ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಷಕರಿಗೆ ಆನಂದಭಾಷ್ಪ, ನೆರೆದವರ ಕಣ್ಣಿಗೆ ಹಬ್ಬ

By ನಾಗರಾಜ್ ಎಂ., ಕನೆಕ್ಟಿಕಟ್
|
Google Oneindia Kannada News

Deepavali in Hoysala Kannada Koota, Connecticut
ಸ್ಯಾಂಡಿ ಬಿರುಗಾಳಿಯ ಬಿರುಸಿಗೆ ರಸ್ತೆಯಲ್ಲೆಲ್ಲ ಹಾರಿಬಿದ್ದಿದ್ದ ಬಣ್ಣ ಬಣ್ಣದ (ಫಾಲ್ ಕಲರ್) ಮರಗಿಡಗಳ ಎಲೆಗಳು, ಈ ಬಾರಿ ಅವಧಿಗೆ ಮುಂಚೆನೇ ಬಿದ್ದ 'ಅಥೆನಾ' ಹಿಮಪಾತಕ್ಕೆ ತಲೆಬಾಗಿ ನಿಂತಿದ್ದ ಗಿಡ-ಮರಗಳ ಕೊಂಬೆಗಳು, ಆಗಲೇ ಚಳಿರಾಯನ ಆಗಮನದ ಮುನ್ಸೂಚನೆಯಂತೆ ಜೋರಾಗಿ ಬೀಸುತ್ತಿರುವ ಚಳಿಗಾಳಿ... ಅಬ್ಬ ಮತ್ತೆ ಬಂತಲ್ಲಪ್ಪ ಚಳಿಗಾಲ ಎನ್ನುತ್ತಾ ಕೋಟು ಏರಿಸಿಕೊಂಡು ಸಂಸಾರದೊಂದಿಗೆ ಕಾರ್ ನಲ್ಲಿ ಹೋಗ್ತಾ ರೇಡಿಯೋ ಬಟನ್ ಒತ್ತಿದಾಗ ಕೇಳಿ ಬರುತ್ತಿರೋ ಅಬ್ಬರದ ವೆಸ್ಟರ್ನ್ RAP ಮ್ಯೂಸಿಕ್... ಅದಕ್ಕೆ ಸರಿಯಾಗಿ ಹಿಂದೆ ಕೂತು ತಲೆ ತೂಗುತ್ತಿರೋ ಮಗರಾಯ!

ಅಂತು-ಇಂತೂ ಕಾರ್ ಪಾರ್ಕ್ ಮಾಡಿ ಒಳಗೆ ಹೋದ ತಕ್ಷಣವೇ... ಹಾ ಹಾ ..ಸುಮಧುರವಾಗಿ ಕೇಳಿ ಬರುತ್ತಿರುವ ಕನ್ನಡದ ಸುಗಮ ಸಂಗೀತದ ಅಲೆಗಳು, ಕನ್ನಡ ಒಗಟುಗಳ ಸಂವಾದ, ಪುರಂದರ ದಾಸರ ಗೀತೆ, ಇನ್ನೇನು ಗೆದ್ದೇ ಬಿಟ್ಟೆ ಕೋಟಿ ಅಂತಾ ಪ್ರಶ್ನೆ ಬಂದಾಗಲೆಲ್ಲ ಕವಡೆ ಹಾಕಿ ಉತ್ತರ ನೀಡುತ್ತಿದ್ದ ಅಮ್ಮಾವ್ರ ಗಂಡ, ಭರತ ನಾಟ್ಯ... ಓಹ್ ಓಹ್ -..ಇವೆಲ್ಲ ಕೇಳಿ-ನೋಡಿ ಎಲ್ಲೋ ಬೆಂಗಳೂರಿನಲ್ಲಿರುವ ರವೀಂದ್ರ ಕಲಾಕ್ಷೇತ್ರದೊಳಗೆ ಬಂದಿರೋ ತರಹ ಅನ್ನಿಸುವಂತೆ ಮಾಡಿದ್ದು. ಈ ದೂರದ ಅಮೆರಿಕಾದಲ್ಲಿನ ಕನ್ನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟದ ರಘು ಸೋಸಲೆ ಮತ್ತು ಪ್ರಸಾದ್ ಶಾಸ್ತ್ರಿರವರ ಸುಂದರ ನಿರೂಪಣೆಯಲ್ಲಿ ನಡೆದ ದೀಪಾವಳಿ 2012 ಕಾರ್ಯಕ್ರಮ.

