ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಲಿಂಪಿಕ್ಸಲ್ಲಿ ಭಾಗವಹಿಸಿದ ಅವಿಸ್ಮರಣೀಯ ಅನುಭವ

By ಶಶಿಕಾಂತ್, ಲಂಡನ್
|
Google Oneindia Kannada News

ಲೆಟರ್‌ಗಳು ಬರುವುದೆ ನಿಂತುಹೋಗಿರುವ ಕಾಲದಲ್ಲಿ, ಯಾವುದಾದರೂ ಲೆಟರ್ ಬರುತ್ತದೆ ಎಂದರೆ ಅದು, ಪಾವತಿಸಿದ ದುಡ್ಡಿಗೆ ರಸೀದಿಯಿರಬೇಕು ಇಲ್ಲವಾದರೆ ಕಟ್ಟಬೇಕಾದ ದುಡ್ಡಿನ ನೆನಪಿನ ಚೀಟಿಯಿರಬೇಕು. ಪ್ರೀತಿ ಪಾತ್ರದವರಿಂದ ಇಲ್ಲವೆ ಕುಶಲೋಪರಿಯ ಪತ್ರಗಳು ಇತ್ತೀಚಿನ ದಿನಗಳಲ್ಲಿ ನನಗೆ ಬಂದಿಲ್ಲ ಮತ್ತು ನಾನೂ ಬರೆದಿಲ್ಲ. ಎಲ್ಲಾ ಈ-ಮೈಲ್ ಮಯ. ಇಂತಹ ವಾತಾವರಣದಲ್ಲಿ ಸೆಪ್ಟೆಂಬರ್ 17ನೇ ತಾರೀಕು ಒಂದು ಪತ್ರ ಬಂತು. ಸರ್ಕಾರಿ ಪತ್ರವೆನಿಸುತ್ತಿದುದರಿಂದ ಉತ್ಸಾಹವಿಲ್ಲದೆ ಬೇಕಾಬಿಟ್ಟಿಯಾಗಿ ತೆರೆದು ನೋಡಿದೆ. ನನ್ನಂತಹ ಸಾಮಾನ್ಯನಿಗೆ ದೇಶದ ಉನ್ನತ ಸ್ಥಾನದಲ್ಲಿರುವ ಪ್ರಧಾನ ಮಂತ್ರಿಯಿಂದ ಬಂದ ಪತ್ರ ಅದು ಎಂದು ನನಗೆ ಊಹಿಸಲೂ ಸಾಧ್ಯವಿರಲಿಲ್ಲ. ಒಮ್ಮೆ ಓದಿದ ನಾನು ಪದೇ ಪದೇ ಪ್ರತೀ ಅಕ್ಷರವನ್ನು ಆಸ್ವಾದಿಸುತ್ತಾ ಓದಿದೆ. ನನ್ನನ್ನು ಹೊಗಳಿ, ನನಗೆ ಅವರು ಸಲ್ಲಿಸಿದ ಕೃತಜ್ಞತೆ, ಅವರ ಮನಸ್ಸಿನ ವಿಶಾಲವಂತಿಕೆಯನ್ನು ತೋರಿಸುತಿತ್ತು. ನಿಧಾನವಾಗಿ ನೆನಪಿನ ಕದ ತೆರೆದು ಎಲ್ಲವನ್ನು ನೆನಸಿಕೊಂಡೆ.

