ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಉಗ್ರರಿಂದ ಸಾಧು ಕೋಕಿಲಾ ಅಪಹರಣ!

By ಶ್ರೀನಿವಾಸ ಮಹೇಂದ್ರಕರ್
|
Google Oneindia Kannada News

ಬಿಸಿ ಬಿಸಿ ಸುದ್ದಿ. ಚಿತ್ರೀಕರಣಕ್ಕಾಗಿ ಪಾಕಿಸ್ತಾನಕ್ಕೆ ಹೋಗಿದ್ದ ರಂಗಾಯಣ ರಘು ಮತ್ತು ಸಾಧು ಕೋಕಿಲ ಅವರನ್ನು ಪಾಕಿಸ್ತಾನದ ಭಯೋತ್ಪಾದಕರು ಅಪಹರಿಸಿದ್ದರಂತೆ. ಅವರನ್ನ ಮರಳಿ ಕನ್ನಡನಾಡಿಗೆ, ಅಲ್ಲಲ್ಲ ಆಂಗ್ಲ ನಾಡಿಗೆ(ಲಂಡನ್ ನಗರಕ್ಕೆ) ಕರೆತರಲು ಕಲಾ ನಿರ್ದೇಶಕ ಅರುಣ್ ಸಾಗರ್ ಅವರು ಕೂಡ ಪಾಕಿಸ್ತಾನಕ್ಕೆ ಹೋಗಿದ್ದರಂತೆ! ಈ ಸುದ್ದಿ ಕೇಳಿದರೆ ನೀವು ಬೆಚ್ಚಿ ಬೀಳುವುದು ನಿಶ್ಚಿತ.

ಹೀಗಂತ ಹೇಳಿದ್ದು ನಾನಲ್ಲ ಸ್ವಾಮೀ ಸ್ವತಃ ಅರುಣ್ ಸಾಗರ್. ಅದೂ ರಂಗಾಯಣ ರಘು ಮತ್ತು ಸಾಧು ಕೋಕಿಲ ಅವರ ಸಮ್ಮುಖದಲ್ಲೇ ಹೇಳಿದ್ದು. ಲಂಡನ್ ನಗರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಿಗರುಯುಕೆ ಆಯೋಜಿಸಿದ್ದ 'ನಗೆ ಹಬ್ಬ' ಕಾರ್ಯಕ್ರಮದಲ್ಲಿ ನಗೆಯ ಹೊಳೆ ಹರಿಸಲೆಂದೇ ಅರುಣ್ ಸಾಗರ್ ಆವರು ಈ ಹಾಸ್ಯ ದಿಗ್ಗಜರ ಅಪಹರಣದ ಕಥಾನಕವನ್ನು ಹೇಳಿದ್ದು. ಅಬ್ಬಬ್ಬ ಅರುಣ್ ಸಾಗರ್ ಅವರ ಅತಿ ವಿಶಿಷ್ಟವಾದ ಪ್ರಹಸನ ಶೈಲಿ ನೆರೆದಿದ್ದ ನಾನ್ನೂರೈವತ್ತಕ್ಕೂ ಹೆಚ್ಚು ಕನ್ನಡಿಗರ ಹೊಟ್ಟೆ ಹುಣ್ಣಾಗಿಸಿತು.

Kannadigaru UK Kannada Rajyotsava 2012

ನವೆಂಬರ್ 17 2012ರ ಶನಿವಾರ, ಯುಕೆನಲ್ಲಿ ನೆಲೆಯೂರಿರುವ ಕನ್ನಡಿಗರಿಗೆ ಸುಯೋಗದ ದಿನ. ತಾಯ್ನಾಡಿನಲ್ಲಿ ಮನೆಮಾತಾಗಿರುವ ಮೂವರು ಹಾಸ್ಯ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ನೋಡುವ ಕಾತರದಿಂದ ನಾವೆಲ್ಲಾ ಸರಿಯಾಗಿ ಮಧ್ಯಾಹ್ನ 2 ಘಂಟೆಗೆ, ಲಂಡನ್ ಹ್ಯಾರೋ ನಗರದ ಹ್ಯಾಚ್ ಎಂಡ್ ಪ್ರೌಢ ಶಾಲೆಯನ್ನು ಸೇರಿದೆವು. ಸ್ಥಳೀಯ ಪ್ರತಿಭೆಗಳ ಆಗರವೇ ಆಗಿರುವ ಕನ್ನಡಿಗರು ಯುಕೆ ತಂಡ, ಪ್ರಬುದ್ಧ ತಯಾರಿಯೊಂದಿಗೆ, ಯುನೈಟೆಡ್ ಲ್ಯಾಂಡ್ ಬ್ಯಾಂಕ್ ರಿಯಲ್ಟಿ ಪ್ರಾಯೋಜಿಸಿದ ನಗೆ ಹಬ್ಬಕ್ಕೆ ನಮ್ಮನ್ನು ಸ್ವಾಗತಿಸಲು ಸಜ್ಜಾಗಿತ್ತು.

