ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಭ್ರಮದ 40ನೇ ಹುಟ್ಟುಹಬ್ಬ ಆಚರಿಸಿದ 'ಮಂದಾರ'

By ವೈಶಾಲಿ ಹೆಗಡೆ
|
Google Oneindia Kannada News

ಬೋಸ್ಟನ್ ನಗರದ "ಮಂದಾರ - ನ್ಯೂ ಇಂಗ್ಲೆಂಡ್ ಕನ್ನಡ ಕೂಟ" ಇದೇ ಕಳೆದ ಅಕ್ಟೋಬರ್ 6, 7ರಂದು ತನ್ನ 40ನೇ ವರ್ಷದ ರತ್ನ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಿತು. ಕರ್ನಾಟಕದಿಂದ ಆಗಮಿಸಿದ್ದ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ, ಮಾತುಗಾರ್ತಿ ಸುಧಾ ಬರಗೂರು ಮತ್ತು ಹಾಡುಗಾರ್ತಿ ಬಿ.ಆರ್. ಛಾಯಾ ಅವರು ಉತ್ಸವಕ್ಕೆ ಹೊಸ ಮೆರುಗನ್ನು ನೀಡಿದರು.

ಅಮೆರಿಕೆಗೆ ವಲಸೆ ಬಂದ ಕನ್ನಡಿಗರು ತಮ್ಮ ಮಾತೃಭೂಮಿ, ಮಾತೃಭಾಷೆಯ ಜತೆಗಿನ ನಂಟನ್ನು ಬಲಪಡಿಸಲೆಂದು ನಾಲ್ಕು ದಶಕಗಳ ಹಿಂದೆ ಕಟ್ಟಿದ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದ ಕನ್ನಡದ ಹಾಸ್ಯ ಲೇಖಕಿ, ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಭುವನೇಶ್ವರಿ ಹೆಗಡೆಯವರು ದೀಪ ಬೆಳಗಿಸಿ ಉತ್ಸವವನ್ನು ಉದ್ಘಾಟಿಸಿದರು. ಭಾರತದಲ್ಲಿ ಅರ್ಥವ್ಯವಸ್ಥೆಗೆ ಹೊಸ ವ್ಯಾಖ್ಯೆ ನೀಡಿದ ಇಂದಿನ ಹೊಸ ಪೀಳಿಗೆಯ ಜಾಗತಿಕ ಕನ್ನಡಿಗರನ್ನು ಅಭಿನಂದಿಸಿ, ಅವರಲ್ಲಿರುವ ಕನ್ನಡ ಪ್ರೀತಿಯ ಚಿಲುಮೆ ಬತ್ತದಿರಲಿ ಎಂದು ಹಾರೈಸಿದರು.

ಇಲ್ಲಿನ ಕನ್ನಡಿಗರೆಲ್ಲ ಸೇರಿ ಹೊರತಂದ ಸ್ಮರಣ ಸಂಚಿಕೆ "ದೀವಿಗೆ"ಯನ್ನು ಬಿಡುಗಡೆಗೊಳಿಸಿ, ಅಮೆರಿಕನ್ನಡಿಗರ ಕನ್ನಡಾಭಿಮಾನವನ್ನು ಕಂಡು ಮೂಕಳಾಗಿದ್ದೇನೆ ಎಂದು ಭುವನೇಶ್ವರಿ ಹೆಗಡೆಯವರು ನುಡಿದರು. ಪ್ರೇಕ್ಷಕರ ಜತೆಗಿನ ಸಂವಾದದಲ್ಲಿ ಪಾಲ್ಗೊಂಡ ಅವರು ಅಮೆರಿಕನ್ನಡಿಗ ಮಹಿಳೆಯರು ತಮ್ಮ ಕ್ರಿಯಾಶೀಲತೆಯನ್ನು ಜತನದಿಂದ ಉಳಿಸಿ ಬೆಳೆಸಿಕೊಂಡಿರುವುದನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಎರಡು ದಿನ ಬೋಸ್ಟನ್ ಸಮೀಪದ ಮಾರ್ಲ್ಬರೋದಲ್ಲಿನ ವ್ಹಿಟ್ ಕಾಂಬ್ ಮಾಧ್ಯಮಿಕ ಶಾಲೆಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಆಗಮಿಸಿದ ಬಿ.ಆರ್. ಛಾಯಾ ಅವರ ತಂಡದ ಚಿತ್ರಮಂಜರಿ, ಸುಧಾ ಬರಗೂರರ ಹರಟೆ-ಹಾಸ್ಯ, ವಿದ್ಯಾಕೊಲ್ಯೂರು ಅವರ ಯಕ್ಷಮಂಜೂಶ ತಂಡದವರಿಂದ ಶ್ರೀಕೃಷ್ಣ ಪಾರಿಜಾತ- ನರಕಾಸುರ ವಧೆ ಯಕ್ಷಗಾನ ರಂಗೇರಿಸಿದ್ದಲ್ಲದೆ, ಅಮೆರಿಕಯಲ್ಲಿ ನೆಲೆಸಿರುವ ಸುನೀತಾ ಮತ್ತು ಅನೀತಾ ಅನಂತಸ್ವಾಮಿಯವರ ಭಾವಲೋಕ ಸುಗಮ ಸಂಗೀತ ಮನ ಮುದಗೊಳಿಸಿತು.