ಪ್ರಪಂಚದ ಅತ್ಯುನ್ನತ ಕ್ರೀಡಾ ಸಮಾರಂಭ ಎಂದರೆ ಓಲಿಂಪಿಕ್ಸ್. ಪ್ರತೀ ಸಾರಿ ಅದು ಶುರುವಾಗುವಾಗಲೂ ನನಗೆ ಏನೋ ಒಂದು ಉತ್ಸಾಹ ಇರುತ್ತಿತ್ತು. ಲಂಡನ್ ನಲ್ಲಿ ನಾನು ಇರುವಾಗ ಇಲ್ಲಿ ಓಲಿಂಪಿಕ್ಸ್ ನಡೆಯುತ್ತದೆ ಎಂದು ತಿಳಿಯುತ್ತಿದ್ದಂತೆ ಮನಸ್ಸಿನಲ್ಲೆ ಉಸ್ಸೇನ್ ಬೋಲ್ಟ್‌ಗಿಂತ ವೇಗವಾಗಿ ಓಡಿದ್ದೆ. ಹೇಗಾದರೂ ಮಾಡಿ ಈ ಕ್ರೀಡಾ ಗ್ರಾಮದಲ್ಲಿ ಭಾಗಿಯಾಗಬೇಕು ಎಂದು ಆಸೆಪಟ್ಟು Gamemaker volunteer inductionಗೆ ಹೋಗಿದ್ದೆ. ಅಂದು ಜುಲೈ 26, ವೆಂಬ್ಲಿ ಕ್ರೀಡಾಂಗಣಕ್ಕೆ ತರಬೇತಿಗೆ ಹೋಗಬೇಕು ಎಂದು ಹೇಳಿದಾಗ ನನ್ನ ಶ್ರೀಮತಿ ಕೂಡ ಬಹಳ ಪ್ರೋತ್ಸಾಹದೊಂದಿಗೆ ನನ್ನನ್ನು ಕಳುಹಿಸಿದಳು. ನನ್ನ ಕ್ರೀಡಾಸಕ್ತಿಗೆ ಅವಳ ಸ್ಪೂರ್ತಿ ಮತ್ತಷ್ಟು ರಂಗೇರಿಸಿತು.

My memories of London Olympics 2012

ಸ್ವಯಂಸೇವಕರಿಗೆ ತರಬೇತಿ : ಪ್ರಪಂಚವೆ ಎದುರು ನೋಡುತ್ತಿರುವ ಇಂತಹ ಅತ್ಯುನ್ನತ ಕಾರ್ಯಕ್ರಮಗಳಲ್ಲಿ ಎನೆಲ್ಲಾ ಅನಾಹುತಗಳಾಗಬಹುದು ಎನ್ನುವುದರ ಬಗ್ಗೆ ಬೇರೆ ಬೇರೆ ಕ್ರೀಡಾಂಗಣದಲ್ಲಿ ಮಾಹಿತಿ ಕೊಟ್ಟಿದ್ದರು. ಈಗ ಮೂರು ದಿನದಲ್ಲಿ ಉನ್ನತ ಸೆಕ್ಯೂರಿಟಿ ಅಧಿಕಾರಿಗಳಿಂದ ಭಯೋತ್ಪಾದನೆಯಂತಹ ದುಷ್ಟಕೃತ್ಯಗಳಿಂದ ಆಗಬಹುದಾದ ತೊಂದರೆ ಮತ್ತು ಅದನ್ನು ನಿಭಾಯಿಸುವ ವಿಧಾನಗಳನ್ನು ಹೇಳಿಕೊಟ್ಟರು. ಮಾನಸಿಕವಾಗಿ ನಾವು ಎಷ್ಟು ಸದೃಢರಾಗಬೇಕು, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಹಂತ ಹಂತವಾಗಿ ಹೇಳಿಕೊಟ್ಟರು. ಇದರ ಜೊತೆಗೆ ಬೇರೆ ಬೇರೆ ನುರಿತವರಿಂದ ನಮಗೆ ತರಬೇತಿಗಳು ಶುರುವಾದವು. ಮುಖ್ಯವಾಗಿ ನೋಡಲು ಬರುವ ಜನರನ್ನು ಹೇಗೆ ನಿಯಂತ್ರಿಸಬೇಕು, ಕ್ರೀಡಾ ಉದ್ವೇಗದಲ್ಲಿ ಕೂಗಾಡುವಾಗ ಅನಾಹುತವಾದರೆ ಅದನ್ನು ಹೇಗೆ ಸರಿಪಡಿಸಬೇಕು, ಆಟಗಾರರು ಮತ್ತು ನೋಡುಗರ ಮಧ್ಯೆ ಯಾವರೀತಿ ಕಡಿವಾಣವನ್ನು ನಿಯಂತ್ರಿಸಬೇಕು, ಒಂದು ರೀತಿಯ ಮ್ಯಾನೇಜ್‌ಮೆಂಟ್ ತರಬೇತಿ ಕೊಟ್ಟರು.

