ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಝಗಮಗಿಸಿದ 'ದೀಪೋತ್ಸವ-2012'

By ವರದಿ : ವೆಂಕಟ್, ಚಿತ್ರ: ರಾಜೇಶ್ ಹೆಗಡೆ
|
Google Oneindia Kannada News

ನವೆಂಬರ್ ಎಂದಾಕ್ಷಣ ಕನ್ನಡಿಗರಿಗೆ ಹಬ್ಬದ ವಾತಾವರಣ, ಮೊದಲನೆಯ ದಿನವೇ "ಕನ್ನಡ ರಾಜ್ಯೋತ್ಸವ". ನವೆಂಬರ್‌ನಲ್ಲಿ ಮಾತ್ರ ಕನ್ನಡದ ಪ್ರೇಮವೆಂದಲ್ಲ, ವರ್ಷವೆಲ್ಲಾ ಅನೇಕ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದರೂ "ರಾಜ್ಯೋತ್ಸವ" ಸಂಭ್ರಮ ವಿಭಿನ್ನವೆನ್ನಬಹುದು. ದೀಪಾವಳಿ ಹಬ್ಬವು ಸಹ ಬಹುತೇಕ ನವೆಂಬರ್ ನಲ್ಲಿ ಬರುವುದರಿಂದ ಈ ಸಂಭ್ರಮದ ಮೆರುಗನ್ನು ಹೆಚ್ಚಿಸಿ ಕನ್ನಡದ ಕಂಪಿನೊಂದಿಗೆ ಬೆಳಕನ್ನೂ ಎಲ್ಲೆಡೆ ಹರಡುತ್ತದೆ. ಸಿಂಗಪುರದ ಸಿಂಗನ್ನಡಿಗರಿಗಂತೂ ಪ್ರತೀ ವರ್ಷ "ದೀಪೋತ್ಸವ" ಕಾರ್ಯಕ್ರಮವು ರಾಜ್ಯೋತ್ಸವ ಹಾಗೂ ದೀಪಾವಳಿಗಳನ್ನು ಒಟ್ಟಿಗೆ ಆಚರಿಸಲಾಗುತ್ತದೆ.

ಕನ್ನಡ ಸಂಘ (ಸಿಂಗಪುರ) ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಲ್ಲಿ 3ನೇ ನವೆಂಬರ್ 2012ರಂದು ಸ್ಪ್ರಿಂಗ್ ಸಿಂಗಪುರದ ಸಭಾಂಗಣದಲ್ಲಿ "ದೀಪೋತ್ಸವ-2012" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ಕುಮಾರಿ ಭೂಪಾಲಿ ಐತಾಳ್ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭಗೊಂಡಿತು. ಸಂಘದ ಅಧ್ಯಕ್ಷರಾದ ಡಾ.ವಿಜಯಕುಮಾರ್ ಅವರು ತಮ್ಮ ಸ್ವಾಗತ ಬಾಷಣದಲ್ಲಿ ಗಣ್ಯರಿಗೆ ಶುಭಕೋರಿದರು.

Deepotsava 2012 celebrated in Singapore

ಕನ್ನಡ ಕಲಿ : "ದೀಪೋತ್ಸವ-2012"ವು ತುಂಬಾ ವಿಶಿಷ್ಟ ಹಾಗು ವೈವಿಧ್ಯಮಯವಾದ ಕಾರ್ಯಕ್ರಮಗಳೊಂದಿಗೆ ನಾಡಹಬ್ಬದ ವಾತಾವರಣವನ್ನು ಸೃಷ್ಟಿಸುವಲ್ಲಿ ಸಫಲವಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮುಖ್ಯಮಂತ್ರಿ ಚಂದ್ರು ಅವರ ಮಾರ್ಗದರ್ಶನದಲ್ಲಿ ಸ್ಥಾಪಿತಗೊಂಡ "ಕನ್ನಡ ಕಲಿಕಾ ಕೇಂದ್ರ"ದಡಿಯಲ್ಲಿ ನಿರೂಪಿಸಲಾಗಿದ್ದ "ಕನ್ನಡ ಕಲಿ" ಕಾರ್ಯಕ್ರಮವು 5 ವಾರಗಳ ಕಾಲ ಸಿಂಗಪುರದಲ್ಲಿ ಕನ್ನಡವನ್ನು ಕಲಿತ 36 ಮಕ್ಕಳಿಗೆ ಪ್ರಮಾಣಪತ್ರಗಳನ್ನು ಡಾ.ವಿಜಯ ಕುಮಾರ್, ಉಪಾಧ್ಯಕ್ಷರಾದ ವಿಜಯ ರಂಗ ಪ್ರಸಾದ್ ಹಾಗೂ ಡಾ.ಮುಖ್ಯಮಂತ್ರಿ ಚಂದ್ರು ಅವರ ಪರವಾಗಿ "ರಂಗಾಯಣ"ದ ನಿರ್ದೇಶಕರಾದ ಡಾ.ಬಿ.ವಿ.ರಾಜರಾಮ್ ಅವರ ಸಮ್ಮುಖದಲ್ಲಿ ನೀಡಲಾಯಿತು.

