ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆನ್ಸಿಲ್ವೇನಿಯ ಕನ್ನಡ ಕೂಟದಲ್ಲಿ 'ಸಿಹಿಕಹಿ' ಯುಗಾದಿ

By * ಪದ್ಮಪಾದ
|
Google Oneindia Kannada News

Sihi Kahi Chandru, Sihi Kahi Geetha in USA
ಐದನೇ ಹುಟ್ಟುಹಬ್ಬ ಆಚರಿಸಿಕೊಂಡ ಅಮೆರಿಕ ಸಂಸ್ಥಾನದ ಪೆನ್ಸಿಲ್ವೇನಿಯ ರಾಜ್ಯದ ಫಿಲಡೆಲ್ಫಿಯದಲ್ಲಿರುವ ನವೋದಯ ಕನ್ನಡ ಕೂಟದಲ್ಲಿ, ಏಪ್ರಿಲ್ ತಿಂಗಳ ಕೊನೆಯ ಶನಿವಾರ, ಕೂಟದ ಸದಸ್ಯರ ರಂಗು ರಂಗಿನ ಕಾರ್ಯಕ್ರಮದ ಜೊತೆಯಲ್ಲಿ ಯುಗಾದಿಯ ಸಂಭ್ರಮದಲ್ಲಿ ಭಾಗವಹಿಸಲು ಕರ್ನಾಟಕದಿಂದ "ಸಿಹಿ ಕಹಿ" ಚಂದ್ರು ತಂಡದವರು "ನಗೋತ್ಪಾದಕರಾಗಿ" ಆಗಮಿಸಿದ್ದು ವಿಶೇಷ ಮೆರುಗನ್ನು ನೀಡಿತ್ತು.

ಪ್ರತಿಭಾ ಕೇಶವಮೂರ್ತಿಯವರು ತಮ್ಮ ಸ್ವಾಗತ ಭಾಷಣದಲ್ಲಿ, ನವೋದಯ ಕನ್ನಡ ಕೂಟಕ್ಕೆ ಲಾಭರಹಿತ ಸಂಸ್ಥೆಯಾಗಲು ಸರ್ಕಾರದ ಅನುಮೋದನೆ ಸಿಕ್ಕಿದ್ದನ್ನು ಹಂಚಿಕೊಂಡರು. ಪ್ರತಿಭಾ ಕೇಶವಮೂರ್ತಿ ಅವರ "ಪುರಂದರ" ಸಂಗೀತ ನೃತ್ಯ ನಾಟಕ, ಲಕ್ಷ್ಮಿ ಹರೀಶ್ ನಿರ್ದೇಶನದ "ರಾಮ ರಾಮ", ಪ್ರತಿಭಾ ಕೇಶವಮೂರ್ತಿ ನಿರ್ದೇಶನದ "ಚಂದ್ರ ಚೂಡ ಶಿವಶಂಕರ" ಹಾಗು ಆರತಿ ನಾರಾಯಣ್ ನಿರ್ದೇಶನದ "ಭಾಗ್ಯದ ಲಕ್ಷ್ಮಿ ಬಾರಮ್ಮ" ನೃತ್ಯಗಳು ಪ್ರೇಕ್ಷಕರ ಮನಸೂರೆಗೊಂಡವು. ಸೂತ್ರಧಾರನಾಗಿ ಬಾಲಕ ಹಿಮವತ್ ಜೋಯಿಸ್ ಅಚ್ಚ ಕನ್ನಡದ ಸಾಲುಗಳ ನಿರರ್ಗಳ ಉಚ್ಚರಿಸುವ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡ.