ಸರಿಯಾಗಿ ಮಧ್ಯಾನ್ಹ 3 ಗಂಟೆಗೆ ಕನ್ನೆಕ್ಟಿಕಟ್ನ ವೆದರ್ಸ್ಫೀಲ್ಡ್ ಮಾಧ್ಯಮಿಕ ಶಾಲೆಯಲ್ಲಿ ಪ್ರಾರ್ಥನೆಯೊಂದಿಗೆ ಆರಂಭವಾದ ನಂತರ, ಯಶವಂತ್ ಗಡ್ಡಿಯವರ ನೇತೃತ್ವದಲ್ಲಿ ಕನ್ನಡದ ನಾಡಗೀತೆ. ತಕ್ಷಣ ಎಲ್ಲ ಹಿರಿಯರು, ಕಿರಿಯರು ಎದ್ದು ನಿಂತು ತಾವೂ ಧ್ವನಿಗೂಡಿಸಿದ್ದು ತುಂಬಾ ವಿಶೇಷವಾಗಿತ್ತು.

HKK ಅಧ್ಯಕ್ಷರಾದ ವೇಣು ಗುದ್ದೇರರಿಂದ ಸ್ವಾಗತ ಭಾಷಣವಾದ ಮೇಲೆ ರೂಪ ಕುಮಾರ್ ಸಂಯೋಜನೆಯಲ್ಲಿ ನಡೆದ ಚಿಣ್ಣರ ವೇಷ-ವೈಖರಿಯಲ್ಲಿ ಸಣ್ಣ ಸಣ್ಣ ಮುದ್ದಾದ ಮಕ್ಕಳು - ಶಬರಿ, ಬೆಂಗಳೂರಿನ ಅಣ್ಣ-ತಂಗಿ, ಪಂಜಾಬಿ ಹುಡುಗಿ, ಆಂಜನೇಯ ಹೀಗೆ ವಿವಿಧ ವೇಷ-ಭೂಷಣಗಳಲ್ಲಿ ವೇದಿಕೆಮೇಲೆ ನಡೆದುಬಂದಾಗ ಪೋಷಕರ ಕಂಗಳಲ್ಲಿ ಆನಂದಭಾಷ್ಪ ಬರಿಸಿದ್ದರೆ, ನೆರೆದ್ದಿದ್ದವರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿ ನಿಜವಾಗಲು ಚಿಣ್ಣರ-ಕಿನ್ನರ ಲೋಕಕ್ಕೆ ಕರೆದೊಯ್ದಂತಾಗಿತ್ತು.

ನಂತರ ಈ ಕೆಳಕಂಡ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ನೆರೆದ್ದಿದ್ದವರನ್ನು ರಂಜಿಸಿದವು.

* ಅನಿತಾ ಜೋಯ್ಸ್ ಅವರ ಸಂಯೋಜನೆಯಲ್ಲಿ ಅಮೆರಿಕನ್ನಡ ಶಾಲೆಯ ಪುಟಾಣಿ ಮಕ್ಕಳು ರಂಗು ರಂಗಿನ ವೇಷದಲ್ಲಿ ಬಂದು "ಜಯಹೇ ಕನ್ನಡ ಮಾತೆ - ನಮ್ಮ ಒಲವಿನ ಕರುನಾಡು" ಹಾಡಿಗೆ ಹೆಜ್ಜೆ ಹಾಕಿ ನರ್ತಿಸಿದ್ದು ಎಲ್ಲರ ಮನ ಸೆಳೆಯಿತು.
* ಮೀನಾಕ್ಷಿ ಪಂಚರತ್ನಂ - ಮಕ್ಕಳಿಂದ ಕೂಚಿಪುಡಿ ನೃತ್ಯ ಶಾರದ ನೂರಿಯವರ ಸಂಯೋಜನೆಯಲ್ಲಿ.
* ಪ್ರಸಾದ್ ಶಾಸ್ತ್ರಿ ಅವರಿಂದ "ದೀಪಾವಳಿಯ ವಿಶೇಷತೆ" ರೂಪಕ.
* ಸ್ನೇಹ ಸೋಸಲೆ ಅವರ ಸಂಯೋಜನೆಯಲ್ಲಿ - ಮಕ್ಕಳಿಂದ ಜಾನಪದ ನೃತ್ಯ.
* ಪ್ರಿಯಾರವರ ನಿರ್ದೇಶನದಲ್ಲಿ "ನಮ್ಮ ದೂರದರ್ಶನ" ಕಾರ್ಯಕ್ರಮ.
* ಮುಂದಿನ ವರ್ಷ ನಡೆಯಲಿರುವ "ನಾವಿಕ (ನಾವು ವಿಶ್ವ ಕನ್ನಡಿಗರು) ವಿಶ್ವ ಕನ್ನಡ ಸಮ್ಮೇಳನ 2013" - ಬಗ್ಗೆ ಒಂದು ವಿವರಣೆ - ಸಮ್ಮೇಳನದ ಅಧ್ಯಕ್ಷರಾದ ರಾಜೂರ್ ಅವರಿಂದ.

