ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಲಿಮಂಜಾರೋ ಚಾರಣದ ಅಪರೂಪದ ಅನುಭೂತಿ

By ಸೀತಾ ಕೇಶವ, ಆಸ್ಟ್ರೇಲಿಯಾ
|
Google Oneindia Kannada News

ಕಿಲಿಮಂಜಾರೋ ಪಶ್ಚಿಮ ಆಫ್ರಿಕಾದ ತಾಂಜಾನಿಯಾದಲ್ಲಿರುವ ಉತ್ತುಂಗ ಶಿಖರ ಹಾಗೂ ಆಫ್ರಿಕಾ ಖಂಡಕ್ಕೇ ಅತಿ ಎತ್ತರದ ಪರ್ವತ. "ತಾನೇ ಎದ್ದು ನಿಂತಿರುವ ಪರ್ವತ" ಎಂದು ಹೆಸರುವಾಸಿಯಾಗಿರುವ ಈ ಪರ್ವತ ಸಮುದ್ರಮಟ್ಟದಿಂದ 5,895 ಮೀಟರ್ ಎತ್ತರವಿದ್ದು, 2013, ಫೆಬ್ರವರಿಯಲ್ಲಿ Seven Natural Wonders of Africa ಎಂಬ ಖ್ಯಾತಿಗೆ ಪಾತ್ರವಾಗಿದೆ. 'ಪ್ರಜ್ವಲಿಸುವ ಶಿಖರ' ವೆಂದು 1889ರಲ್ಲಿ ಈ ಪರ್ವತವನ್ನು ಕರೆಯಲಾಗಿತ್ತು.

ಕಿಲಿಮಂಜಾರೋ ಮೂರು ಜ್ವಾಲಾಮುಖಿಯಿಂದ ಕೂಡಿದೆ. ಕಿಬೊ 5,895 ಮೀಟರ್, ಮಾವೆನ್ಜ಼ೀ 5,149 ಮೀಟರ್, ಮತ್ತು ಶಿರಾ 3969 ಮೀಟರ್. ಉಹುರು ಮಾತ್ರ ಕಿಬೋ ಕ್ರೇಟರ್ ನಲ್ಲಿ ಅತ್ಯಂತ ಎತ್ತರದ 'ಸಮ್ಮಿಟ್'. ಇವುಗಳನ್ನು ಹತ್ತಲು ಪರ್ವತಾರೋಹಿಗಳಿಂದ ತರಬೇತಿ ಪಡೆದಿರಲೇಬೇಕು. ಇಂಥ ಚಾರಣಕ್ಕೆ ದೈಹಿಕ ಶಕ್ತಿ ಮಾತ್ರವಲ್ಲ, ದೇವ ದಯೆ ಮತ್ತು ಮಾನಸಿಕ ಸ್ಥೈರ್ಯವೂ ಇರಬೇಕು. ಇವುಗಳಿದ್ದಾಗ ಮಾತ್ರ ಯಶಸ್ವಿಯಾಗಿ ಹತ್ತಲು ಸಾಧ್ಯ.

ಈ ಹಿಂದೆ ನಾವು ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಕೈಲಾಸ ಪರ್ವತ ಹಾಗೂ ಅದರ ಉತ್ತರಭಾಗದ ಅನ್ನಪೂರ್ಣ ಶ್ರೇಣಿಯಲ್ಲಿರುವ ಮುಕ್ತಿನಾಥ ಮತ್ತು ಆಸ್ಟ್ರೇಲಿಯಾದ ಪ್ರಸಿದ್ಧ 'ಉಲುರು ಅಥವಾ' ಏರ್ಸ್ ರಾಕ್ ಹೆಸರಿನಿಂದ ಕರೆಸಿಕೊಳ್ಳುವ ಏಕಶಿಲಾ ಬಂಡೆ ಹತ್ತಿಕೊಂಡು ಹೋಗಿ ಬಂದಿದ್ದೆವು. ದೈವ, ಮನೋಬಲದ ಸಹಾಯದಿಂದ ಆಫ್ರಿಕಾದ ಕಿಲಿಮಂಜಾರೋಗೂ ಏಕೆ ಹೋಗಿಬರಬಾರದೆಂದು ಎಂದು ಮನದಲ್ಲಿ ತುಡಿತ ಆರಂಭವಾಯಿತು. ಅದಕ್ಕೆ ಸರಿಯಾಗಿ ಸುಮಾರು ಐದಾರು ವರ್ಷಗಳ ಹಿಂದೆ ಕನ್ನಡಿಗರೊಬ್ಬರು ಈ ಪರ್ವತ ಹತ್ತಿಳಿದು ಬಂದ ಅನುಭವ ಒನ್ಇಂಡಿಯಾ ಕನ್ನಡದಲ್ಲಿ ಓದಿದ್ದು ನಮ್ಮ ಮನದಲ್ಲಿಯೂ ಆಸೆಯ ಮೊಳಕೆ ಒಡೆಯುವಂತೆ ಮಾಡಿತು. ಅವರ ವಿಳಾಸ ಪತ್ತೆ ಹಚ್ಚಿ ಸಂಪರ್ಕಿಸಿ ಹೋಗುವ ತಯಾರಿ ತಿಳಿದುಕೊಂಡೆವು.

