ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯಾಟಲ್ಲಿನ ಸಹ್ಯಾದ್ರಿಯಲ್ಲಿ ಚಿಗುರಿದ ಚೈತ್ರ

By * ಕುಂಭಾಸಿ ಶ್ರೀನಿವಾಸ ಭಟ್
|
Google Oneindia Kannada News

Pravin Godkhindi
ಏಪ್ರಿಲ್ 29ರಂದು ಪಚ್ಚೆ ನಗರಿಯ ಸಹ್ಯಾದ್ರಿ ಕನ್ನಡ ಕೂಟದ ಕುಟುಂಬಗಳಿಗೆ ಯುಗಾದಿಯ ಹಬ್ಬದ ಸಂಭ್ರಮ. ಸಮಾಮಿಶ್ ನಗರದ ಸ್ಕೈ ಲೈನ್ ಪ್ರೌಢ ಶಾಲೆಯ ಭವ್ಯ ರಂಗಮಂದಿರದಲ್ಲಿ ನಡೆದ ಆರು ಘಂಟೆಗಳ ಕಾರ್ಯಕ್ರಮಕ್ಕೆ ಸೇರಿದ ಜರಿಲಂಗದ ಪುಟಾಣಿಗಳು, ರೇಶ್ಮೆ ಸೀರೆಯ ತಾಯಂದಿರು, ಅವಸರದಿಂದ ಓಡಾಡುವ ಸ್ವಯಂಸೇವಕರು, ತೌರೂರಿನಿಂದ ಬಂದ ಅಜ್ಜಿ ತಾತಂದಿರು ಬಹಳ ಸಂಖ್ಯೆಯಲ್ಲಿ ನೆರೆದಿದ್ದರು.

ತಾಯ್ನಾಡಿನಿಂದ ಬಂದ ಪ್ರತಿಭಾವಂತ ಕಲಾವಿದರಾದ ಪ್ರವೀಣ್ ಗೋಡ್ಖಿಂಡಿಯವರ ಕೊಳಲನಾದ, ಪಂಡಿತ್ ತರುಣ್ ಭಟ್ಟಾಚಾರ್ಯ ಅವರ ಸಂತೂರ್ ಜತೆಗೆ ಸ್ಥಳೀಯ ಕಲಾವಿದರ ಹಿಮ್ಮೇಳ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದವು. ಸಹ್ಯಾದ್ರಿ ಕನ್ನಡಿಗರಿಗೆ "ಹಠಾತ್ ಕಲಾವಿದರು" ತಮ್ಮ ಮೂರನೇ ಅದ್ದೂರಿ ನಿರ್ಮಾಣ "ಹಳ್ಳಿದಾರಿಯಲ್ಲಿ" ಎಂಬ ಸಂಗೀತ, ನೃತ್ಯ ಕಥಾನಕದಿಂದ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಹಠಾತ್ ಕಲಾವಿದರ ಮುಖ್ಯ ರೂವಾರಿಗಳಾದ ರಮೇಶ್ ಬೆಂಗಳೂರು, ಗೌರಿ ರಮೇಶ್, ಸ್ಮಿತಾ ಭಾರದ್ವಾಜ್, ರಾಗಿಣಿ ಶ್ರೀನಿವಾಸ ಮೂರ್ತಿ, ಭಾನು ರಾಜೇಶ್, ಲಕ್ಷ್ಮಿ ವಸಿಷ್ಟ, ಗುರುಪೂರ್ಣ ವಸಿಷ್ಟ, ಮತ್ತು ಹೇಮಾ ರಾಜಲಕ್ಷ್ಮಿಯವರ ಪ್ರಯತ್ನ ಜನರೆಲ್ಲರ ಮೆಚ್ಚುಗೆ ಪಡೆಯಿತು. ಸುಂದರವಾದ ಗ್ರಾಮೀಣ ಜೀವನದ ಮುಗ್ಧ ಮನಸ್ಸಿನ ಜನಜೀವನವನ್ನು ಕಟ್ಟಿಕೊಟ್ಟಿತು. ಸನ್ನಿವೇಶಗಳಿಗೆ ಹೊಂದುವಂತಹ ಸೆಟ್ಟಿಂಗ್, ಉಡುಗೆ ತೊಡುಗೆ, ಹಾಡು ಪ್ರೇಕ್ಷಕರನ್ನು ಕರ್ನಾಟಕದ ಒಂದು ಪುಟ್ಟಹಳ್ಳಿಗೆ ಕರೆದೊಯ್ಯಿತು.

ಹಳ್ಳಿಯ ಶುದ್ಧ ವಾತಾವರಣದಲ್ಲಿ ಬೆಳೆದ ನಾನು ಆಗಾಗ ಲೋಕಾಭಿರಾಮವಾಗಿ ಸ್ನೇಹಿತರೊಡನೆ ಹರಟೆ ಹೊಡೆಯುವಾಗ ಅಂದು ಮತ್ತು ಇಂದಿನ ನಮ್ಮ ಜೀವನ ಕ್ರಮದ ಬಗ್ಗೆ ಚಿಂತನೆ ಮಾಡುತ್ತೇನೆ. ನಾವು ಈಗ ತೃಪ್ತರಾಗಿದ್ದೇವೆಯೇ? ಅಥವಾ ಬಾಲ್ಯದಲ್ಲಿ ಹೆಚ್ಚು ಸಂತೋಷವಾಗಿದ್ದೆವೆಯೇ? ಎಂಬ ಪ್ರಶ್ನೆ ಯಾವಾಗಲೂ ಮೂಡುತ್ತಿರುತ್ತದೆ. ಈಗಲೂ ನಮ್ಮೂರಿಗೆ ಹೋದಾಗ ಆಗುವ ಸಂತೋಷ ಎಲ್ಲೂ ನನಗಾವುದಿಲ್ಲ. ಆದರೆ ಹಳ್ಳಿಯ ಜೀವನಕ್ಕೆ ಈಗ ನಮಗೆ ಹೊಂದಿಕೊಳ್ಳಲು ಸಾಧ್ಯವೇ? ಆಧುನಿಕ ಜೀವನದ ಅಗತ್ಯಗಳನ್ನು ಹಳ್ಳಿ ಪೂರೈಸಬಲ್ಲುದೇ? ಈ ಪ್ರಶ್ನೆಗಳಿಗೆ ಉತ್ತರ ಸಲೀಸಾಗಿ ಸಿಗುವುದಿಲ್ಲ.

