ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಮಾವಳ್ಳಿ ಟಿಫಿನ್ ರೂಮ್ಸ್

By Prasad
|
Google Oneindia Kannada News

ಬೆಳಗಿನ ಜಾವ ಜಾಗಿಂಗ್ ಸೂಟ್ ಧರಿಸಿ ಕೋಲು ಹಿಡಿದು ಲಾಲ್ ಬಾಗ್ ನಲ್ಲಿ ವಾಕಿಂಗ್ ಬರುವ ರಿಟೈರ್ಮೆಂಟ್ ಹಂತದಲ್ಲಿರುವ ಅಥವಾ ರಿಟೈರ್ ಆಗಿರುವ ಒಂದು ಗುಂಪಿನ ಜನರಿಗೆ ನಡಿಗೆ ಜೊತೆ ಮಾತು ಮುಗಿಸುತ್ತಿದ್ದಂತೆ ಮೂಗಿನ ಹೊಳ್ಳೆಗಳು ಅರಳಲು ಆರಂಭಿಸುತ್ತವೆ, ಹೊಟ್ಟೆ ಚುಟುಚುಟು ಅನ್ನಲು ಪ್ರಾರಂಭಿಸುತ್ತದೆ, ಕಾಲುಗಳು ತಾನೇ ತಾನಾಗಿ ಬಳಿಯಲ್ಲಿರುವ ಕಲ್ಲಿನ ಕಟ್ಟಡದತ್ತ ಸಾಗಲು ಆರಂಭಿಸುತ್ತದೆ.

ಅದು ಮತ್ತಾವುದೂ ಅಲ್ಲ. ಬ್ರಾಹ್ಮಿನ್ಸ್ ಕಾಫಿ ಹೌಸ್ ಎಂದು 1924ರಲ್ಲಿ ಆರಂಭವಾದ ಹೋಟೆಲ್. ಇಂದು ಮಾವಳ್ಳಿ ಟಿಫಿನ್ ರೂಮ್ಸ್ ಅರ್ಥಾತ್ ಶಾರ್ಟಾಗಿ ಎಂಟಿಆರ್ ಎಂದು ಬೆಂಗಳೂರಿನಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ. ಲಾಲ್ ಬಾಗ್ ನಲ್ಲಿ ಜಾಗಿಂಗ್ ಮಾಡುವ ತಿಂಡಿಪೋತರಿಗೆ ಎಂಟಿಆರ್ ನಲ್ಲಿ ಮಸಾಲೆದೋಸೆ ಹೊಟ್ಟೆಗಿಳಿಸಿ ಬೆಳ್ಳಿ ಲೇಪಿತ ಲೋಟ ಭರ್ತಿ ಸ್ಟ್ರಾಂಗ್ ಕಾಫಿ ಹೀರಿದರೇನೆ ಜಾಗಿಂಗ್ ಸಾರ್ಥಕವಾದಂತೆ.

ತಿಂಡಿಗಳ ಗುಣಮಟ್ಟದಲ್ಲಿ ಎಂದೂ ರಾಜಿಯಾಗದ ಎಂಟಿಆರ್ ಹೋಟೆಲ್ ಎಲ್ಲಾಬಗೆಯ ಹಾಳುಮೂಳು ತಿಂಡಿಗಳನ್ನು ಮಾಡಿ ತಿಂದವರ ಹೊಟ್ಟೆ ಕೆಡಿಸುವುದಿಲ್ಲ. ಜನರು ಇಷ್ಟಪಡುವ ಕೆಲವೇ ತಿಂಡಿಗಳು ಮಾತ್ರ ಇಲ್ಲಿ ಲಭ್ಯ. ಆರೋಗ್ಯಕರ ರವಾ ಇಡ್ಲಿ, ಮಿಸ್ ಮಾಡಲಾಗದ ಮಸಾಲೆ ದೋಸೆ, ನೀರೂರಿಸುವ ಚಂದ್ರಹಾರ ಸ್ವೀಟ್, ಗರಮಾಗರಂ ಬಿಸಿಬೇಳೆ ಭಾತ್, ಜಿಹ್ವಾಚಾಪಲ್ಯ ಹೆಚ್ಚಿಸುವ ಖಾರಾ ಭಾತ್, ತಿನ್ನಬೇಕೆನ್ನಿಸುವ ಕೇಸರಿ ಭಾತ್ (ಶಿರಾ), ತೇಗುವ ಮುನ್ನ ಗಂಟಲಿಗಿಳಿಯುವ ವಿಶಿಷ್ಟ ಘಮಲಿನ ಬಿಸಿಬಿಸಿ ಫಿಲ್ಟರ್ ಕಾಫಿ. (ಚಿತ್ರಗಳು : ಎಂಟಿಆರ್ ವೆಬ್ ಸೈಟ್)