ಕೊಕೊ ಕೋಲಾ ನಡಿಗೆ

ಕೊಕೊ ಕೋಲಾ ನಡಿಗೆ

ನಾನು ಮತ್ತು ನನ್ನ ಯಜಮಾನರು ಮೇ 26ರಂದು ದಾರ್ ಎಸ್ ಸಲಾಮ್ ಗೆ ಹೋಗಿ ಅಲ್ಲಿಂದ 28ರಂದು ಅರುಷಗೆ ಹೊರಟೆವು. ನಮ್ಮ ಟೂರಿನ ಮುಖ್ಯಸ್ತ ಮೋಸೆಸ್ ಏರ್ ಪೋರ್ಟ್ ನಲ್ಲಿ ಸ್ವಾಗತಿಸಿದ. ಪ್ರಯಾಣ ಮರಂಗು ಗೇಟ್ ಕಡೆಗೆ ಸಾಗಿತು. ನಾವು ಮರಂಗು ನಡಿಗೆ ಮಾರ್ಗ ತೆಗೆದುಕೊಂಡಿದ್ದೆವು. ಇದಕ್ಕೆ 'ಕೊಕೊ ಕೋಲಾ' ನಡಿಗೆ ಎಂದೂ ಕರೆಯುತ್ತಾರೆ. ಏಕೆ ಈ ಹೆಸರು ಎಂದು ಎಷ್ಟು ಯೋಚಿಸಿದರೂ ಗೊತ್ತಾಗದೆ ಹೋದವರನ್ನು ಕೇಳಿದರೂ ಅವರಿಂದಲೂ ಸರಿಯಾದ ಉತ್ತರ ಸಿಕ್ಕಲಿಲ್ಲ.

ಸಾಹಸಿಗರಿಗೆ ಸವಾಲೊಡ್ಡುವ ದಾರಿ

ಸಾಹಸಿಗರಿಗೆ ಸವಾಲೊಡ್ಡುವ ದಾರಿ

ರಿಜಿಸ್ಟ್ರೇಶನ್ ಆಫೀಸಿನಲ್ಲಿ ನಮ್ಮ ಹೆಸರು, ಪಾಸ್ ಪೋರ್ಟ್ ನಂಬರು ಎಲ್ಲ ಬರೆದು ಸುಮಾರು 4 ಗಂಟೆಗೆ ಮನದಲ್ಲೇ ದೇವರನ್ನು ಪ್ರಾರ್ಥಿಸಿಕೊಂಡು ಮೊದಲ ದಿವಸದ ಹೈಕಿಂಗ್ ಶುರುಮಾಡಿದೆವು. ದಟ್ಟ ಗಿಡಮರಗಳು, ಬಂಡೆ, ಮೆಟ್ಟಲುಗಳನ್ನು ಹತ್ತುವಾಗ ಹಕ್ಕಿಗಳ ಕೂಗು, ಜಲಪಾತಗಳು ರಮಣೀಯ ಅನುಭೂತಿ ನೀಡಿತು. ಸುಮಾರು 8 ಗಂಟೆಗೆ ಮಂದಾರ ಹಟ್ ಸೇರಿದೆವು. ತ್ರಿಕೋಣಾಕಾರದಲ್ಲಿ ಮರದಿಂದ ಕಟ್ಟಿರುವ ಹಟ್ ನಲ್ಲಿ ಸೋಲಾರ್ ಶಕ್ತಿಯ ವಿದ್ಯುದ್ದೀಪ, ಮೂರು ಜನಕ್ಕೆ ಸ್ಲೀಪಿಂಗ್ ಬ್ಯಾಗ್ ವ್ಯವಸ್ತೆ ಇತ್ತು. ಹಟ್ಗೆ ಸಮೀಪದಲ್ಲೇ ಶೌಚಾಲಯವೂ ಹೊಸಮಾದರಿಯಿಂದ ಇದ್ದು ಚೊಕ್ಕಟವಾಗಿತ್ತು.