ಆರ್ಕಿಟೆಕ್ಟ್ ಮುಗಿಸಿ ಬರೀ ನಿರ್ಜೀವ ವಸ್ತುಗಳ ಜೊತೆಗೆ ಇದ್ದ ನನ್ನ ಒಡನಾಟ ಈಗ ಬಹಳ ಸೆಂಟಿಮೆಂಟಲ್ ಒಡನಾಟ ಬೇರೆ ಜಗತ್ತನ್ನೆ ತೋರಿಸಿಕೊಟ್ಟಿತು. ಎಲ್ಲಾ ತರಬೇತಿ ಮುಗಿಸಿ ಮೊದಲ ದಿನದ ಬ್ಯಾಡ್ಮಿಂಟನ್ ಪಂದ್ಯಾವಳಿ ನಿಭಾಯಿಸುವ ಕೆಲಸಕ್ಕೆ ನಾನು ತಯಾರಾಬೇಕಿತ್ತು. ಹಾಗಾಗಿ ಉದ್ಘಾಟನೆ ಸಮಾರಂಭವನ್ನು ತಪ್ಪಿಸಿಕೊಂಡು ಚೆನ್ನಾಗಿ ನಿದ್ದೆ ಮಾಡಿ, ಬೆಳಗ್ಗೆ 4.30ಗೆ ಮನೆಯಿಂದ ಹೊರಟೆ. ಬೆಳಗಿನ 6.30ಕ್ಕೆ ಶುರುವಾಯಿತು ಮೊದಲ ದಿನದ ಬ್ಯಾಡ್ಮಿಂಟನ್ ಪಂದ್ಯ. ಪ್ರಪಂಚದ ಎಲ್ಲಾ ದಿಕ್ಕುಗಳಿಂದ ಬಂದಿದ್ದ ಜನರ ವೇಷಭೂಷಣ ಬಹಳ ವಿಚಿತ್ರ ಅನ್ನಿಸುತ್ತಿತ್ತು. ಬ್ಯಾಡ್ಮಿಂಟನ್ ಕ್ರೀಡೆ ಚೀನಾ ಮತ್ತು ಜಪಾನ್ ದೇಶದ ರಾಷ್ಟ್ರೀಯ ಕ್ರೀಡೆ ಎಂದು ನನಗೆ ಗೊತ್ತಾಗಿದ್ದೆ ಆಗ.

ಪ್ರಪಂಚದ ಬೇರೆ ಬೇರೆ ಜನರು ನನ್ನ ಹತ್ತಿರ ಬಂದು ಪರಿಚಯಿಸಿಕೊಂಡು, ನನ್ನ ಜೊತೆಗೆ ನಿಂತು ಫೋಟೊ ತೆಗೆಸಿಕೊಂಡು ಅವರು ಖುಷಿಪಡುತ್ತಿದ್ದರೆ, ನನಗೆ ಒಳಗೊಳಗೆ ಹೆಮ್ಮೆಯಾಗುತ್ತಿತ್ತು. ನಾನು ಕೂಡ ಸೆಲೆಬ್ರಿಟಿ ಆಗಿಬಿಟ್ಟೆ ಎಂದು ಖುಷಿಪಟ್ಟಿದ್ದು ಸತ್ಯ. ಮೂರನೇ ದಿನ ನನಗೆ ಒಲಿದ ಸೌಭಾಗ್ಯ ಎನ್ನಬೇಕು. ನಮ್ಮ ದೇಶದ ಉನ್ನತ ಕ್ರೀಡಾಪಟುಗಳ ಭೇಟಿ. ಗೋಪಿಚಂದ್, ಜ್ವಾಲ, ಕಶ್ಯಪ್ ಹಾಗು ಸೈನಾ ಇವರನ್ನೆಲ್ಲ ಇಷ್ಟು ಹತ್ತಿರದಿಂದ ನೋಡಿ, ಮಾತನಾಡಿಸಿ, ಆಟಕ್ಕು ಮೊದಲು ಅವರಿಗೆ ಶುಭ ಹಾರೈಸಿದ್ದು ಯಾವತ್ತೂ ಮರಯಲಾದ ಘಟನೆ. ನಮ್ಮ ಕಶ್ಯಪ್ ಶ್ರೀಲಂಕಾದ ನಿಲುಕನನ್ನ ಸೋಲಿಸಿ ಕ್ವಾರ್ಟರ್ ಫ಼ೈನಲ್‌ಗೆ ಹೋದಾಗ ಸಂತೋಷಕ್ಕೆ ಕಣ್ಣಂಚಲ್ಲಿ ನೀರು ಜಾರಿದ್ದು ಮರೆತಿಲ್ಲ.