ಎಂಟಿಆರ್ ಹೋಟೆಲಿನ ಯಶಸ್ಸಿನ ಗುಟ್ಟು

ಎಂಟಿಆರ್ ಹೋಟೆಲಿನ ಯಶಸ್ಸಿನ ಗುಟ್ಟು

ಐಟಂಗಳು ಇಷ್ಟೇ ಇದ್ದರೂ ಏನು ರಶ್ ಅಂತೀರಿ? ಕ್ಯೂ ನಿಲ್ಲದೆಯೆ ಇಲ್ಲಿ ತಿಂಡಿ ತಿನ್ನುವುದು ಸಾಧ್ಯವೇ ಇಲ್ಲ. ರಿಸರ್ವೇಶನ್ ಸಿಸ್ಟಂ ಕೂಡ ಇಲ್ಲಿ ಜಾರಿಯಲ್ಲಿಲ್ಲ. ಇಲ್ಲಿನ ತಿಂಡಿ ತಿನ್ನಬೇಕಾ? ಸಾಲುಗಟ್ಟಿ ಬನ್ನಿ. ಇದು ಇಲ್ಲಿ ತಲತಲಾಂತರದಿಂದ ಜಾರಿಯಲ್ಲಿರುವ ಪದ್ಧತಿ. ಬಸ್ಸಿನಲ್ಲಿ ಬಡವ ಬಂದರೂ ಅಷ್ಟೇ, ಕಾರಿನಲ್ಲಿ ಶ್ರೀಮಂತ ಕುಟುಂಬ ಸಮೇತನಾಗಿ ಬಂದರೂ ಅಷ್ಟೇ. ಇಷ್ಟು ದಶಕಗಳಿಂದ ಹೆಸರು ಉಳಿಸಿಕೊಂಡು ಬಂದಿರುವ ಎಂಟಿಆರ್ ಹೋಟೆಲಿನ ಯಶಸ್ಸಿನ ಗುಟ್ಟು ಇದೇ.

ಸಿಂಗಪುರದಲ್ಲಿ ಮೊದಲ ಓವರ್‌ಸೀನ್ ಬ್ರಾಂಚ್

ಸಿಂಗಪುರದಲ್ಲಿ ಮೊದಲ ಓವರ್‌ಸೀನ್ ಬ್ರಾಂಚ್

ದಕ್ಷಿಣ ಭಾರತದ ತಿಂಡಿಗೆ ಹೆಸರುವಾಸಿಯಾಗಿರುವ ಎಂಟಿಆರ್ ಮೊತ್ತ ಮೊದಲನೇ ಬಾರಿಗೆ ಭಾರತದ ಆಚೆಗೆ ತನ್ನ ಮೊದಲ ಖಾತೆಯನ್ನು ತೆರೆಯುತ್ತಿದೆ. ಅದು ಅಮೆರಿಕ, ಆಸ್ಟ್ರೇಲಿಯಾ, ಲಂಡನ್, ಪ್ಯಾರಿಸ್, ದುಬೈ ಎಲ್ಲೂ ಅಲ್ಲ ಸಿಂಗಪುರದಲ್ಲಿ. ತಮಿಳಿಗರೇ ಜಾಸ್ತಿಯಿರುವ 'ಲಿಟ್ಲ್ ಇಂಡಿಯಾ' ಎಂಬ ಪ್ರದೇಶದಲ್ಲಿ, ಸೆರಂಗೂನ್ ರಸ್ತೆಯಲ್ಲಿ, ಶ್ರೀ ಸಿನ್ನಿವಾಸಪೆರುಮಾಳ್ ದೇವಸ್ಥಾನದ ಎದುರಿನಲ್ಲಿ ಮೇ 26ರಂದು ಎಂಟಿಆರ್ ತನ್ನ ಟ್ರೇಡ್ ಮಾರ್ಕ್ ತಿಂಡಿಗಳನ್ನು ಸಿಂಗಪುರದ ವಾಸಿಗಳಿಗೆ ಬಡಿಸಲಿದೆ.