ಸುಮತಿ ದೊರೆಸ್ವಾಮಿ ಅವರು ನಿರೂಪಕಿಯಾಗಿ ಪ್ರಸ್ತುತಪಡಿಸಿ, ಕೂಟದ ಹಲವಾರು ಸದಸ್ಯರು ನಡೆಸಿಕೊಟ್ಟ ಕನ್ನಡ ಗೀತೆಗಳು, ಸಣ್ಣ ಪ್ರಹಸನಗಳು, ಚಿಕ್ಕ ಮಕ್ಕಳ ನೃತ್ಯ, ವಾದ್ಯ ಸಂಗೀತ, ನೃತ್ಯ ಕಾರ್ಯಕ್ರಮಗಳು ಮನಸಿಗೆ ಮುದ ನೀಡುವುದರ ಜೊತೆ, ಒಂದು ಚಿಕ್ಕ ಕನ್ನಡ ಕೂಟದ "ಸಾಂಸ್ಕೃತಿಕ" ಚೊಕ್ಕತನವನ್ನು ಪ್ರತಿಬಿಂಬಿಸಿದವು. ಈ ವಿವಿಧ ಕಾರ್ಯಕ್ರಮಗಳಲ್ಲಿ, ಲಕ್ಷ್ಮಿ ಹರೀಶ್ ನಿರ್ವಹಿಸಿದ್ದ "ತುಂತುರು" ಹಾಡಿಗೆ ಮಕ್ಕಳ ನೃತ್ಯ, ಆರತಿ ನಾರಾಯಣ್ ನಿರ್ವಹಿಸಿದ್ದ "ಅಂಕು ಡೊಂಕು" ಹಾಡಿಗೆ ಮಕ್ಕಳ ನೃತ್ಯ, ಸುಮತಿ ದೊರೆಸ್ವಾಮಿ ನಿರ್ವಹಿಸಿದ್ದ "ಪ್ಯಾರ್ಗೆ ಆಗ್ ಬಿಟ್ಟೈತೆ" ಹಾಡಿಗೆ ದೊಡ್ಡವರ ನೃತ್ಯ, ಹಾಗೂ ಪ್ರಹ್ಲಾದ್ ಬೆಳೆಗೆರೆ ನಿರ್ದೇಶನದ ನಾಟಕ "ಐ ಟಿ ತೋಪು ಆಗ್ರಿ ಟಾಪು" ಪ್ರೇಕ್ಷಕರಗೆ ಹೆಚ್ಚು ಖುಷಿ ನೀಡಿದವು.

ಕಾರ್ಯಕ್ರಮದ ಮಧ್ಯಂತರದಲ್ಲಿ ಸಮೋಸಾ ಚಾಟ್ ಹಾಗು ಕಾಫಿಯ ನಂತರ ಶುರುವಾಗಿದ್ದೆ ನಮ್ಮ ಕರ್ನಾಟಕದಿಂದ ಆಗಮಿಸಿದ್ದ "ನಗೋತ್ಪಾದಕರ" ಹಾವಳಿ. ಲಕ್ಷ್ಮಿ ಹರೀಶರವರ ಕಲಾವಿದರ ಪರಿಚಯದೊಂದಿಗೆ "ಸಿಹಿಕಹಿ" ಚಂದ್ರು ತಂಡದವರ ಕಾರ್ಯಕ್ರಮ ಆರಂಭವಾಯಿತು. ಕುಮಾರಿ ಹಿತ ಚಂದ್ರಶೇಖರ್ ರವರ ವಿಘ್ನವಿನಾಶಕ ಗಣಪತಿಯ ಕಥಕ್ ನೃತ್ಯದೊಂದಿಗೆ ಆರಂಭಗೊಂಡು, 'ಪಾಪ ಪಾಂಡು' ಖ್ಯಾತ ಧಾರಾವಾಹಿ ಸಂಭಾಷಣೆಕಾರ ಎಮ್.ಎಸ್. ನರಸಿಂಹಮೂರ್ತಿಯವರ ಹಾಸ್ಯ ಭಾಷಣ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿತು.