ಮಧ್ಯೆ ಚಿಕ್ಕ ವಿರಾಮದ ನಂತರ,

* ಯಶವಂತ್ ಗಡ್ಡಿಯವರ ನೇತೃತ್ವದಲ್ಲಿ "ಕರುನಾಡ ಕಹಳೆ" ಕನ್ನಡ ನಾಡು-ನುಡಿ ಗೀತೆಗಳ ಸಮೂಹ ಗಾಯನ.
* ವಿಚಿತ್ರ-ಗಾನ ಮಂಜರಿ - ದಿನೇಶ್ ಹಾಗೂ ಸಂಗಡಿಗರಿಂದ.
* ಅಮೆರಿಕಾದಲ್ಲಿ ಯಮರಾಜ ನಾಟಕದ ಖ್ಯಾತಿಯ ಮಲ್ಲಿ ಸಣ್ಣಪ್ಪನವರ್ ಮತ್ತು ತಂಡದವರಿಂದ "ಅದ್ದೂರಿ ದೀಪಾವಳಿ" - ವೈವಿದ್ಯಮಯ ನೃತ್ಯ ಕಾರ್ಯಕ್ರಮ.
* ಸದಾನಂದ ಮಸರೂರ್ ಮತ್ತು ತಂಡದವರಿಂದ "ಕೋಟ್ಯಾಧಿಪತಿ - ನಮ್ಮ HKK" ನಾಟಕ.

ಹೀಗೆ ಸರಿಸುಮಾರು ರಾತ್ರಿ 9 ರತನಕ ನಡೆದ ಈ ದೀಪಾವಳಿ ಕಾರ್ಯಕ್ರಮ ಕೊನೆಗೊಂಡಿದ್ದು ಲತಾ ಗುಡ್ದೆರ ಅವರ ವಂದನಾರ್ಪಣೆಯೊಂದಿಗೆ.

ಕೊನೆಗೆ ಭರ್ಜರಿ ಊಟ ಮಾಡಿ ಕಾರಲ್ಲಿ ಕುಳಿತಾಗ ಮತ್ತೆ ರೇಡಿಯೋದಲ್ಲಿ ಕೇಳಿ ಬಂದ ಅಬ್ಬರದ ಪಾಶ್ಚಾತ್ಯ RAP ಮ್ಯೂಸಿಕ್ ಅನ್ನು ಬಂದ್ ಮಾಡಿ ಅಲ್ಲೇ ಇದ್ದ ಹಳೇ ಕನ್ನಡ ಗೀತೆಗಳ ಡಿಸ್ಕ್ ಹಾಕ್ಕೊಂಡು ಇಂಪಾಗಿ ಬರುತ್ತಿದ್ದ ಡಾ. ರಾಜ್ ಹಾಡಿದ ಕುವೆಂಪು ರಚಿತ "ಕನ್ನಡವೇ ಸತ್ಯ ಕನ್ನಡವೇ ನಿತ್ಯ" ಅಂತ ನಾನು ಗುನುಗುತ್ತಿದ್ದರೆ... ಹಿಂದುಗಡೆಯಿಂದ ಮಗರಾಯನು ಸಹಾ ಅದಕ್ಕೆ ಕೋರಸ್ ಕೊಟ್ಟಿದ್ದನ್ನು ನೋಡಿ ಪಕ್ಕದಲ್ಲಿದ್ದ ಮನೆಯವಳ ಕಣ್ಣುಗಳಲ್ಲಿ ಕಂಡಿತ್ತು ದೀಪಾವಳಿಯ ದೀಪಗಳ ಬೆಳಕಿನ ಹೊಳಪು!

English summary
Hoysala Kannada Koota in Connecticut, USA celebrated Deepavali 2012 in a grand fashion. Various cultural programs were organized including fancy dress by children, Kannada film songs by elders. It gave Kannadigas a feeling that they are not away from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X