ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಸಿಫಿಕ್ ಸಾಗರ ದ್ವೀಪಗಳ ರಾಜ ಹವಾಯಿ!

By * ಡಾ. ಉಮಾ ವೆಂಕಟೇಶ್, ಸೌತ್ ವೇಲ್ಸ್, ಯುಕೆ
|
Google Oneindia Kannada News

Kona Island Hawaii Travelogue by Uma Venkatesh
ಮೇ ತಿಂಗಳ 12ರಿಂದ 19ನೇ ತಾರೀಖಿನವರೆಗೆ ಪೆಸಿಫಿಕ್ ಸಾಗರದ ಅಗ್ನಿ ವರ್ತುಲದಲ್ಲಿರುವ ಹವಾಯಿ ದ್ವೀಪಗಳ ಸರಮಾಲೆಯಲ್ಲಿ ಅತ್ಯಂತ ಹಿರಿಯದಾದ "ಕೋನ" ದ್ವೀಪಕ್ಕೆ ನನ್ನವರ ಜೊತೆ ಭೇಟಿ ನೀಡುವ ಸುವರ್ಣ ಅವಕಾಶವೊಂದು ಒದಗಿ ಬಂದಿತ್ತು. ಅಮೆರಿಕ ಸಂಯುಕ್ತ ಸಂಸ್ಥಾನಗಳ 50 ರಾಜ್ಯಗಳಲ್ಲಿ ಒಂದಾದ ಹವಾಯಿ ದ್ವೀಪಗಳು ಸುಮಾರು 137 ಸಣ್ಣಸಣ್ಣ ದ್ವೀಪಗಳನ್ನು ಒಳಗೊಂಡ ದ್ವೀಪಮಾಲೆ. ಈ ಮಾಲೆಯಲ್ಲಿ ಅತ್ಯಂತ ದೊಡ್ಡದಾದ "ಕೋನಾ" ಈ ದ್ವೀಪ ಸರಣಿಯ ಹಿರಿಯಕ್ಕ. ಪೆಸಿಫಿಕ್ ಸಾಗರದ ತಳದಲ್ಲಿರುವ " The Great Hawaiian-Emperor Sea mount chain" ಮಾಲೆಯ ಅಗ್ನಿಪರ್ವತಗಳ ಶಿಖರ ವೃಂದವೇ ಹವಾಯಿ ದ್ವೀಪಗಳ ಸರಮಾಲೆ.

ಅಮೆರಿಕಾದ ಪ್ರಮುಖ ಭೂಭಾಗದಿಂದ ಸುಮಾರು 1,860 ಮೈಲಿಗಳ ದೂರದಲ್ಲಿರುವ ಈ ದ್ವೀಪಗಳು ಪ್ರವಾಸಿಗರ ಸ್ವರ್ಗ. ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣದಿಂದ ಸುಮಾರು 11 ತಾಸುಗಳ ಪ್ರಯಾಣದ ನಂತರ ನಾವು ತಲುಪಿದೆವು ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಅಲ್ಲಿಂದ ಏರಿದೆವು ಕೋನ ದ್ವೀಪ ತಲುಪುವ ಇನ್ನೊಂದು ವಿಮಾನವನ್ನು. 5 ಗಂಟೆಗಳ ಮತ್ತೊಂದು ದೀರ್ಘ ಪ್ರಯಾಣದ ನಂತರ ಸೇರಿದೆವು ಹವಾಯಿ ದ್ವೀಪದ ರಾಜ ಕೋನಾ ಪಟ್ಟಣ. ಹವಾಯಿ ಯುಕೆ ದೇಶಕ್ಕಿಂತ 11 ತಾಸುಗಳು ಹಿಂದಿರುವುದರಿಂದ ನಮಗೆ ಈ 11 ತಾಸುಗಳ ಲಾಭವಾಯಿತು.