ಸ್ಥಳೀಯ ಪ್ರತಿಭೆಗಳ ಪ್ರದರ್ಶನ : ಪ್ರಥಮವಾಗಿ ಅಪ್ಪಟ ಕನ್ನಡ ಮಾತನಾಡುವ ಮಾಡರ್ನ್ ನಾರದನಾಗಿ ವಿವೇಕ್ ಕೊಡಪ್ಪ ಹಾಗು ಶುದ್ದ ಕಂಗ್ಲೀಶ್ ಮಾತನಾಡುವ ಸೀರೆಯುಟ್ಟ ಸುಂದರ ನೀರೆ ಸೌಮ್ಯ ಜಯಸಿಂಹ ಅವರು ವೇದಿಕೆ ಮೇಲೆ ಒಬ್ಬರ ಕಾಲೊಬ್ಬರು ಎಳೆದಾಡುತ್ತಾ ಹೊಡೆದ ಹಾಸ್ಯ ಚಟಾಕಿಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಜೊತೆಗೆ ದೀಪಕ್ ರವರು ನೆರೆದವರಿಗೆ ಕ್ಲಿಷ್ಟಕರವಾದ ಕನ್ನಡ ಸಾಲುಗಳನ್ನು ಇಂಗ್ಲೀಷ್ ನಲ್ಲಿ ಹೇಳುವಂತೆ ಮಾಡಿ ಪೇಚಿಗೆ ಸಿಕ್ಕಿಸಿ ಹಾಸ್ಯದ ಹೊಳೆ ಹರಿಸಿದರು.

ನೀಲಿಮಾ ಹಾಗು ಸುಮನ ಅವರ ಪ್ರಾರ್ಥನೆ, ಜಯಲಕ್ಷ್ಮಿ ಹಾಗು ವಿದ್ಯಾ ಅವರಿಂದ ನೃತ್ಯ, ಶ್ವೇತ, ಜ್ಯೋತಿ ಹಾಗು ಆಶಾ ಚಿಣ್ಣರ ತಂಡದಿಂದ ಸಮಕಾಲೀನ ನೃತ್ಯ, ವಿದ್ಯಾ ರಾಣಿ ಅವರ ಭರತ ನಾಟ್ಯ, ಹೊಯ್ಸಳ ತಂಡ ಹಾಗೂ ಬದರಿನಾಥ್/ಸಿಂಧು ತಂಡಗಳಿಂದ ಹಾಸ್ಯ ನಾಟಕಗಳು, ಅಹಲ್ಯ ರಾವ್ ಮಕ್ಕಳ ತಂಡದಿಂದ ನೃತ್ಯ, ಶ್ವೇತ ಅವರಿಂದ ನೃತ್ಯ, ಗೋಪಾಲ್ ಕುಲಕರ್ಣಿ ತಂಡದಿಂದ ಹಾಸ್ಯನಾಟಕ, ಭಾಸ್ಕರ್ ಹಾಗೂ ನೀಲಿಮಾರಿಂದ ಯುಗಳ ಗೀತೆಗಳು ಒಂದೇ ಎರಡೇ. ಈ ಎಲ್ಲ ಕಾರ್ಯಕ್ರಮಗಳು ಸ್ಥಳೀಯ ಪ್ರತಿಭೆಗಳ ಸಹಜ ಸಾಮರ್ಥ್ಯಕ್ಕೆ ಹಾಗೂ ಉತ್ಸಾಹಕ್ಕೆ ಹಿಡಿದ ಕನ್ನಡಿಯಾಗಿದ್ದವು.