ಮಲ್ಲಿ ಸಣ್ಣಪ್ಪನವರ್ ತಂಡದ ನಾಟಕ, ಉಪಾಸನ ಒಡಿಸ್ಸಿ ತಂಡದವರ ನೃತ್ಯ, ಅರುಣ್, ಇಂದ್ರಜಿತ್ ರವರ ಕರ್ಣಾನಂದಕರ ವಯೊಲಿನ್-ಸಿತಾರ್ ಜುಗಲ್ ಬಂದಿ ಕಳೆಕಟ್ಟಿದವು. ಇವಲ್ಲದೆ ಮಂದಾರದ ಸದಸ್ಯರೇ ನಡೆಸಿಕೊಟ್ಟ ಭರತನಾಟ್ಯ, ನಾಟಕ, ಫ್ಯಾಶನ್ ಶೋ, ಮಂದಾರದ ಮಕ್ಕಳಿಂದ ಉದ್ಘಾಟನ ಸಂಗೀತ, ಸಮಿತಿ ಸದಸ್ಯರ ಮಂದಾರ ಸಂಕೇತ ಗೀತೆ, ಯುವ ಕನ್ನಡ ಸದಸ್ಯರ ಸಂಗೀತ ಕಚೇರಿ, ಕರ್ನಾಟಕ ಸೌರಭ ಕ್ವಿಜ್ ಕಾರ್ಯಕ್ರಮ ಎಲ್ಲವೂ ಮನರಂಜನೆಯ ಜೊತೆಗೆ ಸಾಂಸ್ಕೃತಿಕ ವೈವಿಧ್ಯತೆಗೆ ಮೆರಗು ನೀಡಿದವು.

ಸತತ ಎರಡು ದಿನಗಳ ಹಬ್ಬದ ವಾತವರಣದಲ್ಲಿ ಊಟೋಪಚಾರವೂ ಹಬ್ಬದಂತೆಯೇ ಇದ್ದು, ಚಿರೋಟಿ, ಕಡುಬು, ಬೂಂದಿ ಲಾಡು, ಬೀಟ್ರೂಟ್ ಹಲ್ವ, ಶ್ಯಾವಿಗೆ ಪಾಯಸ, ಹೋಳಿಗೆಗಳೊಂದಿಗೆ ಸಕಲ ಬಗೆಯ ಮೃಷ್ಟಾನ್ನ ಭೋಜನವಿತ್ತು. ಮಲ್ಲಿಗೆ ಹೂವಿನ ಮಾಲೆ, ಮಾವಿನೆಲೆ ತೋರಣ, ಬಾಳೆಕದಿರಿನ ಅಲಂಕಾರದ ಆದರಾತಿಥ್ಯದ ಉತ್ಸವ ಸಕಲ ಸಂಭ್ರಮದೊಂದಿಗೆ, ಎಲ್ಲರ ಮೆಚ್ಚುಗೆಯೊಂದಿಗೆ ಪೂರ್ಣಗೊಂಡಿತ್ತು.

English summary
Mandara - New England Kannada Koota completed 40 years in America. On this occation Mandara had organized grand celebration party in Boston on October 6 and 7, 2012. Bhuvaneshwari Hegde, Sudha Baragur, BR Chaya participated in the mega event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X