ಗೀತಗಾಯನ : ಕರ್ನಾಟಕದ ಪ್ರಮುಖ ಹವ್ಯಾಸಿ ತಂಡ "ಕಲಾ ಗಂಗೋತ್ರಿ" ತಂಡದ ವತಿಯಿಂದ, ಬಿ.ವಿ.ಕಾರಂತ, ಸಿ.ಅಶ್ವಥ್ ಮುಂತಾದವರ ಸಂಗೀತ ನಿರ್ದೇಶನದ ಹಲವು ಹೆಸರಾಂತ ನಾಟಕ ರಂಗಗೀತೆಗಳನ್ನು ಕಲ್ಪನಾ ನಾಗನಾಥ್, ಶೀನಾಥ್, ಸಂಧ್ಯಾವಳಿ ಮತ್ತು ಈ ಹವ್ಯಾಸಿ ತಂಡದ ಸ್ಥಾಪಕರಾದ ಬಿ.ವಿ.ರಾಜರಾಂ ಅವರುಗಳು ಹಾಡಿ ಸಿಂಗನ್ನಡಿಗರಿಗೆ ರಂಗಗೀತೆಗಳ ಗಾಯನದ ಸವಿಯನ್ನು ತಂದುಕೊಟ್ಟರು. ಪ್ರೇಕ್ಷಕರು ತಲ್ಲೀನರಾಗಿ ಚಪ್ಪಾಳೆಗಳನ್ನು ತಟ್ಟಿ, ಸಿಳ್ಳು ಹೊಡೆಯುತ್ತಾ ಅಮೋಘ ಹಾಗು ವಿನೂತನ ಗಾಯನಗಳನ್ನು ಪ್ರಶಂಸಿದರು.

ಯಕ್ಷಸಿರಿ : ಕ್ವಿಜ಼್‌ವರ್ಕ್ಸ್ ಬೆಂಗಳೂರಿನ ಕ್ವಿಜ಼್‌ಮಾಸ್ಟರ್ ಕುಮಾರಿ ಮೇಘನಾ ಗೌಡ ಅವರು ಭಾರತೀಯ ಪರಂಪರೆ ಹಾಗೂ ಕನ್ನಡ ಸಂಸ್ಕೃತಿಯ ಕುರಿತು ನಡೆಸಿದ ರಸಪ್ರಶ್ನೆ ಕಾರ್ಯಕ್ರಮವು ವಿಶೇಷವಾದ ಆಕರ್ಷಣೆಯಾಗಿತ್ತು. ಎರಡು ಹಂತಗಳಲ್ಲಿ ನಡೆದ ಈ ಯಕ್ಷಸಿರಿ ಕನ್ನಡ ನಾಡಿನ ಅನೇಕ ಕುತೂಹಲ ಭರಿತ ಪ್ರಶ್ನೆಗಳೊಂದಿಗೆ ಪ್ರೇಕ್ಷಕರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ಮೊದಲನೇಯ ಸುತ್ತಿನಲ್ಲಿ ಸುಮಾರು 40 ಪಟುಗಳು ಭಾಗವಹಿಸಿ, ಎರಡನೇಯ ಸುತ್ತಿಗೆ 12 ಜನ ಆಯ್ಕೆಯಾಗಿ, ಅದರಲ್ಲಿ ಇಬ್ಬರಿಬ್ಬರ 6 ತಂಡಗಳಾಗಿ ವಿಂಗಡಿಸಿ ಒಂದು ತಂಡವನ್ನು ವಿಜೇತರೆಂದು ಘೋಷಿಸಲಾಯಿತು.