ವೆಂಬ್ಲಿ ಕ್ರಿಡಾಂಗಣದಲ್ಲಿ ಮಹಿಳೆಯರ ಫ಼ುಟ್ಬಾಲ್ ಪಂದ್ಯವಿದೆ ಎಂದು ತಿಳಿದಾಗ ಹೋಗಲು ಮನಸ್ಸಿರಲಿಲ್ಲ, ಹೋಗಲು ಅವಕಾಶವಿದೆ ಎಂದು ಗ್ರೇಟ್ ಬ್ರಿಟನ್ ಮತ್ತು ಬ್ರಜಿಲ್ ನಡುವಿನ ಪಂದ್ಯಕ್ಕೆ ಹೋದರೆ ಎಲ್ಲೆಲ್ಲೂ ಹಳದಿ ಬಾವುಟಗಳೆ ಹಾರಾಡುತ್ತಿದ್ದವು. ಮರುದಿನ ಕೋರಿಯ ಮತ್ತು ಗ್ಯಾಬೊನ್ ಪಂದ್ಯ. ವಿಚಿತ್ರವಾಗಿ ವೇಷಭೂಷಣ ತೊಡುವುದರಲ್ಲಿ ಕೊರಿಯನ್ನರು ನಿಪುಣರು ಎಂದು ತಿಳಿದದ್ದು ಕೂಡ ಅವತ್ತೆ. ಆಗಸ್ಟ್ 2ಕ್ಕೆ, ಸ್ವಯಂಸೇವಕರಿಗೆ ಉಚಿತವಾಗಿ ಮತ್ತೆ ಬಾಡ್ಮಿಂಟನ್ ಪಂದ್ಯ ನೋಡುವ ಅವಕಾಶ. ಅಲ್ಲಿ ನಮ್ಮ ಸೈನಾ ಡೆನ್ಮಾರ್ಕ್ ನ ಟೀನ ಅವರನ್ನು ಉತ್ತಮ ಹೊಡೆತಗಳಿಂದ ಬೀಳಿಸಿದ್ದರು. ಪಂದ್ಯವನ್ನು ಗೆದ್ದ ಖುಷಿಯಲ್ಲಿ ಚೀರಾಡುತ್ತಿದ್ದಾಗ ಪಕ್ಕದಲ್ಲಿ ಅಕಿಲೇಶ್ ದಾಸ್ ಗುಪ್ತಾ ಇದ್ರು. ಅವರು ಯಾರು ಎನ್ನುವುದೆ ಅಗ ಗೊತ್ತಿರಲಿಲ್ಲ. ಎಲ್ಲಾ ಕ್ರೀಡಾಪಟುಗಳ ಜೊತೆಗೆ ಸುಮಾರು ಹತ್ತು ಪಂದ್ಯಗಳನ್ನು ನೋಡಿದೆ ಹಾಗು ಇಪ್ಪತ್ತು ಆಟಗಾರರ ಸಹಿಗಳನ್ನು ಪಡೆದುಕೊಂಡೆ.