ಎತ್ತರಕ್ಕೆ ಹೋಗುತ್ತಿದ್ದಂತೆ ಹಸಿವೇ ಆಗುತ್ತಿರಲಿಲ್ಲ

ಎತ್ತರಕ್ಕೆ ಹೋಗುತ್ತಿದ್ದಂತೆ ಹಸಿವೇ ಆಗುತ್ತಿರಲಿಲ್ಲ

ಮಾರನೆ ದಿವಸದ ಪ್ರಯಾಣ ಹೊರೊಂಬೊ ಹಟ್. ಇದು 12,000 ಅಡಿ ಎತ್ತರದಲ್ಲಿದೆ. ಹತ್ತುವ ದಾರಿ ಮಾತ್ರ ಬರೀ ಕಲ್ಲು ಬಂಡೆ ಹಾಸಿರುವುದರಲ್ಲೇ ನಡೆಯಬೇಕು. ಇದು ಮಾತ್ರ ಹೋದವರೇ ಅನುಭವಿಸಬೇಕು! ನಾವು ಪ್ರಯೋಗಿಕ ನಡಿಗೆಯಲ್ಲಿ ಹಳ್ಳ, ದಿಣ್ಣೆ, ಏರು, ಪೇರು, ಹತ್ತುವುದು, ಇಳಿಯುವುದು ಎಲ್ಲಾ ಅಭ್ಯಾಸ ಮಾಡಿದ್ದೆವು. ನಡೆಯುವಾಗ ಮೇರು ಪರ್ವತ ಮತ್ತು ಬಾಚಿ ಹಲ್ಲು ಶಿಖರದ ಮವಾಂಜ಼ೀ ಕಾಣುತ್ತಿತ್ತು. ಸುಮಾರು 6-7 ಗಂಟೆ ನಡಿಗೆ ನಡಿದು ಹರ ಹರ ಎಂದು ಹೊರಂಬೋ ತಲುಪಿದೆವು. ಎತ್ತರಕ್ಕೆ ಹೋಗುತ್ತಿದ್ದಂತೆ ಹಸಿವು ಆಗದೆ ತಿನ್ನಲು ಏನೂ ಸೇರುತ್ತಿರಲಿಲ್ಲ.

ಜಯನಗರದ ಎಲಿಫೆಂಟ್ ರಾಕ್ ನಂಥ ಬಂಡೆ

ಜಯನಗರದ ಎಲಿಫೆಂಟ್ ರಾಕ್ ನಂಥ ಬಂಡೆ

ಮೂರನೆಯ ದಿವಸದ ನಡಿಗೆ ಸುಮಾರು 10 ಕಿ.ಮೀ ನಡಿಗೆ. ಮೊದಲ 5 ಕಿ.ಮೀ ಮರಳು, ಕಲ್ಲುಗಳ ಮೇಲೆ. ಮುಂದಕ್ಕೆ ಯಾವತರಹದ ಗಿಡ ಮರಗಳಿಲ್ಲ. ಮಾರ್ಗದಲ್ಲಿ ಸಿಕ್ಕುವ ಹೈಕರ್ಸ್, 'ಪೋಲೆ ಪೋಲೆ' ಎನ್ನುತ್ತಿರುತ್ತಾರೆ. ಅಂದರೆ 'ಸ್ಪಾಹಿಲಿ' ಭಾಷೆಯಲ್ಲಿ ನಿಧಾನವಾಗಿ ನಡಿ ಎಂದು. ಅವರು ಆ ರೀತ್ ಹೇಳಿದಾಗ ನಾವು 'ಅಸಂತೆ' ಎಂದರೆ ಧನ್ಯವಾದ ಎಂದು ಎನ್ನುತ್ತಿದ್ದೆವು. ಇನ್ನು 5 ಕಿ.ಮೀ ಸುಲಭದ ಸಾಡೆಲ್ ನಡಿಗೆ. ಮಾರ್ಗದಲ್ಲಿ ನಮ್ಮ ಜಯನಗರದ ಆನೆಬಂಡೆ ಇರುವಂತಹ ಬಂಡೆಯನ್ನು ನೋಡಿ ತುಂಬಾ ಸಂತೋಷವಾಯಿತು.