ಈ ವರ್ಷದ ಯುಗಾದಿಯ ಇನ್ನೊಂದು ಆಕರ್ಷಣೆ ಪ್ರವೀಣ್ ಗೋಡ್ಖಿಂಡಿ ಅವರ ಫ್ಯೂಶನ್ ಕಾರ್ಯಕ್ರಮ. ಚಾಡ್ ಹೇಸ್ಟಿಂಗ್ಸ್ ಅವರ ತಬಲ, ಇತರ ಸ್ಥಳೀಯ ಸಹ ಕಲಾವಿದರಿಂದ ಡ್ರಮ್ಸ್, ಕೀ ಬೋರ್ಡ್, ಮತ್ತು ಗಿಟಾರ್ ಜತೆಗೆ ಪ್ರೇಕ್ಷಕರನ್ನೂ ಸೇರಿಸಿಕೊಂಡು ಅತ್ಯುತ್ತಮವಾದ ಪೂರ್ವ ಮತ್ತು ಪಶ್ಚಿಮಗಳ ಸಂಗೀತದ ಸಂಗಮದ ರಸಾನುಭವವನ್ನು ಉಣಬಡಿಸಿದರು. ಪ್ರವೀಣ್ ಅವರು ತಮ್ಮ ಹೊಸ ಸಂಶೋಧನೆಯಾದ ಕಂಪ್ಯೂಟರೀಕೃತ ಸ್ವರಬದಲಾವಣೆಯ ಕಲೆಯಿಂದ, ಕೊಳಲ ನಾದವನ್ನು ನಾದಸ್ವರ, ಸಾಕ್ಸೊಫೋನ್, ಮತ್ತಿತರ ಸ್ವರಗಳಾಗಿ ಪರಿವರ್ತಿಸಿ ಎಲ್ಲರ ಮೆಚ್ಚುಗೆಯನ್ನು ಪಡೆದರು.

ಅಮೆರಿಕ ಸರಕಾರದಿಂದ ಸಹ್ಯಾದ್ರಿ ಕನ್ನಡ ಕೂಟಕ್ಕೆ ಲಭಿಸಿದ, "ತೆರಿಗೆ ವಿನಾಯಿತ ಸಂಸ್ಥೆ" ಎಂಬ ಅಂಗೀಕಾರ ಪತ್ರದ ಉಡುಗೊರೆಯಿಂದ ಉತ್ಸಾಹಿತರಾಗಿ ಸಮಿತಿಯವರು, "ಬೆಳಕು" ಎಂಬ ಕರ್ನಾಟಕದ ಸಮಾಜಸೇವೆಯ ಸಂಸ್ಥೆಗೆ, ಒಂದು ಸಾವಿರ ಡಾಲರುಗಳ ದೇಣಿಗೆಯನ್ನು ಕೊಟ್ಟರು. ಕಳೆದ ವರ್ಷವೂ ಕನ್ನಡ ಕೂಟ ಸ್ಥಳೀಯ ಸಂಸ್ಥೆಯೊಂದಕ್ಕೆ ಸಹಾಯ ಮಾಡಿದುದನ್ನು ಇಲ್ಲಿ ಸ್ಮರಿಸಬಹುದು.

ಈ ಅವಕಾಶವನ್ನು ಸಿಯಾಟಲ್ ಕನ್ನಡಿಗರಿಗೆ ಒದಗಿಸಿದ ಕಾರ್ಯ ನಿರ್ವಾಹಕ ಸಮಿತಿ (ಕುಮಾರ್ ರಾವ್, ರಾಗಿಣಿ ಶ್ರೀನಿವಾಸ ಮೂರ್ತಿ, ರಮೇಶ್ ಬೆಂಗಳೂರು, ಶ್ರೀನಿವಾಸ ರಾವ್) ಮತ್ತು ಕಾರ್ಯಕಾರಿ ಸಮಿತಿಯ (ರವಿ ಮಸಲ್ತಿ, ವಿದ್ಯ ವಾಸುಕಿ, ಸಚಿನ್ ಕುಲ್ಕರ್ಣಿ, ಶ್ರೀಲತ,ಮನೋಜ್ ದೇಶಪಾಂಡೆ, ರಾಕೇಶ್ ರಂಗೆಗೌಡ, ಚೇತನ್ ಕದ್ರಿ, ವಿನಯ್ ಕುಮಾರ್, ನಂದನ್) ಸದಸ್ಯರಿಗೆ ನಮ್ಮ ಧನ್ಯವಾದಗಳು.

English summary
Sahyadri Kannada Koota in Seattle, USA celebrated Ugadi on April 29, 2012. Flutist Pravin Godkhindi mesmerized the audience with his fusion music. A report by Kumbhasi Srinivas Bhat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X