ವಿಂಬಲ್ಡನ್‌ಗೂ ಹೋಗಿಬಂದೆ : ಆಗಸ್ಟ್ 3ಕ್ಕೆ ವಿಂಬಲ್ಡನ್‌ಗೆ ಹೋಗಿದ್ದು ಜೀವನದ ಮರೆಯಲಾಗದ ದಿನ. ಒಂದೆ ಟಿಕೆಟ್‌ಗೆ ನಾಲ್ಕು ಪಂದ್ಯ ನೋಡುವ ಅವಕಾಶ, ಯಾರಿಗುಂಟು ಯಾರಿಗಿಲ್ಲ! ಫ಼ೆಡರರ್ ಮತ್ತು ಡೆಲ್ ಪೋರ್ಟೊ ಪಂದ್ಯವನ್ನು ಬಣ್ಣಿಸಲು ಆಗುತ್ತಿಲ್ಲ, ನೋಡೆ ತೀರಿಸಿಕೊಳ್ಳಬೇಕು. ನಂತರ ಊಟ ಮುಗಿಸಿ ಬರುವುದರೊಳಗೆ ಸೆರೆನಾ ಎಂಬ ಹದ್ದು ಅಜ಼ರೆಂಕ ಎಂಬ ಗುಬಚ್ಚಿಯನ್ನು ಚಚ್ಚಿಹಾಕಿದ್ದಳು. ಮುರ್ರೆ ಕೂಡ ಜೊಕೊವಿಕ್ ನನ್ನು ಚೆಂಡಾಡಿದ್ದ. ನಂತರ ಬಂದಿದ್ದೆ ನಮ್ಮ ಮೆಚ್ಚಿನ ಜೋಡಿ. ಲಿಯಾಂಡರ್ ಪೇಸ್ ಮತ್ತು ಸಾನಿಯಾ ಮಿರ್ಜಾ ಇವರ ಎದುರಿಗೆ ಇದಿದ್ದು ಅಜ಼ರೆಂಕ ಮತ್ತು ಮೈರ್ನೈ. ನನ್ನ ಪಕ್ಕದಲ್ಲೆ ಆಂಧ್ರದ ಕ್ರೀಡಾ ಮಂತ್ರಿ ಕೂತಿದ್ದರು, ಹತ್ತಿರದಲ್ಲೆ ಸಾನಿಯಾರ ತಾಯಿ. ನಮ್ಮೆಲ್ಲರ ಆಸೆಗೆ ಮತ್ತು ಪ್ರಾರ್ಥನೆಗೆ ವಿರುದ್ದವಾಗಿ ನಮ್ಮ ದೇಶದ ಜೋಡಿ ಸೋತಿತ್ತು. ಭಾರದ ಮನಸ್ಸಿನಿಂದ ಲಿಯಾಂಡರ್‌ನ ಆಟೋಗ್ರಾಫ್ ತೆಗೆದುಕೊಂಡು ಮನೆಯಕಡೆ ಹೊರಟೆ.

ಆಗಸ್ಟ್ 4ಕ್ಕೆ ಮತ್ತೊಮ್ಮೆ ಫ಼ುಟ್ಬಾಲ್. ಈ ಸಾರಿ ಬಹಳ ಚಿರಾಟ. ಮೆಕ್ಸಿಕೋದವರ ಫ಼ುಟ್ಬಾಲ್ ಕ್ರೇಜ಼್ ನೋಡಿ ದಂಗಾದೆ, ಅವರೊಡನೆ ಸೇರಿ ನಾನೂ ಕೂಡ ಮೆಕ್ಸಿಕೊಗೆ ಪ್ರೋತ್ಸಾಹಿಸಿದೆ. ಅವರು ಪಂದ್ಯ ಗೆದ್ದು ಚಿನ್ನವನ್ನು ಕೊರಳಿಗಿರಿಸಿದಾಗ ನಾನೆ ಗೆದ್ದಷ್ಟು ಖುಶಿಯಾಗಿದ್ದೆ. ಆಗಸ್ಟ್ 5ನೇ ತಾರೀಕು ಬ್ಯಾಡ್ಮಿಂಟನ್ ನ ಚಿನ್ನದ ವಿಜೇತೆ ಲ್ಯಾನ್ ಡೆನ್ ನ ಹೆಗಲ ಮೇಲೆ ಕೈ ಹಾಕಿ ತೆಗೆಸಿಕೊಂಡ ಫೋಟೊ ಮತ್ತು ಪಡೆದುಕೊಂಡ ಆಟೋಗ್ರಾಫ್ ಮರೆಯಲಾದರದ ಅನುಭವ. ಅದೇ ದಿನ ಉಸೈನ್ ಬೋಲ್ಟ್ ಓಟವನು ವಿಶಾಲ ಪರದೆಯ ಮೇಲೆ ನೋಡಿ ಮುಂದಿನ ರಿಲೆಗೆ ಟಿಕೆಟ್ ಗೆ ಪ್ರಯತ್ನಿಸಿದೆ. ಅದರ ಫಲವಾಗಿ ನನ್ನ ಪತ್ನಿ ರಂಜಿತಾಗೆ ಆಗಸ್ಟ್ 11ಕ್ಕೆ 4 * 100 ಮೀ ರೆಲೆಯ ವರ್ಲ್ಡ್ ರೆಕಾರ್ಡ್ ಸ್ಪರ್ಧೆ ನೋಡುವ ಅವಕಾಶ ಸಿಕ್ಕಿತು.