ಬೆಂಗಳೂರಿನಲ್ಲಿ ಮಾತ್ರ ಎಂಟಿಆರ್ ಝೇಂಡಾ

ಬೆಂಗಳೂರಿನಲ್ಲಿ ಮಾತ್ರ ಎಂಟಿಆರ್ ಝೇಂಡಾ

ತಮಿಳಿಗರೇ ಹೆಚ್ಚಿರುವ ಸಿಂಗಪುರದ ಈ ಪ್ರದೇಶದಲ್ಲಿ ಎಂಟಿಆರ್ ತನ್ನ ಮೊದಲ ಓವರ್ ಸೀಸ್ ಹೋಟೆಲನ್ನು ತೆರೆಯುತ್ತಿರುವ ಅಚ್ಚರಿಯೇನಲ್ಲ. ನಮ್ಮ ಉಡುಪಿ ಹೋಟೆಲುಗಳಂತೆ ತಮಿಳುನಾಡಿನ ಶರವಣ ಭವನ್, ಆನಂದ ಭವನ್, ನೈವೇದ್ಯಂ ಹೋಟೆಲುಗಳು ವಿಶ್ವದಾದ್ಯಂತ ತನ್ನ ಬ್ರಾಂಚುಗಳನ್ನು ತೆರೆದಿವೆ. ದಾಸಪ್ರಕಾಶ್, ವುಡ್ ಲ್ಯಾಂಡ್ಸ್, ಉಡುಪಿ ಹೋಟೆಲುಗಳು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ದಕ್ಷಿಣ ಭಾರತದ ಊಟವನ್ನು ಬಡಿಸುತ್ತಿದ್ದರೆ, ಎಂಟಿಆರ್ ಮಾತ್ರ ಬೆಂಗಳೂರಿನಲ್ಲಿ ಮಾತ್ರ ಝೇಂಡಾ ಊರಿದೆ.

ತನ್ನ ಸ್ಥಾನ ಕಾಯ್ದುಕೊಂಡ ಎಂಟಿಆರ್

ತನ್ನ ಸ್ಥಾನ ಕಾಯ್ದುಕೊಂಡ ಎಂಟಿಆರ್

ತಮಿಳುನಾಡಿಗೆ ಹೋಲಿಸಿದರೆ ಮತ್ತು ಉಡುಪಿ ಹೋಟೆಲುಗಳನ್ನು ಹೊರತುಪಡಿಸಿದರೆ ಕರ್ನಾಟಕದ ಬಾಣಸಿಗರು ತಮ್ಮ ಛಾಪನ್ನು ಮೂಡಿಸಿದ್ದು ಕಡಿಮೆಯೆ. ಒಂದಾನೊಂದು ಕಾಲದಲ್ಲಿ ಕಾಮತ್ ಹೋಟೆಲುಗಳಲ್ಲಿ ತಿಂಡಿ ತಿನ್ನುವುದು ತಿನ್ನುವವರ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಈಗ, ಕಾಮತ್ ಹೋಟೆಲುಗಳು ಬ್ರೋಕನ್ ಬ್ರಾಂಡ್ ಆಗಿದೆ. ಇತರ ಹೋಟೆಲುಗಳು ಮತ್ತು ದರ್ಶಿನಿಗಳು ಒಡ್ಡಿರುವ ಸ್ಪರ್ಧೆಯ ಮುಂದೆ ಕಾಮತ್ ಹೋಟೆಲ್ ಸೀದುಹೋಗಿರುವ ಮಸಾಲೆ ದೋಸೆಯಂತಾಗಿದೆ. ಇಷ್ಟೆಲ್ಲ ಸ್ಪರ್ಧೆ ಇದ್ದರೂ ಎಂಟಿಆರ್ ಮಾತ್ರ ತನ್ನ ಸ್ಥಾನ ಕಾಯ್ದುಕೊಂಡಿದೆ.

ಬೆಂಗಳೂರು ಬಿಟ್ಟು ಇತರೆಡೆ ಏಕಿಲ್ಲ?