ಕರ್ನಾಟಕದಿಂದ ಆಗಮಿಸಿದ್ದ ಚಿತ್ರಕಲಾ ಪ್ರತಿಭೆ ಕರಿಯಪ್ಪ ಅವರ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕರಿಯಪ್ಪ ಅವರು ವೇದಿಕೆಯ ಮೇಲೆ ಮಕ್ಕಳಿಗೆ ಚಿತ್ರಕಲೆಯನ್ನು ಹೇಳಿಕೊಟ್ಟರು. ಕನ್ನಡಿಗರು ಯುಕೆಯ ಕನ್ನಡ ಕಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕನ್ನಡಕಲಿ ವಿದ್ಯಾರ್ಥಿ ಚಿಣ್ಣರಿಂದ ದೀಪೋತ್ಸವ, ಅಮೇಲೆ ಅವರಿಗೆ ಪ್ರಮಾಣ ಪತ್ರ ವಿತರಣೆ ನಡೆಯಿತು. ಇತ್ತೀಚೆಗಷ್ಟೆ ಕನ್ನಡಿಗರುಯುಕೆಯು ಮೊದಲನೆ ಹಂತದ ಕನ್ನಡಕಲಿ ತರಗತಿಗಳನ್ನು ಯಶಸ್ವಿಯಾಗಿ ಮುಗಿಸಿತ್ತು.

ಅಬ್ಬಬ್ಬ ಅಮ್ಮಮ್ಮ : ಇದ್ದಕ್ಕಿದ್ದಂತೆ ಸಭಿಕರ ಮಧ್ಯದಿಂದ ಮುಖವಾಡಧಾರಿ ಮೂಗನೊಬ್ಬ, ಪೀಪಿ ಊದುತ್ತಾ ವೇದಿಕೆಯ ಕಡೆಗೆ ಓಡಿಬಂದ. ಯಾರು ಏನು ಎಂದು ಹೇಳದೆಯೇ 'ಅ' ಎಂಬ ಅಕ್ಷರವನ್ನು ನಮ್ಮೆಲ್ಲರಿಗೆ ವಿಶಿಷ್ಟ ರೀತಿಯಲ್ಲಿ ಹೇಳಿಕೊಡಲು ಆರಂಭಿಸಿದ. ಬರಿ 'ಅ' ಎಂಬ ಅಕ್ಷರದಲ್ಲಿ ಅಬ್ಬಬ್ಬ, ಅಮ್ಮಮ್ಮ ಎನ್ನುವಷ್ಟು, ಹೊಟ್ಟೆ ಹುಣ್ಣಾಗುವಷ್ಟು ಹಾಸ್ಯ ಅಡಗಿದೆ ಎಂದು ನಮಗೆ ತೋರಿಸಿಕೊಟ್ಟ. ಆ ಮೂಕ ಯಾರೂ ಅಲ್ಲ, ಅವರೇ ಅರುಣ್ ಸಾಗರ್. ತಮ್ಮ ಬಾಯಿಯಿಂದಲೇ ವಿಚಿತ್ರ, ವೈಶಿಷ್ಟ್ಯಪೂರ್ಣವಾದ ಸದ್ದುಲಿದು, ಸಾಧುಕೊಕಿಲ ಹಾಗು ರಘು ಅವರನ್ನು ಭಯೋತ್ಪಾದಕರಿಂದ ರಕ್ಷಿಸಿದ ಕಾಲ್ಪನಿಕ ಹಾಸ್ಯಗಾಥೆಯ ಒಬ್ಬಟ್ಟನ್ನು ನಮ್ಮೆಲ್ಲರಿಗೆ ಉಣಬಡಿಸಿದರು. ಯಾರಿಗೆ ತಾನೆ ಒಬ್ಬಟ್ಟು ಬೇಡ?

ಇಬ್ಬರು ಮುಖ ಮುಚ್ಚಿದ ಕುಡುಕರು ವೇದಿಕೆ ಏರಿದರು. ಒಬ್ಬನ ಹೊಟ್ಟೆ, ಇನ್ನೊಬ್ಬನ ಹೈಟು ಎರಡೂ ನೋಡಿದ್ರೆ ಯಾರಿಗೂ ಸಂದೇಹವೇ ಇರಲಿಲ್ಲ. ಇವರು ರಘು ಮತ್ತು ಸಾಧು ಎಂದು. ಇವರು ಮುಖದರ್ಶನ ನೀಡುತ್ತಲೇ ಇಡೀ ಸಭಾಂಗಣದಲ್ಲಿ ಚಪ್ಪಾಳೆ ಮತ್ತು ಸಿಳ್ಳೆಗಳ ಸುರಿಮಳೆ. ಕಾರ್ಯಕ್ರಮಕ್ಕೆ ಬಂದ ಮೂಲ ಉದ್ದೇಶವೇ ಇವರನ್ನ ನೋಡುವುದಾಗಿತ್ತು. ಆ ಸುಘಳಿಗೆಗೆ ಕಾಲ ಕೂಡಿಬಂದಿತ್ತು. ತಮ್ಮ ಹಾಸ್ಯ ಕೌಶಲದಿಂದ ಇಡೀ ಕನ್ನಡ ನಾಡನ್ನೇ ನಗಿಸುತ್ತಿರುವ ಈ ಜೋಡಿ, ನಮ್ಮನ್ನು ನಗಿಸದೇ ಇರುವುದೇ?

ನಿಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಡಿ, ಕಥೆಗಳನ್ನು ಹೇಳಿ, ಒಗಟು ಬಿಡಿಸುವುದನ್ನು ಹೇಳಿಕೊಡಿ, ಎಂದು ಕಿವಿಮಾತು ಹೇಳಿದ ರಂಗಾಯಣ ರಘು ಕನ್ನಡಾಭಿಮಾನವನ್ನು ಎತ್ತಿ ತೋರಿಸಿದರು. ಸಾಧು ಅವರು ಮಾತನಾಡಿ ಆಂಗ್ಲ ನಾಡಿನಲ್ಲಿ ಉನ್ನತ ಹುದ್ದೆಯನ್ನು ಹೊಂದಿರುವ ಎಲ್ಲ ಕನ್ನಡಿಗರ ಸಾಧನೆಯನ್ನು ಶ್ಲಾಘಿಸಿದರು. ಕೇವಲ ಹಾಸ್ಯನಟರಲ್ಲದೆ ಸಂಗೀತ ನಿರ್ದೇಶಕರಾಗಿರುವ ಸಾಧು ಅವರು ತಮ್ಮ ಹಾಡುಗಾರಿಕೆಯಿಂದ ಎಲ್ಲರನ್ನೂ ತಮ್ಮ ಹೆಜ್ಜೆಯ ಜೊತೆಗೆ ಹೆಜ್ಜೆ ಸೇರಿಸುವಂತೆ ಮಾಡಿದರು. ಇವರಿಬ್ಬರ ಜೊತೆಗೆ ಹಾಡಿ, ಕುಣಿದ ಆ ನಮ್ಮ ಸಂಜೆ ಸಾರ್ಥಕವಾಗಿತ್ತು. ಇಂತಹಾ ಕಾರ್ಯಕ್ರಮಗಳು ತಾಯ್ನಾಡಿನಿಂದ ದೂರವಿರುವ ನಮ್ಮಂತವರಿಗೆ ಅದೆಷ್ಟು ಅಮೂಲ್ಯ ಎಂಬುದು ಅನುಭವಿಸಿದ ಮನಗಳಿಗಷ್ಟೇ ಗೊತ್ತು.

ಕಾರ್ಯಕ್ರಮದ ಕೊನೆಯ ಆಕರ್ಷಣೆ, ಶ್ರೀದೇವಿ, ವಿಜೇಂದ್ರರಿಂದ ಕನ್ನಡ ಚಲನ ಚಿತ್ರಗಳ ಹಾಡುಗಳ ಪೂರ. ಇಡಿ ಸಭಾಂಗಣವೇ ಎದ್ದು ಕುಣಿಯುವಂತೆ ಹಾಡಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಹೀಗೆ ಆಂಗ್ಲ ನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ಕಾಯಕವನ್ನು ಮಾಡುವುದರ ಮೂಲಕ ಕನ್ನಡಿಗರ ಅಭಿಮಾನ ಗಳಿಸಿದ ಕನ್ನಡಿಗರು ಯುಕೆ ತಂಡಕ್ಕೆ ನನ್ನ ಅಭಿನಂದನೆ ಸಲ್ಲಿಸಿ ಅವರಿಂದ ಇಂತಹ ಅನೇಕ ಕಾರ್ಯಕ್ರಮಗಳು ಮುಂದೆಯೂ ಅವಿರತವಾಗಿ ನಡೆಯುತ್ತಿರಲಿ ಎಂದು ಆಂಗ್ಲ ನಾಡಿನ ಎಲ್ಲ ಕನ್ನಡಿಗರ ಪರವಾಗಿ ಹಾರೈಸುತ್ತೇನೆ.

English summary
Kannadigaru UK celebrated Kannada Rajyotsava 2012 on 17th November in London. Karnataka Comedy actors Sadhu Kokila, Rangayana Raghu and Arun Sagar performed humorous skit as part of Nagehabba.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X