ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕಲಿಯಲು ಉತ್ಸಾಹದಿಂದ ಬಂದ ಮಕ್ಕಳು

By ವೆಂಕಟ್, ಸಿಂಗಪುರ
|
Google Oneindia Kannada News

ಸೆಪ್ಟೆಂಬರ್ ಮೊದಲನೆಯ ವಾರದಿಂದಲೇ "ಕನ್ನಡ ಕಲಿ" ಉತ್ಸವಕ್ಕೆ ಭರದ ಸಿದ್ಧತೆಗಳು ಅತ್ಯೋತ್ಸಾಹದಲ್ಲಿ ಪ್ರಾರಂಭಗೊಂಡವು. ಮೊದಲಿಗೆ ನಮ್ಮ ವೇಳಾಪಟ್ಟಿ ತಯಾರಾಯಿತು. ಇದರಲ್ಲಿ ಮುಖ್ಯವಾಗಿ ಈ 5 ಭಾನುವಾರಗಳನ್ನು ಯಾವ ರೀತಿಯಲ್ಲಿ ವಿಂಗಡಿಸಿ ಪಠ್ಯವನ್ನು ತಯಾರಿಸಬೇಕೆಂಬ ವಿಷಯಗಳು ಚರ್ಚಿಸಲ್ಪಟ್ಟವು. ಪ್ರತಿವಾರವೂ ಮೂರು ಗಂಟೆಗಳ ಕಾಲ ಅಕ್ಷರಗಳ ಅಭ್ಯಾಸ ಮಾತ್ರವಲ್ಲದೆ, ಮಕ್ಕಳಿಗೆ ಕನ್ನಡದ ಕಥೆಗಳು, ಶಿಶುಗೀತೆಗಳ ಪರಿಚಯ ಮತ್ತು ಅಕ್ಷರಗಳ ಜೋಡಣೆ, ಸರಳ ಪದಗಳ ಪರಿಚಯ, ಅಕ್ಷರ ಹಾಗು ಪದಗಳೊಂದಿಗಿನ ಆಟಗಳನ್ನು ಆಡಿಸಿ "ಕನ್ನಡ ಕಲಿ"ಯನ್ನು ಮಕ್ಕಳಿಗೆ ಅರ್ಥಪೂರ್ಣ ಕಲಿಕೆಯ ಜೊತೆಗೆ ವಿನೋದದಿಂದ ಕೂಡಿದ ಅನುಭವವಾಗಬೇಕೆಂಬುದು ಎಲ್ಲರ ಒಟ್ಟಾರೆ ಅಭಿಪ್ರಾಯವಾಗಿತ್ತು. ಕೊನೆಯ ದಿನ ಮಕ್ಕಳಿಗೆ ಸಣ್ಣ ಪರೀಕ್ಷೆಯನ್ನು ಸಹ ನಡೆಸಬೇಕೆಂಬುದು ನಮ್ಮ ಉದ್ದೇಶ.

ಮೊದಲನೆಯ ದಿನದಂದು ಉಪಾಧ್ಯಾಯರು ತಾಣ ಸೇರುವುದಕ್ಕಿಂತ ಮುಂಚಿತವಾಗಲೇ ತಂದೆ-ತಾಯಿಯಂದಿರು ಮಕ್ಕಳೊಂದಿಗೆ ಕಾಯುತ್ತಿದ್ದುದು ಅವರ ಆಸಕ್ತಿಗೆ ಹಿಡಿದ ಕನ್ನಡಿಯಾಗಿತ್ತು. ಮಕ್ಕಳು ಸಹ ಬಹಳ ಉತ್ಸುಕತೆಯಿಂದ ಬಂದು ಸೇರಿದ್ದರು. ಕೆಲವು ಚಿಕ್ಕ ಮಕ್ಕಳು ತರಗತಿಯ ಒಳಗಡೆ ಬರಲು ಅಳುತ್ತಿದ್ದರೆ, ತಂದೆ-ತಾಯಿಯಂದಿರು ಸಮಾಧಾನ ಮಾಡಿ ಚಾಕಲೇಟ್ ಕೊಟ್ಟು ಒಳಗಡೆ ಕಳುಹಿಸಿ ಸ್ವಲ್ಪ ಹೊತ್ತು ತಾವು ಸಹ ತರಗತಿಯಲ್ಲಿ ಕೂಡಲು ಅನುಮತಿಯನ್ನು ಪಡೆದು ಮಕ್ಕಳೊಂದಿಗೆ ತಾವು ಪುನಃ ಕನ್ನಡವನ್ನು ಕಲಿಯುವಲ್ಲಿ ಭಾಗವಹಿಸಿದ್ದು, ನಮಗೆ ಒಂದು ಅನೀರ್ವಚನೀಯವಾದಂತಹ ಅನುಭವಗಳನ್ನು ತಂದುಕೊಟ್ಟಿತು. ನಮಗೆಲ್ಲರಿಗೂ ನಾವು ಮಾಡುತ್ತಿರುವ ಕಾರ್ಯದ ಬಗ್ಗೆ ಹೆಮ್ಮೆ ಹಾಗು ನಮ್ಮ ನಾಡು-ನುಡಿಯ ಬೆಳವಣಿಗೆಗೆ ಎನೋ ನಮ್ಮ ಅಳಿಲು ಸೇವೆ ಮಾಡುತ್ತಿದ್ದೇವೆಂಬ ಧನ್ಯತಾ ಭಾವ.