ಬೆಂಗಳೂರು ಬಿಟ್ಟು ಇತರೆಡೆ ಏಕಿಲ್ಲ?

ರವೆ ಇಡ್ಲಿ, ಮಸಾಲೆ ದೋಸೆ, ಬಿಸಿಬೇಳೆ ಭಾತ್ ನಂಥ ತಿಂಡಿಗಳ ಜೊತೆ ರೆಡಿ ಟು ಈಟ್ ಫುಡ್‌ಗಳಿಂದಾಗಿ ವಿಶ್ವದಾದ್ಯಂತ ಖ್ಯಾತಿ ಗಳಿಸಿರುವ ಮಾವಳ್ಳಿ ಟಿಫಿನ್ ರೂಮ್ಸ್ ಸಿಂಗಪುರದಲ್ಲೇನೋ ಹೋಟೆಲ್ ಆರಂಭಿಸುತ್ತಿದೆ. ಆದರೆ, ಹೊರದೇಶದಲ್ಲಿ ಆರಂಭಿಸುವ ಮೊದಲು ಕರ್ನಾಟಕದ ಇತರ ಪ್ರದೇಶಗಳಲ್ಲಿ ಬ್ರಾಂಚ್ ತೆರೆಯಲು ಏಕೆ ಮನಸ್ಸಿ ಮಾಡಿಲ್ಲ? ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಮೈಸೂರು ಮುಂತಾದ ಪ್ರದೇಶಗಳಲ್ಲಿ ಹೋಟೆಲ್ ಗಳನ್ನು ತೆರೆಯಬಹುದಿತ್ತಲ್ಲ? ಹೇಮಾಮಾಲಿನಿ ಮಯ್ಯ, ವಿಕ್ರಮ್ ಮಯ್ಯ ಮತ್ತು ಅರವಿಂದ್ ಮಯ್ಯ ಏನೆನ್ನುತ್ತಾರೆ?

ಅಮೆರಿಕ, ಲಂಡನ್, ಆಸ್ಟ್ರೇಲಿಯಾದಲ್ಲಿ ಎಂದು?

ಅಮೆರಿಕ, ಲಂಡನ್, ಆಸ್ಟ್ರೇಲಿಯಾದಲ್ಲಿ ಎಂದು?

ಜೀವಮಾನದ ಪ್ರಶಸ್ತಿ, ರೋಟರಿ ಸೆಂಟಿನಿಯಲ್ ಲೆಜೆಂಡ್, ಬೆಸ್ಟ್ ಕರ್ನಾಟಕ ಕ್ಯೂಸಿನ್, ಬೆಸ್ಟ್ ಸೌತ್ ಇಂಡಿಯನ್ ಟಿಫಿನ್ ರೆಸ್ಟೋರೆಂಟ್, ಬೆಸ್ಟ್ ಮಸಾಲಾ ದೋಸಾ ಪ್ರಶಸ್ತಿಗಳನ್ನು ಪಡೆದಿರುವ ಮಾವಳ್ಳಿ ಟಿಫಿನ್ ರೂಮ್ಸ್ ಸಿಂಗಪುರ ಮಾತ್ರವಲ್ಲ ಸದ್ಯದಲ್ಲೇ ದುಬೈನಲ್ಲಿ ಕೂಡ ತನ್ನ ಮತ್ತೊಂದು ಬ್ರಾಂಚ್ ತೆರೆಯಲಿದೆ. ದೈತ್ಯ ಹೆಜ್ಜೆಯನ್ನು ಇಟ್ಟಿರುವ ಎಂಟಿಆರ್ ಅಮೆರಿಕ, ಆಸ್ಟ್ರೇಲಿಯಾ, ಜಪಾನ್, ಲಂಡನ್, ಕೆನಡಾ ಮುಂತಾದ ದೇಶಗಳಲ್ಲಿ ಎಂದು ಹೋಟೆಲ್ ತೆರೆಯಲಿದೆ?

English summary
Bangalore's famous restaurant Mavalli Tiffin Rooms (MTR), known for delicious South Indian Cuisines, will be opening first overseas branch in Singapore on May 26, 2013. Now, Singapore people can savour Rava Idli, Masala Dosa, Khara Bhat, Kesari Bhat with hot coffee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X