ಸಿಂಗಾರ ಪುರಸ್ಕಾರ : ಕನ್ನಡ ಸಂಘ (ಸಿಂಗಪುರ)ವು ಸಂಘದ ಸದಸ್ಯರ ಹಾಗು ಅವರ ಕುಟುಂಬದ ಸದಸ್ಯರ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ 2000ನೇಯ ವರ್ಷದಿಂದ ಪ್ರಾರಂಭಿಸಿದ" ಸಿಂಗಾರ ಪುರಸ್ಕಾರ", ಪ್ರತಿವರ್ಷ ಮಕ್ಕಳ "ಶೈಕ್ಷಣಿಕ, ಆಟ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿನ ಸಾಧನೆಗಳನ್ನು ಗುರುತಿಸಿ, ಸನ್ಮಾನಿಸುವಂತಹ ಪುರಸ್ಕಾರ. 2011ನೇ ಸಾಲಿನ ಪುರಸ್ಕಾರ ವಿಜೇತರೆಂದರೆ ಕುಮಾರಿ ಗೌರಿ ನಾಗರಾಜು (ಶೈಕ್ಷಣಿಕ), ಕುಮಾರಿ ಪಂಚಮಿ ರಾಜರಾಮ್ ರಾವ್ (ಶೈಕ್ಷಣಿಕ), ಕುಮಾರ ರಂಜನ್ ರಾಮನಾಥ್ ಜಮದಗ್ನಿ (ಶೈಕ್ಷಣಿಕ) ಹಾಗೂ ಕುಮಾರಿ ಶರಣ್ಯ ರಾಜರಾಮ್ ರಾವ್ (ಪಠ್ಯೇತರ). ಸಿಂಗನ್ನಡಿಗರ ಅತ್ಯುನ್ನತ ಸೇವೆ ಹಾಗೂ ಸಾಧನೆಗಳನ್ನು ಗುರುತಿಸಿ ಕನ್ನಡ ಸಂಘವು 2008ರಿಂದ ಸಿಂಗಾರ ಆಜೀವ ಪುರಸ್ಕಾರ ನೀಡುತ್ತಾ ಬಂದಿದೆ. ಪ್ರೊ.ಪಿ.ಪ್ರಕಾಶ್ ಕುಮಾರ್ ಅವರಿಗೆ ಈ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಮಕ್ಕಳ ಸಾಹಿತ್ಯಕ ಸ್ಪರ್ಧೆ : ಕನ್ನಡ ಸಂಘದ ಹೆಮ್ಮೆಯ ಮಾಸಪತ್ರಿಕೆ ಸಿಂಚನದಿಂದ ನಡೆಸಲಾದ ಸಾಹಿತ್ಯಕ ಸ್ಪರ್ಧೆಗಳ ಹಾಗೂ ಸಿಂಗಪುರದ ಸಿಂಗನ್ನಡಿಗರ ಮಕ್ಕಳಿಗೆ ಆಯೋಜಿಸಿದ್ದ ಸಾಹಿತ್ಯಕ ಸ್ಪರ್ಧೆಗಳ ವಿಜೇತರಿಗೂ ಬಹುಮಾನ ಹಾಗೂ ಪ್ರಶಸ್ತಿಪತ್ರಗಳನ್ನು ನೀಡಲಾಯಿತು. ಕನ್ನಡ ಸಂಘದ ವತಿಯಿಂದ 26 ಆಗಸ್ಟ್ 2012ರಂದು ಆಯೋಜಿಸಿದ್ದ ಬೋಲಿಂಗ್ ಸ್ಪರ್ಧೆಯ ವಿಜೇತರಿಗೂ ಈ ಸಮಯದಲ್ಲಿ ಬಹುಮಾನಗಳನ್ನು ನೀಡಲಾಯಿತು.

ಮುಕಾಭಿನಯ/ಪ್ರಹಸನ - ಕಂಬಳಿ ಸೇವೆ : ಕಲಾ ಗಂಗೋತ್ರಿ ತಂಡದಿಂದ ಗಂಗಾವತರಣ, ದಿಗ್‌ದಂತಿ ಹಾಗೂ ಸಿಂಗಾರಿವೆಂಬ ಮೂರು ಮೂಕಾಭಿನಯದ ಪ್ರದರ್ಶನಗಳು ಅಮೋಘವಾಗಿ ಮೂಡಿಬಂದವು. ಸಿಂಗಾರಿಯ ಮೂಕಾಭಿನಯವು ಪ್ರೇಕ್ಷಕರನ್ನು ಮೂಕವಿಸ್ಮಿತರಾಗಿ ಮಾಡಿದವು. ಜಿ.ಪಿ.ರಾಜರತ್ನಂ ವಿರಚಿತ ಹಾಸ್ಯ ನಾಟಕ "ಕಂಬಳಿ ಸೇವೆ"ಯನ್ನು ಡಾ.ಬಿ.ವಿ.ರಾಜರಾಂ, ಕಲ್ಪನಾ ನಾಗಾನಾಥ್ ಮತ್ತು ಶ್ರೀನಿವಾಸ್ ಅವರು ಯಜಮಾನ, ಹೆಂಡತಿ ಮತ್ತು ಬೋರರಾಗಿ ನಟಿಸಿದ ಹಾಸ್ಯ ನಾಟಕ ಸಭಿಕರನ್ನು ರಂಜಿಸಿತು. ಈ ಕಾರ್ಯಕ್ರಮವನ್ನು ULB Realty, HSBC ಹಾಗೂ SingHealth ಅವರ ಸಹಾಯದಲ್ಲಿ ಪ್ರಾಯೋಜಿಸಲಾಗಿತ್ತು.

English summary
Deepotsava 2012 celebrated in Singapore on November 3, 2012. Various cultural programs were organized. Kala Gangothri cultural troupe from Karnataka gave commendable performance. Prizes and certificates were distributed to children and winners of various competitions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X