Kannada Kali classes in Singapore

ತರಗತಿಯಲ್ಲಿ ಬಂದಂತಹ ಮಕ್ಕಳಿಗೆ ಹಾಜರಾತಿಯನ್ನು ತೆಗೆದುಕೊಂಡು ಮೊದಲನೆಯದಾಗಿ ಎಲ್ಲರಿಗೂ ಕನ್ನಡದ ವರ್ಣಮಾಲೆಯಲ್ಲಿ ಸ್ವರಗಳನ್ನು ಕಲಿಸಲು ಶುರುಮಾಡಿದೆವು. ಎಲ್ಲಾ ಮಕ್ಕಳು ಅಂದು "ಅ,ಆ,ಇ,ಈ...... ಅಂ ಅಃ" ವರೆಗೂ ಕಲಿತು, ಸುಂದರವಾಗಿ ತಮ್ಮ ಪುಸ್ತಕಗಳಲ್ಲಿ ಬರೆದು ಆನಂದಿಸಿದರು. ಇಲ್ಲಿ ತಪ್ಪದೇ ಉಲ್ಲೇಖಿಸಬೇಕಾದ ವಿಷಯವೆಂದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರದಿಂದ ದೊರೆತಂತಹ ಪಠ್ಯಪುಸ್ತಕಗಳು ಬಹಳ ಸುಂದರವಾಗಿ ರೂಪಿಸಲಾಗಿದ್ದು, ಮಕ್ಕಳು ಕಲಿಯಲು ತುಂಬಾ ಅನುಕೂಲವಾದಂತಹ ವಿನ್ಯಾಸವನ್ನು ಹೊಂದಿದ್ದವು.

ವಿರಾಮದ ಸಮಯದಲ್ಲಿ ಮಕ್ಕಳಿಗೆ ತಿಂಡಿ-ತೀರ್ಥಗಳ ಸರಬರಾಜನ್ನು ಮಾಡಲಾಯಿತು, ಕನ್ನಡದ ಕಥೆಗಳನ್ನು ವ್ಯಂಗಚಿತ್ರದ ವಿಡಿಯೋ ಮೂಲಕ ತೋರಿಸಿದಾಗ ಅವರ ಆನಂದ ಮುಗಿಲಿಗೇರಿತ್ತು! 3 ಗಂಟೆಗಳ ಕಾಲ ಈ ಕಥೆಗಳನ್ನು ಹಾಕಿದ್ದರೂ ಅದನ್ನು ನೋಡುವಷ್ಟು ಶಕ್ತಿ, ತವಕ ಅವರಿಗಿತ್ತೆಂಬುದು ಬೇರೆ ವಿಷಯ! ಕೊನೆಯಲ್ಲಿ ಮಕ್ಕಳಿಗೆ ಮನೆಯಲ್ಲಿ ಅಭ್ಯಾಸ ಮಾಡಬೇಕೆಂದು ಒತ್ತಿ ಹೇಳಿ ಅವರವರ ಪೋಷಕರಿಗೂ ಮಿಂಚಂಚೆ ಮೂಲಕ ಮನೆಗೆಲಸದ ವಿವರಗಳನ್ನು ಕೊಟ್ಟು ಅಭ್ಯಾಸ ಮಾಡಿಸುವಂತೆ ಕೋರಲಾಯಿತು.

English summary
Singapore Kannada Sangha has started 'Kannada Kali' - Kannada language teaching classes for children. Kannada development authority has provided easy to understand text books to the organization. Children have been participating with enthusiasm. A report by Venkat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X