ಇಟಲಿ ಹುಡುಗಿ ನನಗೆ ಬ್ಯಾಡ್ಜ್ ಮರಳಿಸುವಾಗ ಅವಳ ಕಂಚಿನ ಪದಕವನ್ನು ಮುಟ್ಟಿ ಏನೋ ಒಂದು ಖುಷಿಯನ್ನು ಅನುಭವಿಸಿದೆ. ಅಮೆರಿಕಾ ಮತ್ತು ಜಪಾನ್ ನ ಪಂದ್ಯ ಮುಗಿಸಿ ನನ್ನ ಕೊನೆಯ ದಿನವನ್ನು ಮುಗಿಸಿದೆ. ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸಂತಸ ಒಂದೆಡೆಯಾದರೆ, ಕೆಲಸ ಇವತ್ತಿಗೆ ಮುಗಿಯಿತಲ್ಲ ಎನ್ನುವ ಭಾರವಾದ ಮನಸ್ಸು ಇನ್ನೊಂದೆಡೆ. ಪ್ರತಿಯೊಂದು ಕೊನೆಯಲ್ಲಿ ಮತ್ತೊಂದು ಶುರುವಿದೆ ಎನ್ನುವಂತೆ ಶುರುವಾಗಿದ್ದು ಪ್ಯಾರಒಲಂಪಿಕ್ಸ್. ಎಲ್ಲೆಲ್ಲಿ ನೋಡಿದರು ಜನ ಜಾತ್ರೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿದ ಕ್ರೀಡಾಭಿಮಾನಿಗಳು ಗಲ್ಲಿಗಲ್ಲಿಗಳಲ್ಲಿ ಕಾಣಸಿಗುತ್ತಿದ್ದರು.

ನಮ್ಮ ದೇಶದ ಮೆಚ್ಚಿನ ಕನ್ನಡದ ಕುವರ ಗಿರೀಶ್ (ಇದೀಗ ತಾನೆ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದ ಸುದ್ದಿ ಪ್ರಕಟವಾಗಿದೆ) ಸ್ವಲ್ಪದರಲ್ಲೆ ಚಿನ್ನ ವಂಚಿತನಾಗಿ, ದೇಶಕ್ಕಾಗಿ ಬೆಳ್ಳಿ ಗೆದ್ದಾಗ ನಾವೆಲ್ಲ ಹುಚ್ಚೆದ್ದು ಕುಣಿದೆವು. ಗಿರೀಶ್ ಮತ್ತು ಅವರ ಕೋಚ್ ಸತ್ಯನಾರಾಯಣರನ್ನು ಹುಡುಕಿ ರೀಡಿಂಗ್ ಗೆ ಕರೆತಂದು ನಮ್ಮ ಕನ್ನಡಿಗರು ಯುಕೆ ವತಿಯಿಂದ ಸನ್ಮಾನ ಮಾಡಿದ್ದು ನಮಗೆ ಹೆಮ್ಮೆ ಅನ್ನಿಸಿತು ಮತ್ತು ಆ ಕ್ಷಣಗಳು ಅವಿಸ್ಮರಣೀಯ.

English summary
Kannadiga Shashikanth from London shares is unforgettable experience of participating in London Olympics 2012 as volunteer. He says, the opportunity to meet the Indian sports people from close up distance was one of the finest moments of his life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X