ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂದಾರ - ನ್ಯೂ ಇಂಗ್ಲೆಂಡ್ ಕನ್ನಡ ಕೂಟಕ್ಕೆ ನಲವತ್ತರ ಸಂಭ್ರಮ!

By ಮಧುಸೂದನ್ ಅಕ್ಕಿಹೆಬ್ಬಾಳ್
|
Google Oneindia Kannada News

Mandara - New England Kannada Koota
ಸಾಗರದಾಚೆ ಕನ್ನಡ ಶಬ್ದ ಕೇಳಿದರೇನೆ ಮೈ ಝುಂ ಅನ್ನಿಸುತ್ತೆ! ಇನ್ನು ಒಂದು ಕನ್ನಡ ಕೂಟ ಇದ್ದು, ಅದರ ಸದಸ್ಯರು ವರ್ಷಕ್ಕೆ ಹಲವು ಬಾರಿ ಜೊತೆಗೂಡಿ, ನಮ್ಮ ನಾಡು, ಸಂಸ್ಕೃತಿಯ ಗಂಧ ಹಂಚಿದರೆ, ಆಹಾ, ಅದೇನು ಮಜಾ? ಅಮೆರಿಕಾದ ಮ್ಯಾಸಚುಸೆಟ್ಸ್ ರಾಜ್ಯದ ಬೋಸ್ಟನ್ ಪ್ರದೇಶದಲ್ಲಿ ಮಂದಾರ ಕನ್ನಡ ಕೂಟ ಸ್ಥಾಪಿಸಿ, ಒಂದಲ್ಲ, ಎರಡಲ್ಲ, ನಲವತ್ತು ವರ್ಷಗಳು ಸಂದಿವೆ. ನ್ಯೂ ಇಂಗ್ಲೆಂಡ್ ಕನ್ನಡಿಗರ ಆಶೋತ್ತರಗಳಿಗೆ ಒತ್ತು ಕೊಟ್ಟು ಒಂದು ಹೆಮ್ಮರವಾಗಿ ಬೆಳೆದಿದೆ ಈ ನ್ಯೂ ಇಂಗ್ಲೆಂಡ್ ಕನ್ನಡ ಕೂಟ.

ದೂರದ ನಾಡಿನಲ್ಲಿ ಕನ್ನಡಿಗರನ್ನು ಸಂಘಟಿಸುವುದು ಸುಲಭದ ಮಾತಲ್ಲ. ಇಂದಿನ ಯುಗದಲ್ಲಿ ಇಂಟರ್ನೆಟ್, ಇ-ಮೇಲ್, ಫೇಸ್ ಬುಕ್ ಅಂತಹ ಅನೇಕ ಮಾಧ್ಯಮಗಳ ಮೂಲಕ ಜನರನ್ನು ಸುಲಭವಾಗಿ ತಲುಪಬಹುದು. ಆದರೆ ನಲವತ್ತು ವರ್ಷಗಳ ಕೆಳಗೆ, ಈ ಕೆಲಸ ಅಷ್ಟು ಸುಲಭವಾಗಿರಲಿಕ್ಕಿಲ್ಲ. ಎಷ್ಟೋ ಸಮಿತಿಗಳ, ಕಾರ್ಯಕರ್ತರ ಕನಸು ಹಾಗು ಶ್ರಮದಿಂದ ಈ ಕನ್ನಡ ಕೂಟ 4 ದಶಕಗಳನ್ನು ಕಂಡಿದೆ. ನಮ್ಮ ನಾಡಿನಿಂದ ದೂರ ಬಂದಿದ್ದರೂ, ನಮ್ಮಲ್ಲಿ ತುಡಿಯುವ ಆ ಭಾಷಾ ಪ್ರೇಮ, ನಮ್ಮ ಸಂಸ್ಕೃತಿ, ನಮ್ಮತನದ ಬಗ್ಗೆ ಒಂದು ಸೆಳೆತ - ಇವೆಲ್ಲಾ, ನ್ಯೂ ಇಂಗ್ಲೆಂಡ್ ಕನ್ನಡ ಕೂಟವನ್ನು ಒಂದು ದೊಡ್ಡ ಸಂಸ್ಥೆಯಾಗಿ ಬೆಳೆಸಿದೆ.