ಚಳಿ ಜಾಸ್ತಿ, ಉಸಿರಾಟ ಕಷ್ಟವಾಗುತ್ತಿತ್ತು

ಚಳಿ ಜಾಸ್ತಿ, ಉಸಿರಾಟ ಕಷ್ಟವಾಗುತ್ತಿತ್ತು

ಕಿಬೋ ಹಟ್ ಸಮೀಪದಲ್ಲಿ ಬರುತ್ತಿರುವಾಗ ಮಲ್ಲಿಗೆ ಹೂವು ಚುಮುಕಿಸುವಂತೆ 'ಸ್ನೋ ಫ್ಲೇಕ್ಸ್' ಸ್ವಾಗತಿಸಿತು. ಕಿಬೋ ಹಟ್ 15,000 ಅಡಿ ಎತ್ತರದಲ್ಲಿದ್ದು, ಕಲ್ಲಿನಲ್ಲಿ ಕಟ್ಟಿದ್ದಾರೆ. ಚಳಿ ಜಾಸ್ತಿ, ಉಸಿರಾಟ ಕಷ್ಟವಾಗುತ್ತಿತ್ತು. ನಾವು ಡೈಯಮಾಕ್ಸ್ ಮಾತ್ರೆ ಉಸಿರಾಟದ ಸಹಾಯಕ್ಕೆ ತೆಗೆದುಕೊಳ್ಳುತ್ತಿದ್ದೆವು. ಇಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು 12 ಗಂಟೆಗೆ ಮತ್ತೆ ಹತ್ತಲು ಶುರುಮಾಡಿದೆವು. ಇದುವರೆಗೂ ಶಿವರಾತ್ರಿಯಲ್ಲಿ ದೇವರ ಸಾನ್ನಿಧ್ಯದಲ್ಲಿ ಭಜನೆಮಾಡಿಕೊಂಡು ರಾತ್ರಿ ಕಳೆಯುವುದು ಅಭ್ಯಾಸವಾಗಿತ್ತು. ಆದರೆ ಈ ತರಹ ರಾತ್ರಿ ನಡೆದಿರುವುದು ಇದೇ ಮೊದಲ ಮತ್ತು ಕೊನೆಯಸಲದ್ದಾಗಬಹುದೆನ್ನಿಸಿತು.