ಸಾಮಾನ್ಯವಾಗಿ ಅಮೆರಿಕ ದೇಶದ ಎಲ್ಲ ವಸ್ತುಗಳು, ಕಟ್ಟಡಗಳು ಆಕಾರದಲ್ಲಿ ಬೃಹತ್ ಎಂಬುದು ಸಾಮಾನ್ಯ ಜ್ಞಾನ. ಆದರೆ ನಮಗಿಲ್ಲಿ ಕಾದಿತ್ತು ಒಂದು ವಿಧದಲ್ಲಿ ಅಸಾಮಾನ್ಯ ಆಶ್ಚರ್ಯಕರ ಅನುಭವ. ಕೋನ ವಿಮಾನ ನಿಲ್ದಾಣ ಕೇವಲ ತಾಳೆ ಮತ್ತು ತೆಂಗಿನ ಗರಿ ಹೊದಿಕೆಯ ಛಾವಣಿಯನ್ನು ಹೊದ್ದ ಸಣ್ಣ ಕಟ್ಟಡ. ಎಲ್ಲೆಲ್ಲಿಯೂ ಬಣ್ಣ ಬಣ್ಣದ ಹೂವುಗಳಿಂದ ಆವೃತ್ತವಾದ ಅಂಗಳ. ಮಲ್ಲಿಗೆ, ಸಂಪಿಗೆ ಗಿಡಗಳ ಸುಂದರ ಸುವಾಸನಾಯುಕ್ತ ಸುಮಗಳ ಆಹ್ವಾನ ಪ್ರವಾಸಿಗಳಿಗೆ. ಇದೊಂದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಅನುಭವ!

ಫಿಲಿಪ್ಪಿನೊ ತರುಣಿಯ ಚಾಲನೆಯ ಟಾಕ್ಸಿಯಲ್ಲಿ ಸುಮಾರು 30 ನಿಮಿಷಗಳ ಪ್ರಯಾಣದ ನಂತರ ತಲುಪಿದೆವು ಹತ್ತಿರದ ವೈಕಲೋವಾ ಸಾಗರ ದಂಡೆಯಲ್ಲಿನ ನಮ್ಮ ವಾಸ್ತವ್ಯ ಹೋಟೆಲ್ ಮ್ಯಾರಿಯಟ್. ರಾತ್ರಿ ಕಳೆದ ಬೆಳಕು ಹರಿಯುತ್ತಿದ್ದಂತೆ ಅದೇನು ಬಣ್ಣ ಬಣ್ಣಗಳ ಆಟ ಅಲ್ಲಿನ ಗಿಡ ಮರಗಳದು? ಪಕ್ಷಿಗಳ ರಂಗಂತೂ ನೋಡಲೇಬೇಕು. ನಮ್ಮ ಭಾರತದ ಪಶ್ಚಿಮ ಘಟ್ಟಗಳ ಸುಂದರತೆಯೇ ನಮ್ಮ ಮುಂದೆ ನಿಂತಂತಾಯಿತು. ಆದರೆ ಇಲ್ಲಿನ ಮಾತೇ ಬೇರೆ. ಇಲ್ಲಿನ ಅಗ್ನಿ ಪರ್ವತದ ರುದ್ರ ರಮಣೀಯತೆ ನಮ್ಮಲ್ಲಿಲ್ಲ.

ಕಪ್ಪು ಶಿಲೆಗಳ ನಲಿದಾಟ : ಸುಮಾರು 1800ರ ಸಮಯದಲ್ಲಿ ಸಂಭವಿಸಿದ ಅಗ್ನಿ ಪರ್ವತದ ವಿಸ್ಫೋಟದ ನಂತರ ಅಲ್ಲಿ ಹರಿದ ಲಾವಾ ರಸದ ಮೈದಾನಗಳ ಮೇಲೆ ಈಗಿನ್ನೂ ಕಟ್ಟಿರುವ ಈ ಪ್ರವಾಸಿ ತಂಗು ದಾಣಗಳ ಸುತ್ತ ಮುತ್ತ ಬರೇ ಅಗ್ನಿಶಿಲೆಯ ಆವರಣವೇ! ಎಲ್ಲೆಲ್ಲಿಯೂ ಕಪ್ಪು ಶಿಲೆಗಳ ನಲಿದಾಟ. ನಮ್ಮ ಹೋಟೆಲ್ಲಿನ ಮುಂದೆಯೇ ಪೆಸಿಫಿಕ್ ಸಾಗರದ ದಂಡೆ. ಅಲ್ಲಿನ ವೈಭವವಂತೂ ನೋಡಿಯೇ ಅನುಭವಿಸಬೇಕು.