ಇದೇ ಅಕ್ಟೋಬರ್ 6 ಮತ್ತು 7ರಂದು ಮಾರ್ಲ್ಬರೋ ನಗರದಲ್ಲಿ ಏರ್ಪಾಡು ಮಾಡಿರೋ ರತ್ನ ಮಹೋತ್ಸವ ಒಂದು ಅದ್ದೂರಿ ಮೇಳ. "ನಮ್ಮ ರತ್ನ ಮಹೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ತಯಾರಿಗಳು ಭರದಿಂದ ನಡೆದಿವೆ. ಕಳೆದ ಹಲವು ತಿಂಗಳಿಂದ, ಬಹಳಷ್ಟು ಕಾರ್ಯಕರ್ತರು ಸಿದ್ಧತೆಯಲ್ಲಿ ಭಾಗವಹಿಸಿದ್ದಾರೆ. ಹಾಗೆ ನಮ್ಮ ಪ್ರಾಯೋಜಕರು ಕೂಡ ಈ ಸಮಾರಂಭಕ್ಕೆ ಬೆಂಬಲ ಕೊಟ್ಟಿದ್ದಾರೆ. ಅಮೆರಿಕ ಹಾಗೂ ಭಾರತದಿಂದ ಹಲವು ಕಲಾವಿದರು, ಕವಿಗಳು, ಪ್ರತಿಷ್ಠಿತ ವ್ಯಕ್ತಿಗಳು ಆಗಮಿಸಿ ಭಾಗವಹಿಸಲಿದ್ದಾರೆ. ನಮ್ಮ ಶ್ರೀಮಂತ ಕನ್ನಡ ಸಂಸ್ಕೃತಿಯ ಭಾಗವಾದ ನೃತ್ಯ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಯಕ್ಷಗಾನ, ಜಾದೂಗಾರಿಕೆ ಇಂತಹ ಹಲವು ಕಾರ್ಯಕ್ರಮಗಳನ್ನೂ ಆಯೋಜಿಸಿದ್ದೇವೆ. ಇದರ ಜೊತೆಗೆ ಕನ್ನಡಿಗರ ನೆಚ್ಚಿನ ಸಿಹಿ ತಿನಿಸುಗಳೊಡನೆ ಕರ್ನಾಟಕದ ರುಚಿಕರ ಊಟವೂ ತಯಾರಿರುತ್ತದೆ!" ಎನ್ನುತ್ತಾರೆ ಮಂದಾರ ಕನ್ನಡ ಕೂಟದ ಅಧ್ಯಕ್ಷ ಪ್ರವೀಣ ನಡುತೋಟ ಅವರು.

ವೈವಿಧ್ಯಮಯ ಕಾರ್ಯಕ್ರಮಗಳು : ಬಿ.ಆರ್. ಛಾಯಾ ಮತ್ತು ರಾಮ ಪ್ರಸಾದ್ ಅವರ ಚಿತ್ರಗೀತೆಗಳು, ಸುನೀತಾ ಹಾಗು ಅನಿತಾ ಅನಂತಸ್ವಾಮಿ ಅವರ ಸುಗಮ ಸಂಗೀತ, "ಯಕ್ಷ ಮಂಜೂಷ" ತಂಡದಿಂದ ಯಕ್ಷಗಾನ, ಸುಧಾ ಬರಗೂರ್ ಅವರ ಹಾಸ್ಯ ರಂಜನೆ, ಸಾಹಿತಿ ಭುವನೇಶ್ವರಿ ಹೆಗಡೆ ಅವರ ಜೊತೆ ಸಂವಾದ, ಅರುಣ್ ರಾಮಮೂರ್ತಿ (ಪಿಟೀಲು) ಹಾಗು ಇಂದ್ರಜಿತ್ ರಾಯ್ (ಸಿತಾರ್) ಅವರ ಜುಗಲಬಂದಿ, 'ಕರ್ನಾಟಕ ಸೌರಭ' ರಸಪ್ರಶ್ನೆ ಕಾರ್ಯಕ್ರಮ, ಫ್ಯಾಶನ್ ಷೋ, ನಾಟಕಗಳು, ಸ್ಥಳೀಯ ಸಂಗೀತ ಶಾಲೆಯ ಮಕ್ಕಳಿಂದ ಸಂಗೀತ, ನೃತ್ಯ ಪ್ರದರ್ಶನ, ರಂಗೋಲಿ ಸ್ಪರ್ಧೆ, ಗಮಕ ವಾಚನ, ಒಡಿಸ್ಸಿ ನೃತ್ಯ - ಹೀಗೆ, ಹತ್ತು ಹಲವಾರು ವರ್ಣರಂಜಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭಕ್ಕೆ, ಸ್ಥಳೀಯರೇ ಸೇರಿ ಸಿದ್ಧಪಡಿಸಿದ 'ರತ್ನ ಮಹೋತ್ಸವ ಸಂಕೇತ ಗೀತೆ' ಕೂಡ ಪ್ರಸ್ತುತಗೊಳ್ಳಲಿದೆ.