ಹಸುವಿಗೆ ಕೇವಲ 6 ಹಲ್ಲುಗಳು ಮಾತ್ರ ಇರುತ್ತವೆ ಎಂಬುದು ಗೊತ್ತಾದದ್ದು ಎಮ್.ಎಸ್.ಎನ್ ರವರ ಹಾಸ್ಯ ಭಾಷಣ ಕೇಳಿದ ನಂತರವೇ. ಶ್ರೀನಾಥ್ ವಸಿಷ್ಟರವರ "ಭಾಗ್ಯಾದ ಲಕ್ಸ್ಶ್ಮಿ ಬಾರಮ್ಮ" ಅಣುಕು ಗೀತೆ ನಗೆಯ ಅಲೆಯನ್ನೆ ಹರಿಸಿದರೆ, ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ಎಮ್.ಎಸ್.ಎನ್, ಶ್ರೀನಾಥ್ ವಸಿಷ್ಟ ಹಾಗು ಹಿತ ಚಂದ್ರಶೇಖರ್ ನಡೆಸಿಕೊಟ್ಟ "ಫ಼್ರೆಶ್ ಅಂಡ್ ಕ್ರಶ್" ನಗೆ ನಾಟಕ ನೆರೆದಿದ್ದ ಪ್ರೇಕ್ಷಕರನ್ನು ನಿರಂತರವಾಗಿ ನಗೆಗಡಲಿನಲ್ಲಿ ಮುಳುಗಿಸಿತು. ಸುವರ್ಣ ನ್ಯೂಸ್ ಚಾನೆಲ್ ನವರು ಈ ಕಾರ್ಯಕ್ರಮವನ್ನು ಸೆರೆ ಹಿಡಿದಿದ್ದಾರೆ.

ಎಲ್ಲ ಕಾರ್ಯಕ್ರಮಗಳು ಮುಗಿದ ನಂತರ ಸುವರ್ಣ ನ್ಯೂಸ್ ಚಾನೆಲ್ಲಿನ ಈಶಾನ್ಯ ಅಮೆರಿಕದ ಗೌರವಾನ್ವಿತ ಪ್ರತಿನಿಧಿಯು ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಸೆರೆಹಿಡಿದಾಗ ಒಕ್ಕೊರಲಿನಿಂದ ಬಂದ ಉದ್ಗಾರ "ಕಾರ್ಯಕ್ರಮ ಅದ್ಭುತವಾಗಿತ್ತು. ಸಿಹಿ ಕಹಿ ಚಂದ್ರು ತಂಡದವರ ಕಾರ್ಯಕ್ರಮವಂತೂ ಅಮೋಘವಾಗಿತ್ತು ಮತ್ತು ಎಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಲಿಸಿತು" ಎಂಬುದು. ರಂಗುರಂಗಿನ ಯುಗಾದಿಯ ಕಾರ್ಯಕ್ರಮ ರಾತ್ರಿ 9ಕ್ಕೆ ಮುಗಿದಾಗ ಎಲ್ಲರಿಗೂ ಅದ್ಯಾವುದೊ ಲೋಕದಲ್ಲಿ ವಿಹರಿಸಿ ಬಂದ ಅನುಭವ.

"ಸಿಹಿಕಹಿ" ಚಂದ್ರು ತಂಡದವರ ಕಾರ್ಯಕ್ರಮವನ್ನು ಈಶಾನ್ಯ ಅಮೆರಿಕದಲ್ಲಿ ಏಕೈಕ ಕಡೆ ನಡೆಸಿದ "ನವೋದಯ" ಕನ್ನಡ ಕೂಟಕ್ಕೂ, ಅದರಲ್ಲೂ ವಿಶೇಷವಾದ ಮುತುವರ್ಜಿ ವಹಿಸಿ, ಪ್ರಾಯೊಜಕರನ್ನೂ ತಂದುಕೊಟ್ಟು, ಈ ವಿಶೇಷ ಹಾಸ್ಯ ಕಾರ್ಯಕ್ರಮವನ್ನು ನಡೆಸಲು ಅನುವು ಮಾಡಿಕೊಟ್ಟ ನವೋದಯ ಕನ್ನಡ ಕೂಟದ ಸಾಂಸ್ಕೃತಿಕ ಸಂಚಾಲಕರಾದ ಲಕ್ಶ್ಮಿ ಹರೀಶ್ ಅವರಿಗೆ ನಮ್ಮಿಂದ ಹಾಗು ಪೆನ್ಸಿಲ್ವೇನಿಯಾದ ಎಲ್ಲಾ ಕನ್ನಡಾಭಿಮಾನಿಗಳಿಂದ ಹೃದಯಪೂರ್ವಕ ಕೃತಜ್ನತೆಗಳು.

English summary
Navodaya Kannada Koota celebrated Ugadi in Philadelphia, Pennsylvania, USA. Kannada television artists Sihi Kahi Chandru, Sihi Kahi Geetha, MS Narasimha Murthy, Srinath Vasishtha from Bangalore enthralled the audience with comedy show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X