗೆ ಸರಿಹೊಂದಲಿಲ್ಲ. ಕರ್ನಾಟಕದ ಅಡುಗೆಯಲ್ಲಿ ಬಳಸುವ ಸಾಮಗ್ರಿಗಳಲ್ಲಿ ಉದ್ದು ಹಾಗೂ ಉದ್ದಿನ ಗುಣಮಟ್ಟ ಮತ್ತು ಪ್ರಮಾಣ ಬಹುಮುಖ್ಯ ಪಾತ್ರ ವಹಿಸುತ್ತದೆ.

Problem of opening hotel in Singapore

ಇಲ್ಲಿ ಮಾಡುವ ಅಡುಗೆಯ ರುಚಿಯನ್ನು ಬೆಂಗಳೂರಿನ ಎಂಟಿಆರ್‌ನ ಅಡುಗೆಯ ಮೂಲರುಚಿಗೆ ಎಷ್ಟು ಹತ್ತಿರ ತರಲು ಸಾಧ್ಯವೋ ಅಷ್ಟು ಹತ್ತಿರ ತರುವ ಪ್ರಯತ್ನ ನಮ್ಮದು. ಈ ಕಾರಣಕ್ಕಾಗಿ ತುಪ್ಪ, ಉದ್ದಿನ ಬೇಳೆ, ಹುರಿದ ಕಾಫಿ ಬೀಜ ಮತ್ತು ಮಸಾಲೆ ಪದಾರ್ಥಗಳನ್ನು ನಾವು ಕರ್ನಾಟಕದಿಂದಲೇ ತರಿಸುತ್ತೇವೆ. ಇಲ್ಲಿ ನಮಗೆ ದೊರೆತದ್ದು ಮತ್ತು ನಾವು ಉಪಯೋಗಿಸುತ್ತಿರುವುದು ನಮ್ಮ ರಾಜ್ಯದ್ದೇ ಆಗಿರುವ ನಂದಿನಿ ಹಾಲು ಮಾತ್ರ. ಇಲ್ಲಿನ ಸ್ಥಳೀಯ ಕೆಲಸಗಳಲ್ಲಿ ಅತ್ಯುತ್ತಮ ಸಹಕಾರ ನೀಡಿದ ಆಡ್ರಿ ಮತ್ತು ಶಾಸ್ತ್ರಿ ಅವರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.

ವಿಕ್ರಮ್ : ಇಲ್ಲಿನ ಪ್ರತಿಯೊಂದು ವ್ಯವಸ್ಥೆಯೂ ಕ್ರಮಬದ್ಧ, ನಿಯಮಬದ್ಧ. ಕನಿಷ್ಠ ವಿದ್ಯಾಭ್ಯಾಸ, ತರಬೇತಿ ಹಾಗೂ ಅನುಭವವಿರುವ ಅಡುಗೆಯವರನ್ನೇ ನೇಮಿಸಬೇಕಾದುದು; ಅವರಿಗೆ ಇಲ್ಲಿ ಕೆಲಸ ಮಾಡಲು ಅಗತ್ಯವಾದ "ಕಾರ್ಯ ಪರವಾನಗಿ(Work Permit)"ಯ ವ್ಯವಸ್ಥೆ ಮಾಡುವುದು, ಸಿಂಗಪುರದ ಮತ್ತು ಭಾರತೀಯ ಕೆಲಸಗಾರರ ಪರಿಮಾಣವನ್ನು ಕಾಯ್ದುಕೊಳ್ಳುವುದು, ಈ ಕಾಯಿದೆಯಲ್ಲಾದ ಬದಲಾವಣೆ - ಇವೆಲ್ಲಾ ಅಗತ್ಯಗಳನ್ನೂ ಪೂರೈಸುವುದು ಒಂದು ರೀತಿಯಲ್ಲಿ ಪರೀಕ್ಷೆಯೇ ಆಗಿತ್ತು. ಈ ಎಲ್ಲಾ ಅಗತ್ಯಗಳನ್ನೂ ಪೂರೈಸಿ ಕೊನೆಗೂ ಇಲ್ಲಿ ರೆಸ್ಟೋರೆಂಟ್ ತೆರೆದಿದ್ದೇವೆ.

ಹೇಮಮಾಲಿನಿ : ಇಲ್ಲಿನ ವ್ಯವಸ್ಥೆ ಚೆನ್ನಾಗಿದೆ. ಇಲ್ಲಿ ಹೋಟೆಲ್ ತೆರೆದ ಮೇಲೆ ಬೇರೆ ಎಲ್ಲಾದರೂ ತೆರೆಯಬಹುದೆಂಬ ವಿಶ್ವಾಸ ನಮಗಿದೆ.

ಪ್ರಶ್ನೆ : ಎಲ್ಲಾ ಕಡೆಯಿರುವಂತೆ ಇಲ್ಲಿಯೂ ಖಾದ್ಯ ಉದ್ಯಮ ತುಂಬಾ ಸ್ಪರ್ಧಾತ್ಮಕವಾದದ್ದು. ಇಲ್ಲಿ ಸ್ಪರ್ಧಿಸಿ, ಉಳಿದು, ಬೆಳೆಯಲು ನಿಮ್ಮ ಆಲೋಚನೆಗಳೇನು?

ಹೇಮಮಾಲಿನಿ : ನಿಜವಾಗಿಯೂ ಇದು ಸ್ಪರ್ಧಾತ್ಮಕವಾದದ್ದು. ನಮ್ಮ ಉತ್ಪನ್ನಗಳ ಗುಣಮಟ್ಟ ಏಕರೂಪ (consistent) ಆಗಿರಬೇಕು ಮತ್ತು ಅದನ್ನು ಸಂರಕ್ಷಿಸಬೇಕು. ನಮ್ಮ ಗುರಿ ಕೇಂದ್ರೀಕೃತವಾಗಿರಬೇಕು.

ವಿಕ್ರಮ್ : ಒಳ್ಳೆಯ ಊಟ, ಒಳ್ಳೆಯ ಸೇವೆ ನೀಡಿದರೆ ಜನರು ತಾವೇ-ತಾವಾಗಿ ಖಂಡಿತಾ ಬರುತ್ತಾರೆಂಬ ನಂಬಿಕೆ ನಮಗಿದೆ.

ಪ್ರಶ್ನೆ : ನಿಮ್ಮ ಅಂತರ್ಜಾಲ ತಾಣಕ್ಕೆ ಭೇಟಿ ಕೊಟ್ಟಾಗ ಎಂಟಿಆರ್ ದುಬೈಯಲ್ಲಿ ಕೂಡ ತನ್ನ ಶಾಖೆ ತೆರೆಯಲಿದೆ ಎಂದು ತಿಳಿಯಿತು. ಅಲ್ಲಿ ಯಾವಾಗ?

ಹೇಮಮಾಲಿನಿ : ಜುಲೈ ತಿಂಗಳ ಮಧ್ಯಭಾಗದಲ್ಲಿ. ಇಲ್ಲಿನ ಕಾರ್ಯ ಸ್ವಲ್ಪ ತಹಬಂದಿಗೆ ಬಂದ ಮೇಲೆ ದುಬೈಗೆ ತೆರಳಬೇಕು!

English summary
Mavalli Tiffin Rooms, fondly called as MTR in Bangalore, has opened it's branch in Singapore on 26th May, 2013. On this auspecious occasion Suresha Bhatta talks to hotel partners Hemamalini and Vikram Maiya on behalf of Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X