ಈ ಸಮಾರಂಭದಲ್ಲಿ "ದೀವಿಗೆ" ಎಂಬ ವಿಶಿಷ್ಟ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಈ ಸ್ಮರಣ ಸಂಚಿಕೆಯಲ್ಲಿ ಪ್ರಣಯರಾಜ ಶ್ರೀನಾಥ್ ಅವರೊಡನೆ ಸಂದರ್ಶನ, ಸಾಹಿತಿ ಜಯಂತ್ ಕಾಯ್ಕಿಣಿ ಅವರ ಲೇಖನ ಮತ್ತು ಕವನ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರರೇ ಆಯ್ದು ಕೊಟ್ಟಂಥ ಕವನ, ಉದ್ಯಮಿಗಳಾದ ಜಯಶ್ರೀ ಹಾಗೂ ಗುರುರಾಜ್ ದೇಶಪಾಂಡೆ ಅವರೊಂದಿಗೆ ಸಂವಾದ, ಗಾಯಕ ಗಣೇಶ ದೇಸಾಯಿ, ನೃತ್ಯಗಾರ್ತಿ ನಮಿತ ದೇಸಾಯಿ, ಹಾಗು ಹಾಸ್ಯ ಲೇಖಕ ಎಚ್. ಡುಂಡಿರಾಜ್ ಅವರ ಶುಭಾಶಯ ಸಂದೇಶ - ಇವುಗಳು, ಮತ್ತು ಹಲವಾರು ವಿಷಯಗಳ ಬಗ್ಗೆ ಲೇಖನ ಹೊತ್ತ ಸ್ಮರಣ ಸಂಚಿಕೆ ಬಿಡುಗಡೆಯಾಗುವುದು ಒಂದು ವಿಶೇಷ.

ಒಟ್ಟಿನಲ್ಲಿ, ನಲವತ್ತರ ಹರಯದಲ್ಲೂ ಮಂದಾರ ಕನ್ನಡದ ಕಂಪನ್ನು ಇನ್ನೂ ಹೆಚ್ಚಾಗಿ ಹರಡಲು ಸಜ್ಜುಗೊಂಡಿದೆ. ಇದೇ ವರ್ಷ ಲಾಭರಹಿತ ಸಂಸ್ಥೆ ಎಂದು ಗುರುತಿಸಲ್ಪಟ್ಟ ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟ, ಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಕನ್ನಡ-ಸಂಸ್ಕೃತಿ ಪರವಾದ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ. ನ್ಯೂ ಇಂಗ್ಲೆಂಡ್ ನಲ್ಲಿ ಅವಿರತ ಕನ್ನಡ ಸೇವೆಗೆ ಬುನಾದಿ ಹಾಕಲಿದೆ ಈ ವಾರಾಂತ್ಯದ ನಾಡ ಹಬ್ಬ - ಪ್ರತಿಭೆಯ ಉತ್ಸವ, ರತ್ನ ಮಹೋತ್ಸವ! ಕಾರ್ಯಕ್ರಮಗಳು ನಡೆಯುವ ಸ್ಥಳ : Charles Whitcomb School, 25 Union Street, Marlborough MA 01752.

English summary
Mandara - New England Kannada Koota has completed 40 years in America. On this occasion 'Ratna Mahotsava' celebrations have been organzed on October 6th and 7th, 2012. Two day celebrations will be at Charles Whitcomb School, 25 Union Street, Marlborough MA 01752.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X