ಕೋನಾ ದ್ವೀಪದ ವಿಶೇಷತೆಯೆಂದರೆ, ಪ್ರಪಂಚದಲ್ಲಿನ ಸುಮಾರು 9 ರೀತಿಯ ಹವಾಮಾನಗಳ ವಿವಿಧತೆಯನ್ನು ಈ ದ್ವೀಪದಲ್ಲಿ ಕಾಣಬಹುದು. ಇದರಿಂದಾಗಿ ಇಲ್ಲಿನ ಸಸ್ಯ ವೈವಿಧ್ಯತೆ ಮತ್ತು ಭೌಗೋಳಿಕ ವಿಭಿನ್ನತೆ ನಿಜಕ್ಕೂ ಬಹು ಕುತೂಹಲಕಾರಿ. ಈ ದ್ವೀಪವನ್ನು Leeward side ಅಂದರೆ ಗಾಳಿಮರೆಯ ಪ್ರದೇಶ ಮತ್ತು Windward side ಗಾಳಿ ಬೀಸುವ ದಿಕ್ಕಿನ ಪ್ರದೇಶ ಎಂಬ ಎರಡು ವರ್ಗಗಳನ್ನಾಗಿ ವಿಂಗಡಿಸಿದ್ದಾರೆ. ಗಾಳಿ ಮರೆಯ ಕೋನಾ ದ್ವೀಪ ಕೇವಲ ಬಯಲು ಭೂಮಿ. ಇಲ್ಲಿ ಇನ್ನೂ ಕಳೆದ ಅಗ್ನಿ ಪರ್ವತದ ಕೆರಳುವಿಕೆಯಲ್ಲಾದ ಲಾವಾ ಕ್ಷೇತ್ರಗಳು ಕಪ್ಪು ಅಗ್ನಿಶಿಲೆಯಿಂದ ಆವೃತ್ತವಾಗಿದೆ. ಈಗಿನ್ನೂ ಕೇವಲ ಹಲವು ಪ್ರಭೇದದ ಹುಲ್ಲುಗಳು ತಮ್ಮ ವಸಾಹತನ್ನು ಸ್ಥಾಪಿಸುತ್ತಿವೆ. ಸುಮಾರು 220 ಮೈಲುಗಳ ಸುತ್ತಳತೆಯ ಈ ದ್ವೀಪ ನಮಗೆ ಹಲವು ರೀತಿಯ ಹವಾಮಾನ ಮತ್ತು ಸಸ್ಯ ವರ್ಗಗಳ ಪರಿಚಯವನ್ನು ಮಾಡಿಸುತ್ತದೆ.