ಜಾರುತ್ತಿದ್ದ ಬಂಡೆ ಮೇಲೆ ಕಷ್ಟದ ನಡಿಗೆ

ಜಾರುತ್ತಿದ್ದ ಬಂಡೆ ಮೇಲೆ ಕಷ್ಟದ ನಡಿಗೆ

ಗುರಿಮುಟ್ಟುವ ಹುಮ್ಮಸ್ಸಿದ್ದುದರಿಂದ ಒಂದೇ ಸವನೆ ನಡೆಯುತ್ತಿದ್ದೆವು. ಏಕೆಂದರೆ ಸೂರ್ಯ ಉದಯವಾಗುವುದಕ್ಕೆ ಮುಂಚೆ ನಾವು ತುದಿತಲುಪಿ ವಾಪಸ್ಸು ಬರಬೇಕಿತ್ತು. ನಡಿಗೆ ಬಹಳ ಕಷ್ಟ, ವಿಪರೀತ ಜಾರುತ್ತಿತ್ತು. ವಾಕಿಂಗ್ ಸ್ಟಿಕ್ ಸಹಾಯದಿಂದ ನಡಿಗೆ ಸಾಗುತ್ತಿತ್ತು. ಹಿಂದೆ ವೇಳೆಯ ಅಭಾವದಿಂದಾಗಿ 'ಉರುಹು' ತಲುಪಲಾಗಿರಲಿಲ್ಲ. ಇಲ್ಲಿ 'ಗಿಲ್ಮನ್ಸ್ ಪಾಯಿಂಟ್' ತಲುಪಿದಾಗ ಉಂಟಾದ ತೃಪ್ತಿ, ಸಂತೋಷ ಹೇಳಲತೀರದು! ಕೈಯ್ಯಲ್ಲಿ ಕ್ಯಾಮರಾ ಇಲ್ಲದ ಕಾರಣ ಫೋಟೋ ತೆಗೆಯಲು ಆಗದೆ, ಕ್ರೇಟರ್ಸ್ ಸುತ್ತಲ ಸೌಂದರ್ಯವನ್ನು ಹೀರುತ್ತಾ ಗಿಲ್ಮನ್ಸ್ ಪಾಯಿಂಟ್ ಬೋರ್ಡ್ ಹತ್ತಿರವೇ ನಿಂತು ತೃಪ್ತಿಪಟ್ಟು ವಾಪಸ್ಸು ಬರಬೇಕಾಯಿತು.

ಗಿಲ್ಮನ್ಸ್ ಪಾಯಿಂಟ್ ತಲುಪಿದ್ದಕ್ಕೆ ಸರ್ಟಿಫಿಕೇಟ್

ಗಿಲ್ಮನ್ಸ್ ಪಾಯಿಂಟ್ ತಲುಪಿದ್ದಕ್ಕೆ ಸರ್ಟಿಫಿಕೇಟ್

ಪೋರ್ಟರ್ಸ್ ಎಲ್ಲ ಅಭಿನಂದನೆ ಹೇಳಿದ್ದೇ ಹೇಳಿದ್ದು. ವಾಪಸ್ಸು ಪುನಃ ಹೋರಂಬೋ ಹಟ್ ಗೇ ಬರಬೇಕು. ಆದರೆ ನಡಿಗೆ ಸಾಕು ಸಾಕಾಗಿಬಿಟ್ಟಿತ್ತು. ಮಾರನೆಯ ದಿವಸ ಮಂದಾರ ಹಟ್ಗೆ ಬಂದಾಗ ಡ್ರೈವರ್ ನಮಗೆ ಕಾದಿದ್ದು ನಮ್ಮನ್ನು ಅರುಷ ಹೋಟೆಲ್ಗೆ ತಲುಪಿಸಿದರು. ಗಿಲ್ಮನ್ಸ್ ಪಾಯಿಂಟ್ ತಲುಪಿದ್ದಕ್ಕೆ ಸರ್ಟಿಫಿಕೇಟ್ ಕೊಟ್ಟರು. ನಮ್ಮ ಪ್ರತಿನಿತ್ಯದ ಅಭ್ಯಾಸಬಲದಿಂದ ರೂಢಿಯಾಗಿರುವ ನಡಿಗೆಯಿಂದಾಗಿ, ನಮ್ಮನ್ನು ಇಂತಹ ಪ್ರಪಂಚದ ಹೆಸರಾಂತ ಸ್ಥಳಗಳಿಗೆ ಹೋಗಿ ನೋಡಿ ಬರಲು ಪ್ರೋತ್ಸಾಹ ನೀಡುತ್ತಿದೆ. ನಮ್ಮ ತಂದೆಯವರ ವರಪ್ರಸಾದ 'ನಡಿಗೆ'ಯಾಗಿತ್ತು. ಅವರಿಗೆ 'ನಡಿಗೆ ನಂಜುಂಡಯ್ಯ' ಬಿರುದು ಕೊಟ್ಟಿದ್ದರು. ಅವರ ಮಗಳಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತೆನ್ನಿಸಿ ನನ್ನ ಸ್ನೇಹಿತರೊಂದಿಗೆ ನನ್ನ ಅನುಭವ ಹಂಚಿಕೊಂಡೆ.

English summary
Mount Kilimanjaro trekking : Unforgettable experience. Seetha Keshava from Australia has shared her experience of climbing Kilimanjaro, highest peak in Africa with her husband. Here is travelogue of Kilimanjaro mountain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X