ಗಾಳಿಗೆದುರಿನ ದ್ವೀಪ ಪ್ರದೇಶದಲ್ಲಿ ಬಹಳ ಸುಂದರವಾದ ವೈಮಿಯ ಕಣಿವೆ ಮತ್ತು ದಟ್ಟವಾದ ಕಾಡುಗಳಿವೆ. ಈ ದ್ವೀಪದಲ್ಲಿನ ಸುಮಾರು 4-5 ಹಿರಿಯ ನದಿಗಳು ಮತ್ತು ಅಸಂಖ್ಯಾತ ಝರಿಗಳು ವೈಮಿಯ ಕಣಿವೆಯಲ್ಲಿ ನೂರಾರು ಮೀಟರುಗಳ ಎತ್ತರದಿಂದ ಧುಮುಕುವ ದೃಶ್ಯ ಬಹು ಮನೋಹರ! ಕೋನಾ ಬಿಟ್ಟೊಡನೆ ಸುಮಾರು 30 ಮೈಲುಗಳ ದೂರದಲ್ಲಿ ಪ್ರಾರಂಭವಾಗುವುದು ಹಸುರಿನ ಹಬ್ಬ. ನಮ್ಮ ಕರ್ನಾಟಕದಲ್ಲಿನ ಪಶ್ಚಿಮ ಘಟ್ಟಗಳ ದಟ್ಟ ಹಸುರಿನ ಕಾಡಿನ ವೈವಿಧ್ಯತೆಯೇ ಇಲ್ಲಿಯೂ ಕಾಣಬರುವುದು. ಸ್ವತಃ ಸಸ್ಯ ಶಾಸ್ತ್ರಜ್ಞೆಯಾದ ನನಗೆ ಇಲ್ಲಿನ ಶೇಖಡಾ 90ರಷ್ಟು ಸಸ್ಯ ಪ್ರಭೇದ ನಮ್ಮಲ್ಲಿಯದೇ ಎಂಬುದು ಅರಿವಾದೊಡನೆ ಬಹು ಅಚ್ಚರಿಯೆನಿಸಿತು. ಈ ಪೆಸಿಫಿಕ್ ಸಾಗರದ ಮಧ್ಯದಲ್ಲೆಲ್ಲೋ ಕುಳಿತಿರುವ ಈ ದ್ವೀಪಗಳೆಲ್ಲಿ? ನಮ್ಮ ಪಶ್ಚಿಮಘಟ್ಟಗಳೆಲ್ಲಿ? ಪ್ರಕೃತಿಯ ಪವಾಡಗಳಿಗೆ ಕೊನೆಯೇ ಇಲ್ಲವೆ? ದಾರಿಯುದ್ದಕ್ಕೂ ನಾನು ನೋಡಿದ ನೀಲಿ ಪಾದರಿ, ಗುಲ್ ಮೊಹರ್, ಮಾವು, ತೆಂಗು, ಅನಾನಸ್, ಹಲವಾರು ತಾಳೆಯ ಪ್ರಭೇದಗಳು, ಚುರಿಕೆ ಮರ, ರೈನ್ ಮರ, ಬಣ್ಣ ಬಣ್ಣದ ದಾಸವಾಳಗಳು, ಕೇದಿಗೆಯ ಗಿಡಗಳು, ಮಲ್ಲಿಗೆ, ಸಂಪಿಗೆ, ಮಾಕಡೇಮಿಯ ನಟ್, ಅನೇಕ ರೀತಿಯ ಲಿಲ್ಲಿ ಪುಷ್ಪಗಳು.

ಹಲವಾರು ಮೈಲಿಗಳ ಪ್ರಯಾಣದ ನಂತರ ತಲುಪಿದೆವು AkAka water falls ತಳವನ್ನು. ದಟ್ಟ ಕಾಡಿನ ಮಧ್ಯದಲ್ಲಿ ಬೀಳುವ ಈ ಜಲಪಾತ ನೋಡುವ ಕಣ್ಣಿಗೆ ಹಬ್ಬ. ಅಲ್ಲಿನ ಸಸ್ಯ ಪ್ರಭೇದಗಳಲ್ಲದೆ, ನಾವು ನೋಡಿದ ಅನೇಕ ಕೀಟಗಳು, ಹಲ್ಲಿ ಮತ್ತು ಗೌಳಿಗಳ ವೈವಿಧ್ಯತೆ ಬಹು ಕುತೂಹಲಕಾರಿ. ಆದರೆ ಇನ್ನೂ ವಿಸ್ಮಯದ ವಿಷಯವೆಂದರೆ ಈ ದ್ವೀಪದಲ್ಲೆಲ್ಲೂ ಹಾವುಗಳಿಲ್ಲ. ಕೇವಲ ಕಾಡು ಹಂದಿ, ಕಾಡು ಕುರಿ, ಮುಂಗುಸಿ, ಝೀಬ್ರಾ ಪಾರಿವಾಳ, ಕಾರ್ಡಿನಲ್, ನವಿಲು, ಫೆಸೆಂಟ್, ಗೂಸ್, ಗಿಳಿ, ಹೀಗೆ ಅನೇಕ ಪ್ರಾಣಿ ಪಕ್ಷಿ ಪ್ರಭೇದಗಳನ್ನು ಇಲ್ಲಿ ಕಾಣಬಹುದು. ಇನ್ನು ಸಾಗರದಲ್ಲಿ ಹಸಿರು ಆಮೆ, ತಿಮಿಂಗಿಲ, ಡಾಲ್ಫಿನ್, ಹವಳದ ಅನೇಕ ಜಾತಿ, ಟೈಗರ್ ಶಾರ್ಕ್, ರೆ ಮೀನುಗಳು ಕಾಣಬಹುದು.

English summary
The Island of Hawaii, also called the Big Island or Hawaii Island, is a volcanic island in the North Pacific Ocean. With an area of 4,028 square miles, it is larger than all of the other Hawaiian Islands combined and is the largest island in the United States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X